ಕನ್ನಡ ಚಿತ್ರರಂಗದಲ್ಲಿ ಕಿರುವಯಸಿನಲ್ಲೇ ಸೂಪರ್ ಸ್ಟಾರ್ ಎನಿಸಿದ ಪಂಚಭಾಷಾತಾರೆ ಪದ್ಮಭೂಷಣ ಬಿರುದು ಹೊತ್ತ ಬಿ. ಸರೋಜಾದೇವಿಯವರದ್ದು ಒಂದು ದೊಡ್ಡ ಹೆಸರಾದರೆ ನಾಟಕ ರಂಗದಲ್ಲಿ ಹೈಸ್ಕೂಲು ಮೆಟ್ಟಿಲೇರುವಷ್ಟರಲ್ಲೇ ರಂಗ ಭೂಮಿಯ ಅನೇಕ ಹಿರಿಯ ಸಂಸ್ಥೆಗಳ ಪೈಕಿ ಲೆಕ್ಕವಿಲ್ಲದಷ್ಟು ನಾಟಕಗಳಲ್ಲಿ ಮತ್ತು ವಿವಿಧ ಸಾಂಸ್ಕೃತಿಕ ರಂಗಗಳಲ್ಲಿ ಮಿಂಚಿದ ನಮ್ಮೂರಿನ ಅಭಿನಯ ಸರಸ್ವತಿ… ಪ್ರಿಯಾ ಸರೋಜಾ ದೇವಿ.
ಇವರೀರ್ವರ ಮೈಕಟ್ಟು ಮತ್ತು ಮುಖಚರ್ಯೆಯಲ್ಲೂ ಒಂದಷ್ಟು ಹೋಲಿಕೆ ಇದೆ.
ಸರೋವರದ ಜಲದಲ್ಲಿ ಉದಿಸುವ ಹೂ ಕಮಲವೇ ಸರೋಜಾ..ಆಸಕ್ತಿ ಅಭಿವ್ಯಕ್ತಿ ಉತ್ಸಾಹ ಹುಮ್ಮಸ್ಸು ಸೃಜನಶೀಲತೆಗಳ ಅನ್ವರ್ಥನಾಮವೇ ಸರೋಜಾ….
ಸರೋಜಾ ದೇವಿ ಎಂದರೆ ಕಮಲವನ್ನು ಹಿಡಿದ ಕಮಲಿನೀ ಎಂದರ್ಥೈಸಬಹುದಲ್ಲವೇ.
ಹೌದು ಕಮಲ ಎಲ್ಲಿದ್ದರೂ ಕಮಲ… ಅದರ ತುಂಬೆಲ್ಲವೂ ತುಮುಲ.
ಇದು ನಮ್ಮ ಉಡುಪಿಯ ಸಮೀಪ ಕೊಳಂಬೆ ಗ್ರಾಮದ ಶಾಂತಿನಗರದಲ್ಲಿ ನೆಲೆಸಿದ್ದ ಸಂಸಾರ ಸರೋವರದಲ್ಲಿ ಅರಳಿದ ಚೆಲು ಕಮಲ.
ತಂದೆ ಕೃಷ್ಣ ಹಾಗೂ ತಾಯಿ ಪದ್ಮಾವತಿಯ ನಾಭಿಯಲ್ಲರಳಿದ ಕಮಲ. ಇವರ ಓದು ಶುರುವಾಗಿದ್ದು ಒಳಕಾಡು ಹೈಸ್ಕೂಲಿನಲ್ಲಿ. ಕಲಿಯುವುದರಲ್ಲಿ ಚಿಕ್ಕಂದಿನಿಂದಲೂ ನಂಬರ್ ವನ್. ಮಾತೆ ಸರಸ್ವತಿಯ ಸಂಪೂರ್ಣ ಅನುಗ್ರಹ ಇವರ ಮೇಲಿತ್ತು. ಬಾಲ್ಯದಲ್ಲೇ ಪ್ರಚಲಿತವಿದ್ದ ಎಲ್ಲ ವಿದ್ಯೆಗಳನ್ನು ಕಲಿತು ಅರಗಿಸಿಕೊಳ್ಳಬೇಕೆಂಬ ಅತೀವ ಹಂಬಲ.
