ಕೊಚ್ಚಿ : ಮಾತಂಗಿ ಮತ್ತು ಅಕ್ಬರ್ ಟ್ರಾವೆಲ್ಸ್ ಪ್ರಸ್ತುತಪಡಿಸುವ ‘ಮಾತಂಗಿ ಫೆಸ್ಟಿವಲ್ 2023’ ಕಾರ್ಯಕ್ರಮವು ದಿನಾಂಕ 02-10-2023ರಿಂದ 06-10-2023ರವರೆಗೆ ಕೊಚ್ಚಿಯ ತ್ರಿಪುನಿಥುರ, ಜೆ.ಟಿ.ಪಿ.ಎ.ಸಿ.ಯಲ್ಲಿ ನಡೆಯಲಿದೆ. ದಿನಾಂಕ 02-10-2023ರಂದು ನವ್ಯಾ ನಾಯರ್, ದಿನಾಂಕ 03-10-2023ರಂದು ರಮಾ ವೈದ್ಯನಾಥನ್, ದಿನಾಂಕ 04-10-2023ರಂದು ಮೀನಾಕ್ಷಿ ಶ್ರೀನಿವಾಸನ್, ದಿನಾಂಕ 05-10-2023ರಂದು ಪ್ರಿಯದರ್ಶಿನಿ ಗೋವಿಂದ್ ಮತ್ತು ದಿನಾಂಕ 06-10-2023ರಂದು ಜಾನಕಿ ರಂಗರಾಜನ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ನವ್ಯಾ ನಾಯರ್ : ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಎದ್ದು ಕಾಣುವ ನಟಿಯರಲ್ಲಿ ಒಬ್ಬರಾದ ನವ್ಯಾ ನಾಯರ್ ಭಾರತೀಯ ನೃತ್ಯ ಸಂಪ್ರದಾಯವನ್ನು ಮೀರಿದ ಅಯಸ್ಕಾಂತೀಯ ಆಕರ್ಷಣೆಯನ್ನು ಹೊಂದಿದ್ದಾರೆ. ಅವರ ನೃತ್ಯ ಕೌಶಲ್ಯವು ಭಾವನೆಗಳ ಸ್ವರಮೇಳವಾಗಿದೆ. ಸೊಗಸಾದ ಚಲನೆಗಳು ಮತ್ತು ಅಭಿವ್ಯಕ್ತಿಯು ಸನ್ನೆಗಳ ಮತ್ತು ಭಂಗಿಗಳ ಮೂಲಕ ವ್ಯಕ್ತವಾಗುತ್ತದೆ. ಈ ಭಾವಪೂರ್ಣವಾದ ಪ್ರದರ್ಶಕರು ಕೇರಳ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಂದ ಗೌರವ ಪಡೆದಿದ್ದಾರೆ. ಸಂಸ್ಥಾಪಕಿಯಾಗಿ ‘ಮಾತಂಗಿ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನ್ನು ನೃತ್ಯ ಕ್ಷೇತ್ರದ ಪ್ರದರ್ಶನ ಕಲೆಗೆ ಸಮರ್ಪಿಸಿ, ಶೃದ್ಧೆಯಿಂದ ಕಲಾ ಶಾರದೆಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ.
ರಮಾ ವೈದ್ಯನಾಥನ್ : ನೃತ್ಯ ಕ್ಷೇತ್ರದ ದಾರ್ಶನಿಕರಾದ ರಮಾ ವೈದ್ಯನಾಥನ್ ತಮ್ಮ ಅಲೌಕಿಕ ಕಲಾತ್ಮಕತೆಯಿಂದ ದೇಶ ವಿದೇಶದಲ್ಲೂ ಪ್ರಸಿದ್ಧರಾಗಿದ್ದಾರೆ. ಭಾರತೀಯ ಕಲಾ ಪ್ರಕಾರಗಳಿಗೆ ತನ್ನ ಕೊಡುಗೆಯನ್ನು ನೀಡಿ ಪ್ರಾಚೀನ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಪ್ರಾಮಾಣಿಕತೆಯಿಂದ ಮಾಡುತ್ತಿರುವ ಒಬ್ಬ ಕಲಾರಾಧಕಿ. ಅವರ ಹೆಸರಾಂತ ಭರತನಾಟ್ಯ ಶಾಲೆಯಾದ ಗಣೇಶ ನಾಟ್ಯಾಲಯದ ಮೂಲಕ ಆಧುನಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡು ನೃತ್ಯ ಕ್ಷೇತ್ರಕ್ಕೆ ಪ್ರಾಮಾಣಿಕ ಕೊಡುಗೆ ನೀಡಿದ್ದಾರೆ. ಭಾರತದಲ್ಲಿ ಭರತನಾಟ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಸಂಗೀತ ನಾಟಕ ಅಕಾಡೆಮಿ ಆಕೆಯನ್ನು ಪುರಸ್ಕರಿಸಿ ಗೌರವಿಸಿದೆ.
