ಹಾಸನ : ಪಡುವಾರಹಳ್ಳಿಯಲ್ಲಿರುವ ವಿನಾಯಕ ನಗರದ ಸಿ.ಪಿ.ಕೆ.ಯವರ ನಿವಾಸದಲ್ಲಿ ದಿನಾಂಕ 14 ಜನವರಿ 2024ರಂದು ಸರಳವಾಗಿ ನಡೆದ ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆಯ ವತಿಯಿಂದ ದಿನಾಂಕ 19 ಜನವರಿ 2025ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿರುವ ‘ಅಖಿಲ ಕರ್ನಾಟಕ ನಾಲ್ಕನೇ ಕವಿ-ಕಾವ್ಯ ಸಮ್ಮೇಳನ’ದ ಲಾಂಛನ ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆಗೊಂಡವು.
ಈ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಬಹುಶ್ರುತ ಹಿರಿಯ ವಿದ್ವಾಂಸ ಡಾ. ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಇವರು ಮಾತನಾಡಿ “ನಾಡಿನ ಉದ್ದಗಲ ಕವಿ-ಕಾವ್ಯ ಸಮ್ಮೇಳನಗಳು ನಿರಂತರವಾಗಿ ನಡೆಯುವುದರಿಂದ ಕನ್ನಡ ಪ್ರಜ್ಞೆಯ ಜಾಗೃತಿ ಉಂಟಾಗಿ, ಸಾಹಿತ್ಯ ಮತ್ತು ಸಂಸ್ಕೃತಿಯ ಕಂಪು ಹರಡಲು ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳು ಸಂಘಟಿಸುವ ಕವಿ-ಕಾವ್ಯ ಸಮ್ಮೇಳನಗಳು ಆಗಾಗ ನಡೆಯುತ್ತಿರಬೇಕು. ಇವು ಹೊಸ ಹೊಸ ಸಾಹಿತ್ಯ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ನೆರವಾಗುತ್ತವೆ. ಹಾಗಾಗಿ ಸಮ್ಮೇಳನದ ಉದ್ದೇಶ ಹೆಚ್ಚು ವ್ಯಾಪಕತೆ ಮತ್ತು ಸಾರ್ಥಕತೆಯನ್ನು ಹೊಂದಿರುವುದು ಸ್ತುತ್ಯಾರ್ಹ ಹಾಗೂ ಸಕಾಲಿಕ ಕನ್ನಡ ಕಾಯಕ. ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಯಮಿತವಾಗಿ ನಡೆಯುತ್ತಿಲ್ಲ. ವರ್ಷಕ್ಕೊ ಎರಡು ವರ್ಷಕ್ಕೊ ಜರುಗುತ್ತದೆ. ಆದರೆ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪ್ರತಿವರ್ಷ ನಾಡಿನ ಬೇರೆ ಬೇರೆ ಕಡೆ ಕವಿ-ಕಾವ್ಯ ಸಮ್ಮೇಳನ ಆಯೋಜನೆ ಮಾಡುವ ಮೂಲಕ ಕನ್ನಡಾಭಿಮಾನದ ಜಾಗೃತಿಯನ್ನು ಜನಸಮುದಾಯದಲ್ಲಿ ಉಂಟುಮಾಡುತ್ತಿರುವುದು ಮಹತ್ವದ್ದಾಗಿದೆ” ಎಂದು ಅಭಿಪ್ರಾಯಪಟ್ಟರು. ಈ ಹಿಂದೆ ಗಂಗಾವತಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾನು ಅಧ್ಯಕ್ಷನಾಗಿದ್ದೆ ಎಂಬುದನ್ನು ಸ್ಮರಿಸಿದ ಸಿಪಿಕೆಯವರು, ಅಲ್ಲಿ ಈಗ ಡಾ. ಜಾಜಿ ದೇವಂದ್ರಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಮ್ಮೇಳನ ಕನ್ನಡ ಸಾಹಿತ್ಯದ ಬೇರುಗಳನ್ನು ಗಟ್ಟಿಗೊಳಿಸಲಿ. ಸಂಪೂರ್ಣ ಯಶಸ್ಸು ಪಡೆಯಲಿ” ಎಂದು ಶುಭಹಾರೈಸಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ “ಅಜ್ಞಾತ ಸಾಹಿತ್ಯ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸಲು ಹಾಗೂ ನಾಡು-ನುಡಿಗೆ ದುಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯ ಗ್ರಾಮೀಣಮುಖಿಯಾಗಿ ಮತ್ತು ವ್ಯಾಪಕವಾಗಿ ನಡೆಯಬೇಕು” ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ಸಾಹಿತಿಗಳಾದ ಬಸಪ್ಪ ಸಿ. ಸಾಲುಂಡಿ, ಎಸ್. ಶಶಿರಂಜನ್, ರಂಗಕರ್ಮಿ ಚಂದ್ರು ಮಂಡ್ಯ, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಉಪಾಧ್ಯಕ್ಷ ಕೆ.ಎಸ್. ಸತೀಶ್ ಕುಮಾರ್, ಉಪನ್ಯಾಸಕ ಡಾ. ಹೆಚ್. ನವೀನ್ ಕುಮಾರ್ ಉಪಸ್ಥಿತರಿದ್ದರು.