‘ಮಹಾತ್ಮರ ಚರಿತಾಮೃತ’ ಅಥಣಿ ಶ್ರೀ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಅವರು ರಚಿಸಿರುವ ಬೃಹತ್ ಕೃತಿ. ಶ್ರೀ ಗುರುಚನ್ನಬಸವೇಶ್ವರ ಗ್ರಂಥಮಾಲೆ ಶ್ರೀ ಮೋಟಗಿ ಮಠ ಅಥಣಿ ಪ್ರಕಟಿಸಿರುವ ಈ ಬೃಹತ್ ಕೃತಿ 1088 ಪುಟಗಳ (108 ವರ್ಣಚಿತ್ರ ಸಹಿತ) ಸಾಹಿತ್ಯಪ್ರಿಯರ ಕರದಿಷ್ಟಲಿಂಗ. ಇಷ್ಟಲಿಂಗ ಕೃತಿರೂಪದಲ್ಲಿ ಕರದಲ್ಲಿ ರಾರಾಜಿಸುವಾಗಿನ ಆನಂದ ಅನುಭವಿಸಿದಾಗ ಮಾತ್ರ ಅರಿವು. ಒಂದೇ ವರ್ಷದಲ್ಲಿ ಮೂರನೇ ಮುದ್ರಣದ ಭಾಗ್ಯ ಕಂಡಿರುವ ಈ ಕೃತಿ ಎರಡನೇ ವರ್ಷ ಮುಗಿಯುತ್ತಿರುವ ಈ ಸಮಯದಲ್ಲಿ ಏಳನೇ ಮುದ್ರಣ ಕಾಣುತ್ತಿದೆಯೆಂದು ಡಾ. ಸಂತೋಷ ಹಾನಗಲ್ಲ (9535725499) ಅವರು ಹರ್ಷಿಸಿದ್ದಾರೆ. ಬಹುಷಃ ಇದೊಂದು ಸಾರ್ವತ್ರಿಕ ದಾಖಲೆ ಎಂಬುದು ನನ್ನ ಅನಿಸಿಕೆ. ರೂ.2,000/- ಮುಖಬೆಲೆಯ ಈ ಕೃತಿ ಪ್ರತಿಯೋರ್ವ ಕನ್ನಡಿಗರ ಮನೆಯಲ್ಲೂ ಇರಬೇಕಾದ ಕೃತಿ. ಇದು ಬರಿಯ ಕೃತಿಯಲ್ಲ, ಸಾಹಿತ್ಯ ಮಹತಿ. ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರು “ಮಹಾತ್ಮರ ಚರಿತಾಮೃತ ಐಕ್ಯತೆಯ ಜೀವಾಮೃತ!” ಎಂದಿದ್ದಾರೆ.
ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ನಲ್ನುಡಿ ಹೀಗಿದೆ. “ನೂರಾರು ಮಹಂತರು, ಆಚಾರ್ಯರು, ತಪೋನಿಧಿಗಳು, ಪೂಜ್ಯರು, ಪವಿತ್ರಾತ್ಮರು, ಆತ್ಮಾನುಭಾವಿಗಳೆಲ್ಲರೂ ಮಹಾಚೇತನರು. ಇಂತಹ ಪವಿತ್ರಾತ್ಮರ ಬದುಕಿನ ಕ್ಷಣ ಚಿತ್ರಗಳು ಈ ಗ್ರಂಥದಲ್ಲಿ. ಎಂತಲೇ ಇದೊಂದು ಅಮೂಲ್ಯ ಹೊತ್ತಿಗೆ. ಇದರಲ್ಲಿದೆ ದೇಶಪ್ರೇಮ ಹಾಗೂ ವಚನ ವಿಶ್ವಪ್ರೇಮಗಳ ಸಂದೇಶ. ಅವಶ್ಯ ಓದಲೇಬೇಕಾದ ಕೃತಿ. ಈ ಕೃತಿಯಲ್ಲಿನ ಮಹಾಮಹಿಮರೆಲ್ಲರೂ ಲೌಕಿಕ ವಾಸನೆಯ ಲವಲೇಶವಿಲ್ಲದವರು. ಅಲೌಕಿಕ ಅನುಭಾವ ರಸಾಸ್ವಾದ ಸವಿದವರು. ಸದಾ ಸಂತೃಪ್ತರು. ನಿತ್ಯ ಸಂತುಷ್ಟರು. ಈ ಪವಿತ್ರ ಭೂಮಂಡಲದಲ್ಲಿ ಸತ್ಯ- ಜ್ಞಾನ-ಆನಂದದ ಹೂದೋಟ ಬೆಳೆದವರು. ಕೃತಿಕರ್ತೃ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ಅವರು ಕವಿಗಳು, ವಿದ್ಯಾರಾಧಕರು, ಧರ್ಮತತ್ತ್ವ ಚಿಂತಕರು” ಎಂದಿದ್ದಾರೆ. ‘ಶ್ರೀನುಡಿ’ಯಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು “ಈ ಕೃತಿಯಲ್ಲಿ ಮನುಜಕುಲದ ಅಂತರಂಗವನ್ನು ತೊಳೆದು ಅವರನ್ನು ಸನ್ಮಾರ್ಗಕ್ಕೆ ಪ್ರೀತಿಯಿಂದ ಕರೆದೊಯ್ಯುವ ಮಾತೃಹೃದಯಿಗಳಿದ್ದಾರೆ” ಎಂದಿದ್ದಾರೆ. ಕರ್ನಾಟಕದ ಬಹುತೇಕ ಎಲ್ಲಾ ಶ್ರೀಮಠಗಳ ಗುರುವರ್ಯರು ಶುಭ ಹಾರೈಸಿದ್ದಾರೆ. ಹಲವಾರು ಖ್ಯಾತ ಸಾಹಿತಿಗಳು ಮನದುಂಬಿ ಶ್ಲಾಘಿಸಿದ್ದಾರೆ. ಸುಂದರವಾದ ಕವನಗಳಿಂದ ಕೋರೈಸಿದೆ.
ಶ್ರೀ ಪ್ರಭುಚನ್ನಬಸವ ಸ್ವಾಮೀಜಿ (ಅಥಣೀಶ) ಅವರು “ಸಾವಿರದ ಶರಣು”- ಇಲ್ಲಿಂದ ಮುಂದೆ ಶಬ್ದವಿಲ್ಲ ” ಶೀರ್ಷಿಕೆಯಲ್ಲಿ ನಾಡಿನ ಸಮಸ್ತರಿಗೆ ಕೃತಜ್ಞತೆಯ ಸುರಹೊಳೆ ಹರಿಸಿದ್ದಾರೆ. ಪೂಜ್ಯರ ಕೆಲವು ಸಾರನುಡಿಯಿದು “ಆಕಾಶದಲ್ಲಿ ಅದ್ಭುತ ನಕ್ಷತ್ರಗಳಿರುವಂತೆ ಭೂಮಿ ಮೇಲೆಯೂ ಬೆಳ್ಳಂಬೆಳಗುವ ಅನೇಕ ಅಪರೂಪದ ನಕ್ಷತ್ರಗಳಿವೆ. ಅವು ಮಿಂಚಿ ಮರೆಯಾಗುವ ಚುಕ್ಕೆಗಳಲ್ಲ. ಆತ್ಮ ಬೆಳಗಿದ ಚಿದ್ಬೆಳಗು! ಮರ್ತ್ಯಕ್ಕೆ ಮಹವನ್ನು ತಂದ ಪರಂಜ್ಯೋತಿ ಪ್ರಭೆಗಳು! ನಮ್ಮ ಮಹಾತ್ಮರು ಆಕಾಶದಿಂದ ಇಳಿದು ಬಂದ ದೇವಮಾನವರಲ್ಲ. ನಮ್ಮೆಲ್ಲರಂತೆಯೇ ಈ ಮಣ್ಣಿನಲ್ಲಿ ಅರಳಿದ ಆತ್ಮಜ್ಯೋತಿಗಳು. ಮಾನವತೆಯ ಮಂಗಳದ ಮುಂಬೆಳಕಾಗಿ ಮೂಡಿಬಂದವರು. ಅವರ ಉದಯ ಮನುಕುಲದ ಸೂರ್ಯೋದಯ! ಭಾರತದ ಬಂಗಾರದ ಬಾಂದಳದಲ್ಲಿ ಮಾನವಪ್ರೀತಿ, ಭಾವೈಕ್ಯತೆಯ ಭೇರಿನಾದ ಮೊಳಗಿಸಿದವರು. ಕರುಣೆಯ ಕಡಲಾಗಿ, ಮಮತೆಯ ಮಡಿಲಾಗಿ, ಅನ್ನದ ಒಡಲಾಗಿ, ಆಶ್ರಯದ ಆಡುಂಬೊಲವಾಗಿ, ಅನುಭಾವದ ಹೊಂಬೆಳಕಾಗಿ, ಆತ್ಮೋನ್ನತಿಯ ಅನ್ಯಾದೃಶ ಬಯಲ ಭಂಡಾರವಾದರು ಈ ಮನುಕುಲದ ಮಹಾತ್ಮರು”.
