‘ಮಾತು ವಿಸ್ಮಯ’ ಲೋಕ ಒಪ್ಪಿಕೊಂಡ ಬದಲಾವಣೆ ಸಬ್ ಟೈಟಲ್ ಇರುವಂತಹ ಈ ಪುಸ್ತಕದ ಮೂಲ ಕರ್ತೃ ಮಲಯಾಳಂ ನಲ್ಲಿ ಬರೆದಿರುವ ಸಜಿ ಎಂ. ನರಿಕ್ಕುಯಿ. ಕನ್ನಡಕ್ಕೆ ಶ್ರದ್ಧೆಯಿಂದ ಅನುವಾದಿಸಿದವರು ಡಾ. ಮೀನಾಕ್ಷಿ ರಾಮಚಂದ್ರ.
ಈಪುಸ್ತಕವನ್ನು ಅವಲೋಕಿಸುವಾಗ ಮುಖಪುಟದಿಂದಲೇ ಆರಂಭಿಸಬೇಕಾಗುತ್ತದೆ. ಸುಂದರವಾದ, ಅಷ್ಟೇ ಮಾರ್ಮಿಕವಾದ ಮುಖಪುಟವನ್ನು ಕಲಾವಿದ ಗೋಪಾಡ್ಕರ್ ಅವರು ಮಾಡಿರುತ್ತಾರೆ. ಸ್ವಯಂ ಮಾರ್ಗದರ್ಶಕವಾಗಿರುವ ಸೆಲ್ಫ್ ಆಗಿರುವಂತಹ ಈ ಪುಸ್ತಕಕ್ಕೆ ಪೂರಕವಾಗಿರುವಂತಹ, ಅನ್ವರ್ಥವಾಗಿರುವಂತಹ ಬಿಂಬಗಳು ಈ ಚಿತ್ರಗಳೊಳಗೆ ಕಾಣುತ್ತವೆ. ಪುಸ್ತಕದ ಒಳಗೆ ಹೋಗುವಾಗಲೇ ಒಂದಷ್ಟು ಚಿತ್ರಗಳನ್ನು ನಮ್ಮ ಚಿತ್ತ ಭಿತ್ತಿಯಲ್ಲಿ ಮೂಡಿಸುತ್ತದೆ. ಪ್ರತಿಯೊಂದು ಅಧ್ಯಾಯ ಆರಂಭವಾಗುವುದು ಚಿಂತನೆಗೆ ಹಚ್ಚುವ ಆಕರ್ಷಕ ಚಿತ್ರದ ಮೂಲಕ.
ಈ ಪುಸ್ತಕದಲ್ಲಿ ಸಜಿಯವರು ಒಟ್ಟು ಐದು ಭಾಗಗಳನ್ನು ಮಾಡಿದ್ದಾರೆ. ಪ್ರತಿಯೊಂದು ಭಾಗದಲ್ಲಿ ಒಂದರಿಂದ ಒಂಬತ್ತು ಅಥವಾ 10 ಅಧ್ಯಾಯಗಳಿವೆ. ‘ಮಾತಿನ ಮಾಂತ್ರಿಕ ಶಕ್ತಿ’, ‘ಬದುಕಿನಲ್ಲಿ ಬದಲಾವಣೆ’ ,’ವಿಜಯದ ರಹಸ್ಯ ಹೊಂದಾಣಿಕೆ ಉಳ್ಳ ಸಂಬಂಧಗಳು’, ‘ಹರಿಯುವ ಹಣ’ ಇವು ಐದು ಭಾಗಗಳು. ಮೊದಲನೆಯ ಅಧ್ಯಾಯದಲ್ಲಿಯೇ ಮಾತಿನ ಬಗೆಗಿನ ಪುಸ್ತಕದ ವಿವರಣೆ ವೈಜ್ಞಾನಿಕವಾದದ್ದು ಎಂಬ ಸಮರ್ಥನೆಯನ್ನು ಸಜಿಯವರು ನೀಡುತ್ತಾರೆ. ಒಳಿತನ್ನು ಒಳಗೊಂಡ ಮಾತುಗಳನ್ನು ಹೇಳಿದಾಗ ಅಥವಾ ಬರೆದಾಗ ನೀರಿನ ಹರಳುಗಳ ಚಿತ್ರಗಳು ಸುಂದರವಾಗಿ ಮಾರ್ಪಾಡಾದುದನ್ನು ಹೇಳುತ್ತಾರೆ. ಹಾಗೆಯೇ ಕೆಟ್ಟ ಅಥವಾ ಅವಹೇಳನೆಯ ಮಾತುಗಳನ್ನು ಹೇಳಿದಾಗ ನೀರಿನ ಹರಳುಗಳ ಚಿತ್ರಗಳು ವಿಕೃತವಾಗಿ ಬದಲಾದದ್ದನ್ನು ಪ್ರಯೋಗಗಳಿಂದ ಸಮರ್ಥಿಸಿದ ಜಪಾನಿ ಶಾಸ್ತ್ರಜ್ಞ ‘ಇಮೋಟು’ ಅವರನ್ನು ಉಲ್ಲೇಖಿಸುತ್ತಾರೆ. ಆ ಸುಂದರವಾದ ಪದಗಳು ಸ್ನೇಹ ಮತ್ತು ಕೃತಜ್ಞತೆ. ಮಾನವನ ಶರೀರದಲ್ಲಿ 70% ಇರುವ ನೀರು ಕೂಡ ಮತ್ತೆ ಮತ್ತೆ ಕೇಳುವ ಮಾತುಗಳಿಂದ ಸ್ಪಂದಿಸುತ್ತದೆ. ಹೀಗಾಗಿ ಒಬ್ಬ ವ್ಯಕ್ತಿ ತನ್ನ ಮಾತುಗಳನ್ನು ಸೂಕ್ಷ್ಮವಾಗಿ ಬಳಸಬೇಕು, ಪುಸ್ತಕಗಳನ್ನು ಆರಿಸಿಕೊಳ್ಳಬೇಕು, ಸ್ನೇಹಿತರನ್ನು ಕೂಡ ಹಾಗೂ ತನ್ನೊಳಗೆ ಮಾತನಾಡುವುದನ್ನು ಕೂಡ.
