ಧಾರಾಕಾರವಾಗಿ ಮಳೆಸುರಿದು ತೊಯ್ದನೆಲ. ತುಂಬಿ ತುಳುಕಿ ಹರಿಯುತ್ತಿರುವ ನಂದಿನೀ ನದಿ. ಸೊಂಪಾಗಿ ಬೆಳೆದಿರುವ ಸಸ್ಯರಾಶಿ. ದಿನಾಂಕ 23-07-2023ರ ಷಷ್ಠಿ ತಿಥಿಯಂದು ಕಟೀಲಮ್ಮನ ದರ್ಶನಕ್ಕೆಂದು ಬಂದು ಹೋಗುತ್ತಿರುವ ಭಕ್ತ ಸಮೂಹ. ದೇವ ಸಾನಿಧ್ಯದಲ್ಲಿ ಯಾವತ್ತೂ ನಡೆಯುವ ಪೂಜೆ ಪುನಸ್ಕಾರಗಳು. ಶ್ರೀ ದುರ್ಗಾಪರಮೇಶ್ವರಿಯ ಆರಾಧನೆಯ ಸುತ್ತಮುತ್ತ ನಡೆಯುತ್ತಿದ್ದ ಈ ಎಲ್ಲ ಚಟುವಟಿಕೆಗಳ ಚಲನಶೀಲತೆಯೊಂದಿಗೆ ಮಧುರವಾಗಿ ವೇಣುವಾದನದ ಸ್ವರ ಸಮೂಹವೂ ಹುಮ್ಮಸ್ಸಿನಿಂದ ಮೇಳೈಸಿದ ಅನುಭವವನ್ನು ಇತ್ತೀಚೆಗೆ ನಾವು ಪಡೆಯುವಂತಾಯಿತು.
ಸಂದರ್ಭವೊದಗಿದ್ದು ಹೀಗೆ-
ಹಿರಿಯ ಸಂಗೀತ ವಿದ್ವಾನ್ ಮಧೂರು ಪಿ.ಬಾಲಸುಬ್ರಹ್ಮಣ್ಯ ಅವರ ನೇತೃತ್ವದ ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಧುರಧ್ವನಿ-ಸುಪ್ರಭಾತ ಸೇವೆ’ ಎಂಬ ಕಾರ್ಯಕ್ರಮದಲ್ಲಿ ವಿದ್ವಾನ್ ಕೃಷ್ಣ ಪವನ್ ಕುಮಾರರ ವೇಣುವಾದನ ಕಛೇರಿ. ಒಂದು ಗಂಟೆಯ ಅವಧಿಗೆ ಸೀಮಿತವಾಗಿದ್ದರೂ ಹದವರಿತ ಪ್ರಸ್ತುತಿ, ಯಾವುದೇ ಓಟ ಎಳೆತಗಳಿಲ್ಲ, ದೇವಸಾನ್ನಿಧ್ಯದ ಚಲನಶೀಲತೆಯ ಲಯದೊಂದಿಗೆ ಹೊಂದಿಕೊಂಡಿದ್ದರೂ ಶ್ರವಣೇಂದ್ರಿಯಗಳ ಮೂಲಕ ಚಿತ್ತವನ್ನು ಸೆಳೆದ ರಾಗಲಹರಿ.
ಏಳು ಸಂಗೀತ ರಚನೆಗಳಿಂದ ಬದ್ಧವಾಗಿತ್ತು ಆ ಸುಪ್ರಭಾತ ಸಂಗೀತ ಸೇವೆ. ಎಲ್ಲವೂ ದೇವಿಯ ವಿವಿಧ ರೂಪಗಳ, ದೈವಿಕತೆಯ ಸ್ತುತಿ ಗೀತಗಳು. ಆರಂಭವೇ ಮೋಹನ ಕಲ್ಯಾಣಿ ರಾಗದಿಂದ. ಮೋಹಕ-ಮಧುರ ಭಾವವನ್ನು ಪ್ರಚೋದಿಸಿ ಇಡಿಯ ವಾತಾವರಣವನ್ನೇ ಕಲ್ಯಾಣದಾಯಕವಾಗಿಸುವ ಈ ರಾಗದ ಸ್ವರ ಸಂಚಾರಗಳಿಂದ ಮೂಡಿಬಂದದ್ದು ವಾಗ್ಗೇಯಕಾರ ಮುತ್ತಯ್ಯ ಭಾಗವತರ ಪ್ರಸಿದ್ಧ ರಚನೆಯಾದ ‘ಭುವನೇಶ್ವರಿಯ ನೆನೆ ಮಾನಸವೇ’ ಎಂಬ ಕೃತಿ. ಮುಂದೆ ಕೇಳಿದ್ದು ಅತ್ತ ಘನವೂ ಇತ್ತ ರಕ್ತಿರಾಗವೂ ಆದ ನಾಟಿಕುರಂಜಿ ರಾಗದ ‘ಮಾಮವ ಸದಾ ವರದೆ’ ಎಂಬ ಮಹಾರಾಜ ಸ್ವಾತಿತಿರುನಾಳರ ರಚನೆ.