ಈ ಕೃತಿಯ 216 ಮಹಾಮಹಿಮರ ಹೆಸರು ಹೇಳಿದರೇ ಅದೇ ಒಂದು ಪುಸ್ತಕವಾಗುತ್ತದೆ! ಹಾಗಾಗಿ ಕೆಲವರನ್ನು ಮಾತ್ರ ಪೂಜ್ಯರ ಮಾತುಗಳಲ್ಲೇ ಪರಿಚಯಿಸುವ ಪ್ರಯತ್ನ ಮಾಡುವೆ. ಇದೇ ಪೂರ್ಣ ಕೃತಿಯನ್ನು ಕರದಿಷ್ಟ ಕೃತಿ ಆಗಿಸಲು ಪ್ರೇರಣೆಯೆಂಬ ನಂಬಿಕೆ ನನಗಿದೆ.
* ಸತತ ಹೋರಾಟ, ಪ್ರತಿಯೊಂದು ಸಮಾಜವೂ ತಲೆಯೆತ್ತಿ ನಿಲ್ಲಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನ ಗೌರವಗಳು ಸಲ್ಲಬೇಕು ಎನ್ನುವ ದೂರದೃಷ್ಟಿ ಅಕ್ಕಲಕೋಟ ಶ್ರೀ ರೇವಣಸಿದ್ಧ ಶರಣರದ್ದಾಗಿತ್ತು. ಹೀಗಾಗಿ ನೇಕಾರ ಸಮಾಜದ ಪ್ರಥಮ ಪೀಠ ಸ್ಥಾಪಿಸಿದ ಶ್ರೇಯಸ್ಸು ಶ್ರೀ ರೇವಣಸಿದ್ಧ ಶರಣರಿಗೆ ಸಲ್ಲಬೇಕು. (ಪು. ೬)
* ಅರಿವು-ಆಚಾರ-ಅನುಭಾವದ ಮಹಾಮೇರು ಅಬ್ಬೆತುಮಕೂರು ಶ್ರೀ ವಿಶ್ವಾರಾಧ್ಯರು. ಅವರ ಸಮಾನತೆ ಎಲ್ಲ ಗುರುಗಳಿಗೂ ಮಾದರಿಪಥವಾಗಿದೆ. (ಪು.೩೭)
* ಅಪ್ಪಗಳ ಬದುಕು ಬಚ್ಚಿಟ್ಟ ಬದುಕಲ್ಲ. ಬಿಚ್ಚಿಟ್ಟ ಬದುಕು. ಅವರ ಬದುಕೇ ಒಂದು ಪವಾಡ. ಬಸವ ನಿಷ್ಠೆಯೇ ಬಾಳಿಗಾದರೆ, ವಚನ ವಾಙ್ಮಯವೇ ಒಲವಿನ ಓಂಕಾರ. ಇಳಕಲ್ಲ -ಚಿತ್ತರಗಿಯ ಶ್ರೀ ವಿಜಯ ಮಹಾಂತ ಶಿವಯೋಗಿಗಳು ಕೈವಲ್ಯದ ಕೋಟಿ ಸೂರ್ಯರ ಪ್ರಭೆ. ಅವರಿಂದ ಧನ್ಯತೆಯ ಕುಸುಮ ಸಮಾಜದಲ್ಲಿ ಬೆಳಗಿತು. (ಪು.೮೬)
* ಬಸವಗುರುವಿನಂತೆ ಭಕ್ತಿ ಬಿತ್ತಿ, ಅಲ್ಲಮನಂತೆ ವೈರಾಗ್ಯ ತಾಳಿ, ಚೆನ್ನಬಸವ, ಅಕ್ಕಳಂತೆ ಜ್ಞಾನಪ್ರಭೆ ಬೆಳಗಿದ ಕನಕಗಿರಿಯ ವಿರಕ್ತಮಠದ ಶ್ರೀ ಚೆನ್ನಮಲ್ಲ ಶಿವಯೋಗಿಗಳು ಲೋಕೋದ್ಧಾರ ಮಣಿಹ ಪೂರೈಸಿದರು. ಬಂಗಾರ ಕಳೆದರೂ ಕಳೆಗುಂದಲಿಲ್ಲ. ಬಂದರೂ ಹಿಗ್ಗಲಿಲ್ಲ. ಎಲ್ಲರೊಳಗೊಂದಾಗಿ ತಮ್ಮ ಪರಿಪೂರ್ಣ ಕೈಂಕರ್ಯ ಪೂರೈಸಿದರು. (ಪು.೧೫೨)
