ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಮ್ಮತ್ತಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರಕಾರಿ ಪ್ರೌಢಶಾಲೆ ಪಾಲಿಬೆಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಡಿ. ಜೆ ಪದ್ಮನಾಭ ಮತ್ತು ಬಿ. ಆರ್. ಸಾಯಿನಾಥ್ ದತ್ತಿ ಉಪನ್ಯಾಸ ಕಾರ್ಯಕ್ರಮವು 21 ಆಗಸ್ಟ್ 2024 ರಂದು ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ. ಪಿ. ಕೇಶವ ಕಾಮತ್ “ಕೊಡಗಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿ ಅದರ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದವರು ದಿವಂಗತ ಡಿ. ಜೆ. ಪದ್ಮನಾಭರು ಅವರು ಅಂದು ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದು ನಾಲ್ಕು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ ಪ್ರತಿ ವರ್ಷವೂ ನೂರಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಜಿಲ್ಲಾಧ್ಯಕ್ಷರಾಗಿ 23 ವರ್ಷಗಳ ಕಾಲ ಕನ್ನಡ ಸಾಹಿತ್ಯ, ಭಾಷೆ, ನಾಡು-ನುಡಿ, ಸಂಸ್ಕೃತಿ, ಪರಂಪರೆಗಳನ್ನು ಬೆಳೆಸುವಲ್ಲಿ ಅವಿರತ ಶ್ರಮಿಸಿದ್ದಾರೆ. ಅವರ ಪರಿಶ್ರಮದಿಂದ ಸರಕಾರ ಕನ್ನಡ ಸಾಹಿತ್ಯ ಪರಿಷತ್ತಿಗೆ 60 ಸೆಂಟುಗಳ ಸ್ಥಳವನ್ನು ಕನ್ನಡ ಭವನ ಕಟ್ಟಲು ಮಂಜೂರು ಮಾಡಿತ್ತು. ಜಿಲ್ಲೆಗೆ ರಾಜ್ಯದ ಹಿರಿಯ ಸಾಹಿತಿಗಳನ್ನು, ಚಲನಚಿತ್ರ ನಟರನ್ನು ಹಾಗೂ ಕನ್ನಡ ಹೋರಾಟಗಾರರನ್ನು ಕರೆತಂದು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿ ಜನರಿಗೆ ಅವರನ್ನು ಪರಿಚಯಿಸಿದ ಖ್ಯಾತಿ ಡಿ.ಜೆ ಪದ್ಮನಾಭರದ್ದು. ಇಂದು ಇಲ್ಲಿ ಎರಡು ದತ್ತಿನಿಧಿಗಳ ಉಪನ್ಯಾಸ ಏರ್ಪಡಿಸಲಾಗಿದೆ. ಸೋಮವಾರಪೇಟೆಯವರಾಗಿದ್ದು ಬೆಂಗಳೂರಿನಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿರುವ ಬಿ. ಆರ್. ಸಾಯಿನಾಥ್ ಇವರು ವಿದ್ಯಾರ್ಥಿಗಳಿಗೆ ‘ಕವಿ ಕಾವ್ಯ ಪರಿಚಯ’ ಮಾಡಬೇಕು ಎನ್ನುವ ನಿಟ್ಟಿನಲ್ಲಿ ದತ್ತಿ ಸ್ಥಾಪಿಸಿದ್ದು, ವಿರಾಜಪೇಟೆಯ ಶಾಂತ ಪದ್ಮನಾಭ ಮತ್ತು ರಾಜೇಶ್ ಪದ್ಮನಾಭ ಇವರು ದಿ. ಡಿ. ಜೆ. ಪದ್ಮನಾಭ ರವರ ಜ್ಞಾಪಕಾರ್ಥ ಕೊಡಗಿನ ಜಾನಪದ ಕಲೆಗಳ ಕುರಿತಾಗಿ ಉಪನ್ಯಾಸ ನೀಡುವ ಸಲುವಾಗಿ ದತ್ತಿ ಸ್ಥಾಪಿಸಿರುತ್ತಾರೆ.” ಎಂದರು.
ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ಜಾನಪದ ಕಲೆಗಳು ಕುರಿತು ಮಾತನಾಡಿದ ಸಂತ ಅನ್ನಮ್ಮ ಪದವಿ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಬಿ. ಎನ್. ಶಾಂತಿಭೂಷಣ್ “ಕೊಡಗು ಜಿಲ್ಲೆಯಲ್ಲಿ 56 ಬಗೆಗಳ ಜಾನಪದ ಕಲೆಗಳಿವೆ. ಕರ್ನಾಟಕ ರಾಜ್ಯದ ಜಾನಪದ ಶೈಲಿಗೆ ಹೋಲಿಸಿದರೆ ಅದು ವಿಭಿನ್ನ ಮತ್ತು ವೈಶಿಷ್ಟ ಪೂರ್ಣವಾಗಿದೆ. ಕೊಡಗಿನ ಕೃಷಿ ಸಂದರ್ಭದಲ್ಲಿ, ಹಬ್ಬ ಹರಿದಿನಗಳಲ್ಲಿ ಆಡುವ ಮಾತು ಮತ್ತು ಹಾಡುಗಳು ಕೂಡ ಜನಪದೀಯವಾಗಿರುತ್ತದೆ. ಉಮ್ಮತ್ತಾಟ್, ಕೋಲಾಟ್, ಬೊಳಕಾಟ್ ಜನಪ್ರಿಯಗೊಂಡಿದ್ದರೂ ಹತ್ತು ಹಲವು ಜನಪದೀಯ ಕಲೆಗಳು ಕೊಡಗಿನಲ್ಲಿವೆ. ಕೊಂಬಾಟ್ ನಮ್ಮೆ, ದುಡಿ ಕೊಟ್ಟು, ಪುತ್ತರಿ ಪಾಟ, ಎರವ ಕೊಟ್ಟು, ಕಪ್ಪೆ ಆಟ್, ಕುಡಿಯರ ಕುಣಿತ, ಕುರುಬಾಟ, ಕುಂಬುಕೊಟ್ಟ್ ವಾಲಗ, ಜೋಯಿಪಾಟು, ಭೂತ ನೃತ್ಯ, ಡೋಲು ಪಾಟ್, ಪರೆಯಕಳಿ, ಪಿಲಿಯಾಟ್, ಬಾಳೋ ಪಾಟ್, ಬಿಲ್ಲಾಟ್, ವಾಲಗದಾಟ್ ಹೀಗೆ 56 ರೀತಿಯ ಜನಪದೀಯ ಕಲೆಗಳು ಇವೆ. ಅವುಗಳನ್ನು ಹಬ್ಬ ಹರಿದಿನಗಳಲ್ಲಿ, ಹುತ್ತರಿ ಮಂದಗಳಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನಲ್ಲಿ ಜನಪದ ಎನ್ನುವುದು ಜ್ಞಾನಪದವಾಗಿದೆ. ನಮ್ಮ ಹಿರಿಯರು ಪ್ರತಿಯೊಂದು ಆಟಕ್ಕೂ ಜನಪದವನ್ನು ಜೋಡಿಸಿದ್ದಾರೆ. ಉಮ್ಮತ್ತಾಟ್ ಕಾವೇರಿ ಮಾತೆಯನ್ನು ಸ್ತುತಿಸುವ ಹಾಡುಗಳನ್ನು ಹೊಂದಿದ್ದರೆ, ಬೊಳಕಾಟ್ ಹೆಸರೇ ಹೇಳುವಂತೆ ದೀಪದ ಸುತ್ತಲೂ ಮಾಡುವಂತಹ ನೃತ್ಯವಾಗಿದೆ. ಕೋಲಾಟ್ ಹುತ್ತರಿ ಸಂದರ್ಭದಲ್ಲಿ ಕೋಲುಮಂದುಗಳಲ್ಲಿ ಆಡುವಂತಹ ಒಂದು ಕಲೆಯಾಗಿದೆ. ಬಾಳೋಪಾಟ್ ನಲ್ಲಿ ಹುಟ್ಟಿನಿಂದ ಸಾವಿನವರೆಗಿನ ಕಥೆಯನ್ನು ಸಾದರಪಡಿಸಲಾಗುತ್ತದೆ. ಜೋಯಿಪಾಟ್ – ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯ ಕಾಲಕ್ಕೆ ಕುರಿತಂತೆ ವಿಚಾರ ಮಂಡಿಸುತ್ತದೆ. ಪರೆಯಕಳಿ ಬಿದುರಿನ ಬೆತ್ತದಿಂದ ಆಡುವ ಆಟ ಯುದ್ಧದ ನೆನಪನ್ನು ತರುತ್ತದೆ.” ಎಂದು ಕೊಡಗಿನ ಜನಪದದ ಸಂಪೂರ್ಣ ವಿವರಣೆಯಿತ್ತರು.
