ಪೆರುವಾಯಿ: ಮುರುವ ಬಳಿಯ ಮಾಣಿಲದ ನಿವಾಸಿ ಖ್ಯಾತ ಕಾಷ್ಠ ಶಿಲ್ಪಿ ನಾರಾಯಣ ಆಚಾರ್ಯ ಹೃದಯಾಘಾತದಿಂದ ದಿನಾಂಕ 30 ಆಗಸ್ಟ್ 2024ರ ರಾತ್ರಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಶ್ರೀಯುತರು ದಿ. ಪಕೀರ ಆಚಾರ್ಯ ಹಾಗೂ ದಿ. ಪುಟ್ಟಮ್ಮ ದಂಪತಿಗಳ ಪುತ್ರನಾಗಿದ್ದು, ಮರದ ಕೆತ್ತನೆ ಕೆಲಸದ ಜೊತೆ ಖ್ಯಾತ ಕಾಷ್ಠ ಶಿಲ್ಪಿಯಾಗಿ ಹೆಸರುವಾಸಿಯಾಗಿದ್ದರು. ತಂದೆಯ ಜೊತೆ ಹಾಗೂ ಮಂಜೇಶ್ವರದ ರಥದ ಶಿಲ್ಪಿ ದಿ. ಈಶ್ವರ ಆಚಾರ್ಯರ ಮಾರ್ಗದರ್ಶನದಲ್ಲಿ ರಥದ ಶಿಲ್ಪದ ಭವ್ಯ ಪರಂಪರೆಯನ್ನು ವಿನೂತನ ಶೈಲಿಯಲ್ಲಿ ರಚಿಸಿ ಕೀರ್ತಿ ಪಡೆದಿದ್ದರು. ಮುರುವದ ಗ್ರಾಮ ದೈವ ಪಂಜುರ್ಲಿ, ಹುಲಿ ಭೂತಗಳ ವರಾಹ ಮತ್ತು ವ್ಯಾಘ್ರ ಬಂಡಿಯಲ್ಲಿ ಇವರ ಕೈಚಳಕದ ಕೆತ್ತನೆಯನ್ನು ಈಗಲೂ ಕಾಣಬಹುದು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನ ಮಾಣಿಲ, ಕೇಪು, ಚೆಲ್ಲಡ್ಗ ಮುಂತಾದ ಕಡೆಗಳಲ್ಲಿ ರಚಿತವಾದ ಶಿಲ್ಪ ಕಲೆಗಳಲ್ಲಿ ಇವರ ಕಲಾ ಪ್ರೌಢಿಮೆ ಎದ್ದು ಕಾಣುವಂತಿದೆ. ಅದೇ ರೀತಿ ಬೆಂಗಳೂರು ಗಿರಿನಗರ ಗಣೇಶ ದೇವಾಲಯದಲ್ಲಿ ಕೂಡ ಇವರ ಕಾಷ್ಠ ಶಿಲ್ಪ ಕಲೆಯ ಕೈಚಳಕವನ್ನು ಈಗಲೂ ಕಾಣಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ರಥಶಿಲ್ಪದ ಕಾರ್ಯವನ್ನು ನಿರ್ವಹಿಸಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಕಲೆಗಾಗಿ ಇವರು ಮಾಡಿದ ತ್ಯಾಗ ಅಮರವಾದುದು.
ಇವರ ಕಾಷ್ಠ ಶಿಲ್ಪ ಕಲೆಯ ಸೇವೆಯನ್ನು ಮನಗಂಡು ಶ್ರೀ ದುರ್ಗಾ ಪರಮೇಶ್ವರೀ ಯುವಕ ಸಂಘ ತಾರಿದಳ ಮಾಣಿಲ ತಮ್ಮ ದಶಮಾನೋತ್ಸವದ ಸುಸಂದರ್ಭದಲ್ಲಿ ‘ಹುಟ್ಟೂರ ಸನ್ಮಾನ’ವನ್ನು ನೀಡಿ ಗೌರವಿಸಿದೆ.
ಮೃತರು ಪತ್ನಿ ನಿರ್ಮಲ, ಮಕ್ಕಳಾದ ಗೋಪಾಲಕೃಷ್ಣ ಆಚಾರ್ಯ, ಹೇಮಂತ ಆಚಾರ್ಯ, ಸನತ್ ಆಚಾರ್ಯ, ಸುನಿಲ್ ಕುಮಾರ್ ಆಚಾರ್ಯ, ಸೊಸೆಯಂದಿರಾದ ಪ್ರಿಯ, ದೀಪಿಕಾ, ಸಹೋದರ ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಶಸ್ತಿ
Next Article ‘ಶ್ರೀಕೃಷ್ಣ ಮಾಸೋತ್ಸವ’ದ ಸಮಾರೋಪ | ಸೆಪ್ಟೆಂಬರ್ 1
Related Posts
Comments are closed.