ಮಣಿಪಾಲ : ಸಂಗಮ ಕಲಾವಿದೆರ್ ಮಣಿಪಾಲ (ರಿ.) ಸಂಸ್ಥೆಯು ದಿನಾಂಕ 28-10-2023 ಮತ್ತು 29-10-2023ರಂದು ಎರಡು ದಿನಗಳ ಮುಖವರ್ಣಿಕೆ ಕಾರ್ಯಗಾರ ‘ಮೇಕಪ್ ಕಿಟ್’ನ್ನು ಪ್ರಸ್ತುತ ಪಡಿಸುತ್ತದೆ. ಮಣಿಪಾಲದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಐದು ಜನ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ನಡೆಯುವ ಈ ಕಾರ್ಯಾಗಾರದಲ್ಲಿ ಯಕ್ಷಗಾನ, ರಿಯಾಲಿಸ್ಟಿಕ್, ಮೈಮ್ ಮತ್ತು stylized ಮೇಕಪ್ ಇವುಗಳ ಬಗ್ಗೆ ತರಬೇತಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳು : ಭುವನ್ ಮಣಿಪಾಲ್, ಸಂದೀಪ್ ಶೆಟ್ಟಿಗಾರ್, ಉಜ್ವಲ್ ಯು.ವಿ., ಶ್ವೇತ ಅರೆಹೊಳೆ ಮತ್ತು ಪ್ರಜ್ವಲ್ ಶೇರಿಗಾರ್
ಸೂಚನೆಗಳು:
1. ಕಾರ್ಯಗಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರಗೆ ನಡೆಯಲಿದೆ.
2. 10 ವರ್ಷ ಮೇಲ್ಪಟ್ಟ ಆಸಕ್ತರು ಭಾಗವಹಿಸಬಹುದು.
3. ಭಾಗವಹಿಸುವ ವಿದ್ಯಾರ್ಥಿಗಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಲಾಗುವುದು.
4. ಕಾರ್ಯಾಗಾರಕ್ಕೆ 1000/- ಶುಲ್ಕ ನಿಗದಿ ಪಡಿಸಲಾಗಿದೆ.
5. ಹೆಚ್ಚಿನ ಮಾಹಿತಿಗಳನ್ನು ಕಾರ್ಯಾಗಾರದ ಮುಂಚಿತವಾಗಿ ನೀಡಲಾಗುವುದು.
ಸಂಗಮ ಕಲಾವಿದೆರ್ ಮಣಿಪಾಲ (ರಿ.), 1997ರಲ್ಲಿ ತುಳು ರಂಗಭೂಮಿಯ ಹವ್ಯಾಸಿ ಕಲಾವಿದರ ಉತ್ಸಾಹದಿಂದ ಹುಟ್ಟಿ, ಕ್ರಿಯಾಶೀಲವಾಗಿ ಬೆಳೆದು ಬಂದ ಸಂಸ್ಥೆ. ತನ್ನ ನವ್ಯತೆ ಮತ್ತು ನೈಪುಣ್ಯತೆಗೆ ಸಾಕ್ಷಿಯೆಂಬಂತೆ ಪ್ರತೀ ವರ್ಷ ಹೊಸ ನಾಟಕದ ಪ್ರಯೋಗದಲ್ಲಿ ತೊಡಗಿಸಿಕೊಳ್ಳುತ್ತದೆ. ಟಾಗೋರ್, ಮೊಲಿಯಾರ್ ಮುಂತಾದವರ ಪ್ರಸಿದ್ಧ ನಾಟಕಗಳನ್ನು ತುಳು ರಂಗಭೂಮಿಯಲ್ಲಿ ಪ್ರಯೋಗಿಸಿ, ರಾಜ್ಯದ ಅನೇಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಂಸ್ಕೃತಿಕ ಅಭಿರುಚಿಯ ಜೊತೆಗೆ ಸಾಮಾಜಿಕ ಸಂವೇದನೆ ತಂಡದ ಮುಖ್ಯ ಧ್ಯೇಯವಾಗಿದ್ದು. ಆ ಹಾದಿಯಲ್ಲಿ ನಕ್ಸಲಿಸಂ, ಕೋಮುವಾದ, ನದಿ ತಿರುವು ಯೋಜನೆ ಮುಂತಾದ ತುರ್ತು ಹಾಗೂ ಪ್ರಾದೇಶಿಕ ಸಮಸ್ಯೆಗಳಿಗೆ ತನ್ನ ನಾಟಕದ ಮೂಲಕ ಸ್ಪಂದಿಸಲು ಪ್ರಯತ್ನಿಸಿದೆ. ‘ಉಂದು ರಾಮಾಯಣ ಅತ್ತ್’ ಎಂಬ ರಂಗಪ್ರಯೋಗ ನಕ್ಸಲ್ ಚಟುವಟಿಕೆಗಳು ಹೆಚ್ಚಿರುವ ಮತ್ತು ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಸುಮಾರು ಐವತ್ತು ಹಳ್ಳಿಗಳಲ್ಲಿ ಪ್ರದರ್ಶನಗೊಂಡಿದೆ.
ಪ್ರಯತ್ನಕ್ಕೆ ಫಲಶ್ರುತಿ ಎಂಬಂತೆ ತುಳುಕೂಟ (ರಿ.) ಉಡುಪಿ ನಡೆಸುವ ನಾಟಕ ಸ್ಪರ್ಧೆಯಲ್ಲಿ ಏಳು ಬಾರಿ ಪ್ರಥಮ ಬಹುಮಾನ ಪಡೆದಿದ್ದು, ‘ಕರ್ಣಭಾರ’, ‘ವಾಲಿವಧೆ’ ಮತ್ತು ‘ವಿ ಟೀಚ್ ಲೈಫ್ ಸರ್’ ಎಂಬ ನಾಟಕಗಳು ಡೆಲ್ಲಿಯ ರಾಷ್ಟ್ರೀಯ ನಾಟಕ ಶಾಲೆ (NSD) ನಡೆಸುವ ಅಂತರರಾಷ್ಟ್ರೀಯ ಮಟ್ಟದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಇದರ ಜೊತೆಗೆ ‘ಬಣ್ಣದ ಹೆಜ್ಜೆ’ ಎಂಬ ಮಕ್ಕಳ ರಂಗ ಶಿಬಿರವನ್ನು ಪ್ರತಿವರ್ಷ ಆಯೋಜಿಸುತ್ತಾ ಬಂದಿದೆ.