ಪ್ರಥಮ ಪಿ. ಯು. ಸಿ. ಅನಂತರ ಅನ್ಯರೊಬ್ಬರ ಒತ್ತಾಯಕ್ಕೆ ಒಂದು ವರ್ಷದ ಜನರಲ್ ನರ್ಸಿಂಗ್ ಅನ್ನು ಮಾಡಿದ್ದಾಗಿತ್ತು.
ಅದೊಂದು ಕಹಿ ಘಳಿಗೆಯಲ್ಲಿ ಸಂಸಾರ ತಂದಿದ್ದ ಸಂದಿಗ್ಧ ಪರಿಸ್ಥಿತಿಗೆ ಆರ್ಮಿಯ ಹುದ್ದೆ ತೊರೆದು ಊರಿಗೆ ಬಂದಿದ್ದರು ಅಪ್ಪ. ಕಾರ್ಗಿಲ್ ಯುದ್ಧದ ಸಮಯವಾದ್ದರಿಂದ ಅದೇ ಭವಿಷ್ಯಕ್ಕೆ ದೊಡ್ಡ ಮುಳುವಾಯಿತು.
ಆಸ್ತಿ ಅಂತಸ್ತಿಗೆ ಬಂತು ಸಂಚಕಾರ. ಸಾಲದಾಯ್ತು ಊರಲ್ಲಿ ದುಡಿದ ಓರ್ವನ ದುಡಿಮೆ. ಬಳಲಿ ಬೆಂಡಾಯ್ತು ಒಂಬತ್ತು ಮಂದಿಯ ತುಂಬು ಸಂಸಾರ.
ಸರೋಜಾ ದೇವಿ ದಿನದ ಒಂದರೆ ಘಳಿಗೆಯನ್ನೂ ಹಾಳು ಗೆಡವುತ್ತಿರಲಿಲ್ಲ. ಮಾಸ್ಟರ್ ಕಣ್ಣನ್ ಮತ್ತು ಮಲ್ಲಿಕಾರವರಿಂದ ಭರತನಾಟ್ಯದಲ್ಲಿ ಪ್ರಾವೀಣ್ಯತೆಯನ್ನು ಪಡೆದು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಿದೆ. ಮುಕುಂದ ಕೃಪಾದಲ್ಲಿ ದಿನ ಭಟ್ಟರಿಂದ ಸಂಗೀತ ಜೊತೆಗೆ ಅಲ್ಲೇ ವಸ್ತ್ರ ವಿನ್ಯಾಸದ ತರಗತಿ, ಉಡುಪಿಯ ಭಜನೆಗೆ ಹೆಸರಾದ ಯಶೋದಕ್ಕರವರ ಜೊತೆ ಅಖಂಡ ಭಜನೆ, ಏಕ ಭಜನೆ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವಿಕೆ.
ಎಸೆತ, ಜಿಗಿತ, ಓಟ, ಹರ್ಡಲ್ಸ್, ಕೊಕೊ, ಇತ್ಯಾದಿ ಶಾಲಾ ಕ್ರೀಡೆಗಳಲ್ಲೂ ಸರೋಜರವರದ್ದು ಎತ್ತಿದ ಕೈ. ಹಲವಾರು ಸ್ಪರ್ಧೆಗಳಿಗೆ ಸೈ ಪ್ರಶಸ್ತಿಗಳಿಗೆ ಜೈ. ಆ ವೇಳೆ ಕೊಳಲು ಮತ್ತು ವೀಣೆ ಕಲಿಯಬೇಕೆಂಬ ಅತಿಯಾದ ಆಸೆಯಿಂದ ಒಮ್ಮೆ ಅಪ್ಪನಲ್ಲಿ ಬೇಡಿಕೆ ಇಟ್ಟಾಗ ಅಪ್ಪ ಅಂದರು “ಮಗಳೇ…ನಿನ್ನ ವೀಣೆ ಹಾಗೂ ಕೊಳಲು ಕಲಿಯುವ ಆಸೆಗಳೇನೋ ಒಳ್ಳೆಯದೇ ಆದರೆ ಇದಕ್ಕೆಲ್ಲ ಹಣ ಎಲ್ಲಿಂದ ತರಲಿ” ಎನ್ನುವಾಗ ಸರೋಜಾ ದೇವಿಯವರ ಮಾತು ಮೌನವಾಯಿತು.
