ಮೂಡಬಿದಿರೆ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಧವಳತ್ರಯ ಜೈನಕಾಶಿ ಟ್ರಸ್ಟ್ (ರಿ.) ಶ್ರೀ ಜೈನಮಠ ಮೂಡಬಿದಿರೆ ಮತ್ತು ನಾದನೂಪುರ ಯಕ್ಷೋತ್ಥಾನ ಟ್ರಸ್ಟ್ ವಂಡಾರು ಇವರ ಆಶ್ರಯದಲ್ಲಿ ದಿನಾಂಕ 16 ಡಿಸೆಂಬರ್ 2025ರಂದು ಮೂಡಬಿದಿರೆ ಜೈನಮಠದಲ್ಲಿ ಜರಗಿದ ‘ತುಳು ನಾಡು – ನುಡಿಗೆ ಜೈನರ ಕೊಡುಗೆ’ ವಿಚಾರ ಸಂಕಿರಣದ ಅಂಗವಾಗಿ ‘ಮಹಾತ್ಮ’ ನೂತನ ಪ್ರಸಂಗದ ತುಳು ತಾಳಮದ್ದಳೆ ಜರಗಿತು.

ಜೈನ ಧರ್ಮದ 16ನೇ ತೀರ್ಥಂಕರ ಶಾಂತಿನಾಥ ಸ್ವಾಮಿಯ ಪ್ರಥಮ ಭವಾಂಕವನ್ನು ಆಧರಿಸಿ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಕಾರ್ಯದರ್ಶಿ ಮತ್ತು ಯುವ ಪ್ರಸಂಗಕರ್ತೆ ಶುಭಾಶಯ ಇವರು ಬರೆದ ‘ಮಹಾತ್ಮ’ ಪ್ರಸಂಗದ ಮೊದಲ ಪ್ರಯೋಗದಲ್ಲಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಭಾಗವಹಿಸಿದರು.
ಹೆಸರಾಂತ ತಾಳಮದ್ದಳೆ ಅರ್ಥಧಾರಿಗಳಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಸತ್ಯಕ – ವಿದ್ಯಾಧರ), ಎಂ.ಕೆ. ರಮೇಶಾಚಾರ್ಯ (ಸತ್ಯಭಾಮೆ), ಡಾ. ತಾರಾನಾಥ ವರ್ಕಾಡಿ (ಧರಣೀಜಟ), ರಾಧಾಕೃಷ್ಣ ಕಲ್ಚಾರ್ (ಕಪಿಲ), ಸದಾಶಿವ ಆಳ್ವ ತಲಪಾಡಿ (ಶ್ರೀಷೇಣ ರಾಜ) ಮತ್ತು ಡಾ. ಶ್ರುತಕೀರ್ತಿ ರಾಜ್ (ಅಗ್ನಿಭೂತಿ) ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಭಾಗವತರಾಗಿ ಶಿವಪ್ರಸಾದ್ ಎಡಪದವು, ಹಿಮ್ಮೇಳದಲ್ಲಿ ಚಂದ್ರಶೇಖರ ಗುರುವಾಯನಕೆರೆ ಮತ್ತು ರವಿರಾಜ ಜೈನ್ ಕಾರ್ಕಳ ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು.

ಮೂಡಬಿದಿರೆ ಜೈನಮಠದ ಜಗದ್ಗುರು ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಕಲಾವಿದರನ್ನು ಗೌರವಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಮಾಜಿ ಸಚಿವ ಅಭಯಚಂದ್ರ ಜೈನ್, ಜಗದೀಶ ಅಧಿಕಾರಿ ಮೂಡಬಿದಿರೆ, ಸಂಜಯಂತ್ ಕುಮಾರ್ ಶೆಟ್ಟಿ, ಸನತ್ ಜೈನ್, ಶುಭಾಶಯ, ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು.