ಎರಡನೇ ಅಧ್ಯಾಯ ಬದಲಾಯಿಸಲು ಮಾತುಗಳನ್ನು ಹೇಗೆ ಪ್ರಯೋಗಿಸಬೇಕು?
ಇಲ್ಲ, ಬೇಡ- ಇವು ನೆಗೆಟಿವ್. ಬೇಕು ಅವಶ್ಯಕತೆ ಇದೆ, ಮಾಡಿಯೇ ಮಾಡುತ್ತೇನೆ ಇವು ಪಾಸಿಟಿವ್. ನನ್ನಲ್ಲಿ ಕಾರ್ ಇಲ್ಲ, ಸೈಟ್ ಅನ್ಇಲ್ಲ ಎನ್ನುವುದಕ್ಕಿಂತ ನನಗೆ ಕಾರು ಬೇಕು, ಆಸ್ತಿ ಬೇಕು ಎಂದರೆ ಉತ್ತಮ. ಸಿಕ್ಕಿದರೆ ಕೊಡುತ್ತೇನೆ ಎನ್ನುವುದಕ್ಕಿಂತ ಸಿಕ್ಕುವಾಗ ಕೊಡುತ್ತೇನೆ ಎನ್ನುವ ಪ್ರಯೋಗ ನರಮಂಡಲದಲ್ಲಿ ಹೊಸ ಸಂಚಲನವನ್ನು ಉಂಟು ಮಾಡುತ್ತದೆ.
ಮೂರನೇ ಅಧ್ಯಾಯದಲ್ಲಿ ಮಾತು ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿಚಾರವಿದೆ. ರಾಬಿನ್ಸ್ ಹೇಳುತ್ತಾರೆ ನನಗಾಗುವುದಿಲ್ಲ ಎನ್ನಬೇಡಿ. ನಿಮ್ಮ ಮಾತೇ ನಿಮ್ಮ ವಿಧಿ, ನಿಮ್ಮ ಭವಿಷ್ಯ. ಒಂದು ಕಾರ್ಯವನ್ನು ಮತ್ತೆ ಮತ್ತೆ ಮಾಡಿದಾಗ ಒಂದು ಮನೋಭಾವದಲ್ಲಿ ಮತ್ತೆ ಮತ್ತೆ ಇರುವಾಗ ನಾವು ಅದುವೇ ಆಗಿಬಿಡುತ್ತೇವೆ ಎನ್ನುತ್ತಾರೆ ಮನೋಶಾಸ್ತ್ರಜ್ಞ ಹಾಪ್ ಕಿನ್ಸ್. ಮಾತು ಶಕ್ತಿಯ ಕೇಂದ್ರ. ಲೇಖಕರು ಪ್ರತಿ ಅಧ್ಯಯನದ ಸಾರವನ್ನು ಆಟೋ ಸಜೆಶನ್ ಆಗಿ ಕೀವರ್ಡ್ ಆಗಿ ಕೊನೆಯ ಸಾಲಿನ ಬಲ ಕೊನೆಯಲ್ಲಿ ಬರೆಯುತ್ತಾರೆ. ಇದು ವಿನ್ಯಾಸಕಾರರ ದೃಷ್ಟಿಯು ಹೌದು. ನಾಲ್ಕನೇ ಅಧ್ಯಾಯದಲ್ಲಿ ನಾವಾಡುವ ಮಾತುಗಳು ಅಥವಾ ಬರೆಯುವ ಮಾತುಗಳು ನಮ್ಮ ಮನಸ್ಸಿನಲ್ಲಿ ಹೇಗೆ ಚಿತ್ರಗಳನ್ನು ಸೃಷ್ಟಿಸುತ್ತಲೇ ಇರುತ್ತವೆ ಎಂದು ವಿವರಿಸಲಾಗಿದೆ. ನಾವೇನನ್ನು ಕಾಣುತ್ತೇವೋ, ಭಾವಿಸುತ್ತೇವೋ ಅದುವೇ ನಮಗೆ ಲಭಿಸುತ್ತದೆ. ಮಾತುಗಳ ಮಾಂತ್ರಿಕ ಶಕ್ತಿಯಿಂದ ವ್ಯಕ್ತಿ ತಾನು ಬಯಸುವ ವಿಷಯಗಳ ಕಡೆಗೆ ಆಕರ್ಷಿಸಲ್ಪಟ್ಟು ಅವನ ಕನಸುಗಳು ಸಾಕಾರಗೊಳ್ಳುತ್ತವೆ. “ನನ್ನಿಂದ ಸಾಧ್ಯವಿದೆ” ಎಂದು ಹೇಳುವಾಗ ನಮ್ಮ ನರನಾಡಿಗಳಲ್ಲಿ ಅದು ಏಳು ಬಾರಿ ಪುನರುಚ್ಚರಿಸಲ್ಪಡುತ್ತದೆ. ಆಂತರ್ಯದಲ್ಲಿ ಶಾಂತವಾದ ಚಿತ್ರಗಳನ್ನು ಸೃಷ್ಟಿಸುತ್ತದೆ. ಐದನೇ ಅಧ್ಯಾಯದಲ್ಲಿ ಮಾತು ಹಾಗೂ ಮೆದುಳಿನ ಕಾರ್ಯ ಸಂಬಂಧದ ವಿವರಣೆ ಇದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಪದ ಕೋಶ ನಿರ್ಮಾಣವಾಗಿರುತ್ತದೆ. ನಾನು ಕೇಳುವ ಪ್ರತಿಯೊಂದು ಮಾತಿಗೆ ತನ್ನ ಪದಕೋಶದಲ್ಲಿ ಯಾವ ಅರ್ಥವಿದೆ ಎಂದು ನೋಡಿಕೊಂಡು ಪ್ರತಿಕ್ರಿಯಿಸುವ ತೀರ್ಮಾನಕ್ಕೆ ಒಬ್ಬ ಬರುತ್ತಾನೆ. ಕಳೆದ ಕಾಲದ ಅನುಭವಗಳಿಗೂ ಶೇಖರಿಸಿಕೊಂಡ ಭಾವನೆಗಳಿಗೂ ಮನಸ್ಸಿನಲ್ಲಿ ಉಂಟಾಗುವ ಪ್ರತಿಕ್ರಿಯೆಗಳಿಗೂ ಅವಿನಾಭಾವ ಸಂಬಂಧವಿದೆ. ಮತ್ತೆ ಮತ್ತೆ ಕಾಣುವುದನ್ನು, ಕೇಳುವುದನ್ನು ಮೆದುಳು ನಿಜವೆಂದೆ ಗ್ರಹಿಸಿಕೊಳ್ಳುತ್ತದೆ.” ನೀನೆಲ್ಲಿದ್ದರೂ ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ” ಎನ್ನುವ ಹಿರಿಯರ ಮಾತು ಅಥವಾ ಗುರುಗಳ ಮಾತು ಒಂದು ಆನಂದದ ಬಾವುಕ ಅನುಭವವನ್ನು ವ್ಯಕ್ತಿಗೆ ಕೊಡುವುದರ ಮೂಲಕ ಆತನಿಗೆ ಎಲ್ಲವನ್ನು ಎದುರಿಸುವ ಧೈರ್ಯವನ್ನು ತಂದುಕೊಡುತ್ತದೆ. “ನೀನು ನಾಲಾಯಕ್ಕು, ನಿನ್ನಿಂದ ಯಾವುದು ಸಾಧ್ಯವಿಲ್ಲ “ಎನ್ನುವ ಮಾತು ಆತನ ವಿಜಯಗಳನ್ನು ತಡೆಹಿಡಿಯುತ್ತದೆ. ಹೀಗಾಗಿ ಲೇಖಕರು ಹೇಳುತ್ತಾರೆ ನಮ್ಮ ಪ್ರತಿಯೊಂದು ಮಾತು ಪ್ರಜ್ಞಾಪೂರ್ವಕವಾಗಿ ಪಾಸಿಟಿವ್ ಆಗಿರಬೇಕು.
ಆರನೇ ಅಧ್ಯಾಯದ ತಿರುಳು ಇಷ್ಟೇ -ಟ್ರಾನ್ಸಾಕ್ಷನ್ ಬದಲಾದರೆ ಟ್ರಾನ್ಸ್ ಫಾರ್ಮೇಶನ್ ಸಾಧ್ಯ. ಒಂದು ಮಾತಿಗೆ ಪ್ರತಿ ಮಾತು ಅಥವಾ ಪ್ರತಿಕ್ರಿಯೆ, ಇದು ಸಂಪರ್ಕ ಅಥವಾ ಟ್ರಾನ್ಸಾಕ್ಷನ್. ಪ್ರಜ್ಞಾಪೂರ್ವಕವಾದ ಪಾಸಿಟಿವ್ ಕ್ರಿಯೆ, ಅನುಕ್ರಿಯೆಗಳಿಂದ ವ್ಯಕ್ತಿಯಲ್ಲಿ ಪರಿವರ್ತನೆ ಸಾಧ್ಯ.
ನಾವು ಇರುವಂತಹ ಯುನಿವರ್ಸ್ ಯಾವುದನ್ನು ಕೇಳುತ್ತೇವೋ ಅದನ್ನೇ ಕೊಡುತ್ತದೆ. ತಥಾಸ್ತು ಅನ್ನುತ್ತದೆ. ಮೀನಾಕ್ಷಿ ರಾಮಚಂದ್ರ ಅವರು ಅನುವಾದಿಸುವಾಗ ನಮ್ಮ ಸಂಸ್ಕೃತಿಗೆ ಅನುರೂಪವಾಗಿ ಪದಗಳನ್ನು ಬಳಸಿದ್ದಾರೆ. ತಥಾಸ್ತು ಎನ್ನುವುದು ಡಿವೈನ್ ಪದವಾಗಿರುವುದರಿಂದ ನಮ್ಮೊಳಗೆ ಒಂದು ಸಕಾರಾತ್ಮಕವಾದ ದೈವಿಕ ಭಾವನೆಯನ್ನು ಮೂಡಿಸುತ್ತದೆ. ಒಂದು ಅಧ್ಯಾಯದಲ್ಲಿ ಮಾತು ಮತ್ತು ಆರೋಗ್ಯದ ಅವಿನಾಭಾವ ಸಂಬಂಧದ ಕುರಿತು ಹೇಳಲಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಯಾಕೆಂದರೆ ನಮ್ಮ ಆಲೋಚನೆಗಳನ್ನು, ಭಾವನೆಗಳನ್ನು ರೂಪಿಸುವುದು ನಾವೆ. ಪ್ರಪಂಚದ ಸೃಷ್ಟಿಯಿಂದ ಶಕ್ತಿ ಆಗಿರುತ್ತದೆ . ಆ ಶಕ್ತಿಯ ಸಂಚಾರ ತರಂಗದಿಂದಲೂ ಕಂಪನದಿಂದಲೂ ಆಗುತ್ತದೆ. ಮಾತಾದರೋ ಸ್ವಯಂ ಕಂಪನಗಳ ತರಂಗಗಳನ್ನು ಅವಲಂಬಿಸಿರುತ್ತದೆ. ಮಾತಿನ ಶಕ್ತಿಯು ಇಬ್ಬರ ಒಳಗೂ ಪ್ರಪಂಚಕ್ಕೂ ಶಕ್ತಿ ಸಂದೇಶವನ್ನು ಕಳುಹಿಸುತ್ತಾ ಇರುತ್ತದೆ. ಹೀಗಾಗಿ ಮಾತು ಎರಡು ತಲೆಯ ಖಡ್ಗ ಎಂದು ಮಾರ್ಮಿಕವಾಗಿ ಹೇಳಲಾಗಿದೆ. ಒಳ್ಳೆಯದನ್ನು ಮತ್ತೆ ಮತ್ತೆ ಆಡಿದಾಗ ಆರೋಗ್ಯಕರ ಹಾರ್ಮೋನುಗಳು ಬಿಡುಗಡೆಯಾಗಿ ನಮ್ಮ ಆರೋಗ್ಯದಲ್ಲಿ ಅದ್ಭುತ ಬದಲಾವಣೆ ಸಾಧ್ಯವಾಗುತ್ತದೆ. ಆಗುವುದು, ಆಗುತ್ತಿರುವುದು ,ಆಗಲಿರುವುದು ಒಳಿತಿಗಾಗಿ. ಇದನ್ನು ನಾನು ನನ್ನ ಮೇಲೆ ಪ್ರಯೋಗಿಸಿಕೊಂಡಿದ್ದೇನೆ. ನನಗೆ ಮನೆಯಿಂದ, ಗೆಳತಿಯರಿಂದ ಸಮಾಜದ ಬೇರೆ ಬೇರೆ ವರ್ಗದಿಂದ ನೆಗೆಟಿವ್ ಬಂದಾಗಲೂ ನನ್ನೊಳಗೆ ಭದ್ರವಾಗಿದ್ದಂತಹ ಪಾಸಿಟಿವ್ ಭಾವನೆಗಳನ್ನು ಯಾವತ್ತೂ ಕಾಪಿಡುತ್ತಿದೆ. ಅದು ನೆಲಕಚ್ಚಲು ನಾನು ಬಿಡಲೇ ಇಲ್ಲ. ಹಾಗಾಗಿ ಅವುಗಳು ನನ್ನನ್ನು ರಕ್ಷಿಸಿದವು. ನನ್ನ ದೇಹವು ಸದಾ ಸುಖಿಯಾಗಿರುವಂತೆ ನನ್ನ ಭಾವನೆಗಳು ನೋಡಿಕೊಂಡವು. ಹೀಗಾಗಿ ಸಾಮಾನ್ಯವಾಗಿ ಹವಾಮಾನ ಬದಲಾವಣೆಯಿಂದ ಜನರಲ್ಲಿ ಆಗುವ ಆರೋಗ್ಯದ ಏರುಪೇರುಗಳು ನನ್ನಲ್ಲಿ ಆಗುವುದು ತೀರಾ ಕಡಿಮೆ. ವೈದ್ಯರನ್ನು ಕಾಣುವುದಾಗಲಿ ಮೆಡಿಕಲ್ ಶಾಪ್ ನಿಂದ ಟ್ಯಾಬ್ಲೆಟ್ ಗಳನ್ನು ಆಗಾಗ ತರುವುದಾಗಲಿ ನನ್ನ ಜಾಯಮಾನದಲ್ಲಿ ಕಡಿಮೆ.
ಭಾಗ 2 – ಬದುಕಿನಲ್ಲಿ ಬದಲಾವಣೆಯ ಕುರಿತು 10 ಅಧ್ಯಾಯಗಳನ್ನು ಒಳಗೊಂಡಿದೆ. ಸ್ವತಹ ಟ್ರಾನ್ಸಾಕ್ಷನಲ್ ಎನಾಲಿಸ್ಟ್, ಸೈಕ್ಯಾಟ್ರಿಸ್ಟ್ ಆಗಿರುವಂತಹ ಸಜಿ ಅವರು ನಾವು ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಬಗ್ಗೆ ಮಾತ್ರ ಚಿಂತಿಸೋಣ ಪ್ರವರ್ತಿಸೋಣ ಜಾತಕ ದೋಷವಲ್ಲ ಜಾತಕ ಭಾಗ್ಯ ಎಂದು, ಸ್ವಂತ ಕಾರ್ಯವನ್ನು ನಿರ್ವಹಿಸುತ್ತಾ ಹೋಗುವವರಿಗೆ ಕರ್ಮ ದೋಷವಲ್ಲ ಕರ್ಮ ಪುಣ್ಯವನ್ನು ಉಂಟುಮಾಡುತ್ತದೆ. ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ನಮ್ಮ ಬಗ್ಗೆ ನಮಗಿರುವ ಸ್ವಯಂ ತೀರ್ಮಾನಗಳೇ, ನಮ್ಮ ಬದುಕನ್ನು ನಿರ್ಧರಿಸುವ ಅಥವಾ ನಿಯಂತ್ರಿಸುವ ಮಾಸ್ಟರ್ ಪ್ರೋಗ್ರಾಮ್ ಗಳು ಎಂದು ಸಾಬೀತು ಮಾಡುತ್ತಾರೆ. ನನ್ನ ವೈಯಕ್ತಿಕ ಉದಾಹರಣೆಯನ್ನು ಕೊಡುವುದಾದರೆ ನಮ್ಮ ತಾಯಿ ಜಾತಕದಲ್ಲಿ ನಂಬಿಕೆ ಇರುವವರು. ನನ್ನ ಜಾತಕವನ್ನು ಮಾಡಿದ ಜ್ಯೋತಿಷಿ ಒಬ್ಬರು ಅವಳಿಗೆ ಸದಾ ಚಿಂತೆ ಜೀವನದಲ್ಲಿ ಎಂದಿದ್ದಾರಂತೆ. ನಾನು ಅದನ್ನು ಒಪ್ಪಲೇ ಇಲ್ಲ. ನನಗೆ ಯಾವ ಚಿಂತೆ ಬರಬಹುದು