ಉಡುಪಿ : ಕನ್ನಡದ ಮೊದಲ ಮಹಾಕಾವ್ಯ ರಾಮಾಯಣದ ಕರ್ತೃ, ಪೌರಾಣಿಕ ಕವಿ, ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ದಿನಾಂಕ 07 ಅಕ್ಟೋಬರ್ 2025ರಂದು ಆಚರಿಸುತ್ತೇವೆ. ಸರ್ಕಾರವೂ ಕೂಡಾ ಸಕಲ ಗೌರವಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಮಹರ್ಷಿ ವಾಲ್ಮೀಕಿಯವರು ನಮ್ಮ ಹಿಂದೂ ಸಮಾಜಕ್ಕೆ ಭಕ್ತಿ ಭಾವನಾತ್ಮಕ ಗ್ರಂಥವಾದ ರಾಮಾಯಣವನ್ನು ನಮಗೆ ಕೊಟ್ಟವರು, ರತ್ನಾಕರನೆಂಬ ಒಬ್ಬ ಬೇಡ, ಕ್ರೂರ ವ್ಯಕ್ತಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತಿತಗೊಂಡ ಅಧ್ಬುತ ಕಥೆ ತಿಳಿದಿರುವಂತದ್ದು, ಹಿಂದೂಗಳಾದ ನಾವೆಲ್ಲ ಮಹರ್ಷಿ ವಾಲ್ಮೀಕಿ ಇವರನ್ನು ಭಕ್ತಿಯಿಂದ ಪೂಜಿಸಬೇಕು, ಆರಾಧಿಸಬೇಕು.
ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಕಳೆದ ಎರಡು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಿ ಆಚರಿಸುತ್ತಿದ್ದೇವೆ. ಕಾರ್ಯಕ್ರಮದ ಉದ್ಘಾಟಕರಾಗಿ ಮಾನ್ಯ ಶಾಸಕರಾದ ಯಶ್ ಪಾಲ್ ಸುವರ್ಣ ಇವರು ಆಗಮಿಸಲಿದ್ದು, ಕನ್ನಡ ನಾಡು – ನುಡಿ ಸಂಸ್ಕೃತಿ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜನಾರ್ದನ್ ಕೊಡವೂರು ಇವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025’ನ್ನು ನೀಡಿ ಗೌರವಿಸಲಿದ್ದೇವೆ.
ಸಂಘಟಕ ಜಯಕರ ಶೆಟ್ಟಿ ಇಂದ್ರಾಳಿ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಹಿಸಲಿದ್ದು, ಸಾಹಿತಿ ಕಾತ್ಯಾಯಿನಿ ಕುಂಜಿಬೆಟ್ಟು ಇವರು ಮಹರ್ಷಿ ವಾಲ್ಮೀಕಿಯವರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಛಾಯಾಗ್ರಾಹಕರಾದ ಆಸ್ಟ್ರೋ ಮೋಹನ್ ರವರು ಅಭಿನಂದನಾ ಮಾತುಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಭಾಗವಹಿಸಲಿದ್ದಾರೆ. ಕಾರ್ಯಕ್ರಮ ದಿನಾಂಕ 07 ಅಕ್ಟೋಬರ್ 2025ರಂದು ಉಡುಪಿಯ ಮಿಷನ್ ಕಾಂಪೌಂಡ್‌ನಲ್ಲಿರುವ ಜಗನ್ನಾಥ ಸಭಾಭವನದಲ್ಲಿ ಸಂಜೆ 4-30 ಗಂಟೆಗೆ ಆಯೋಜಿಸಲಾಗಿದೆ.
ಜನಾರ್ದನ್ ಕೊಡವೂರು ಪರಿಚಯ :
ಜನಾರ್ದನ್ ಕೊಡವೂರು ಇವರು ಛಾಯಾಗ್ರಹಣ ಕ್ಷೇತ್ರ ಹಾಗೂ ಪತ್ರಿಕಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ರೋಟರ್ಯಾಕ್ಟ್, ರೋಟರಿಯಂತಹ ಸಾಮಾಜಿಕ ಸೇವೆಯ ಸಂಘಟನೆಯಲ್ಲಿ ಗುರುತಿಸಿಕೊಂಡವರು. ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಶಿಯೇಷನ್ ಉಡುಪಿ ವಲಯದ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯಲ್ಲಿ ಸತತ ಎರಡು ವರ್ಷ ಉತ್ತಮ ವಲಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮ್ಮ ಕೆಮರಾದಲ್ಲಿ ಸೆರೆಹಿಡಿದು ಆಯೋಜಿಸಿದ್ದ ‘ಯತಿಗಳೊಂದಿಗೆ ಒಂದು ದಿನ’, ‘ಆಡಿಸಿದರೆ ಜಗದೋದ್ಧಾರನ’ ಛಾಯಾಂಕನ ‘ಕಾಲದೊಂದಿಗೆ ಓಟ’ (Race with Time) ಎಂಬ ಕಂಬಳದ ಛಾಯಾಚಿತ್ರಗಳ ಪ್ರದರ್ಶನ ಜನಮೆಚ್ಚುಗೆ ಪಡೆದಿದೆ. ಸುಮಾರು 20 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಜನಾರ್ದನ್ ಪತ್ರಿಕಾ ಛಾಯಾಗ್ರಾಹಕನಾಗಿ ದುಡಿಯುತ್ತಿದ್ದಾರೆ. ಕೊಡವೂರು ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ. ಇವರ ಮಾಲಕತ್ವದ karavalixpress.com ಎಂಬ ವೆಬ್ ಸುದ್ಧಿಜಾಲ ಯಶಸ್ವಿಯಗಿ ಮುನ್ನುಗ್ಗುತ್ತಿದೆ. 2021ನೇ ಸಾಲಿನ ಪ್ರತಿಷ್ಟಿತ ‘ಪಿಸಿಆರ್ ಅವಾರ್ಡ್’ ಈ ವೆಬ್ ಜಾಲಕ್ಕೆ ಲಭಿಸಿದೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಪತ್ರಿಕೋದ್ಯಮ ಹಾಗೂ ಛಾಯಾಚಿತ್ರ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗೆ 2013ನೇ ಸಾಲಿನ ‘ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ರಾಜ್ಯಮಟ್ಟದ ಯಶೋಮಾಧ್ಯಮ ಅವಾರ್ಡ್, ಶ್ರೀಕೃಷ್ಣ ಮಠ ಕೊಡಮಾಡಿದ ಮಾಧ್ಯಮ ರತ್ನ ಪ್ರಶಸ್ತಿ, ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ, ದೆಹಲಿ ಕನ್ನಡಿಗ ಪತ್ರಿಕೆ ಆಯೋಜಿಸಿದ್ದ 31ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ದೆಹಲಿಯಲ್ಲಿ ಪುರಸ್ಕಾರ, ‘ಉಪಾಧ್ಯಾಯ ಸಮ್ಮಾನ್’ ರಾಜ್ಯ ಮಟ್ಟದ ಪ್ರಶಸ್ತಿ, ಅಲ್ಲದೆ ಹಲವಾರು ಸಂಘ ಸಂಸ್ಥೆಗಳು ಗುರುತಿಸಿ ಅಭಿನಂದಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಂದ ‘ಛಾಯಾ ಸಾಧಕ ಪುರಸ್ಕಾರ’ ಪಡೆದಿರುತ್ತಾರೆ. ಪ್ರಸ್ತುತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಜಿಲ್ಲಾ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.