ಕೋಟ : ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಾಹಿತ್ಯ ಸಂಘದ ಆಶ್ರಯದಲ್ಲಿ ‘ಸಾಹಿತ್ಯ ಮತ್ತು ಬದುಕು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 02-07-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಎಚ್. ಮಾತನಾಡಿ “ಸಾಹಿತ್ಯ ಬೇರೆ ಅಲ್ಲ, ಬದುಕು ಬೇರೆ ಅಲ್ಲ. ಬದುಕಿನ ಪ್ರತಿಬಿಂಬವೇ ಸಾಹಿತ್ಯ. ಒಂಟಿತನ ಎಂಬುದು ಭೂತಗಳ ಆಗರ. ಏಕಾಂತದ ಮನಸ್ಸು ನಮ್ಮನ್ನು ಕೆಟ್ಟ ಕೆಟ್ಟ ಆಲೋಚನೆಗಳಿಗೆ ಕೊಂಡೊಯ್ಯುತ್ತವೆ. ಸಾಹಿತ್ಯವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಹೊಂದಿದೆ. ಮನಸ್ಸಿನ ಕೊಳೆ ದೂರ ಮಾಡಲು ಸಾಹಿತ್ಯದ ಓದು ಮತ್ತು ಆಸಕ್ತಿ ಸುಲಭದ ದಾರಿ. ಪುರಾಣ ಸಾಹಿತ್ಯಗಳನ್ನು ಓದುವುದರ ಮೂಲಕ ನೈತಿಕ ಮೌಲ್ಯವನ್ನು ಪಡೆಯಬಹುದು. ಸಾಹಿತ್ಯಾಧ್ಯಯನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ.” ಎಂದರು.
ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ, ಶಿಕ್ಷಕರಾದ ಪ್ರೇಮಾನಂದ ಮತ್ತು ಶಂಭು ಭಟ್ಟರು ಸುಜಯೀಂದ್ರ ಹಂದೆಯವರನ್ನು ಸನ್ಮಾನಿಸಿದರು. ವಿದ್ಯಾರ್ಥಿ ನಿಧೀಶ ಭಟ್ಟ ಪ್ರಾರ್ಥಿಸಿ, ಪ್ರಾಂಶುಪಾಲ ಜಗದೀಶ ನಾವುಡ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಸಾಹಿತ್ಯ ಸಂಘದ ಅಧ್ಯಕ್ಷ ಅಮಿತ್ ಕಾರ್ಯಕ್ರಮ ನಿರೂಪಿಸಿ, ಕನ್ನಡ ಸಾಹಿತ್ಯ ಸಂಘದ ಸಂಚಾಲಕಿ ನಳಿನಾಕ್ಷಿ ವಂದಿಸಿದರು.