ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮ ‘ಲೇಖ ಲೋಕ -9’ ಎರಡು ದಿನಗಳ ಕಾರ್ಯಕ್ರಮವು ದಿನಾಂಕ 29-08-2023ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ “ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಪ್ರಯತ್ನದ ಭಾಗವಾಗಿ ಆತ್ಮಕಥನಗಳನ್ನು ಗ್ರಹಿಸಬೇಕಿದೆ. ಮಹಿಳೆ ಎದುರಿಸಿದ ಸವಾಲುಗಳೇನು ?, ಅದು ವೈಯಕ್ತಿಕ, ಸಾಮುದಾಯಿಕ, ದೇಶಕಾಲಗಳ ಪ್ರಭಾವಗಳನ್ನು ಎದುರಿಸಿದ ರೀತಿಯನ್ನು ತೆರೆದು ತೋರಿಸುವುದು ಆತ್ಮಕತೆಗಳ ಉದ್ದೇಶ. ಇದರ ಮೂಲಕ ಮಹಿಳಾ ಆಸ್ಮಿತೆ ಪ್ರಕಟಗೊಳ್ಳುತ್ತಿದೆ. ಒಬ್ಬಳು ಮಹಿಳೆಯ ಬಿಡುಗಡೆಯ ಹಾದಿ ಅನೇಕರಿಗೆ ಹೊರಳುದಾರಿಯಾಗಬಹುದು” ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ವಿವಿಯ ಕುಲಪತಿ ಪ್ರೊ.ಜಯರಾಜ್ ಅಮೀನ್ ಮಾತನಾಡಿ “ಸಮಾಜವನ್ನು ಗ್ರಹಿಸುವ ಮತ್ತು ವ್ಯಕ್ತಿ ಅನುಭವಗಳ ವಿಶಿಷ್ಟ ನಿರೂಪಣೆಯೇ ಆತ್ಮವೃತ್ತಾಂತಗಳು. ಕರಾವಳಿಯಲ್ಲಿ ಮಾತೃಮೂಲೀಯ ವ್ಯವಸ್ಥೆಯಿದ್ದರೂ ಹೆಣ್ಣಿನ ಧ್ವನಿ ಕ್ಷೀಣವೇ ಆಗಿದೆ” ಎಂದರು.
ಬೆಂಗಳೂರಿನ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ “ಸ್ತ್ರೀವಾದ ಹೊರಳು ದಾರಿಯಲ್ಲಿದೆ. ಹೋರಾಟ ಪ್ರಾಥಮಿಕ ಅಗತ್ಯಗಳನ್ನು ದಾಟಿ ರಾಜಕೀಯ, ಆರ್ಥಿಕ ನೆಲೆಗಳಲ್ಲಿ ಬಲಗೊಳ್ಳಬೇಕಾದ ಅಗತ್ಯದ ಕಡೆಗೆ ಹೆಜ್ಜೆಯಿಟ್ಟಿದೆ. ಮಹಿಳೆಯರು ಒಗ್ಗಟ್ಟಾಗಿ ಇದನ್ನು ಮುನ್ನಡೆಸಬೇಕಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳ್ಯಾರ್ ಮಾತನಾಡಿ
ಹೆಣ್ಣುಮಗಳು ಮೊದಲ ದಲಿತೆ. ಅವಳ ಅಸ್ಮಿತೆಯ ಹುಡುಕಾಟ ಅನೇಕ ಸವಾಲುಗಳನ್ನು ಎದುರಿಸಿ ಬಹುದೂರ ಸಾಗಿ ಬಂದಿದೆ. ಇಂದು ಸಮಾಜದಲ್ಲಿ ಹೆಣ್ಣಿನ ಘನತೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು. ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ. ವೈ.ಸಂಗಪ್ಪ ಉಪಸ್ಥಿತರಿದ್ದರು. ಮಂಗಳೂರು ವಿವಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ. ಸೋಮಣ್ಣ ಹೊಂಗಳ್ಳಿ ಸ್ವಾಗತಿಸಿದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ನಿರೂಪಿಸಿ, ವಂದಿಸಿದರು.
ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ತಮ್ಮ ಬದುಕು ಬರಹದ ಕುರಿತು ಮಾತನಾಡಲಿರುವ ಕನ್ನಡ ಪ್ರಸಿದ್ಧ ಲೇಖಕಿಯರಾದ ಉಷಾ ಪಿ. ರೈ ಮಂಗಳೂರು, ಪಾರ್ವತಿ ಜಿ. ಐತಾಳ್ ಉಡುಪಿ, ಡಾ. ವಸುಂಧರಾ ಭೂಪತಿ ಬೆಂಗಳೂರು, ಡಾ. ಎಂ.ಎಸ್. ಆಶಾದೇವಿ ಬೆಂಗಳೂರು, ಸುನಂದಾ ಕಡಮೆ ಹುಬ್ಬಳ್ಳಿ, ಡಾ. ತಮಿಳ್ ಸೆಲ್ವಿ ಚೆನ್ನೈ, ಡಾ. ಶೋಭಾ ನಾಯಕ ಬೆಳಗಾವಿ, ಬಿ.ಟಿ. ಜಾಹ್ನವಿ ದಾವಣಗೆರೆ, ಮಾಧವಿ ಭಂಡಾರಿ ಕೆರೆಕೋಣ ಶಿರಸಿ, ಇಂದಿರಾ ಶಿವಣ್ಣ ಬೆಂಗಳೂರು ಮತ್ತು ಎಂ. ಜಾನಕಿ ಬ್ರಹ್ಮಾವರ ಉಡುಪಿ ಮತ್ತಿತರರು ಉಪಸ್ಥಿತರಿದ್ದರು.