ಮೈಸೂರು : ರಂಗಬಂಡಿ ಮಳವಳ್ಳಿ (ರಿ.) ವತಿಯಿಂದ ಸಂಸ್ಕೃತಿ (ರಿ.) ಸಹಕಾರದೊಂದಿಗೆ ಅಯೋಜಿಸುವ ಕೆರಗೋಡು ಪ್ರಸನ್ನ ಕುಮಾರ್ ರಚನೆ ಮತ್ತು ಮಧು ಮಳವಳ್ಳಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ವನಿತಾ ರಾಜೇಶ್ ಪ್ರಸ್ತುತ ಪಡಿಸುವ ಏಕವ್ಯಕ್ತಿ ಪ್ರಯೋಗದ ‘ಮಧುರ ಮಂಡೋದರಿ’ ನಾಟಕ ಪ್ರದರ್ಶನವನ್ನು ದಿನಾಂಕ 15 ಡಿಸೆಂಬರ್ 2024ರಂದು ಮೈಸೂರಿನ ರಾಮಕೃಷ್ಣ ನಗರದ ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ತಂಡದ ಬಗ್ಗೆ :
ರಂಗಬಂಡಿ ಮಳವಳ್ಳಿ (ರಿ.) ಆಸಕ್ತರ ಗುಂಪುಗಳು ಕೇಂದೀಕೃತಗೊಂಡು ಹೊಸತನವನ್ನು ಕಾಣುವ, ಕನಸು ಕಂಗಳ ಹೊಸ್ತಿಲನ್ನು ಮೆಟ್ಟುವ ಸುಸಂದರ್ಭಕ್ಕಾಗಿ ರಂಗಬಂಡಿ ಮಳವಳ್ಳಿ ತಂಡ ಸಜ್ಜಾಗುತ್ತಿದೆ. ಕೇವಲ ರಂಗಾಸಕ್ತರಿಗೆ ನೋಟವನ್ನಷ್ಟೇ ಉಣಬಡಿಸುವುದಲ್ಲದೇ ರಂಗಾಭ್ಯಾಸಿಗಳಿಗೆ ಅಧ್ಯಯನಶೀಲತೆ, ರಂಗ ಪ್ರಯೋಗಗಳ ವಿಭಿನ್ನತೆ, ಭಾಷಾ ಪ್ರೇಮದ ಹೊಳಹು, ಆಂಗಿಕ ಚಲನೆಯ ಸರಿಯಾದ ಮಾರ್ಗದರ್ಶನದ ಹೆಗ್ಗುರಿಯನ್ನು ಹೊಂದಿದೆ. ಬದುಕಿಗೆ ಪೂರಕವಾದ ರಂಗಾಸಕ್ತಿಯನ್ನು ಪೂರೈಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯನ್ನು ಮುಂದಿಟ್ಟುಕೊಂಡಿದೆ. ಯಾವುದೇ ಸತ್ಸಂಕಲ್ಪಕ್ಕೆ ಸಾಮಾಜಿಕ ಕಳಕಳಿಯಿರುವ ಸಹೃದಯಿಗಳ ಸಹಕಾರ ತೀರ ಅತ್ಯಗತ್ಯವೆನ್ನುವುದು ಸರ್ವವಿಧಿತ ಈಗಾಗಲೇ ರಂಗಬಂಡಿ ಮಳವಳ್ಳಿ ತಂಡವು ನಾಡಿನ ತುಂಬ ಹೊಸ ಹೊಸ ಪ್ರಯೋಗ ಪ್ರದರ್ಶನ ನೀಡಿದೆ. ಕಲಬುರಗಿ, ಧಾರವಾಡ, ಶಿವಮೊಗ್ಗ, ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಮುಂತಾದ ಕಡೆ ಪ್ರದರ್ಶನ ನೀಡಿದೆ ಮತ್ತು ನಾಡಿನ ಹಲವಾರು ನಾಟಕೋತ್ಸವಗಳಲ್ಲಿ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ರಂಗಬಂಡಿ ತಂಡದ ನಾಟಕಗಳು ಪ್ರದರ್ಶನ ಕಂಡಿದೆ.