* ವ್ಯಕ್ತಿಯಾಗಿ ಹುಟ್ಟಿ, ಸಾಧಕನಾಗಿ ಶ್ರಮವಹಿಸಿ, ಶ್ರೇಷ್ಠಗುರುವಿನ ಶಿಷ್ಯಶ್ರೇಷ್ಠ ಎಂದೆನಿಸಿ, ನಾಟಕಕಾರರಾಗಿ, ವಾಗ್ಗೇಯಕಾರರಾಗಿ, ಬಹುವಾದ್ಯಗಳ ಬಹುಶ್ರುತರಾಗಿ, ಶಿವಯೋಗಿಗಳಾಗಿ, ಏನೆಲ್ಲ ಸೇವೆಗಳನ್ನು ಸಮರ್ಪಿಸಿದ ಗದುಗಿನ ಪಂ.ಡಾ. ಶ್ರೀ ಪುಟ್ಟರಾಜ ಕವಿ ಗವಾಯಿಗಳವರು ಇಷ್ಟಲಿಂಗ ಮಹಾಪೂಜೆಯೊಳಗೆ ಕುಳಿತು ಮಹಾಲಿಂಗದೊಳಗೆ ಬೆಳಗಿದರು. (ಪು.೨೩೯)
* ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ, ಭಾವದಲ್ಲಿ ನಾಡಸೇವೆ, ಉಸಿರಿನಲ್ಲಿ ಜನಮನದ ಉತ್ಥಾನದ ಭಾವ ಹೊಂದಿದ ಪೂಜ್ಯ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರು ಬಾಲ್ಯದಿಂದ ಬದುಕಿನ ಪೂರ್ಣ ಬೆಳಗಿನವರೆಗೆ ಸೇವೆ-ತ್ಯಾಗ-ಸದ್ಭಾವ-ಸದ್ಭಕ್ತಿ-ಸಾಮರಸ್ಯದಂತಹ ಮೌಲ್ಯಗಳನ್ನು ಬಿತ್ತಿ ಎಲ್ಲರು ಪ್ರೀತಿ ಭ್ರಾತೃತ್ವದಿಂದ ಬಾಳ ನಡೆಸಿರೆಂದು ಸಾರಿ ಪಂಚನಮಸ್ಕಾರ ಹೇಳುತ್ತಿರುವಾಗ ಇಹಲೋಕ ತ್ಯಜಿಸಿ ಮಹಾ ಮಂಜುನಾಥನಲ್ಲಿ ಬಯಲಾದವರು. (ಪು.೩೨೭)
* ದೈವೀಭಾವವೇ ಮೈವೆತ್ತು ಬಂದ ಶ್ರೀ ಆಂಡಾಳ್ ಅಮ್ಮ ಲೌಕಿಕ ಭಾವವನ್ನು ತ್ಯಜಿಸಿದಳು. ವಿವಾಹ ಬಂಧನವೇ ಬೇಡೆಂದು ಸಂಸಾರದಿಂದ ಮುಕ್ತಳಾದಳು. ಶ್ರೀವಿಷ್ಣುವನ್ನೇ ತನ್ನ ಪತಿ ಎಂದು ಪರಿಭಾವಿಸಿದಳು. ಮುಂದೆ ಶ್ರೀಕೃಷ್ಣನ ಕೃಪೆಗಾಗಿ ಮೂವತ್ತು ದಿನ ಉಪವಾಸ ವ್ರತ ಕೈಗೊಂಡಳು. ಆ ವ್ರತದ ಸಂದರ್ಭದಲ್ಲಿ ಭಾವದಲ್ಲಿ ಮೂಡಿಬಂದ ಭಾವಗಳಿಗೆ ಸಾಹಿತ್ಯದ ಸ್ಪರ್ಶ ನೀಡಿದಳು. ಹಾಡಿದಳು. ಧ್ಯಾನಸ್ಥಳಾದಳು. ಹೂಮಾಲೆಯೊಂದಿಗೆ ಬದುಕಿನ ದಿವ್ಯಮಾಲೆಯನ್ನೇ ಆ ದೇವರಿಗೆ ಅರ್ಪಿಸಿ ಅರ್ಪಿತಳಾದಳು. (ಪು.೫೯೮)
ಪೂಜ್ಯಶ್ರೀ ಪ್ರಭುಚನ್ನಬಸವ ಸ್ವಾಮೀಜಿ (9448141001) ಅವರ ‘ಮಹಾತ್ಮರ ಚರಿತಾಮೃತ’ ಕೇವಲ ಕೃತಿಯಲ್ಲ. ಇದೊಂದು ನಾಡಿನ ಧೀಮಂತರನ್ನು ಜಗಕ್ಕೆ ಪರಿಚಯಿಸಿದ ಅಕ್ಷರಸೂರ್ಯ. ಒಂದೊಂದು ಪರಿಚಯ ಒಂದೊಂದು ಕಿರಣ. ಇಡೀ ಕೃತಿ ಹುಣ್ಣಿಮೆಯ ಬೆಳದಿಂಗಳ ಅಂದದಿಂದ ಭುವನವನ್ನು ಬೆಳಗಿದೆ. ಪೂಜ್ಯರು, ನಾನಲ್ಲ, ನನ್ನದಲ್ಲ, ನನ್ನಿಂದಲ್ಲ….! ನೀವೇ ಎಲ್ಲ, ನಿಮ್ಮದೇ ಎಲ್ಲ ನಿಮ್ಮಿಂದಲೇ ಎಲ್ಲ…. “! ಎನ್ನುತ್ತ ಅನಿಕೇತನ ಚೇತನಗಳಿಗೆ ಈ ಮಹಾಕೃತಿಯನ್ನು ಅರ್ಪಿಸಿದ್ದಾರೆ. ಪ್ರಕಟವಾದ ಎರಡು ವರ್ಷಗಳೊಳಗೆ ರಾಜ್ಯಮಟ್ಟದ 45 ಪ್ರಶಸ್ತಿಗಳಿಗೆ ಪಾತ್ರವಾಗಿರುವ ಈ ಸತ್ಕೃತಿ ಖಂಡಿತಕ್ಕು ಪುಸ್ತಕ ಸಂಸ್ಕೃತಿ ಸಂವರ್ಧನೆಗೆ ಧೀಶಕ್ತಿ ತುಂಬಿದೆ. ಅರಳಿ ಕಂಪೊಗೆವ ಬಹುಬಗೆಯ ಸುಂದರ ಕುಸುಮಗಳ ಉದ್ಯಾನ ಈ ಕೃತಿಯಾಗಿ ಮನತುಂಬಿದ ಜೇನನೊಸರುವ ಅಕ್ಷರದುಂಬಿ. ಸವಿದವರೇ ಬಲ್ಲರು ಸವಿರುಚಿಯ. ನನ್ನದೇ ನುಡಿಗಳಲಿ, “ಬೆಳಕ ದೀವಿಗೆಯಿದುವು ಬೆಳಗಿಸಲು ಸುರಬದುಕ/ಚಂದನವ ತೇದಂತೆ ಅಮೃತದ ಧಾರೆ/ನಿನ್ನೆ ಇಂದಿನ ಕಥೆಯು ನಾಳೆಗದು ಪೌರ್ಣಮಿಯು/ಮರೆಯದೇ ಮೆರೆಸೋಣ ನಿಜಸತ್ಯ ಸೂರೆ”.
