‘ಮಾಧುರ್ಯ’ ಹೆಸರಿಗೆ ಅನ್ವರ್ಥಕ ಜೀವನಯಾನ ಕು.ಮಾಧುರ್ಯಳದು. ಕಲಾರಾಧನೆ, ವಿದ್ಯಾಭ್ಯಾಸ – ಸಾಧನೆಗಳ ಕನಸಿನ ಹಾದಿಯಲ್ಲಿ ಸಾಗುತ್ತಿರುವ ಮಾಧುರ್ಯ ಆತ್ಮವಿಶ್ವಾಸದ ಪ್ರತಿಮೂರ್ತಿ. ನೃತ್ಯ, ಸಂಗೀತ ಅವಳ ಬಾಲ್ಯದ ಒಲವು. ಮಗಳ ಆಸೆ, ಪ್ರತಿಭೆಯನ್ನು ಪೋಷಿಸಿಕೊಂಡು ಬಂದವರು ಅವಳ ಹೆತ್ತವರಾದ ಶ್ರೀ ಸುರೇಂದ್ರ ಮತ್ತು ಶ್ರೀಮತಿ ಗಾಯತ್ರೀದೇವಿ. ನಾಡಿನಾದ್ಯಂತ ಹಲವಾರು ವೇದಿಕೆಗಳಲ್ಲಿ ನರ್ತಿಸಿದ ಇವಳು, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೇರಿಕಾದ ಕ್ಯಾಲಿಫೋರ್ನಿಯಾ ಸೇರಿದಾಗ ‘ನೃತ್ಯಲೀಲಾ ಡ್ಯಾನ್ಸ್ ಸ್ಕೂಲ್’ ನಾಟ್ಯಗುರು ವಿದುಷಿ ಪಂಚಮಿ ಫಡ್ಕೆ ಅವರಲ್ಲಿ ನೃತ್ಯ ಕಲಿಕೆ ಮುಂದುವರಿಸಿ ವಿದೇಶದಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದು ವಿಶೇಷ. ಇದೀಗ ಮಾಧುರ್ಯ ವಿಧ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ದಿನಾಂಕ 10-09-2023ರ ಭಾನುವಾರದಂದು ಬೆಳಗ್ಗೆ 10 ಗಂಟೆಗೆ ಜಯನಗರದ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ನೆರವೇರಿಸಿಕೊಳ್ಳಲಿದ್ದಾಳೆ. ಅವಳ ನೃತ್ಯ ಸೊಬಗನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ.
ಬೆಂಗಳೂರಿನಲ್ಲಿ ಜನಿಸಿದ ಮಾಧುರ್ಯ ತನ್ನ ಎಂಟರ ಎಳವೆಯಲ್ಲಿ, ಪ್ರಭಾತ್ ಕಲಾವಿದರು ಅವರೊಂದಿಗೆ ನೃತ್ಯಾಭ್ಯಾಸ ಆರಂಭಿಸಿದಳು. ಮಾಧುರ್ಯಳ ಮೊದಲ ಗುರು ಶಕುಂತಲಾ ಪ್ರಭಾತ್. ಇವಳ ಪ್ರಾಥಮಿಕ ವಿದ್ಯಾಭ್ಯಾಸ ಶ್ರೀ ಅರಬಿಂದೋ ಮೆಮೋರಿಯಲ್ ಶಾಲೆ ಹಾಗೂ ಪಿ.ಯು.ಸಿ. ಜೈನ್ ಕಾಲೇಜಿನಲ್ಲಿ ಮತ್ತು ಬಸವನಗುಡಿಯ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ. ಬಾಲ್ಯದಿಂದಲೂ ಸಂಗೀತ ನೃತ್ಯಗಳೊಡನೆ ಅವಿನಾಭಾವ ಸಂಬಂಧ ಹೊಂದಿದ್ದ ಇವಳ ಪ್ರತಿಭೆಗೆ ಶಕ್ತಿಯುತ ಇಂಬಾದವರು ಅವಳ ಹೆತ್ತವರು. ಲಲಿತಕಲೆಗಳಲ್ಲಿ ಅಮಿತಾಸಕ್ತಿಯುಳ್ಳ ಇವಳು, ಬದ್ಧತೆಯಿಂದ ನೃತ್ಯಾಭ್ಯಾಸ ಮಾಡಿ ಹಲವಾರು ವೇದಿಕೆಗಳ ಮೇಲೆ ತನ್ನ ಪ್ರತಿಭಾ ಪ್ರದರ್ಶನಗೈದಿರುವುದೇ ಇವಳ ವೈಶಿಷ್ಟ್ಯ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬೆಳ್ಳೂರು ಸಹೋದರಿಯರು ಮತ್ತು ರಾಧಾ ತಾಂಡವೇಶ್ವರ ಅವರಲ್ಲಿ ಕಲಿತು, ಕರ್ನಾಟಕ ಸರ್ಕಾರ ನಡೆಸುವ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಹಿರಿಮೆ.
