ಹಾಸನ : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಯಲ್ಲಾಪುರ ತಾಲೂಕು ಘಟಕದ ಸಹಕಾರದಲ್ಲಿ ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 23 ಫೆಬ್ರವರಿ 2025 ಭಾನುವಾರ ಯಲ್ಲಾಪುರದ ಅಡಿಕೆ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಲೋಗೋ ಬಿಡುಗಡೆ ಕಾರ್ಯಕ್ರಮವು ದಿನಾಂಕ 19 ಫೆಬ್ರವರಿ 2025ರಂದು ಹಾಸನದ ಮದನಗೌಡರ ನಿವಾಸದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಲೋಗೋ ಅನಾವರಣಗೊಳಿಸಿ ಮಾತನಾಡಿದ ಹಾಸನ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ “ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಇದರಡಿಯಲ್ಲಿ ಕೊಟ್ರೇಶ್ ಎಸ್. ಉಪ್ಪಾರ್ ನೇತೃತ್ವದ ತಂಡ ಕರ್ನಾಟಕದ ಉದ್ದಗಲಕ್ಕೂ ಕನ್ನಡದ ಕಂಪನ್ನು ಸೂಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಸಾಹಿತ್ಯ ವೇದಿಕೆ ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಲವು ರಾಜ್ಯಮಟ್ಟದ ಸಮ್ಮೇಳನಗಳನ್ನು ಹಮ್ಮಿಕೊಂಡಿದ್ದು, ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದೆ. ಸದರಿ ಸಮ್ಮೇಳನದಲ್ಲಿ ನಾಡಿನ ದಿಗ್ಗಜ ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಸಮ್ಮೇಳನದ ಲೋಗೋವನ್ನು ಬಹಳ ಸಂತೋಷದಿಂದ ಅನಾವರಣ ಮಾಡಿದ್ದೇನೆ. ಸಾಹಿತ್ಯ ವೇದಿಕೆ ಕೊಟ್ರೇಶ್ ಉಪ್ಪಾರ್, ನಾಗರಾಜ್ ದೊಡ್ಡಮನಿ, ಬಸವರಾಜ್ ಮುಂತಾದ ಸಮಾನ ಮನಸ್ಕರಿಂದ ರೂಪುಗೊಂಡು ಸಾಹಿತ್ಯಾಸಕ್ತರನ್ನು ಒಗ್ಗೂಡಿಸಿಕೊಂಡು ಜನಸಂಖ್ಯೆಗೆ ಪ್ರಾಶಸ್ತ್ಯ ನೀಡದೇ ಆಸಕ್ತಿ ಕನ್ನಡ ಮನಸ್ಸುಗಳಿಗೆ ಮನ್ನಣೆ ನೀಡಿ ಎಲೆಮರೆ ಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಿರಂತರ ಕನ್ನಡ ಕೆಲಸ ಮಾಡುತ್ತಾ ಬಂದಿದೆ” ಎಂದರು.
ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ “ಹಾಸನ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ನಾಯಕತ್ವ ಹೊಂದಿರುವ ಎಚ್.ಬಿ. ಮದನಗೌಡರಿಂದ ನಮ್ಮ ಶಿಶು ಸಾಹಿತ್ಯ ಸಮ್ಮೇಳನದ ಲೋಗೋ ಅನಾವರಣಗೊಂಡಿದ್ದು ಬಹಳ ಔಚಿತ್ಯಪೂರ್ಣವಾಯಿತು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರಾದ ಸತೀಶ ಹೆಗಡೆಯವರು ಈ ಲೋಗೋ ರಚಿಸಿಕೊಟ್ಟಿದ್ದು, ನಾಡಿನ ಪ್ರಸಿದ್ಧ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಚೊಚ್ಚಲ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ವೇದಿಕೆಯ ಘನತೆಯನ್ನು ಹೆಚ್ಚಿಸಿದೆ. ಉತ್ತರ ಕನ್ನಡ ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ ಮತ್ತವರ ತಂಡ ಬಹಳ ಆಸಕ್ತಿ ಹಾಗೂ ಶ್ರದ್ಧೆಯಿಂದ ಸಮ್ಮೇಳನವನ್ನು ಸಂಘಟಿಸಿದ್ದಾರೆ” ಎಂದರು.
ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ್ ದೊಡ್ಡಮನಿ ಮಾತನಾಡಿ “ನಮ್ಮ ಸಮ್ಮೇಳನದ ಲೋಗೋವನ್ನು ಮದನಗೌಡರು ಅನಾವರಣ ಮಾಡಿರುವುದು ತುಂಬಾ ಖುಷಿ ತಂದಿದೆ. ಸದರಿ ಸಮ್ಮೇಳನದಲ್ಲಿ ನಾಡಿನ ಹಿರಿಯ ಸಾಹಿತಿ ಡಾ. ರಂಜಾನ್ ದರ್ಗಾ, ಶಂಕರ ಹಲಗತ್ತಿ, ಸ್ಥಳೀಯ ಶಾಸಕ ಶಿರಾಮ ಹೆಬ್ಬಾರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಸಾಹಿತಿ ಹಾಗೂ ಹೋರಾಟಗಾರ್ತಿ ಯಮುನಾ ಗಾಂವ್ಕರ್, ಡಾ. ಜಾಜಿ ದೇವೇಂದ್ರಪ್ಪ, ಶೈಲಜಾ ಹಿರೇಮಠ, ಅಕ್ಷತಾ ಕೃಷ್ಣಮೂರ್ತಿ, ರಮೇಶ ಗಬ್ಬೂರು, ವನರಾಗ ಶರ್ಮಾ, ಭಾಗೀರಥಿ ಹೆಗಡೆ, ಎ.ಎ.ದರ್ಗಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ” ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಕೋಶಾಧ್ಯಕ್ಷರಾದ ಎಚ್.ಎಸ್. ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.