ಓದು ಮುಗಿದಿದೆ. ಭಾರ ಎನಿಸುತ್ತಿದೆ. ಆದರೆ ಕೆಳಗಿಡಲು ಮನವೊಪ್ಪುತ್ತಿಲ್ಲ. ಮೊದಲಿನಿಂದ ಮತ್ತೊಮ್ಮೆ ಪ್ರಾರಂಭಿಸು ಎನ್ನುತಿದೆ ! ಓದುವ ಮೊದಲು ಬರೆಯಲು ಮುಂದಾಗಿ ಕೆಲವರ ಬಗ್ಗೆ ಕೆಲವು ಮಾತುಗಳನ್ನು ಮಾತ್ರ ತಿಳಿಸಿದಂತೆ ಮನದೊತ್ತಡ ಅವಸರಿಸುತ್ತಿದೆ. ಓದಿಯಾಯಿತು ಎಂದುಕೊಳ್ಳದಿರು, ಇನ್ನೂ ಓದಲಿದೆ ಎಂದು ಜಾಗೃತನಾಗು. ಹೌದು. ಓದುವೆ, ಓದುವೆ, ಓದುವೆ; ಓದುತ್ತಲೇ ಇರುವೆ. ನೀವೂ ಓದಲಿದನ್ನು ತರಿಸಿಕೊಳ್ಳಿ. ಜ್ಞಾನಭಂಡಾರವನ್ನು ಇನ್ನಷ್ಟು ಶ್ರೀಮಂತಗೊಳಿಸಿ.
ಡಾ.ಪ್ರದೀಪ್ ಕುಮಾರ್ ಹೆಬ್ರಿ, ಮಂಡ್ಯ
ಮೊ: 9844018457
ಕನ್ನಡ ಸಾಹಿತ್ಯ ಕ್ಷೇತ್ರದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಕೆಲಸ ಮಾಡಿರುವ ಡಾ. ಪ್ರದೀಪ ಕುಮಾರ ಹೆಬ್ರಿ ಇವರು ಆಕರ್ಷಕ ಬರಹಗಾರರು. ‘ಮಹಾಕಾವ್ಯಗಳ ಕವಿ’ ಎಂದೇ ಎಲ್ಲರ ಪ್ರೀತ್ಯಾಭಿಮಾನಗಳಿಗೆ ಪಾತ್ರರಾದ ಇವರು ಬಹುಮುಖ ಪ್ರತಿಭಾವಂತರಾಗಿದ್ದಾರೆ. ತಬಲ, ನೃತ್ಯ, ನಾಟಕ, ಕಾವ್ಯ ವ್ಯಾಖ್ಯಾನ ಎಲ್ಲದರಲ್ಲೂ ತಮ್ಮನ್ನು ಗುರುತಿಸಿಕೊಂಡವರು. ಇವರ ಪ್ರಕಟಿತ ಕೃತಿಗಳ ಸಂಖ್ಯೆ ಐನೂರಕ್ಕೆ ಸಮೀಪಿಸುತ್ತಿರುವುದು ಇವರ ಪುಸ್ತಕ ಪ್ರೀತಿಗೆ ಸಾಕ್ಷಿಯಾಗಿದೆ. ಇವರು ಕೃತಿಕಾರರನ್ನು ಪ್ರೋತ್ಸಾಹಿಸುವ ಪರಿ ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲ’ ಎಂಬ ಮಾತಿಗೆ ಸಾಕ್ಷಿಯಾಗಿದೆ.