ಕವಿ ಕಾವ್ಯ ಪರಿಚಯದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದ ದೇವಣಗೇರಿ ಬಿ. ಸಿ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಲೋಕೇಶ್ ಎಚ್. ಡಿ. ಎಷ್ಟು ಕಾವ್ಯಗಳನ್ನು ಬರೆದರೆ ಕವಿಯಾಗಬಹುದು ಎನ್ನುವ ಸಾಹಿತ್ಯಾಸಕ್ತರ ಪ್ರಶ್ನೆಗೆ ದ. ರಾ. ಬೇಂದ್ರೆ ಅವರು ಉತ್ತರಿಸುತ್ತಾ “ಕೇವಲ ಒಂದು ಕವನ ಬರೆದರೂ, ಸಾವಿರ ಕವನ ಬರೆದರು ಆತ ಕವಿಯೇ ಆದರೆ ಆ ಕವನ ಸಾವು ಇರದ (ಸಾವಿರದ) ಕವನವಾಗಿರಬೇಕು.” ಎಂದು ಹೇಳಿದ್ದನ್ನು ಜ್ಞಾಪಿಸಿಕೊಂಡರು. ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಹಾಸ್ಯಮಿಶ್ರಿತ ಹಲವಾರು ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು. ಮೊಬೈಲ್ ಅಥವಾ ಕಂಪ್ಯೂಟರ್ ಚಟ ಇರುವವನನ್ನು ಗಣಕದಾಸ ಎಂದು ಕರೆಯಬಹುದು, ಪತಿಯ ಛಾಯಾಚಿತ್ರಕ್ಕೆ ಬೇಕಾದರೆ ಪತಿ ಬಿಂಬ ಎಂದು ಕವನದಲ್ಲಿ ಉಲ್ಲೇಖಿಸಬಹುದು ಎಂದು ಹಾಸ್ಯಮಿಶ್ರಿತ ಉಪನ್ಯಾಸ ನೀಡಿದರು.
ಶಾಲೆಯ ವಿದ್ಯಾರ್ಥಿಗಳು ಕಂಸಾಳೆ ನೃತ್ಯ, ನಾಡಿನ ನುಡಿಯ ಕುರಿತು ನೃತ್ಯ ಮತ್ತು ಹಾಡುಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕಿರಣ್ ಹೆಚ್. ಆರ್. ಪ್ರಥಮ ಬಹುಮಾನ ಪಡೆದರೆ ದಿಲೀಪ್ ದ್ವಿತೀಯ ಬಹುಮಾನ ಪಡೆದರು.
ಕನ್ನಡ ಸಾಹಿತ್ಯ ಪರಿಷತ್ತಿನ ವಿರಾಜಪೇಟೆ ತಾಲೂಕು ಗೌರವ ಕಾರ್ಯದರ್ಶಿ ಟಾಮಿ ತೋಮಸ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಮತ್ತಿ ಹೋಬಳಿ ಕ. ಸಾ. ಪ.ಇದರ ಅಧ್ಯಕ್ಷರಾದ ಟಿ. ಹೆಚ್. ಮಂಜುನಾಥ್ ಮಾತನಾಡಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರನ್ನು ನೆನಪಿಸಿ ಧನ್ಯವಾದ ಸಲ್ಲಿಸಿದರು. ವೇದಿಕೆಯಲ್ಲಿ ಪಾಲಿಬೆಟ್ಟದ ಸರಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಅಶ್ರಫ್, ವಿರಾಜಪೇಟೆ ತಾಲೂಕು ಗೌರವ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಎಚ್. ಜಿ., ಜಿಲ್ಲಾ ನಿರ್ದೇಶಕ ವಿ. ಟಿ. ಮಂಜುನಾಥ್, ದಿ. ಸೀತಾಬಾಯಿ ರಾಮಚಂದ್ರ ಕಾಮತ್ ದತ್ತಿನಿಧಿಯ ದಾನಿಗಳಾದ ಆರ್. ರಾಜರಾವ್, ಕಲಾವಿದರಾದ ಬಾವಾ ಮಾಲ್ದಾರೆ, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಎಫ್. ಎಲ್. ಫ್ಯಾಟ್ರಿಕ್ ಹಾಗೂ ಯುವರಾಜ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಅಶ್ರಫ್ ಸ್ವಾಗತಿಸಿ, ಆಧ್ಯಾಪಕರುಗಳಾದ ಶ್ರೀಮತಿ ನಯನ ಕುಮಾರಿ,ಶ್ರೀಮತಿ ಮಮತಾ ಕಾಮತ್ ಮತ್ತು ಶ್ರೀಮತಿ ಆರತಿ. ಎಸ್.ಟಿ. ನಿರೂಪಿಸಿ, ತಾಲೂಕು ಗೌರವ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಹೆಚ್. ಜಿ. ವಂದಿಸಿದರು. ಕಾರ್ಯಕ್ರಮದ ಮೊದಲಿಗೆ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.