ಕಾರ್ಕಳ : ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು ದಿನಾಂಕ 20-04-2024 ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ‘ತೈತ್ತಿರೀಯ ಉಪನಿಷತ್’ ಇದರ ಕುರಿತು ಉಪನ್ಯಾಸ ನೀಡಿದ ನಾಡಿನ ಪ್ರಸಿದ್ಧ ವಿದ್ವಾಂಸ ಹಾಗೂ ವಾಗ್ಮಿಯಾಗಿರುವ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ “ಶೈಕ್ಷಣಿಕ ಮನೋವಿಜ್ಞಾನದ ನೆಲೆಯಲ್ಲಿ ಬಹಳ ಒಳನೋಟವನ್ನು ನೀಡುವ ಉಪನಿಷತ್ತೇ ‘ತೈತ್ತಿರೀಯ ಉಪನಿಷತ್’. ಲೌಕಿಕವನ್ನು ಅಲ್ಲಗಳೆಯದೆ ಪಾರಲೌಕಿಕ ಚಿಂತನೆಗಳ ರಹಸ್ಯಗಳನ್ನು ಪ್ರಾಚೀನ ಉಪನಿಷತ್ತುಗಳು ನಮಗೆ ತಿಳಿಸಿಕೊಡುತ್ತವೆ. ತೈತ್ತಿರೀಯ ಉಪನಿಷತ್ತಿನಲ್ಲಿ ಶಿಕ್ಷಾವಲ್ಲಿ, ಆನಂದವಲ್ಲಿ ಮತ್ತು ಭೃಗುವಲ್ಲಿ ಎಂಬ ಮೂರು ಪ್ರಮುಖ ಭಾಗಗಳಿದ್ದು ಶಿಕ್ಷಾವಲ್ಲಿಯಲ್ಲಿ ಶಿಕ್ಷಣ ಎಂದರೆ ಏನು? ಗುರುಶಿಷ್ಯರ ಸಂಬಂಧದ ವಿವರಣೆ, ಕಲಿಕಾ ವಿಧಾನದ ಬಗ್ಗೆ ಜ್ಞಾನವನ್ನು ಹೊಂದಿ ಅದನ್ನು ಮುಂದಿನ ಪೀಳಿಗೆಗೆ ದಾಟಿಸುವ ಬಗ್ಗೆ ಹೀಗೆ ಶಿಕ್ಷಣದ ಕುರಿತಾದ ಸಂಪೂರ್ಣ ಮಾಹಿತಿಯಿದ್ದು, ಆನಂದವಲ್ಲಿಯಲ್ಲಿ ಪರಬ್ರಹ್ಮ ಸ್ವರೂಪದ ಆಧ್ಯಾತ್ಮಿಕ ಚಿಂತನೆಯಿದ್ದು, ಭೃಗುವಲ್ಲಿಯಲ್ಲಿ ಪರಬ್ರಹ್ಮನನ್ನು ಅರಿತುಕೊಂಡು ಬ್ರಹ್ಮಾನಂದವನ್ನು ಹೊಂದುವ ಬಗ್ಗೆ ವಿವರಿಸಲಾಗಿದೆ.” ಎಂದರು.
ಅತಿಥಿಗಳನ್ನು ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಕೆ. ಕಮಲಾಕ್ಷ ಕಾಮತ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ ಹಾಗೂ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಶಾರ್ವರಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ವೀಣಾ ರಾಜೇಶ್ ಅವರು ಅತಿಥಿಗಳನ್ನು ಪರಿಚಯಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಶೈಲಜಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಜಾಲ್ಸೂರು ವಂದಿಸಿದರು.