ಶಿರಸಿ : ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರಿಗೆ ಶಿರಸಿಯ ‘ಎಂ.ರಮೇಶ ಪ್ರಶಸ್ತಿ ಸಮಿತಿ’ ನೀಡುವ ರಾಜ್ಯಮಟ್ಟದ ‘ಎಂ.ರಮೇಶ ಪ್ರಶಸ್ತಿ’ ಪ್ರಕಟಿಸಲಾಗಿದೆ. ಈ ಮೊದಲು ಯಕ್ಷಗಾನ, ನಾಟಕ ಕ್ಷೇತ್ರದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಈ ಬಾರಿ ಸಾಹಿತ್ಯ ಕ್ಷೇತ್ರಕ್ಕೆ ಪ್ರಶಸ್ತಿ ಪ್ರದಾನ ಮಾಡಲು ಸಮಿತಿ ತೀರ್ಮಾನಿಸಿ, ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಮಾರು ಮೂರು ದಶಕಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರಾಗಿ, ಜಿಲ್ಲೆಯಲ್ಲಿ ಹಾಸ್ಯ ಭಾಷಣಗಳಿಗೆ ಹೆಸರಾಗಿದ್ದ ಪ್ರೊ. ಎಂ.ರಮೇಶ ಅವರು 2020ರಲ್ಲಿ ಕಾಲವಾದ ನಂತರ ಸಮಾನ ಆಸಕ್ತರ ಬಳಗ ರಚಿಸಿಕೊಂಡ ಸಮಿತಿಯಿಂದ ಪ್ರಶಸ್ತಿ ಸ್ಥಾಪಿಸಲಾಗಿದೆ.
ಎಂ.ರಮೇಶ ಅವರ ನೆನಪಿನ ಪ್ರಶಸ್ತಿಯು ನಗದು ರೂ. 25,000/-, ಪ್ರಶಸ್ತಿ ಪತ್ರ, ಸ್ಮರಣಿಕೆ ಒಳಗೊಂಡಿದೆ. ಈ ಪ್ರಶಸ್ತಿಯನ್ನು ದಿನಾಂಕ 31-12-2023ರಂದು ಸಂಜೆ 4ಕ್ಕೆ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರಣೇಂದ್ರ ಕುರಕುರಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಿವೃತ್ತ ಪ್ರಾಚಾರ್ಯೆ ಡಾ. ಕುಮುದಾ ಶರ್ಮಾ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾಗಿರುವ ಶ್ರೀಮತಿ ಭುವನೇಶ್ವರಿ ಹೆಗಡೆಯವರ ಜನ್ಮ ಸ್ಥಳ ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲ ಗ್ರಾಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಮನಃಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ..
ಇವರ 500ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆ, ಮ್ಯಾಗಝಿನ್‌ಗಳಲ್ಲಿ ಪ್ರಕಟವಾಗಿವೆ. ‘ಮುಗುಳು’, ‘ನಕ್ಕು ಹಗುರಾಗಿ’, ‘ಎಂಥದು ಮಾರಾಯ್ರೇ’, ‘ವಲಲ ಪ್ರತಾಪ, ‘ಹಾಸಭಾಸ’, ‘ಮೃಗಯಾ ವಿನೋದ’, ‘ಬೆಟ್ಟದ ಭಾಗೀರಥಿ’, ‘ಮಾತನಾಡಲು ಮಾತೇ ಬೇಕೇ?’, ‘ಪುಟ್ಟಿಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ ಭುವನೇಶ್ವರಿಯವರ ಪ್ರಕಟಿತ ಕೃತಿಗಳು. ಇವರ ಆಯ್ದ ನಗೆಬರಹಗಳು ‘ಬೆಸ್ಟ್ ಆಫ್ ಭು ಹೆ’ ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿವೆ. ಭುವನೇಶ್ವರಿಯವರ ‘ಸಮಗ್ರ ಲಲಿತ ಪ್ರಬಂಧಗಳು’ ಎಂಬ ಪುಸ್ತಕವು ಸಪ್ನಾ ಬುಕ್ ಹೌಸ್ ನಿಂದ ಪ್ರಕಟವಾಗಿವೆ. ಇವರು ‘ಸೂರು ಸಿಕ್ಕದಲ್ಲಾ’, ‘ಕಚೇರಿ ವೈಭವಂ’, ‘ವಸಂತ ವ್ಯಾಧಿ’, ‘ಕಾವ್ಯ ಕೋಲಾಹಲ’ ಮತ್ತು ‘ಯಂತ್ರ ಅತಂತ್ರ’ ಎಂಬ ರೇಡಿಯೋ ನಾಟಕಗಳನ್ನು ಕೂಡಾ ರಚಿಸಿದ್ದಾರೆ.