ಅಂತಹ ತ್ಯಾಗದ ಸಂದರ್ಭ ಅವರ ಬಾಳಲ್ಲಿ ಆಗಾಗ ಒದಗಿ ಬರುತ್ತಿತ್ತು. ವೈದ್ಯರಾಗಬೇಕೆಂಬ ಒಂದು ದೊಡ್ಡ ಕನಸು ಮನಸಲ್ಲಿತ್ತು. ಮೈಸೂರಿನ ಆಯುರ್ವೇದ ವಿದ್ಯಾಲಯದಲ್ಲಿ ಮೆರಿಟ್ನಿಂದ ಸೀಟು ಸಿಕ್ಕಿ ಒಂದು ವರ್ಷದ ವ್ಯಾಸಂಗ ಮುಗಿಸಿ ಯಾಗಿತ್ತು ಆದರೆ ನಂತರ ಮುಂದಡಿ ಇಡಲು ಅಗತ್ಯದ ಹಣ ಹೊಂದಿಸಲಾಗಿದೆ ಕನಸಿನ ಮೂಟೆಯನ್ನು ಮನದ ಕವಾಟಿನೊಳಗಿಟ್ಟು ಅರ್ದದಲ್ಲಿಯೇ ಹಾಗೆಯೇ ಭದ್ರವಾಗಿ ಮುಚ್ಚಿಟ್ಟರು. ಆ ಬಾಗಿಲನ್ನು ಇಂದಿಗೂ ತೆರೆಯಲಾಗಲೇ ಇಲ್ಲ.
ಎಂಟನೇ ತರಗತಿಯಲ್ಲಿ ಓದುತ್ತಿದ್ದ ಸಮಯ ಚುರುಕಿನ ಹುಡುಗಿಯೊಬ್ಬಳ ಅನ್ವೇಷಣೆಯಲ್ಲಿದ್ದ ಬೆಂಗಳೂರಿನ ನಾಟಕ ತಂಡ ನೃತ್ಯ ಗುರು ಮಾಸ್ಟರ್ ಕಣ್ಣನ್ ರನ್ನು ಕೇಳಿಕೊಂಡಾಗ ಗುರುಗಳ ಒತ್ತಾಯಕ್ಕೆ ಮಣಿದು ಅಪ್ಪ ಅಮ್ಮನ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಪಡೆದು ‘ದಿವ್ಯ ಜ್ಯೋತಿ’ ಎಂಬ ನಾಟಕದಲ್ಲಿ ಜ್ಯೋತಿಯಾಗಿ ರಂಗಭೂಮಿಯ ಪ್ರವೇಶ ಮಾಡಿದ್ದಾಗಿತ್ತು. ಆ ಒಂದು ಪ್ರಥಮ ಅಭಿನಯವೇ ರಾಜ್ಯ ಮಟ್ಟದ ಶ್ರೇಷ್ಠ ನಟಿ ಪ್ರಶಸ್ತಿ ತಂದು ಕೊಟ್ಟದ್ದು ಮನದೊಳಗಿನ ಕಲಾವಿದೆಗೆ ಹೂಮಳೆಗರೆದಂತಾಗಿತ್ತು.