ಎಂದು ಯೋಚಿಸುತ್ತಲೆ ಇದ್ದೆ. ಯಾಕೆಂದರೆ ನಾನು ಚೆನ್ನಾಗಿ ಕಲಿತಿದ್ದೇನೆ ಹಲವಾರು ಡಿಗ್ರಿಗಳನ್ನು ಸಂಪಾದಿಸಿದ್ದೇನೆ. ಅರ್ತಿಯಿಂದ ಜ್ಞಾನವನ್ನು ಸಂಪಾದಿಸ ಬಯಸಿದ ವಿದ್ಯಾರ್ಥಿ ನಾನು. ಈಗಲೂ ಹೌದು. ಸಮಾನ ಚಿಂತನೆಗಳಿರುವ ಪತಿ ಇದ್ದಾರೆ. ಅರ್ಥ ಮಾಡಿಕೊಳ್ಳುವ ನಿನಗಾಗಿ ಸಮಯ ಇಡು, ನಿನ್ನ ಪ್ರತಿಭೆಗೆ ಅವಕಾಶ ಕೊಡು ಎಂದು ನನ್ನನ್ನು ಅರ್ಥ ಮಾಡಿಕೊಳ್ಳುವ ಸುಪುತ್ರಿ ಇದ್ದಾಳೆ. ಮಂಗಳೂರಿನ ಹೃದಯ ಭಾಗದಲ್ಲಿ ಇದ್ದುಕೊಂಡು ಎಲ್ಲಾ ಸಾಂಸ್ಕೃತಿಕ ಹಾಗು ವೈಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಜೀವನದ ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಿದ್ದೇನೆ, ಆಸ್ವಾದಿಸುತ್ತಿದ್ದೇನೆ. ಇದಕ್ಕಿಂತ ಹೆಚ್ಚಿನ ಸುಖ ಇನ್ನೇನು ಬೇಕು. ನನ್ನ ಇತರ ಗೆಳತಿಯರಿಗಿರುವ ಹಾಗೆ ಸ್ವಂತ ಮನೆ, ಸ್ವಂತ ಕಾರು ಇಲ್ಲದಿರಬಹುದು. ಆದರೆ ಅದಕ್ಕಿಂತ ಹೆಚ್ಚಿನದಾದ, ಯಾರು ಕದಿಯಲಾಗದಂತಹ ವಿದ್ಯೆ, ಯೋಗ, ಪ್ರಾಣಾಯಾಮ, ಆತ್ಮವಿಶ್ವಾಸ, ಸುಖ ನನ್ನಲ್ಲಿದೆ.
ಹೀಗಾಗಿಯೇ ಲೇಖಕರ ಜೊತೆ ನನ್ನ ಸಹಮತವು ಇದೆ. ನಂಬಿಕೆ ಪೂರ್ವಾ ಗ್ರಹಗಳ ಸಂಗ್ರಹವನ್ನು ರೀ ಎಡಿಟ್ ಮಾಡಿ. ನಿಮ್ಮ ಜೀವನವನ್ನು ರಿ ಸ್ಟಾರ್ಟ್ ಮಾಡಿ.
ಅಧ್ಯಾಯ ಏಳು, ಸೂಕ್ತ ಪ್ರಜ್ಞೆಯ ಮನಸ್ಸನ್ನು ವಶಪಡಿಸಿಕೊಳ್ಳುವ ದಾರಿ. ಇಲ್ಲಿನ ಅನುವಾದ ಅತ್ಯುತ್ತಮವಾಗಿ ಮೂಡಿ ಬಂದಿದೆ. ನಮ್ಮ ಸಬ್ ಕಾನ್ಶಿಯಸ್ ಮೈಂಡ್, ಉಪಪ್ರಜ್ಞೆಯ ಶಕ್ತಿಯನ್ನು ವರ್ಣಿಸಲಾಗಿದೆ. 9ನೇ ಅಧ್ಯಾಯದಲ್ಲಿ ಸ್ಕ್ರಿಪ್ಟ್, ಬ್ಲೂಪ್ರಿಂಟ್ ಅಥವಾ ನಂಬಿಕೆಯ ಸಂಗ್ರಹ ಜೀನುಗಳ ಪ್ರವರ್ತನೆಗಳನ್ನು ನಿಯಂತ್ರಿಸುತ್ತವೆ ಎನ್ನುವ ವಿಸ್ಮಯಕಾರಿ ಸತ್ಯವನ್ನು ಬಯಾಲಜಿ ಆಫ್ ಬಿಲೀಫ್ ಎಂಬ ಡಾ. ಬ್ರೂಸ್ ಲಿಪ್ಟನ್ ಅವರ ಪುಸ್ತಕದ ಉಲ್ಲೇಖದೊಂದಿಗೆ ಸಾಬೀತುಪಡಿಸುತ್ತಾರೆ. ಆಟೋ ಸಜೆಶನ್ ಅಥವಾ ದೃಢ ಪ್ರತಿಜ್ಞಾ ವಚನಗಳು ಉಪಪ್ರಜ್ಞೆಯನ್ನು ಸ್ವಾಧೀನ ಪಡಿಸಿಕೊಳ್ಳುತ್ತವೆ. ನಮ್ಮಲ್ಲಿ ಈ ಪ್ರಜ್ಞಾವಲಯ ನಿದ್ರಾ ಸ್ಥಿತಿಯಲ್ಲೂ ನಮ್ಮ ವರ್ತನೆಯ ಮೇಲೆ ಪ್ರಭಾವ ಬೀರಬಹುದಾದಂತಹ ಸ್ಥಿತಿಯಾಗಿದೆ. ಆಟೋ ಸಜೆಶನ್ ಗೆ ಎಂತಹ ಮಾಂತ್ರಿಕ ಶಕ್ತಿ ಇದೆ ಎಂದರೆ ಇದು ಕ್ಯಾನ್ಸರನ್ನು ಗುಣ ಮಾಡಬಲ್ಲುದು.