ಚಿಕ್ಕಂದಿನಿಂದಲೂ ಓದಿನಲ್ಲೂ ಚುರುಕಾಗಿರುವ ಮಾಧುರ್ಯ, ಇಂಜಿನಿಯರಿಂಗ್ ಪದವೀಧರೆಯಾದ ನಂತರ ಅಮೇರಿಕಾದ ದಕ್ಷಿಣ ಕ್ಯಾಲಿಫೋರ್ನಿಯದ ಉನ್ನತ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿದಳು. ಪ್ರಸ್ತುತ ಯು.ಎಸ್.ಎ. ಬೋರ್ಡ್ ನ ಗ್ಲೋಬಲ್ ಸಂಸ್ಥೆಯಲ್ಲಿ ನೆಟ್ವರ್ಕ್ ಇಂಜಿನಿಯರಾಗಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆ ಇವಳದು. ನೃತ್ಯದ ಬಗ್ಗೆ ಅದಮ್ಯ ಆಸಕ್ತಿ-ಪರಿಶ್ರಮ ಇದ್ದಂತೆ ಮಾಧುರ್ಯಳಿಗೆ ಪುಸ್ತಕಗಳಲ್ಲಿ ವಾಚನಾಭಿರುಚಿಯೂ ಹೆಚ್ಚು. ಭಾಷಣ ಕಲೆಯಲ್ಲೂ ಪಾರಂಗತಳಾದ ಇವಳ ಇನ್ನಿತರ ಹವ್ಯಾಸಗಳೆಂದರೆ, ಸಂಗೀತ-ನೃತ್ಯದೊಡನೆ ಫಿಟ್ನೆಸ್, ಮಾಡೆಲ್ಲಿಂಗ್ ಮತ್ತು ಅಭಿನಯ. 2018ರಲ್ಲಿ ನಡೆದ ಸೌಂದರ್ಯ ಪ್ರದರ್ಶನದಲ್ಲಿ ‘ಮಿಸ್. ಬೆಸ್ಟ್ ಐಕಾನ್ ಇಂಡಿಯಾ’ ಆಗಿ ಪ್ರಥಮ ರನ್ನರ್ ಆಪ್ ಸ್ಥಾನ. ಅನೇಕ ಪ್ರತಿಷ್ಠಿತ ವಸ್ತ್ರ-ಆಭರಣ ಪ್ರದರ್ಶಗಳಲ್ಲಿ ರೂಪದರ್ಶಿಯಾಗಿ ಭಾಗವಹಿಸಿದ ಹೆಗ್ಗಳಿಕೆ. ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ತೀರ್ಪುಗಾರಳಾಗಿಯೂ ಅನುಭವ. ಬಾಲಿವುಡ್, ಕಾನ್ಟೆಂಪೋರರಿ, ಜಾನಪದ ನೃತ್ಯ ಮುಂತಾದ ಅನೇಕ ನೃತ್ಯಶೈಲಿಗಳಲ್ಲಿಯೂ ಭಾಗವಹಿಸಿರುವ ಇವಳು, ಭಾರತ ಮತ್ತು ವಿದೇಶದಲ್ಲಿ ಅನೇಕ ನೃತ್ಯ-ನಾಟಕಗಳನ್ನು ಸಂಯೋಜಿಸಿ ನಿರ್ದೇಶಿಸಿದ್ದಾಳೆ.
– ವೈ.ಕೆ.ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.