ಆ ನಂತರ ಮಂಗಳೂರಿನ ಕಲಾ ಕಿರಣ್ ಆರ್ಟ್ಸ್ ಸಂಸ್ಥೆಯ ‘ರಾಜಶೇಖರ’ ನಾಟಕದ ರಾಜಕುಮಾರಿ ಹೇಮಾಂಬಿಕೆಯ ಪಾತ್ರ ಮಾಡುವ ಅವಕಾಶ ಸಿಕ್ಕಿತು. ಅಲ್ಲಿಂದ ರಂಗಭೂಮಿ ಉಡುಪಿಯ ಖ್ಯಾತ ಸಂಗೀತ ನಿರ್ದೇಶಕ ಕೆ. ರಾಘವೇಂದ್ರ ಭಟ್ಟರ ಪರಿಚಯದ ಮೂಲಕ ರಂಗಭೂಮಿ ಉಡುಪಿಯ ‘ತಲೆದಂಡ’ ಹಾಗೂ ಆನಂದ ಗಾಣಿಗರ ನಿರ್ದೇಶನದ 12 ಪ್ರದರ್ಶನ ಕಂಡ ‘ಜೋಕುಮಾರಸ್ವಾಮಿ’ ನಾಟಕದ ಗುರ್ಕಾರ್ತಿಯ ಪಾತ್ರ ಮತ್ತೆ ರಾಜ್ಯ ಮಟ್ಟದ ಪ್ರಶಸ್ತಿ ತಂದು ಕೊಟ್ಟಿತ್ತು. ಹೀಗೆ ಓದಿನ ಜೊತೆಗೆ ನಾಟಕ ರಂಗದ ನಡಿಗೆ ಹಿರಿಯರಿಗೆ ಬಂಧುಗಳಿಗೆ ಇಷ್ಟವಿಲ್ಲದಿದ್ದರೂ ಈ ಮೂಲಕ ಬರುತ್ತಿದ್ದ ಅರೆಕಾಸು ಅಪ್ಪನಿಗೆ ಸಂಸಾರ ನಿರ್ವಹಣೆಗೆ ಸಣ್ಣ ಮಟ್ಟಿಗೆ ಅನುಕೂಲವಾಗುತ್ತಿದ್ದುದರಿಂದ ನಿರಂತರವಾಗಿ ನಡೆಯತೊಡಗಿತು. ಅದೇ ರೀತಿ ಒಂದರ ನಂತರ ಒಂದರಂತೆ ತುಳು ಮತ್ತು ಕನ್ನಡ ರಂಗಭೂಮಿಯ ನಾಟಕ ಸಂಸ್ಥೆಗಳು ಸರೋಜಾ ದೇವಿಯವರನ್ನು ಕೂಗಿ ಕೂಗಿ ಕರೆದವು. ಹತ್ತನೇ ತರಗತಿಯಲ್ಲಿ ಇದ್ದಾಗಲೇ ಕಲಾ ಜಗತ್ತು ಮುಂಬೈನ ‘ವಸುಂದರಾ’ ನಾಟಕಕ್ಕಾಗಿ ಮುಂಬೈಗೆ ತಾಯಿಯೊಂದಿಗೆ ಹೋಗಿ ಬರುವ ಅವಕಾಶ ಸಿಕ್ಕಿತ್ತು. ಉಡುಪಿ ಹಾಗೂ ಮಂಗಳೂರು ಸುತ್ತಮುತ್ತಲಿನ ಹಲವಾರು ಸಂಸ್ಥೆಗಳ ಹೆಸರಾಂತ ನಿರ್ದೇಶಕರ ತುಳು ಮತ್ತು ಕನ್ನಡ ನಾಟಕಗಳಲ್ಲಿ ಅಭಿನಯಿಸುವ ಅವಕಾಶಗಳು ಸಾಲಾಗಿ ಬರುತ್ತಲೇ ಇದ್ದವು.. ನಿರಾಕರಿಸಲಾಗದ ಪಯಣ ದೂರ ದೂರ ಸಾಗಿತ್ತು.
ಈ ನಡುವೆ ಸರೋಜಾ ದೇವಿಯವರ 22ರ ಹರೆಯದ ಸಮಯದಲ್ಲಿ ಪಿತೃ ವಿಯೋಗವಾಯಿತು. ಆನಂತರ ಅಮ್ಮನೇ ಜವಾಬ್ದಾರಿಯನ್ನು ಹೊತ್ತು ನಿಂತು ಮಗಳ ಮದುವೆ ನಡೆಸಿಕೊಟ್ಟರು. ಪತಿ ಮೂಲತಃ ವಿಟ್ಲದವರಾದ ಹರೀಶ್ ಮುಂಬೈಯಲ್ಲಿ ಖ್ಯಾತ ಮೀಡಿಯಾ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಗಂಡನ ಮನೆಯವರು ಕಲಾ ಆರಾಧಕರಾಗಿದ್ದರಿಂದ ಪ್ರಿಯ ಸರೋಜಾ ದೇವಿಯವರ ಆಶಯಗಳಿಗೆ ಎಲ್ಲೂ ದಕ್ಕೆ ಉಂಟಾಗಲಿಲ್ಲ. ಅವರೆಲ್ಲರ ಪ್ರೋತ್ಸಾಹ ಕಲಾ ಜೀವನದಲ್ಲಿ ಒಂದು ದೊಡ್ಡ ಸಾಧನೆ ಮಾಡಲು ಮುಂದುವರೆಸಲು ಅನುವು ಮಾಡಿಕೊಟ್ಟಿತು.
ಮನೆ ಮಗಳಂತೆ ನಡೆಸಿಕೊಳ್ಳುತ್ತಿದ್ದ ಬಹಳಷ್ಟು ನಿರ್ದೇಶಕರು, ಮನಸ್ಸಿಗೆ ಮುದ ನೀಡಿದ ಹಲವು ಪಾತ್ರಗಳು ಹಾಗೂ ನಾಟಕಗಳು, ಏಕಾಂತದಲ್ಲಿ ಮೆಲುಕು ಹಾಕಲು ಬಹಳ ಖುಷಿ ನೀಡುತ್ತವೆಯಂತೆ. ಅಂತಹ ನಾಟಕ ಮತ್ತು ಪಾತ್ರಗಳ ಪೈಕಿ…’ಕಲಿ ಕಂಠೀರವ’, ‘ರಣ ದುಂದುಭಿ’ ನಾಟಕದ ನರ್ತಕಿ, ‘ಮಹಾರಾಣಿ’, ‘ಭಾರತ ಮಾತೆ’ ಪಾತ್ರ ನೀಡಿದ ಅತ್ಯಂತ ಗೌರವ ಪಾತ್ರರಾದ ಕಲಾ ತಪಸ್ವಿ ಮಂಗಳೂರಿನ ಕೆ. ಬಾಲಕೃಷ್ಣ ರಾವ್ ಮತ್ತು ಉಡುಪಿ ಕೊಡವೂರಿನ “ಶ್ರೀ ಗುರು ರಾಘವೇಂದ್ರ ಮಹಾತ್ಮೆ” ನಾಟಕದಲ್ಲಿ ಸರಸ್ವತಿಯಾಗಿ ನಟಿಸಲು ಅವಕಾಶ ನೀಡಿದ ದಕ್ಷ ನಿರ್ದೇಶಕ ಕೆ. ವೆಂಕಟಾಚಲ ಭಟ್ ಎಂದಿಗೂ ಇವರ ಮನಸ್ಸಿನಲ್ಲಿ ಪ್ರಾತಃ ಸ್ಮರಣೀಯರು. ಲೀಲಾಧರ ಶೆಟ್ಟಿ ಯವರ ‘ಸವಿತಾ’ , ಈಶ್ವರ ಚಿಟ್ಪಾಡಿಯವರ ‘ದೊಂಬನ ಪರಕೆ’, ಸುಧಾಕರ ಬನ್ನಂಜೆಯವರ ‘ಮಾಜಂದಿ ಕುಂಕುಮ’, ಅಭಿನಯ ಮಂಟಪದ ‘ಕೋಟಿ ಚೆನ್ನಯ’ ನಾಟಕದ ದೇಯಿ ಬೈದೆತಿ, ಕಿನ್ನಿಗಾರು, ನಾಟ್ಯ ರಾಣಿ ‘ಶಾಂತಲೆ’ಯಲ್ಲಿ ಶಾಂತಲೆಯಾಗಿ, ‘ಸರ್ಪ ಚುಂಬನ’ದ ಮಾಲತಿಯಾಗಿ, ಜಗದೀಶ್ ಶೆಟ್ಟಿ ಕೆಂಚನಕೆರೆಯವರ ‘ಸವಿತಾ’ ನಾಟಕದ ಕುಸುಮ ಪಾತ್ರ, ಪಲ್ಲವಿ ಆರ್ಟ್ಸ್ ಮುಂಬೈಯ ಇವರ ‘ಶಾಪಿತ’ ನಾಟಕದ ಕುಂತಿ, ಮುಂಬೈ ಮೋಹನ್ ದಾಸ ಮುನ್ನೂರು ಇವರ ‘ಖರ್ಚಿಗ್ ಕಾಸಿಜ್ಜಿ’ ನಾಟಕದ ಪಾರ್ವತಿ ಪಾತ್ರ, ‘ಸತ್ಯಹರಿಶ್ಚಂದ್ರ’ ನಾಟಕದ ಚಂದ್ರಮತಿ, ರಂಗಚಾವಡಿಯ ‘ಪಾಂಚಾಲಿ’ ಹೀಗೆ ಊರಿನ ಮತ್ತು ಮುಂಬೈಯ ಹೆಸರಾಂತ ಎಲ್ಲ ನಿರ್ದೇಶಕರುಗಳ ತಂಡದ ನಾಟಕಗಳಲ್ಲಿ ಅಭಿನಯಿಸಿದ ‘ಅಭಿನಯ ಶಾರದೆ’ ಸರೋಜಾ ದೇವಿಯವರು.
ಈವರಗೆ ಅಭಿನಯಿಸಿದ ನಾಟಕಗಳು ಸೆಂಚುರಿಯ ಅಂಚಿನಲ್ಲಿದೆ… ಪ್ರದರ್ಶನಗಳು ಸದ್ಯದಲ್ಲೇ ತ್ರಿದಶಕದ ಗಡಿ ದಾಟಲಿದೆ.
ಸರೋಜಾ ದೇವಿಯವರು ತಾವೇ ರಚಿಸಿದ – ‘ಧಾರೆ’, ‘ಪಶ್ಚಾತಾಪ’, ‘ಅದಲ್ ಬದಲ್’ ಇತ್ಯಾದಿ ನಾಟಕಗಳನ್ನು ನಿರ್ದೇಶಿಸಿ ಉದಯೋನ್ಮುಖ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ.
‘ಅಸಲಿ – ನಕಲಿ’, ‘ಜ್ವಾಲೆ’, ‘ಸರ್ಪ ಚುಂಬನ’, ‘ವಿಜಯ್ ವಿಕ್ರಂ’, ‘ಭಾಗ್ಯ ತಂದ ಭಾರತಿ’, ‘ಸರ್ವಧರ್ಮ ಸಮನ್ವಯತೇ’ (ನೃತ್ಯ ನಾಟಕ) ಎಂಬ ನಾಟಕಗಳನ್ನು ನಿರ್ದೇಶಿಸಿ ಉತ್ತಮ ನಿರ್ದೇಶಕರ ಸಾಲಿನಲ್ಲಿ ತಾವೂ ಸೇರಿಕೊಂಡಿದ್ದಾರೆ. ಮುಂಬೈಗೆ 1991ರಲ್ಲಿ ಪತಿಯ ಮನೆಗೆ ಬಂದ ಮೇಲೆ ಗುರು ವಿಜಯ ಮೆನನ್ ಇವರ ನಿರ್ದೇಶನದಲ್ಲಿ ‘ಮೋಹಿನಿ ಅಟ್ಟಂ’ ಮತ್ತು ವಸಂತ ಸುಬ್ಬಲಕ್ಷ್ಮೀ ಅವರಿಂದ ಭರತ ನಾಟ್ಯವನ್ನು ಮುಂದುವರೆಸಿ ವಿದ್ವತ್ ಪ್ರವೇಶಿಸಿ ಆರಂಗೆಟ್ರಂ ಅಲ್ಲದೆ ಹಲವು ಕಾರ್ಯಕ್ರಮಗಳನ್ನು ನೀಡಿದ ಸಂತಸ ಇವರಿಗಿದೆ.