ಮುಂದಿನ ಭಾಗ ವಿಜಯದ ರಹಸ್ಯ
ನಾವು ನಮ್ಮನ್ನು ಅಥವಾ ಇತರರನ್ನು ಅವರ ವರ್ತನೆಗಳನ್ನು ನೆಗೆಟಿವ್ ಕನ್ನಡಕಗಳ ಮೂಲಕ ಅಥವಾ ಫಿಲ್ಟರ್ ಗಳ ಮೂಲಕ ಕಾಣುತ್ತೇವೆ. ನಾವು ಇನ್ನೊಬ್ಬರ ವರ್ತನೆಗೆ ಸ್ಪಂದಿಸ ಬೇಕೇ ವಿನಃ ಪ್ರತಿಕ್ರಿಯಿಸಬಾರದು. ಕೇವಲ ಅವರು ಹೀಗೆ ಮಾಡಿದ್ದಾರೆ ಎಂದು ಫ್ಯಾಕ್ಟನ್ನು ಹೇಳಬೇಕು. ಕಮೆಂಟ್ ಮಾಡಬಾರದು. ಉದಾಹರಣೆಗೆ ದಿನವಿಡೀ ಕೆಲಸ ಮಾಡಿ ನಾವು ಮನೆಗೆ ಹೋಗುವಾಗ ಮನೆ ಇಡೀ ಅಸ್ತವ್ಯಸ್ತವಾಗಿದ್ದರೆ,… ನಾನು ಬರುವಾಗ ಮನೆ ಕ್ಲೀನಿರಲಿಲ್ಲ. ಎಂದಷ್ಟೇ ಹೇಳಬೇಕು. ಅದಕ್ಕೆ ಬಣ್ಣದ ಮಾತುಗಳನ್ನು ಅಥವಾ ಉಪ್ಪುಕಾರವನ್ನು ಸೇರಿಸುವಂತಿಲ್ಲ. ಅಭಿಪ್ರಾಯ ಹೇಳಿಬಿಡುವುದಷ್ಟೇ. ಒಪ್ಪೋನೋ ಒಪ್ಪೋನೋ ಎನ್ನುವ ಹವಾಯಿ ವಾಚಕಗಳನ್ನು ಹೇಗೆ ಬದುಕು ಬದಲಿಸುವ ಮಂತ್ರವಾಗಿ ಬಳಸಬಹುದು ಎಂದು ಲೇಖಕರು ಹೇಳುತ್ತಾರೆ. ಐ ಯಾಮ್ ಸಾರಿ. ಪೊರ್ಗಿವ್ ಮಿ, ಥಾಂಕ್ ಯು, ಐ ಲವ್ ಯು ಇಂತಹ ಮಾತುಗಳು ಯುನಿವರ್ಸ್ ನಲ್ಲಿ ಇತ್ಯಾತ್ಮಕವಾದ ತರಂಗಗಳನ್ನು ಮೂಡಿಸಿ ನಮ್ಮ ಬದುಕು ಹಸನಾಗುವಂತೆ ಮಾಡುತ್ತವೆ. ಈ ಧ್ಯಾನ ಕ್ರಮವನ್ನು ನಮ್ಮ ಅಧ್ಯಯನ ಕೇಂದ್ರದಲ್ಲಿ ಅಳವಡಿಸಿಕೊಂಡು ಉತ್ತಮ ಫಲಿತಾಂಶವನ್ನು ಕಂಡುಕೊಂಡಿದ್ದೇವೆ.