ನಾಟಕದ ಕುರಿತು :
ಕನ್ನಡದ ಏಕವ್ಯಕ್ತಿ ಪ್ರದರ್ಶನ ನಾಟಕಗಳ ಪರಂಪರೆ ವಿರಳವಾದರೂ ಗಟ್ಟಿಯಾಗಿರುವಂಥದ್ದು. ಈ ತೆರನಾದ ಅನೇಕ ನಾಟಕಗಳು ನಾಡಿನಾದ್ಯಂತ ಇತ್ತೀಚಿನ ದಿನಮಾನಗಳಲ್ಲಿ ರಂಗವನ್ನು ಏರುತ್ತಿರುವುದು ಒಂದು ಆಶಾದಾಯಕವಾದ ಬೆಳವಣಿಗೆ. ಸಧ್ಯದ ‘ಮಧುರ ಮಂಡೋದರಿ’ ನಾಟಕ ಕೂಡ ಈ ಪರಂಪರೆಗೆ ಸೇರಿದ್ದು ಸ್ತ್ರೀಯೊಳಗಿನ ಸಂಕಟಗಳನ್ನು ಅನಾವರಣಗೊಳಿಸುತ್ತದೆ. ಸ್ತ್ರೀಯ ಮೇಲಿನ ಬಲತ್ಕಾರಗಳು, ಅವಳೊಳಗಿನ ಸಂಕಟಗಳು, ಅವುಗಳನ್ನು ಎಲ್ಲೂ ಬಿಚ್ಚಿ ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿ, ಒಳಗೊಳಗೆ ಕುದಿವ ಅವಳ ಮನಸ್ಸು, ಅಂತಹವುಗಳ ವಿರುದ್ಧದ ಪ್ರತಿಭಟನೆಗಳು ಪ್ರಾಚೀನ ಮತ್ತು ಸಮಕಾಲೀನ ಸಮಾಜದ ನಗ್ನ ಸತ್ಯಗಳು. ಇವುಗಳೆಲ್ಲದುದರ ಸ್ವರೂಪಗಳು ಬದಲಾಗಿದ್ದರೂ ಮೂಲ ವೇದನೆ-ಸಂವೇದನೆ ಮಾತ್ರ ಎಲ್ಲಾ ಕಾಲಕ್ಕೂ ಒಂದೆ. ಅವಳೊಳಗಿನ ತಲ್ಲಣಗಳು ಮತ್ತು ಪುರುಷಪ್ರಾಬಲ್ಯದ ಬಲತ್ಕಾರದಿಂದ ಆಕೆ ಅನುಭವಿಸುವ ನೋವುಗಳ ಮಧ್ಯೆಯೆ ಎಲ್ಲಾ ಸಾಧನೆಯನ್ನು ಮಾಡುವ ಆಕೆಯ ಛಲ ಮಾತ್ರ ಅದ್ವಿತೀಯವಾದುದು. ಇಂತಹ ಒಂದಷ್ಟು ಎಳೆಗಳನ್ನು ಇಟ್ಟುಕೊಂಡು ಆಧುನಿಕ ಮತ್ತು ಪೌರಾಣಿಕಗಳ ಎರಡು ಪಾತ್ರಗಳನ್ನು ಸೃಷ್ಟಿಸಿ ಒಂದೇ ಪಾತ್ರದಾರಿಯ ಮೂಲಕ ರಂಗದ ಮೇಲೆ ಕಟ್ಟಿಕೊಡುವ ಕೆಲಸವನ್ನು ‘ಮಧುರ ಮಂಡೋದರಿ’ ನಾಟಕ ಮಾಡುತ್ತದೆ.