ಯಕ್ಷಗಾನ ಲೋಕದ ಹಿರಿಯ ಕಲಾವಿದರಾದ ಲಕ್ಷ್ಮೀನಾರಾಯಣ ಪುಲ್ಯ, ಪ್ರಕಾಶ್ ಪಣಿಯೂರು ಮತ್ತು ಜಯಂತ್ ಕುಮಾರ್ ತೋನ್ಸೆ ಇವರಿಂದ ಯಕ್ಷ ಹೆಜ್ಜೆಗಳನ್ನು ಕಲಿತು ‘ವೈಷ್ಣವಿ ದೇವಿ’, ಪ್ರ’ಭಾವತಿ’, ‘ರಾವಣ’ ಮುಂತಾದ ಪಾತ್ರಗಳನ್ನು ನಿರ್ವಹಿಸಿ ಗುರುಗಳಿಂದ ಶಹಭಾಷ್ ಎನಿಸಿ ಕೊಂಡಿದ್ದಾರೆ.
ಚಂದನ ಮತ್ತು ಉದಯ ಟಿವಿಯ ‘ವೈಷ್ಣೋದೇವಿ ಮಹಾತ್ಮೆ’, ‘ಏಕತಾ ಕಪೂರ್ ರವರ ‘ಯುಗಾದಿ’, ಸಂಜಯ ಮೊಕಾಶಿಯವರ ‘ನ್ಯಾಯ ಗುರು’ ಧಾರವಾಹಿಗಳ ಇವರ ಅಭಿನಯ ಒಂದಷ್ಟು ಜನರಿಂದ ಮನ್ನಣೆ ಪಡೆದಿದ್ದರೆ ಚಲನಚಿತ್ರಗಳಾದ ‘ಅನುರಾಗ ಬಂಧನ’, ‘ಜ್ಯೋತಿ ಬೆಳಗಿತು’, ‘ಗುರುಭಕ್ತಿ’, ‘ಕರಿಮಣಿ ಕಟ್ಟಂದಿ ಕಂಡನಿ’ ಮುಂತಾದವುಗಳು ಇವರನ್ನು ಬೆಳ್ಳಿ ಪರದೆಯಲ್ಲಿ ಮಿನುಗುವಂತೆ ಮಾಡಿದೆ.
ಇನ್ನು ಪ್ರಶಸ್ತಿ ಪುರಸ್ಕಾರಗಳಂತೂ ಇವರ ಮನೆಯ ಗೋಡೆಗಳ ತುಂಬಾ ತುಂಬಿಕೊಂಡಿವೆ. ಸುಮಾರು 15 ಮಿಕ್ಕಿದ ಜಿಲ್ಲಾ ಮತ್ತು ರಾಜ್ಯ ಮಟ್ಟದ ಶ್ರೇಷ್ಟ ನಟಿ ಪ್ರಶಸ್ತಿಗಳು, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ – ‘ಅಭಿನಯ ಶಾರದೆ’, ‘ಶೃಂಗಾರ ರಾಣಿ’, ‘ಅಭಿನವ ಭಾರ್ಗವಿ’, ‘ಭಾರತೀ ಕೂಡ್ಲೇಕರ್ ಪ್ರಶಸ್ತಿ’, ಜೀವನದಲ್ಲಿ ಅಳಿಯದೇ ಉಳಿಯುವ ನೆನಪಿನ ಬುತ್ತಿಗಳು.
