ಮಡಿಕೇರಿ : ಮಡಿಕೇರಿ ನಗರ ದಸರಾ ಸಮಿತಿ ಹಾಗೂ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ದಿನಾಂಕ 25 ಸೆಪ್ಟೆಂಬರ್ 2025ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕ ಹಾಗೂ ಕರ್ನಾಟಕ ರಾಜ್ಯ ಒಕ್ಷಗಲಿಗರ ಸಂಘದ ನಿರ್ದೇಶನ ಹರಪಳ್ಳಿ ರವೀಂದ್ರ ಇವರು ಮಾತನಾಡಿ “ಅತ್ಯಂತ ಪ್ರಭಾವಶಾಲಿಯಾದ ಸಾಹಿತ್ಯ ಕ್ಷೇತ್ರ ಸಾಮಾಜಿಕ ಬದಲಾವಣೆಗಳಿಗೂ ಪ್ರೇರಕ ಶಕ್ತಿಯಾಗಿದೆ. ಸಮಾಜದಲ್ಲಿ ನಡೆಯುವ ಬಹು ಅಮೂಲ್ಯವಾದ ನೈಜ ವಿಚಾರಧಾರೆಗಳನ್ನು ಆಧರಿಸಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸಾಹಿತ್ಯ ಸೃಷ್ಟಿಸಿ ಪುಸ್ತಕದ ರೂಪದಲ್ಲಿ ಹೊರತರುವುದು ಶ್ರೇಷ್ಠ ಕಾರ್ಯವಾಗಿದೆ. ನಮ್ಮ ಸುತ್ತಮುತ್ತಲ ಪ್ರಾಕೃತಿಕ ವೈಭವ ಮತ್ತು ಆಗುಹೋಗುಗಳನ್ನು ಅಕ್ಷರ ರೂಪಕ್ಕಿಳಿಸುವ ಸಾಹಿತ್ಯ ಕಲೆ ಅದ್ಭುತ” ಎಂದು ಬಣ್ಣಿಸಿದರು. ಸೈನಿಕರು, ಪತ್ರರ್ಕಕರ್ತರು, ಕವಿಗಳು ಹಾಗೂ ಆರಕ್ಷಕರು ತಮ್ಮದೇ ಆದ ಕಾರ್ಯಕ್ಷೇತ್ರದ ಮೂಲಕ ನಾಡಿನ ಅಖಂಡತೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ. ಆ ಮೂಲಕ ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ವಿಶೇಷ ಕಾಣಿಕೆ ಮತ್ತು ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. ತಮ್ಮ ಅಂತರ್ಯದ ಭಾವನೆಗಳಿಗೆ ಅಕ್ಷರಗಳ ರೂಪ ನೀಡುವ ಕವಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಸಾಹಿತ್ಯದ ಸವಿಯನ್ನು ಪ್ರತಿಯೊಬ್ಬರು ಓದಿನ ಮೂಲಕ ಪಡೆಯುವಂತಾಗಬೇಕು” ಎಂದು ಕರೆ ನೀಡಿದರು.
ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್ ಅವರು ಮಾತನಾಡಿ, “ಕವಿಗಳು ತಮ್ಮ ಕಲ್ಪನೆಗಳನ್ನು ಪದಗಳ ಮೂಲಕ ವರ್ಣಿಸುತ್ತಾರೆ. ಕವಿಗಳ ಬದುಕಿನ ಅವಿಭಾಜ್ಯ ಅಂಗ ಲೇಖನಿಯೇ ಆಗಿದೆ. ಅತ್ಯಂತ ಪ್ರಭಾವಶಾಲಿಯಾದ ಲೇಖನಿಯ ಮೂಲಕ ನಮ್ಮೆಲ್ಲರ ಕನಸುಗಳನ್ನು ಅವರು ಅಕ್ಷರ ರೂಪದಲ್ಲಿ ಸಾಕಾರಗೊಳಿಸುವಂತಾಗಬೇಕು” ಎಂದು ಆಶಿಸಿದರು.
ನಿವೃತ್ತ ಸೇನಾಧಿಕಾರಿ ಹಾಗೂ ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ ಮಾತನಾಡಿ “ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಹಾಗೂ ಮನುಷ್ಯನ ಮನಸ್ಸನ್ನು ಪರಿವರ್ತಿಸುವಲ್ಲಿ ಕವಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಕಾವ್ಯ ಪ್ರತಿಭೆ ಎನ್ನುವುದು ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಸಮಾಜದ ಕಷ್ಟ ಕಾರ್ಪಣ್ಯಗಳನ್ನು ಜನರ ಮುಂದಿಡಲು ಯಾರು ಪ್ರಯತ್ನಿಸುತ್ತಾರೋ ಅವರು ಕವಿಗಳಾಗಲು ಸಾಧ್ಯ” ಎಂದು ಹೇಳಿದರು.
ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ್ ಅವರು ಮಾತನಾಡಿ “ಕೋಗಿಲೆಯ ಧ್ವನಿ ಕೇಳಲು ಚಂದ, ಕವಿಗಳ ಅಕ್ಷರಮಾಲೆ ಓದಲು ಚಂದ” ಎಂದರು. ಮಡಿಕೇರಿ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಚಿ ಸಬಿತಾ, ಸಾಹಿತಿ ಸುನೀತಾ ಲೋಕೇಶ್, ಬಹುಭಾಷಾ ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಂಜಿತ್ ಕವಲಪಾರ, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಗೌರವಾಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯರಾದ ಎಸ್.ಜಿ. ಉಮೇಶ್, ಎಂ.ಯು. ಹನೀಫ್, ಪಿ.ವಿ. ಪ್ರಭಾಕರ್, ಎಂ.ಎಸ್. ನಾಸಿರ್, ಎಂ.ಪಿ. ಅನುಷಾ, ಹೆಚ್.ಎನ್. ಲಕ್ಷ್ಮೀಶ್, ಸಯ್ಯದ್ ಇರ್ಫಾನ್, ಜೋಕಿಗೆ ಅನಿತಾ ದೇವಯ್ಯ, ಅಂಜಲಿ ಅಶೋಕ್, ಶ್ರೀ ರಕ್ಷಾ ಉಪಸ್ಥಿತರಿದ್ದರು. ದಸರಾ ಸಮಿತಿ ಸದಸ್ಯರಾದ ವಿಜಯ್ ಹಾನಗಲ್, ಓಂಶ್ರೀ ದಯಾನಂದ ಕೂಡಕಂಡಿ, ಪಿ.ಎಂ. ರವಿ, ಅಂಕಿತಾ ಕಡ್ಲೇರ ಅತಿಥಿಗಳ ಪರಿಚಯ ಮಾಡಿದರು. ಮೌಲ್ಯ ಬಜೆಕೋಡಿ ಪ್ರಾರ್ಥಿಸಿದರು.
‘ಬಹುಭಾಷಾ ಕವಿಗೋಷ್ಠಿ’ಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಕೊಡವ, ಅರೆಭಾಷೆ, ತುಳು, ಕುಂಬಾರ, ಯರವ, ಹವ್ಯಕ, ಬೈರಬಾಸೆ, ಬ್ಯಾರಿ, ಮಲಯಾಳಂ, ಜೇನು ಕುರುಬ ಭಾಷೆಗಳಲ್ಲಿ ಒಟ್ಟು 71 ಮಂದಿ ಕವನ ವಾಚಿಸಿದರು. ಭಾಷೆ ಅರ್ಥವಾಗದಿದ್ದರೂ ಅದರ ಭಾವ ಹೃದಯ ತಲುಪುವಲ್ಲಿ ಯಶಸ್ವಿಯಾಯಿತು. ಹೆಣ್ಣಿನ ಬದುಕಿನ ಬವಣೆ ಕುರಿತೇ ಸಾಕಷ್ಟು ಮಂದಿ ಕವನ ವಾಚಿಸಿದರು. ಅದರಲ್ಲೂ ಅಲ್ಲಾರಂಡ ವಿಠಲ ನಂಜಪ್ಪ ಅವರು ವಾಚಿಸಿದ ‘ಉಳುವ ಭೂಮಿಯಲಿ ಬೀಳುವ ಗೆರೆ ಅವಳು’ ಕವನ ಗಮನ ಸೆಳೆಯಿತು. ‘ಅವಳಿಲ್ಲೇ ಇದ್ದಾಳೆ ಅಲ್ಲಿ, ಇಲ್ಲಿ ನಮ್ಮ ನಡುವಿನಲ್ಲೇ ಎನ್ನುತ್ತಲೇ ಕವನ ‘ಕೊಟ್ಟು ಬಿಡಿ ಪ್ರೀತಿಯನ್ನು ಹುಡುಕುವ ಮುನ್ನ, ಕಳಚಿಬಿಡಿ ಕಣ್ಣಪೊರೆಯನ್ನು’ ಎನ್ನುತ್ತ ಧುತ್ತನೇ ಕೊನೆಯಾಗಿ, ಅನೇಕ ವಿಚಾರಗಳು ಮನಸ್ಸಿನಲ್ಲಿ ಹೊಳೆಯುವಂತೆ ಮಾಡುತ್ತದೆ.
