ಬಂಟ್ವಾಳ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಹಾಗೂ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆ ಇದರ ಜಂಟಿ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಮಕ್ಕಳ ಶಿಬಿರ ‘ಸಾಹಿತ್ಯ ಸಂಭ್ರಮ’ವು ದಿನಾಂಕ 28-10-2023 ಮತ್ತು 29-10-2023ರಂದು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಮಕ್ಕಳ ಶಿಬಿರವನ್ನು ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಇವರು ಉದ್ಘಾಟಿಸಿ “ಸಾಹಿತ್ಯ, ಬರಹಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಸಾಧನವಾಗಿವೆ. ವಿದ್ಯಾರ್ಥಿ ದೆಸೆಯಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಒಲವು ತೋರಿಸಿದರೆ ಮುಂದಕ್ಕೆ ದೊಡ್ಡ ಸಾಧನೆ ಮಾಡಬಹುದು” ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾಧ್ಯಕ್ಷೆ ಪರಿಮಳ ಮಹೇಶ ರಾವ್ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಯಮಿ ದೇವಿ ಪ್ರಸಾದ್ ಚೆಂಗಲ್ಪಾಡಿ, ಗೌರವ ಸಲಹೆಗಾರ ಬಾಲಕೃಷ್ಣ ಕಾರಂತ್ ಎರುಂಬು, ಶಾಲಾ ಮುಖ್ಯೋಪಾಧ್ಯಾಯ ಸುಶೀಲಾ ವಿಟ್ಲ, ಸಾಹಿತಿ ಹಾಗೂ ಪತ್ರಕರ್ತ ಜಯಾನಂದ ಪೆರಾಜೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪರಿಷತ್ತಿನ ಕಾರ್ಯದರ್ಶಿ ಶ್ರೀ ಗೋಪಾಲಕೃಷ್ಣ ನೇರಳಕಟ್ಟೆ ಅವರನ್ನು ಗೌರವಿಸಲಾಯಿತು.
ಶಿಬಿರದಲ್ಲಿ ಜಯಾನಂದ ಪೆರಾಜೆಯವರು ಚುಟುಕು ಕವನ, ರಶ್ಮಿತಾ ಸುರೇಶ್ ಜೋಗಿಬೆಟ್ಟುರವರು ಹಾಸ್ಯ ಸಾಹಿತ್ಯ, ಸುರೇಖಾ ಯಳವಾರರವರು ಮಕ್ಕಳ ಸಾಹಿತ್ಯ, ತಾರಾನಾಥ್ ಕೈರಂಗಳರವರು ಚಿತ್ರ ಸಾಹಿತ್ಯ, ಜಯರಾಮ ಪಡ್ರೆಯವರು ಕಥನ ಕಾವ್ಯ, ಗೋಪಾಲಕೃಷ್ಣ ನೇರಳಕಟ್ಟೆ ಅವರು ಸೃಜನಶೀಲ ಸಾಹಿತ್ಯ, ಅಬ್ದುಲ್ ಮಜೀದ್ ತುಂಬೆಯವರು ಮೌಲ್ಯ ಸಾಹಿತ್ಯ, ಶ್ರೀಕಲಾ ಕಾರಂತ ಅಳಿಕೆಯವರು ಬಾಲ ಸಾಹಿತ್ಯ, ಎಂ.ಡಿ. ಮಂಚಿಯವರು ನಾಟಕ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಶಿಕ್ಷಕ ವೃಂದ ಸಹಕರಿಸಿತು. ತರಬೇತಿಯಲ್ಲಿ ಬಂಟ್ವಾಳ ತಾಲೂಕಿನ ವಿವಿಧ ಶಾಲೆಗಳ ಸುಮಾರು 125 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಿನಾಂಕ 29-10-2023ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು (ರಿ) ಬಂಟ್ಟಾಳ ಇದರ ಅಧ್ಯಕ್ಷರಾದ ಶ್ರೀಕಲಾ ಕಾರಂತ ಅಳಿಕೆ “ಸಾಹಿತ್ಯದಿಂದ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಪ್ರತಿಯೊಂದು ಮಗುವು ವಿಶೇಷ ಪ್ರತಿಭೆ ಹೊಂದಿರುತ್ತದೆ. ಸಾಹಿತ್ಯವು ಆ ಪ್ರತಿಭೆಗಳನ್ನು ಹೊರ ಹೊಮ್ಮಿಸಲು ಅಪಾರ ಅವಕಾಶವನ್ನು ಒದಗಿಸುತ್ತದೆ. ಸಾಹಿತ್ಯದಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆಯ ಸಂಭ್ರಮ ಸಾಕಾರಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.
“ಮಕ್ಕಳು ಕಲಿಕೆಯ ಜತೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜ ಗುರುತಿಸುವ ಪ್ರತಿಭೆಗಳಾಗಿ ಹೊರಹೊಮ್ಮುತ್ತಾರೆ. ಆ ನಿಟ್ಟಿನಲ್ಲಿ ಶಿಬಿರದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು” ಎಂದು ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮಪ್ರಸಾದ್ ರೈ ತಿರುವಾಜೆ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಗುತ್ತಿಗೆದಾರರಾದ ಗಣೇಶ ಪ್ರಭು ಮೋಂತಿಮಾರು, ಗೌರವ ಸಲಹೆಗಾರರಾದ ಶ್ರೀ ಬಾಲಕೃಷ್ಣ ಕಾರಂತ್ ಎರುಂಬು, ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲಾ ವಿಟ್ಲ, ಸಾಹಿತಿಗಳಾದ ಭಾಸ್ಕರ್ ಅಡ್ವಾಳ ಹಾಗೂ ರಮೇಶ್ ಬಾಯಾರು, ಪರಿಷತ್ತಿನ ವಲಯ ಸಂಯೋಜಕರಾದ ರಾಧಾಕೃಷ್ಣ ಮೂಲ್ಯ ಅಮ್ಟೂರು ಮತ್ತು ಸಾಹಿತಿ ತುಳಸಿ ಕೈರಂಗಳ್ ಇವರೆಲ್ಲರೂ ಶುಭ ಹಾರೈಸಿದರು.
ಶಿಬಿರ ಸಂಯೋಜಕರಾದ ಕಲಾವಿದ ಶ್ರೀ ತಾರಾನಾಥ್ ಕೈರಂಗಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನೇರಳಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಭಾಸ್ಕರ್ ಅಡ್ವಾಳರು ಸ್ವರಚಿತ ಕವನ ಹಾಗೂ ಕಥೆ ರಚನೆ, ವಿ.ಸು. ಭಟ್ ತುಂಬೆರವರು ಓದು ಹಾಗೂ ಬರಹ, ರಮೇಶ ಬಾಯಾರುರವರು ಭಾಷಣ ಕಲೆ, ತುಳಸಿ ಕೈರಂಗಳರವರು ಕಥೆ ರಚನೆ, ಗೋಪಾಲಕೃಷ್ಣ ನೇರಳಕಟ್ಟೆಯವರು ಕವನ ರಚನೆ, ಶ್ರೀಕಲಾ ಕಾರಂತ ಅಳಿಕೆಯವರು ಬಾಲ ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಶಿಕ್ಷಕ ವೃಂದದವರು ಸಂಪೂರ್ಣ ಸಹಕರಿಸಿದರು.