ಇವರ ‘ಸಭಾಕ೦ಪನ’, ‘ಮೂಢನಂಬಿಕೆಗಳ ಬೀಡಿನಲ್ಲಿ’, ‘ಸುಲಭದಲ್ಲಿ ಸಜ್ಜನರಾಗಲಾರಿರಿ’, ‘ನಕ್ಕು ಹಗುರಾಗಿ’, ‘ಬೈಯಲು ಕಲಿಯಿರಿ’ ಮತ್ತಿತರ ಪ್ರಬಂಧಗಳು ಶಾಲಾ ಕಾಲೇಜುಗಳ ಪಠ್ಯವಾಗಿ ಆಯ್ಕೆಯಾಗಿವೆ. ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ ಪ್ರಸಿದ್ದರು. ‘ಮಂಗಳೂರು ಮುಗುಳ್ನಗೆ’ (ಲಂಕೇಶ್ ಪತ್ರಿಕೆ), ‘ನಗೆಮೊಗೆ’ (ವಾರ್ತಾಭಾರತಿ), ‘ಲಘುಬಗೆ’ (ಉದಯವಾಣಿ), ‘ಎಂಥದು ಮಾರಾಯ್ರೇ’ (ಕರ್ಮವೀರ), ‘ಪಡು ಪಡಸಾಲೆ’ (ಪ್ರಜಾವಾಣಿ), ಮುಗುಳು (ವಿಜಯವಾಣಿ) ಇವರು ನಿರ್ವಹಿಸಿದ ಅಂಕಣಗಳು. ಇವಲ್ಲದೆ, ಹಲವು ವಿಶೇಷ ಸಂಚಿಕೆಗಳಲ್ಲಿಯೂ ಭುವನೇಶ್ವರಿಯವರ ಲೇಖನಗಳು ಪ್ರಕಟವಾಗಿವೆ. ಅಮೆರಿಕಾದ ಕನ್ನಡ ಸಾಹಿತ್ಯ ಸಂಘ ಹೊರತಂದಿರುವ ‘ನಗೆಗನ್ನಡಂ ಗೆಲ್ಗೆ’ ಗ್ರಂಥದಲ್ಲಿ ಇವರ ಕುರಿತ ಆಹ್ವಾನಿತ ಲೇಖನ ಪ್ರಕಟವಾಗಿದೆ.
ಭುವನೇಶ್ವರಿಯವರು ಸಲ್ಲಿಸಿದ ವಿಫುಲ ಸಾಹಿತ್ಯ ಸೇವೆಯಿಂದಾಗಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (1988, 1997), ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ (1997, 2000), ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಶನ್‌ನ ಸುಧಾಮೂರ್ತಿ ಪ್ರಶಸ್ತಿ, ಶಿರಸಿಯ ಬಿ.ಎಚ್. ಶ್ರೀಧರ ಪ್ರಶಸ್ತಿ, ಹುಬ್ಬಳ್ಳಿಯ ಅವ್ವ ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರಶಸ್ತಿಗಳಿಂದ ಇವರನ್ನು ಗೌರವಿಸಲಾಗಿದೆ.
ಮೇ 2011ರಲ್ಲಿ ಅಮೇರಿಕೆಯ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಸಾಹಿತ್ಯರಂಗ ಹಾಗೂ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವಸಂತ ಸಾಹಿತ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. ಅಕ್ಟೋಬರ್ 2011ರಲ್ಲಿ ಲಂಡನ್ ನಗರದ ಕನ್ನಡ ಸಂಗಮ ಸಂಸ್ಥೆ ಏರ್ಪಡಿಸಿದ ‘ವಿಶ್ವಕನ್ನಡ ಸಮ್ಮೇಳನ ಯುರೋಪ್-2011’ ಇದರಲ್ಲಿ ಕನ್ನಡ ಹಾಸ್ಯ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದ್ದಾರೆ. 2012 ಅಕ್ಟೋಬರ್‌ನಲ್ಲಿ ಅಮೇರಿಕೆಯ ಬಾಸ್ಟನ್ ಕನ್ನಡ ಕೂಟದ ರತ್ನ ಮಹೋತ್ಸವವನ್ನು ಉದ್ಘಾಟಿಸಿ ಭಾಷಣ ಮಾಡಿದ್ದಾರೆ. ಪ್ರೊ. ಭುವನೇಶ್ವರಿ ಹೆಗಡೆಯವರು ಪತಿ ಶಂಭು ಹೆಗಡೆ ಮತ್ತು ಪುತ್ರಿ ಆಭಾ ಹೆಗಡೆಯವರೊಂದಿಗೆ ಮಂಗಳೂರಿನ ಕದ್ರಿಯಲ್ಲಿ ನೆಲೆಸಿದ್ದಾರೆ.
Email ID: [email protected]
Mobile No: 9448835155