ಸಮಯ ಸಿಕ್ಕಾಗ ಸರೋಜಾರವರು ಹಲವಾರು ಚಿತ್ರಗಳಿಗೆ, ಜಾಹಿರಾತುಗಳಿಗೆ, ಆಕಾಶವಾಣಿ ಕಾರ್ಯಕ್ರಮಗಳಿಗೆ ಕಂಠ ದಾನ ಮಾಡಿದ್ದೂ ಇದೆ. ಭಾಷಾ ಅನುವಾದ ಜಿಂಗಲ್ ಹಾಡುವುದು ಡಾಕ್ಯುಮೆಂಟರಿಗಳಲ್ಲಿ ಅಭಿನಯಿಸುವುದು ಹೀಗೆ ಏನಾದರೂ ಮಾಡುತ್ತಿದ್ದರೇನೇ ಮನಸ್ಸಿಗೆ ಖುಷಿಯಂತೆ.
ಸುಶೀಲ್ ಹಾಗೂ ಸೋಹಿಲ್ ಇವರ ಸುಂದರ ಸಂಸಾರದ ಎರಡು ಕಣ್ಣುಗಳು. ವಿದ್ಯೆ, ವಿನಯ, ವೃತ್ತಿಯ ಯಶಸ್ಸಿನತ್ತ ಹೆಜ್ಜೆ ಇಟ್ಟು ಅಪ್ಪ ಅಮ್ಮನ ಆಶಯಗಳಿಗೆ ಬಿಂಬವಾಗಿ ನಿಂತವರು ಇವರು. ಪತಿ ಹರೀಶ್ ವಿಠಲ್ ಇವರು ಪ್ರಿಯ ಸರೋಜಾ ದೇವಿಯವರ ಸಾಧನೆಗಳಲ್ಲಿ ಖುಷಿಯನ್ನು ಕಂಡುಕೊಂಡವರು. ಹೀಗೆ ರಂಗಭೂಮಿಯನ್ನು ಬಾಳ ದೀವಟಿಗೆಯಾಗಿಸಿಕೊಂಡು ರಂಗ ಸಂಸ್ಥೆ ಹಾಗೂ ನಿರ್ದೇಶಕರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತನ್ನ ಸಂಸಾರ ಜೀವನಕ್ಕೆಲ್ಲೂ ಚ್ಯುತಿ ಬಾರದಂತೆ ಅಭಿನಯ ಸರಸ್ವತಿಯನ್ನು ತನ್ನಲ್ಲಿ ಆವಾಹಿಸಿಕೊಂಡು ತನ್ನ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರಿಗೆ ಪಾತ್ರದ – ಭಾವನೆಗಳ ರಸದೌತಣವನ್ನು ಉಣಬಡಿಸುತ್ತಿರುವ ಮಹಾನ್ ಕಲಾವಿದೆ ಪ್ರಿಯ ಸರೋಜಾ ದೇವಿಯವರಿಗೆ ‘ಸಂಸ್ಕೃತಿ ವಿಶ್ವ ಪ್ರತಿಷ್ಠಾನ’ (ರಿ.) ಉಡುಪಿ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಉಡುಪಿ ಶಾಖೆ ವಿಶ್ವ ರಂಗ ದಿನಾಚರಣೆಯ ಅಂಗವಾಗಿ ಮಾರ್ಚ್ 26ರಂದು ನೀಡಿ ಗೌರವಿಸಲಿದೆ “ಮಲಬಾರ್ ವಿಶ್ವರಂಗ ಪುರಸ್ಕಾರ 2025. ”
ರಾಜೇಶ್ ಭಟ್ ಪಣಿಯಾಡಿ
ಸಂಚಾಲಕರು ಮಲಬಾರ್ ವಿಶ್ವ ರಂಗ ಪುರಸ್ಕಾರ.