ಸುಳ್ಯದ ಡಾ. ಅನುರಾಧಾ ಕುರುಂಜಿ ಅವರು ವಾಚಿಸಿದ ‘ನೆರಳು’ ಕವನ ‘ಯಾರಿವನು ಬೆಂಬಿಡದ ಭೂತ’ ಎನ್ನುತ್ತಲೇ ಆರಂಭವಾಗಿ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿತು. ಬಿ.ಜಿ. ಅನಂತಶಯನ ಅವರ ‘ಮಾಸ್ಟರ್ಸ್ ಗಿಫ್ಟ್’ ಇಂಗ್ಲೀಷ್ ಕವನವೂ ಹೃದ್ಯವಾಗಿತ್ತು. 5ನೇ ತರಗತಿ ವಿದ್ಯಾರ್ಥಿನಿ ತಿಷ್ಯಾ ಪೊನ್ನೇಟಿ ವಾಚಿಸಿದ ‘ಮಳೆ ರಜೆ’ ಕವನದಲ್ಲಿನ ‘ಎಷ್ಟು ಒಳ್ಳೆಯವು ಗೊತ್ತಾ ನಮ್ ಡಿ.ಸಿ. ಅಂಕಲ್…? ಮಳೆ ಬಂದ್ರೆ ಸಾಕು ರಜೆ ಕೊಡ್ತಾರೆ’ ಸಾಲುಗಳು ಈ ವರ್ಷ ಮಕ್ಕಳಿಗೆ ಸಿಕ್ಕ ಸುದೀರ್ಘ ಮಳೆ ರಜೆಯನ್ನು ಧ್ವನಿಸಿತು, ಮಾತ್ರವಲ್ಲ ಜಿಲ್ಲಾಧಿಕಾರಿ ಅವರ ಕಾಳಜಿಯನ್ನು ವ್ಯಕ್ತಪಡಿಸುವಲ್ಲಿ ಸಫಲವಾಯಿತು. ರಿಹಾನ ಎಂಬ ತೃತೀಯ ಲಿಂಗಿ ಸಹ ಕವನ ವಾಚಿಸಿ ಗಮನ ಸೆಳೆದರು.
ಸಮಾರಂಭದಲ್ಲಿ ಬಹುಭಾಷಾ ಕವಿಗೋಷ್ಠಿಗೆ ಆಯ್ಕೆಯಾದ ಕವನಗಳನ್ನು ಒಳಗೊಂಡ ‘ಕಾವ್ಯ ಕಲರವ’ ಕವನ ಸಂಕಲನವನ್ನು ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷರಾದ ಸುನೀತಾ ಲೋಕೇಶ್ ಅನಾವರಣಗೊಳಿಸಿದರು. ಇದೇ ಸಂದರ್ಭ ಲೇಖಕಿ ಡಿ.ಹೆಚ್. ಪುಷ್ಪರವರ ‘ಸಂವೇದನೆ’ ಕವನ ಸಂಕಲನ ಹಾಗೂ ಕೆ. ಶೋಭಾ ರಕ್ಷಿತ್ ರವರ ‘ಮನ ಸೆಳೆದ ಹಿಮಗಿರಿ’ ಪ್ರವಾಸ ಕಥನವನ್ನು ಕಿನ್ನಾಳ ರಾಜ್ ಇವರು ಬಿಡುಗಡೆಗೊಳಿಸಿದರು.
‘ಸನ್ಮಾನ’ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಕರ್ನಾಟಕ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ಕೆ.ಜಿ.ಎಫ್. ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್, ನಗರಸಭೆಯ ನಿವೃತ್ತ ಪೌರಾಯುಕ್ತರಾದ ಬಿ.ಬಿ. ಪುಷ್ಪಾವತಿ ಹಾಗೂ ನಾಪೋಕ್ಲು ಬಿಲ್ಲದ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ಎಸ್.ಎಲ್. ಭೈರಪ್ಪರವರ ನಿಧನಕ್ಕೆ ಸಭೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದಲ್ಲಿರುವ ಕುವೆಂಪು ಪುತ್ಥಳಿಗೆ ಕವಯಿತ್ರಿ ಹಾಗೂ ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷೆ ಸುನೀತಾ ಲೋಕೇಶ್ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ನಗರ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಅಧ್ಯಕ್ಷ ಉಜ್ವಲ್ ರಂಜಿತ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.