ಮೀನಾಕ್ಷಿ ಶ್ರೀನಿವಾಸನ್ : ಮೀನಾಕ್ಷಿ ಶ್ರೀನಿವಾಸನ್ ಅವರು ಬಹುಪ್ರಸಿದ್ಧ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದಾರೆ. ಭರತನಾಟ್ಯದ ಪಂದನಲ್ಲೂರು ಶೈಲಿಯ ಪಾಂಡಿತ್ಯವನ್ನು ಹೊಂದಿದ ಇವರು ದಶಕಗಳಿಂದ ಈ ಕಲಾದೇವಿಯ ಸೇವೆ ಮತ್ತು ಪ್ರಚಾರ ಮಾಡುತ್ತಿದ್ದಾರೆ. ಅವರು ಅಭಿವ್ಯಕ್ತಿಶೀಲ ಚಲನೆಗಳು ಮತ್ತು ಆಕರ್ಷಕ ಕಥೆ ಪ್ರಸ್ತುತಿಯಿಂದ ವಿಶ್ವದಾದ್ಯಂತ ಪ್ರೇಕ್ಷಕರನ್ನು ತನ್ನ ಕಡೆ ಸೆಳೆದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲಾರ್ಮೆಲ್ ವಲ್ಲಿ ಅವರಿಂದ ಅಭ್ಯಾಸ ಮಾಡಿದ ಪವಿತ್ರವಾದ ನೃತ್ಯ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಾಧಕಿ. ಸಂಗೀತ ನಾಟಕ ಅಕಾಡಮಿ ಕೊಡಮಾಡುವ ‘ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ವು ಸಂಗೀತ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗೆ ದೊರೆತ ಗೌರವ.
ಪ್ರಿಯದರ್ಶಿನಿ ಗೋವಿಂದ್ : ಪ್ರಿಯದರ್ಶಿನಿ ಗೋವಿಂದ್ ಭಾರತದ ಭರತನಾಟ್ಯ ನೃತ್ಯಗಾರ್ತಿ ಮತ್ತು ಚೆನ್ನೈಯ ಕಲಾಕ್ಷೇತ್ರದ ನಿರ್ದೇಶಕಿ. ಅವರು ತನ್ನ ಅನುಪಮ ತಂತ್ರ, ಭಾವನಾತ್ಮಕ ಅಭಿವ್ಯಕ್ತಿಗಳು ಮತ್ತು ಸಂಕೀರ್ಣವಾದ ನೃತ್ಯ ಸಂಯೋಜನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳಿಂದ ಗೌರವಿಸಲ್ಪಟ್ಟವರು. ಅವರು ಜಾಗತಿಕವಾಗಿ ಭರತನಾಟ್ಯ ಕಲಾ ಪ್ರಕಾರದ ಸಂರಕ್ಷಣೆ ಮತ್ತು ಪ್ರಚಾರಕ್ಕೆ ಗಮನಾರ್ಹ ಕೊಡುಗೆ ನೀಡಿ ನರ್ತನಾ ಪೀಳಿಗೆಗೆ ಸ್ಫೂರ್ತಿ ನೀಡಿದವರು.
ಜಾನಕಿ ರಂಗರಾಜನ್ : ಜಾನಕಿ ರಂಗರಾಜನ್ ಅವರು ಹದಿನೈದು ವರ್ಷಗಳ ಕಾಲ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಪಡೆದ ಶ್ರೇಷ್ಠ ವ್ಯಕ್ತಿತ್ವ. ಅವರು ಮನಸ್ಸನ್ನು ಮುದಗೊಳಿಸುವ ನಿರ್ಮಾಣಗಳನ್ನು ಮಾಡಿ ಭರತನಾಟ್ಯದಲ್ಲಿ ಸಾಟಿಯಿಲ್ಲದ ಸ್ಥಾನವನ್ನು ಪಡೆದಿದ್ದಾರೆ. ಅವರ ಕಲಾತ್ಮಕ ಪ್ರಯಾಣವು ವಿದೇಶಗಳನ್ನು ತಲುಪಿ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದೆ. ಪ್ರತಿಷ್ಠಿತ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪುರಸ್ಕಾರಗಳಿಂದ ಗೌರವಕ್ಕೆ ಪಾತ್ರರಾಗಿದ್ದು, ಪ್ರದರ್ಶಕ ಮತ್ತು ನೃತ್ಯ ಸಂಯೋಜಕಿಯಾಗಿ ಇವರ ಪ್ರತಿಭೆ ಅದ್ಭುತವಾಗಿ ಮಿಂಚುತ್ತಿದೆ.