ವೇಣುವಾದನ ಕಛೇರಿಯಾದದ್ದರಿಂದ ಸಾಹಿತ್ಯಾನುಸಂಧಾನಕ್ಕೆ ಕಿಂಚಿತ್ ಮಿತಿಯುಂಟೇ ಸರಿ. ಹೀಗಾಗಿ ಅಂದಿನ ದೇವಾಲಯದ ವಾತಾವರಣದಲ್ಲಿ ಸಾಹಿತ್ಯ ಭಾವಕ್ಕಿಂತಲೂ ರಾಗಭಾವವೇ ಮೇಲುಗೈ ಸಾಧಿಸಿದ್ದು ನಿಜವೇ. ಆರಂಭದ ಮೋಹನ ಕಲ್ಯಾಣಿ, ಮತ್ತೆ ನಾಟಿಕುರಂಜಿ ಮುಂದೆ ಸಾವೇರಿ, ಆಮೇಲೆ ಅಮೃತವರ್ಷಿಣಿ ಮತ್ತೆ ಭೈರವಿ, ಆಹಿರ್ ಭೈರವಿ ಹಾಗೂ ರೇವತಿ ರಾಗಗಳಲ್ಲಿ ಬರುವ ಕೆಲವು ತೀವ್ರ ಸ್ವರಗಳು ಮತ್ತೆ ಕೆಲವು ಕೋಮಲ ಸ್ವರಗಳು ವಾಗ್ಗೇಯಕಾರರ ಚತುರತೆಯ ಫಲವಾಗಿ ಮೂಡಿಬಂದ ವೈವಿಧ್ಯಮಯ ಸ್ವರ ಜೋಡಣೆಯ ಮೂಲಕ ನಮ್ಮನ್ನು ಸೆಳೆದಿಟ್ಟುಕೊಂಡವು. ಆದ್ದರಿಂದ ವಿದ್ವಾನ್ ಕೃಷ್ಣ ಪವನ್ ಆರಿಸಿದ ರಾಗಗಳೆಲ್ಲವೂ ಸ್ವರಲೋಕದ ಆಕಾಶದಲ್ಲಿ ವಿವಿಧ ಭಾವಗಳೆಂಬ ಮೋಡಗಳ ಮೇಲೆ ಒಂದೊಮ್ಮೆ ನಮ್ಮನ್ನು ತೇಲಿಸಿವೆ, ಕೆಲವೊಮ್ಮೆ ಮುಳುಗೆಬ್ಬಿಸಿವೆ, ಮಗದೊಮ್ಮೆ ಘನಗಂಭೀರವಾಗಿಸಿ ಕಲಾ-ಆಸ್ವಾದನೆಯ ಅನನ್ಯ ಅವಕಾಶವನ್ನು ಒದಗಿಸಿವೆ.
