ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಮೈಸೂರು ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 23-03-2024ರ ಶನಿವಾರ ಮತ್ತು 24-03-2024 ರ ಭಾನುವಾರದಂದು ಮುಂಬಯಿಯ ಮೈಸೂರು ಅಸೋಸಿಯೇಷನ್ನಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತು ಮಾತನಾಡಿದ ನಾಡಿನ ಹಿರಿಯ ಕಲಾವಿದ, ರಂಗತಜ್ಞ, ನಿರ್ದೇಶಕ, ನಟ ಹಾಗೂ ವಿದ್ವಾಂಸರಾದ ಡಾ. ಬಿ. ವಿ. ರಾಜಾರಾಮ “ಕಲೆ, ಸಾಹಿತ್ಯ, ಸಂಗೀತ ನೃತ್ಯ ಇವೆಲ್ಲವೂ ಬದುಕನ್ನು ಸಮೃದ್ಧ ಹಾಗೂ ಸಾರ್ಥಕಗೊಳಿಸುತ್ತವೆ. ಇವು ನಮ್ಮಲ್ಲಿ ವ್ಯಕ್ತಿತ್ವವನ್ನು ರೂಪಿಸುತ್ತವೆ. ಸುಮಾರು 2,೦೦೦ ವರ್ಷಗಳಷ್ಟು ಹಿಂದೆ ಭರತನು ರಚಿಸಿದ ನಾಟ್ಯ ಶಾಸ್ತ್ರಸಂಗೀತವು ನೃತ್ಯ, ಸಾಹಿತ್ಯ, ಅಭಿನಯಕ್ಕೆ ಮೂಲ. ಭರತನ ನಾಟ್ಯ ಶಾಸ್ತ್ರ ಒಂದು ಪರಂಪರೆಯಾಗಿ ಬೆಳೆದು ಬಂದಿದೆ. ನಾಟ್ಯಶಾಸ್ತ್ರದ ರಸ ಸಿದ್ಧಾಂತ ಸಂತೋಷವನ್ನು ನೈಸರ್ಗಿಕವಾಗಿ ಸ್ವೀಕರಿಸುವುದರ ಕುರಿತು ಹೇಳುತ್ತದೆ. ಭರತನು ಹೇಳಿದ ಷಡ್‌ರಸಗಳು ಆರೋಗ್ಯಕ್ಕೆ ಹಾಗೂ ನಂತರದ ಅಭಿನವಗುಪ್ತ ಪಾದನಿಂದ ಬಂದ ಅಭಿನವ ಭಾರತದಲ್ಲಿ ಬರುವ ನವರಸಗಳು ಮನಸ್ಸಿಗೆ ಹತ್ತಿರವಾಗಿವೆ. ಭಾವದ ಮೂಲಕ ರಸವನ್ನು ವ್ಯಕ್ತಪಡಿಸುವುದರ ಬಗೆಯನ್ನು ಇಲ್ಲಿ ತಿಳಿಸಲಾಗಿದೆ. ಅವನ ‘ಅಭಿಜಾತ’ ಕೃತಿಯಂತೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಇಂತಹ ಇನ್ನೊಂದು ಕೃತಿ ನೋಡಲು ಸಿಗುವುದಿಲ್ಲ. ಭಾರತೀಯ ಶಾಸ್ತ್ರೀಯ ನೃತ್ಯವು ಅದರ ಸನ್ನೆಗಳಲ್ಲಿ ಅಥವಾ ಮುದ್ರೆಗಳಲ್ಲಿ ಕೇಂದ್ರೀಕೃತಗೊಂಡಿದೆ. ಆ ಸನ್ನೆಗಳಲ್ಲಿ ಅಸಂಯುಕ್ತ ಮತ್ತು ಸಂಯುಕ್ತ ಎಂದು ನೃತ್ಯಗಳಲ್ಲಿ ಎರಡು ವರ್ಗಗಳಿವೆ. ಅಸಂಯುಕ್ತದಲ್ಲಿ ಕೇವಲ ಒಂದು ಕೈಯಿಂದ ಮಾಡಿದ ಚಲನೆಗಳ ಮೂಲಕ, ಸಂಯುಕ್ತದಲ್ಲಿ ಎರಡು ಕೈಗಳಿಂದ ಮಾಡಿದ ಚಲನೆಗಳ ಮೂಲಕ ನಿರ್ದಿಷ್ಠ ಮುದ್ರೆಗಳಿರುತ್ತವೆ. ಅದೇ ರೀತಿ ರಂಗಭೂಮಿಗೂ ಅದರದ್ದೇ ಆದ ನಿಯಮ, ಚೌಕಟ್ಟುಗಳನ್ನು ನಾಟ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ. ಪ್ರೇಕ್ಷಕರನ್ನು ಕಲಾವಿದರು ಬೇರೆ ಬೇರೆ ಭಾವನೆಗಳ ರಸ ನಿಷ್ಪತ್ತಿ ಮಾಡುವುದರ ಮೂಲಕ ಭಾವನಾತ್ಮಕವಾಗಿ ಬೆಸೆಯಬೇಕು ಮತ್ತು ಶಾಸ್ತ್ರಬದ್ಧವಾಗಿ ಯಾವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. “ ಎಂದು ಪ್ರಾತ್ಯಕ್ಷಿಕೆಯ ಜೊತೆಯಲ್ಲಿ ಉಪನ್ಯಾಸವನ್ನು ಮಂಡಿಸಿದರು.
‘ಜಗತ್ತಿನಲ್ಲಿ ಭೌದ್ಧ ಧರ್ಮದ ಬೆಳವಣಿಗೆ ಮತ್ತು ಅದರ ಸಂದೇಶ, ಸಮಕಾಲೀನ ಪ್ರಪಂಚದಲ್ಲಿ ಭೌದ್ಧ ಧರ್ಮದ ಪ್ರಸ್ತುತತೆ’ ಎಂಬ ವಿಷಯದ ಕುರಿತು ಮಾತನಾಡುತ್ತಾ ಸಿದ್ಧಾರ್ಥ ಸಂಸಾರವನ್ನು ತ್ಯಜಿಸಿ ಬುದ್ಧನಾದ ಕತೆಯೊಂದಿಗೆ ಬೌಧ್ಧ ಧರ್ಮದ ಪ್ರಚಾರ ಪ್ರಸಾರದ ಕುರಿತು ಮಾತನಾಡಿದರು. “ಬುದ್ಧ ತನ್ನ ಸ್ವಸಾಮರ್ಥ್ಯ ಹಾಗೂ ಕಠಿಣ ತಪಸ್ಸಿನಿಂದ ಜ್ಞಾನೋದಯವನ್ನು ಪಡೆದನು. ಆ ಮೂಲಕ ಜಗತ್ತಿನ ಪರಮ ಸತ್ಯವನ್ನು ಭೋದಿಸಿದನು. ಆದ್ದರಿಂದ ಜನರು ಜಾತಿ ಮತ ಭೇದವಿಲ್ಲದೆ ಅವನ ಶಿಷ್ಯರಾದರು. ಅವನಿಗೆ ಆದ ಮೊದಲ ಜ್ಞಾನೋದಯವೆಂದರೆ ಯಾವುದೇ ರೀತಿಯ ಸಾಧನೆ ಮಾಡಬೇಕಾದರೆ ದೇಹದ ಆರೋಗ್ಯವನ್ನು ಕಾಪಾಡುವುದು ಮುಖ್ಯ. ದೇಹವೆಂಬ ವೀಣೆಯಲ್ಲಿ ಶ್ರುತಿ ಬರಬೇಕು. ಆಗ ಮನಸ್ಸಿನಲ್ಲಿ ಏಕಾಗ್ರತೆ ಬರುತ್ತದೆ. ಬುದ್ದ ಬೋಧಿಸಿದ್ದು ದು:ಖದಿಂದ ಹೊರಬರುವ ಮಾರ್ಗ. ಮಾನವ ಪ್ರೀತಿ, ಜೀವ ಪ್ರೀತಿ ಹಾಗೂ ಅಹಿಂಸೆಯ ಕುರಿತು ಆತ ತಿಳಿಸಿದ್ದಾನೆ. ಇದನ್ನು ಪಾಲಿ ಭಾಷೆಯಲ್ಲಿ ಧಮ್ಮ ಎಂದು ಕರೆದನು.” ಎಂದ ಅವರು ಬುದ್ಧನ ದಾರ್ಶನಿಕ ಸಿದ್ಧಾಂತಗಳು, ಧರ್ಮಚಕ್ರ, ಪ್ರವರ್ತನ ಸೂತ್ರಗಳು, ಚತುರಾರ್ಯ ಸತ್ಯಗಳು ಹೀಗೆ ಅನೇಕ ವಿಷಯಗಳ ಕುರಿತು ಬೆಳಕು ಚೆಲ್ಲಿದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಮಾತನಾಡಿ “ಮೈಸೂರು ಅಸೋಸಿಯೇಷನ್ ಮುಂಬೈ ಕನ್ನಡಿಗರ ಹೆಮ್ಮೆಯ ಅಭಿಮಾನದ ಸಂಸ್ಥೆ. ಈಗ ಅಸೋಸಿಯೇಷನ್ ಶತಮಾನದ ಹೊಸ್ತಿಲಲ್ಲಿದೆ. ಈ ಮಾಯಾನಗರಿಯಲ್ಲಿ ಕನ್ನಡ ಕಾವಲು ಕಾಯಕ ನಡೆಸುತ್ತಾ ಬಂದಿರುವ ಈ ಸಂಸ್ಥೆ ಮಾಡಿರುವ ಸಾಧನೆ ನಾಡಿಗೆ ಮಾದರಿ. ವಿಶ್ವವಿದ್ಯಾಲಯದ ಜೊತೆಗೆ ಸೇರಿ ವಿಭಿನ್ನ ಬಗೆಯ ಕಾರ್ಯಕ್ರಮಗಳನ್ನು ನಡೆಸಲು ಸಹಕರಿಸುತ್ತಾ ಬಂದಿದೆ. ಹಿರಿಯ ಕಲಾವಿದ ಡಾ. ರಾಜಾರಾಮ್ ಅವರು ಈ ಮಾಲಿಕೆಯಲ್ಲಿ ಉಪನ್ಯಾಸ ನೀಡಿರುವುದು ಮುಂಬೈ ಕನ್ನಡಿಗರ ಭಾಗ್ಯ.” ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರು ಅಸೋಸಿಯೇಷನ್ನಿನ ಅಧ್ಯಕ್ಷರಾದ ಕೆ. ಕಮಲಾ ಮಾತನಾಡಿ “ಮೈಸೂರು ಅಸೋಸಿಯೇಷನ್ ಈ ದತ್ತಿ ಉಪನ್ಯಾಸವನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಯೋಗದೊಂದಿಗೆ ಸುಮಾರು 42 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.” ಎಂದರು. ಕಲಾವಿದೆ ಲಕ್ಷ್ಮೀ ಅವರು ನಾಟ್ಯಶಾಸ್ತ್ರದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಎರಡೂ ಸಂಸ್ಥೆಗಳ ಪರವಾಗಿ ಅತಿಥಿ ಡಾ. ಬಿ. ವಿ. ರಾಜಾರಾಮ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಖ್ಯಾತ ನಾಟಕಕಾರ ಶ್ರೀರಂಗರ ಮಗಳು ಉಷಾ ದೇಸಾಯಿ ಹಾಗೂ ನಿವೃತ್ತ ನ್ಯಾಯಾಧೀಶರಾದ ಕೆ. ಎಸ್. ತಿಮ್ಮಣ್ಣಾಚಾರ್ ಅವರನ್ನು ಗೌರವಿಸಲಾಯಿತು. ಎರಡೂ ದಿನದ ಕಾರ್ಯಕ್ರಮದಲ್ಲಿ ಡಾ. ಮಂಜುನಾಥ್ ಅವರು ಪ್ರಾರ್ಥನೆಯನ್ನು ಹಾಡಿದರು. ಉಪಾಧ್ಯಕ್ಷರಾದ ಉಮೇಶ್ ಮಾಸ್ಕೇರಿ ಹಾಗೂ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ ಅವರು ಕ್ರಮವಾಗಿ ಎರಡು ದಿನದ ಉಪನ್ಯಾಸದಲ್ಲಿ ಧನ್ಯವಾದ ಸಮರ್ಪಿಸಿದರು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಮೈಸೂರು ಅಸೋಸಿಯೇಷನಿನ ಟ್ರಸ್ಟಿ. ಕೆ.ಮಂಜುನಾಥಯ್ಯ, ನಾರಾಯಣ ನವಿಲೇಕರ್, ಮಂಜು ದೇವಾಡಿಗ, ಲಕ್ಷ್ಮೀ, ಶೀಲಾ ಹಾಗೂ ಮಧುಸೂದನ್ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.