ಕೊನೆಯ ಭಾಗ ಆರ್ಥಿಕತೆ. ಇದು ನನಗೆ ಬಹಳ ಇಷ್ಟವಾದಂತಹ ಪರಿಕಲ್ಪನೆ. ನನಗೆ ಅರಿವೇ ಇಲ್ಲದಂತಹ, ಮೌಡ್ಯವನ್ನು ಹೊಂದಿದಂತಹ ಒಂದು ವಿಭಾಗ ಆರ್ಥಿಕ ಸಾಕ್ಷರತೆ. ಜಿಪುಣತನವು ತಪ್ಪು. ಧಾರಾಳತನವೂ ತಪ್ಪು. ಹಣ ಮಾಡುವುದು ತಪ್ಪು ಹಣದ ವಿಚಾರವನ್ನು ಮಕ್ಕಳಲ್ಲಿ ಮಾತನಾಡಬಾರದು ಎನ್ನುವ ಮೌಢ್ಯದ ಕಾಲದಲ್ಲಿ ಬೆಳೆದವರು ನಾವು. ಆರ್ಥಿಕತೆಯ ಅರಿವು ಬಾಲ್ಯದಿಂದಲೇ ಎಷ್ಟು ಮುಖ್ಯ ಎನ್ನುವುದನ್ನು ನಾನು ನನ್ನ ಬದುಕಿನಿಂದ ತಿಳಿದುಕೊಂಡಿದ್ದೇನೆ. ಇದರ ಬಗ್ಗೆ ಮತ್ತಷ್ಟು ತಿಳಿದುಕೊಂಡು ನನ್ನ ಮಗಳ ಪಾಲನೆ ಮಾಡುವಾಗ ಬಳಸಿಕೊಂಡಿದ್ದೇನೆ. ಅರ್ನ್ ವೈಲ್ ಲರ್ನಿಂಗ್ ಎನ್ನುವ ಪರಿಕಲ್ಪನೆಯು ಇದಕ್ಕೆ ಪೂರಕವಾಗಿದೆ. ಇಂದು ಹಣವೇ ಎಲ್ಲದಕ್ಕೂ ಮುಖ್ಯವಾಗಿದೆ. ಆದರೆ ಅದೊಂದೇ ಅಲ್ಲ ಎನ್ನುವುದು ನಮಗೆ ತಿಳಿದಿರಬೇಕಾಗಿದೆ. ಹಣದ ಕುರಿತು ನಮ್ಮಲ್ಲಿ ಸಂಪನ್ನ ಮನಸ್ಥಿತಿ ಇಲ್ಲದೆ ಹೋದರೆ ಅಲ್ಲಿ ಎಕನಾಮಿಕ್ ಬ್ಲಾಕ್ ಏಜ್ ಉಂಟಾಗುತ್ತದೆ. ಹಣದ ಬಗೆಗಿನ ಗ್ರಹಿಕೆ ಅದನ್ನು ನಾವು ಆಕರ್ಷಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ. ಇದನ್ನುಆರ್ಥಿಕ ಸಾಕ್ಷರತೆ ಎನ್ನುತ್ತೇವೆ. ಹಣದ ನಿರ್ವಹಣೆ ಹಾಗೂ ನಿಕ್ಷೇಪಣೆ ಎರಡು ಜಾಗೃತವಾಗಿ ನಡೆಯಬೇಕಾಗುತ್ತದೆ. ಹಣದ ಬಗೆಗಿನ ಸಮೃದ್ಧಿಯ ಬಗೆಗಿನ ಸಕಾರಾತ್ಮಕವಾದ ನಂಬಿಕೆ ಭಾವನೆ ಮಾತುಗಳಿಂದ ನಮ್ಮ ಆಂತರಿಕ ಲೋಕ ಯಾವತ್ತೂ ಪ್ರಸನ್ನವಾಗಿ ಇದ್ದು ನಮ್ಮ ಯೂನಿವರ್ಸ್ ನಮ್ಮ ನಂಬಿಕೆಗಳಿಗೆ ಸರಿಯಾಗಿ ದುಡಿಯುತ್ತದೆ ಹಾಗೂ ನಮ್ಮ ಕನಸಾಗಲಿ ಕಲ್ಪನೆಯಾಗಲಿ ಸಾಕಾರಗೊಳ್ಳುತ್ತದೆ. ನಮ್ಮಲ್ಲಿ ಈಗ ಇರುವ ಆರ್ಥಿಕ ಮನೋಭಾವ ಅದು ನಮ್ಮ ಹಿರಿಯರಿಂದ ಪಡೆದುಕೊಂಡದ್ದಾಗಿದೆ. ಇಂದು ಆರ್ಥಿಕ ಮನೋಭಾವ ಬದಲಾಗಬೇಕಾಗಿದೆ. ಹಣದ ಕುರಿತಾದ ಜ್ಞಾನವು ವರ್ಧಿಸಿ ಹಣವನ್ನು ಶೇಖರಿಸಲು ವರ್ಧಿಸಲು ಬೇಕಾದ ಶಕ್ತಿ ಕೂಡಿದಾಗ ವ್ಯಕ್ತಿ ಆರ್ಥಿಕ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಆರ್ಥಿಕ ಮನೋಭಾವವನ್ನು ಸಂಪನ್ನ ಮನೋಭೂಮಿಗೆ ಹಾಗೂ ದರಿದ್ರ ಮನೋಭೂಮಿಗೆ ಎಂದು ವಿಭಾಗಿಸಿದ್ದಾರೆ. ಸಂಪನ್ನ ಮನೋಭೂಮಿಕೆ ಉಳ್ಳವರು ಒಳ್ಳೆಯ ಆರ್ಥಿಕ ಸ್ವಭಾವದಿಂದ ಆರ್ಥಿಕವಾಗಿ ಆರೋಗ್ಯವಾಗಿರುತ್ತಾರೆ. ಮೆಂಟಲ್ ಅಕೌಂಟಿಂಗ್ ಎನ್ನುವ ಪದ ನನಗೆ ತೀರಾ ಹೊಸದು. ಹಣವನ್ನು ಖರ್ಚು ಮಾಡುವ ವಿಷಯದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಅಭಿಪ್ರಾಯ ಭೇದವಿರುತ್ತದೆ. ವೇತನದ ಹಣವನ್ನು ಖರ್ಚು ಮಾಡುವಾಗ ಹಾಗೂ ಬೋನಸ್ ಗಿಫ್ಟು ಮೂಲಕ ಸಿಕ್ಕಿದ ಹಣವನ್ನು ಖರ್ಚು ಮಾಡುವಾಗ ಇರುವ ಮನಸ್ಥಿತಿಗಳು ಬೇರೆ ಬೇರೆಯಾಗಿರುತ್ತದೆ. ಇದು ಮೆಂಟಲ್ ಅಕೌಂಟಿಂಗ್ ವಿಧಾನ. ತಮ್ಮ ಕಡೆಗೆ ಹರಿದು ಬಂದ ಹಣವನ್ನು ಉಚಿತವಾದ ರೀತಿಯಲ್ಲಿ ಖರ್ಚು ಮಾಡುವುದು ಅಥವಾ ನಿಕ್ಷೇಪಿಸುವುದು ಮುಖ್ಯ ಇದಲ್ಲದಿದ್ದರೆ ದಾರಿದ್ರ್ಯ ಕಟ್ಟಿಟ್ಟ ಬುತ್ತಿ. ಹಣ ಚಲಿಸುತ್ತಿದ್ದರೆ ಮಾತ್ರ ಅದರ ಶಕ್ತಿಯು ವರ್ಧಿಸುತ್ತದೆ ಇಲ್ಲವಾದರೆ ಮೌಲ್ಯ ಕಡಿಮೆಯಾಗುತ್ತದೆ. ಒಂದೇ ಹಣವನ್ನು ಎಲ್ಲರೂ ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಾದರೂ ಅದರ ಮೌಲ್ಯವು ಒಮ್ಮೆಯೂ ಕಡಿಮೆಯಾಗುವುದಿಲ್ಲ ಎನ್ನುವುದನ್ನು ಸುಂದರ ಉದಾಹರಣೆಯ ಮೂಲಕ ನಿರೂಪಿಸುತ್ತಾರೆ. ಹಣವನ್ನು ಇಷ್ಟಪಟ್ಟರೆ ಪ್ರೀತಿಸಿದರೆ ಮಾತ್ರ ನಮಗೆ ಅದು ಒಲಿಯುತ್ತದೆ. ಹಣ ಮಾಡುವುದು ತಪ್ಪಲ್ಲ. ಆದರೆ ನನ್ನ ಕೆಲಸಕ್ಕಿಂತ ಹೆಚ್ಚಿನದಾದ ಹಣವನ್ನು ಪಡೆಯುವುದು ಸರಿಯಲ್ಲ.
