ಧಾರವಾಡ : ಡಾ. ಜಿನದತ್ತ ಅ. ಹಡಗಲಿ ಅಭಿನಂದನಾ ಸಮಿತಿ ಇದರ ವತಿಯಿಂದ ಸಾಹಿತ್ಯಾವಲೋಕನ, ಅಭಿನಂದನೆ ಮತ್ತು ಗ್ರಂಥ ಬಿಡುಗಡೆ ಸಮಾರಂಭವು ದಿನಾಂಕ 07-07-2024ರಂದು ಧಾರವಾಡದ ವಿದ್ಯಾಗಿರಿ ಜಿ.ಎಸ್.ಎಸ್. ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಬೆಳಿಗ್ಗೆ 9-30 ಗಂಟೆಗೆ ಹರ್ಲಾಪುರದ ಶ್ರೀ ಶಂಭಯ್ಯಾ ಹಿರೇಮಠ ಮತ್ತು ಸಂಗಡಿಗರಿಂದ ‘ಜಾನಪದ ಸಂಗೀತ’ ಪ್ರಸ್ತುತಗೊಳ್ಳಲಿದೆ. ಡಾ. ಜಿನದತ್ತ ಅ. ಹಡಗಲಿಯವರ ಸಾಹಿತ್ಯಾವಲೋಕನವನ್ನು ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. ವೈಚಾರಿಕ ಸಾಹಿತ್ಯದ ಬಗ್ಗೆ ಸಾಹಿತಿ ಡಾ. ವೈ. ಎಂ. ಯಾ ಕೊಳ್ಳಿ, ಸಂಪಾದಿತ ಕೃತಿಗಳ ಬಗ್ಗೆ ಸಾಹಿತಿ ಡಾ. ಅರ್ಜುನ ಗೊಳಸಂಗಿ, ಬಾನುಲಿ ಬರಹಗಳು ಇದರ ಬಗ್ಗೆ ರಂಗ ಚಿಂತಕರಾದ ಡಾ. ಶಶಿಧರ ನರೇಂದ್ರ ಮತ್ತು ನನ್ನ ಗುರು ನನ್ನ ಹೆಮ್ಮೆ ವಿದ್ವಾನ್ ಶ್ರೀ ನವೀನ ಶಾಸ್ತ್ರೀ ಪುರಾಣಿಕ ಇವರು ವಿಚಾರ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 12-30 ಗಂಟೆಗೆ ಗುರುವಂದನೆ ನಡೆಯಲಿದೆ.
ಮಧ್ಯಾಹ್ನ 2-00 ಗಂಟೆಗೆ ಧಾರವಾಡದ ಖ್ಯಾತ ಹಿಂದೂಸ್ತಾನಿ ಗಾಯಕರಾದ ವಿದುಷಿ ಸುಜಾತಾ ಗುರವ, ಹುಬ್ಬಳ್ಳಿಯ ಗಾಯಕರಾದ ಶ್ರೀ ಬಸವರಾಜ ಕೆಂಧೂಳಿ, ಶಿವಮೊಗ್ಗದ ಖ್ಯಾತ ಹಿಂದೂಸ್ತಾನಿ ಗಾಯಕರಾದ ಉಸ್ತಾದ್ ಹುಮಾಯೂನ ಹರ್ಲಾಪುರ ಮತ್ತು ಝೀ ಕನ್ನಡ ವಾಹಿನಿ ಸರಿಗಮಪ ವಿಜೇತ ಗಾಯಕರಾದ ಹರ್ಲಾಪುರದ ಶ್ರೀ ಮೆಹಬೂಬಸಾಬ ಇವರು ‘ಸಂಗೀತ ಸುಧೆ’ ಕಾರ್ಯಕ್ರಮ ನೀಡಲಿರುವರು. ಗಂಟೆ 2.45ಕ್ಕೆ ‘ಬದುಕಿನ ಹೆಜ್ಜೆಗಳು’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಪೂಜ್ಯ ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಅಭಿನಂದನಾ ಸಮಾರಂಭದಲ್ಲಿ ‘ಸ್ನೇಹಸಿಂಧು’ ಗ್ರಂಥ ಬಿಡುಗಡೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಶ್ರೀಮತಿ ಸುಜಾತಾ ಹಡಗಲಿ ಅವರ ‘ಭಾವತರಂಗ’ ಕವನ ಸಂಕಲನ ಲೋಕಾರ್ಪಣೆಗೊಳ್ಳಲಿದೆ.
 
 
 
									 
					