ಕಛೇರಿಯುದ್ದಕ್ಕೂ ದೇವಿಯ ಮಹಿಮೆಯನ್ನು, ರೂಪ-ಗುಣಲಕ್ಷಣಗಳನ್ನು ವರ್ಣಿಸಿದ ’ಶಂಕರಿ ಶಂ-ಕುರು ಚಂದ್ರಮುಖಿ ಅಖಿಲಾಂಡೇಶ್ವರಿ’(ರ: ಶ್ಯಾಮಾ ಶಾಸ್ತ್ರಿಗಳು), ‘ಲಲಿತೆ ಶ್ರೀ ಪ್ರವೃದ್ಧೇ ಶ್ರೀಮತಿ ಲಾವಣ್ಯ ನಿಧಿಮತಿ'(ರ: ತ್ಯಾಗರಾಜರು), ‘ಶ್ರೀ ಜಗದೀಶ್ವರಿ ದುರ್ಗಾ ಮಾತಾ ಸ್ವಾಗತಮ್'(ರ: ಲಾಲ್ಗುಡಿ ಜಯರಾಮನ್) ಹಾಗೂ ದೇವಿ ಸ್ತುತಿಯಿರುವ ರೇವತಿ ರಾಗದ ತಿಲ್ಲಾನಗಳಿಂದ(ರ: ಮಹಾರಾಜಪುರಂ ಸಂತಾನಂ) ಮೊದಲಾದವುಗಳಲ್ಲಿ ಕೊಳಲ ನಾದದ ಮಾಧುರ್ಯವೇ ಮೇಲ್ಪಂಕ್ತಿ ವಹಿಸಿ, ಲಲಿತವಾಗಿ ಸಾಹಿತ್ಯಗಳೆಲ್ಲವೂ ಅನುಭವ ವೇದ್ಯವಾದವು. ವಿದ್ವಾನ್ ಕೃಷ್ಣ ಪವನರ ಕೊಳಲಿನ ಮಧುರತೆಯನ್ನು ಪಿಟೀಲಿನಲ್ಲಿ ಅನುಸರಿಸಿಕೊಂಡು ಮಾಸ್ಟರ್ ಗೌತಮ್ ಭಟ್ ಸಹಕರಿಸಿದರು. ನಂದಿನಿಯ ಭೋರ್ಗರೆತದ ಹಿನ್ನೆಲೆಯಲ್ಲಿ ಮಾಸ್ಟರ್ ಸುಮುಖ ಕಾರಂತ್ ಕೊಳಲಿನ ಪ್ರಸ್ತುತಿಗೆ ಪೂರಕವಾಗಿ ತಮ್ಮ ಮೃದಂಗದ ನುಡಿಗಳನ್ನು ಕೆಲವೊಮ್ಮೆ ಮಧುರವಾಗಿಸಿ ಕೆಲವೊಮ್ಮೆ ಭೋರ್ಗರೆದು ಸಹಕರಿಸಿದರು. ಸಂಪೂರ್ಣ ಕಾರ್ಯಕ್ರಮವು ಕಳೆಕಟ್ಟುವಲ್ಲಿ ಮುಖ್ಯ ಕಲಾವಿದರೊಂದಿಗೆ ಸಹಕಲಾವಿದರ ಜವಾಬ್ದಾರಿಯನ್ನು ಅರಿತು ನೀಡಿದ ಪ್ರಸ್ತುತಿ ಗಮನಾರ್ಹ.
ಮಧುರಧ್ವನಿ ಚಾರಿಟೇಬಲ್ ಟ್ರಸ್ಟ್ (ರಿ.) ಕುರಿತಾಗಿ ಒಂದಷ್ಟು ವಿಚಾರಗಳು-
2019ರಂದು ಮಂಗಳೂರಿನಲ್ಲಿ ಆರಂಭವಾದ ಈ ನೊಂದಾಯಿತ ಟ್ರಸ್ಟ್. ಸಂಗೀತ-ವಾದ್ಯದ ಉದಯೋನ್ಮುಖ ಕಲಾವಿದರಿಗೆ ಅಲ್ಲದೆ ಭಗವದ್ಗೀತೆ ಪಠಣ ವೇದಪಾರಾಯಣ ಇನ್ನಿತರ ಸಂಸ್ಕಾರಯುತ ವಿಷಯಾಧಾರಿತ ಮಾಹಿತಿ ಕಲೆಹಾಕಿ ನಿರೂಪಿಸುವ ನಿಪುಣತೆ ಹೊಂದಿರುವ ಪ್ರತಿಭೆಗಳಿಗೂ ಸೇವಾರೂಪದಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಲು ಅಂದಿನಿಂದ ಇಂದಿನವರೆಗೆ ವೇದಿಕೆಯನ್ನು ಒದಗಿಸುತ್ತಿದೆ. ಉಡುಪಿ-ಶ್ರೀಕೃಷ್ಣ ಮಠದ ಮಧ್ವಮಂಟಪ, ಕಾವೂರಿನ ಮಹಾಲಿಂಗೇಶ್ವರ ಸನ್ನಿಧಿ ಹಾಗೂ ಕಟೀಲಿನ ಶ್ರೀ ದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಪ್ರತಿ ತಿಂಗಳ ಒಂದು ರಜಾದಿನ ಅಥವಾ ವಿಶೇಷ ದಿನದಂದು ಉಷಃಕಾಲದ ಶಾಂತ ವಾತಾವರಣದಲ್ಲಿ “ಮಧುರಧ್ವನಿ-ಸುಪ್ರಭಾತ ಸೇವೆ” ಎಂದೇ ಪ್ರಚಲಿತವಾಗಿರುವ ಈ ಕಾರ್ಯಕ್ರಮವು ನಿರಂತರವಾಗಿ ನಡೆಯುತ್ತಾ ಬಂದಿದ್ದು, ಇನ್ನೂ ಹೆಚ್ಚು ದೇವಸ್ಥಾನಗಳ ವಲಯಕ್ಕೆ ಇದನ್ನು ವಿಸ್ತರಿಸಲು ಟ್ರಸ್ಟ್ ಮುಂದಾಗಿದೆ.
ಮುಗಿಸುವ ಮುನ್ನ: ಈ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟ್ರಸ್ಟ್ ನ ಸದಸ್ಯರು,ಮುಖ್ಯವಾಗಿ ದೇವಳದ ಅರ್ಚಕರು ಮತ್ತು ಆಡಳಿತಮಂಡಳಿಯ ಸದಸ್ಯರು ಅಭಿನಂದನಾರ್ಹರು ಹಾಗೂ ಕೃತಜ್ಞತಾರ್ಹರು. ಇದಕ್ಕೂ ಮುನ್ನ ‘ಮಧೂರು ಮಾಸ್ಟ್ರು’ ಎಂದೇ ಚಿರಪರಿಚಿತರಾಗಿರುವ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ(ಸ್ಥಾ:20-08-2008) ಉಡುಪಿ-ಬೈಲೂರಿನ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆವರಣದಲ್ಲಿ ಸಂಗೀತ ಕ್ಷೇತ್ರ ಹಾಗೂ ನೃತ್ಯ ಕ್ಷೇತ್ರದ ಉದಯೋನ್ಮುಖ ಕಲಾವಿದರಿಗೆ ವೇದಿಕೆಯೊದಗಿಸಿ ಪ್ರೋತ್ಸಾಹಿಸುತ್ತಿದ್ದದು ಈ ಟ್ರಸ್ಟ್ ನ ಆರಂಭಿಕ ಹೆಜ್ಜೆಗಳು. ಒಟ್ಟಿನಲ್ಲಿ 1980ರ ದಶಕದಿಂದ ಕರಾವಳಿ ಕರ್ನಾಟಕದ ಉದ್ದಗಲದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವು ಇನ್ನಷ್ಟು ಬೇರೂರಿ ಪಸರಿಸಲು ಅವಿರತ ಶ್ರಮವಹಿಸಿದ ಹಾಗೂ ಇನ್ನೂ ಶ್ರಮ ವಹಿಸುತ್ತಿರುವ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರ ಕಲಾದೃಷ್ಟಿಯಿಂದ ಬೆಳಕುಕಂಡ ಮಧುರಧ್ವನಿ ಚಾರಿಟೇಬರ್ ಟ್ರಸ್ಟ್ ನ ಶ್ರೇಯೋಭಿವೃದ್ಧಿಯನ್ನು ಈ ಕಿರು ಲೇಖನದ ಮೂಲಕ ಆಶಿಸುತ್ತಿದ್ದೇನೆ.
- ವಿದುಷಿ ಭ್ರಮರಿ ಶಿವಪ್ರಕಾಶ್
ನಿರ್ದೇಶಕಿ, ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಷರಲ್ ಟ್ರಸ್ಟ್, ಮಂಗಳೂರು.
ಕಲಾಮಾಧ್ಯಮದಲ್ಲಿ ಅಧ್ಯಯನನಿರತೆ ಹಾಗು ಸಂಗೀತಾಸಕ್ತೆ.