ನನ್ನ ಬದುಕಿನ ಒಂದು ಘಟನೆ. ನಾನು ಹೊಸದಾಗಿ ಕೊಂಡುಕೊಂಡ ಬಾಟ ಚಪ್ಪಲಿ ಒಂದು ವಾರದಲ್ಲಿಯೇ ಭಾರ ತುಂಡಾದಾಗ ಬಹಳ ಬೇಸರ ಪಟ್ಟೆ. ಮತ್ತೆ ರಿಪೇರಿಗೆ ಒಯ್ಯಬೇಕಾದಾಗ ಎಷ್ಟು ಹಣ ಪಡೆದುಕೊಳ್ಳುತ್ತಾರೋ ,ಮೋಸ ಮಾಡುತ್ತಾರೋ ಹೀಗೆಲ್ಲಾ ಸಂಶಯ ಪಡುತ್ತಾ ಮಗಳೊಂದಿಗೆ ಚರ್ಚೆ ಮಾಡುತ್ತಾ ಚಮ್ಮಾರತಿಯನ್ನು ತಲುಪಿ ಅವಳಿಂದ ಚಪ್ಪಲಿ ಸರಿ ಮಾಡಿಸಿಕೊಂಡೆ. ರೂ. 50 ಕೊಟ್ಟಾಗ ಕೊಟ್ಟು ಹಿಂದೆ ಬಂದಾಗ.
.. ಆಕೆ ಕರೆದಳು. ಅಮ್ಮ ನಿನ್ನ ಇಪ್ಪತ್ತು ರೂಪಾಯಿ ಹಿಂದೆ ತೆಗೆದುಕೋ. ಇಟ್ಟುಕೊಂಡರೆ ನನಗೆ ಒಳ್ಳೆದಾಗಲಿಕ್ಕಿಲ್ಲ. ಇದಕ್ಕಿಂತ ಹೆಚ್ಚು ಹೋದೀತು ಎಂದಳು. ಅವಳ ಧರ್ಮ ಪ್ರಜ್ಞೆಯ ಮಾತು ನನಗೆ ಚಪ್ಪಲಿಯಲ್ಲಿ ಹೊಡೆದಷ್ಟು ಪರಿಣಾಮ ಬೀರಿತು.
ಒಟ್ಟಿನಲ್ಲಿ ಹಲವು ಸಿದ್ದ ಯೋಚನೆಗಳನ್ನು ಬುಡಮೇಲು ಮಾಡುವ, ಹೊಚ್ಚ ಹೊಸ ಪರಿಕಲ್ಪನೆಗಳ ಅರಿವನ್ನು ಮೂಡಿಸುವ, ನಮ್ಮ ಜೀವನದ ರೂವಾರಿ ನಾವೇ ಎನ್ನುವ ಪರಮ ಸತ್ಯವನ್ನು ಪ್ರಾಯೋಗಿಕವಾಗಿ ಕಂಡುಕೊಳ್ಳುವ ಅನುಭವಿಸುವ ಸೂಕ್ಷ್ಮವನ್ನು ತಿಳಿಸುವ, ಆ ಮೂಲಕ ಬದುಕು ಬದಲಾಯಿಸಬಹುದು ಎಂಬ ನಂಬಿಕೆಯನ್ನು ಮೂಡಿಸುವ ಒಂದು ಉತ್ತಮ ಪುಸ್ತಕ ಇದಾಗಿದೆ. ಬಹಳ ಪಾರಿಭಾಷಿಕ ಪದಗಳಿರುವುದರಿಂದ ಕೆಲವು ಕಡೆ ಅಡಿ ಟಿಪ್ಪಣಿ ಕೊಟ್ಟರೆ ಓದು ಸುಲಲಿತವಾಗಬಹುದು.ಒಂದು ಪೀಳಿಗೆಯನ್ನು ನಿರ್ಮಾಣ ಮಾಡಬಲ್ಲ ಯೋಚನೆಗಳನ್ನು ಮೂಡಿಸಬಲ್ಲ ಮಲಯಾಳಂ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಮೈರುಗ ಪ್ರಕಾಶನಕ್ಕೆ ಅಭಿನಂದನೆಗಳು.
ಸುಮಂಗಲಾ ಕೃಷ್ಣಾಪುರ.
ಮೀನಾಕ್ಷಿ ರಾಮಚಂದ್ರ