ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆ ಇವರ ವತಿಯಿಂದ ಸಾಹಿತಿ ಮೇಟಿ ಮುದಿಯಪ್ಪ ನೆನಪಿನ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2025’ ಪ್ರದಾನ ಸಮಾರಂಭವನ್ನು ದಿನಾಂಕ 22 ನವೆಂಬರ್ 2025ರಂದು ಸಂಜೆ 3-30 ಗಂಟೆಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಸಾಹಿತಿ ಡಾ. ಮಾಧವಿ ಭಂಡಾರಿ ಇವರು ಸಭಾಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚನ್ನಪ್ಪ ಅಂಗಡಿ ‘ಸಮಗ್ರ ಸಾಹಿತ್ಯ’, ಡಾ. ನಿಕೇತನ ‘ಸಂಶೋಧನೆ ವಿಮರ್ಶೆ’, ಮುದಲ್ ವಿಜಯ್ ‘ಕಾವ್ಯ’ ಇವರಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2025’ ಪ್ರದಾನ ಮಾಡಲಾಗುವುದು.

ಚನ್ನಪ್ಪ ಅಂಗಡಿ : ಹಾನಗಲ್ ತಾಲೂಕಿನ ಬಮ್ಮನಹಳ್ಳಿಯಲ್ಲಿ ಹುಟ್ಟಿದ ಚನ್ನಪ್ಪ ಅಂಗಡಿಯವರು ಪ್ರಸ್ತುತ ಧಾರವಾಡದಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವರು. ಇವರು ಸುಮಾರು 12 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದು ಸುಮಾರು 17 ಸಂಪಾದಿತ ಕೃತಿಯನ್ನು ಪ್ರಕಟಿಸಿದ್ದಾರೆ. ಇಷ್ಟರವರೆಗೆ ಪ್ರಮುಖವಾದ ಪ್ರತಿಷ್ಠಿತ 28 ಪ್ರಶಸ್ತಿಗಳನ್ನು ಇವರು ಸಂಪಾದಿಸಿದ್ದು, ಇವುಗಳೊಂದಿಗೆ ಇವರಿಗೆ ಸಿಕ್ಕಿದ ಗೌರವ ಪ್ರಶಸ್ತಿಗಳು ಅಗಣಿತ. ಇವರು ಕಥೆ ವಿಮರ್ಶೆ ಕವನಗಳು ಮಾತ್ರವಲ್ಲದೆ ಅನೇಕ ವಿಷಯಾಧಾರಿತ ಬಿಡಿ ಲೇಖನಗಳನ್ನೂ ಬರೆದಿರುವರು. ಅನೇಕ ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಗಾಗಿ ಭಾಗವಹಿಸಿದ ಹೆಗ್ಗಳಿಕೆ ಇವರದ್ದು. ಕೇಂದ್ರ ಸಾಹಿತ್ಯ ಅಕಾಡೆಮಿ ಹೊಸದಿಲ್ಲಿ ಇದರ ಸಲಹಾ ಸಮಿತಿಯ ಸದಸ್ಯರು ಆಗಿದ್ದು, ಅನೇಕ ಸಂಘಟನೆಗಳನ್ನು ಕಟ್ಟಿ ಸಾಹಿತ್ಯ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಇವರ ಒಂದು ಕಥೆಯು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ಬೆಳಗಾವಿ ಇದರಲ್ಲಿ ಒಂದು ಪಠ್ಯವಾಗಿಯೂ ಸೇರ್ಪಡೆಯಾಗಿರುತ್ತದೆ. ಇವರ ಒಂದು ಕವನ ಧಾರವಾಡ ಕೃಷಿ ವಿದ್ಯಾಲಯದ ಗೀತೆಯಾಗಿ ಆಯ್ಕೆಯಾಗಿದ್ದು ಅದು ಅಲ್ಲಿನ ಪ್ರತೀ ಕಾರ್ಯಕ್ರಮದಲ್ಲೂ ಪ್ರದರ್ಶಿಸಲ್ಪಡುತ್ತಿದೆ. ಹೀಗೆ ಇವರ ಬಗ್ಗೆ ಇನ್ನಷ್ಟು ವಿವರವಾಗಿ ಹೇಳಲು ಹೋದರೆ ಅನೇಕ ಸಾಧನೆಗಳ ಸರದಾರ ಇವರು.
ಡಾ. ನಿಕೇತನ : ಡಾ. ನಿಕೇತನ ಇಷ್ಟರವರೆಗೆ ಅನೇಕ ಕಾಲೇಜುಗಳಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ ಪ್ರಸ್ತುತ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇದರ ಕನ್ನಡ ವಿಭಾಗದ ಪ್ರಮುಖರು ಆಗಿ ಕಾರ್ಯನಿರ್ವಹಿಸುತ್ತಿರುವರು. ಮಂದಾರ ರಾಮಾಯಣದ ಸ್ವರೂಪ ಮತ್ತು ಅನನ್ಯತೆ ಎನ್ನುವ ವಿಷಯದ ಮೇಲೆ ಬರೆದ ಮಹಾಪ್ರಬಂಧಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಇವರು ಇಷ್ಟರವರೆಗೆ ಸುಮಾರು 11 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಅಗಣಿತ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ. ಮಣಿಪಾಲದ ಮಾಹೆ ಹಾಗೂ ಹಂಪಿ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ. ಮಾರ್ಗದರ್ಶಕರಾಗಿಯೂ ಮಾನ್ಯತೆಯನ್ನು ಪಡೆದಿದ್ದಾರೆ. ಉತ್ತಮ ಲೇಖಕಿ, ಸಂಘಟಕಿ ಹಾಗೂ ವಾಗ್ಮಿ ಎಂಬ ಅರ್ಹತೆಯಿಂದ ಪಡೆದ ಅನೇಕ ಪ್ರಶಸ್ತಿಗಳು ಇವರ ಸಂಪಾದನೆಯಾಗಿದೆ.

ಮುದಲ್ ವಿಜಯ್ : ಮುದಲ್ ವಿಜಯ್ ಇವರು ಬೆಂಗಳೂರಿನ ಯಶವಂತಪುರದಲ್ಲಿ ಜನಿಸಿದರು. ಮುಂದೆ ವಿಜ್ಞಾನ ಪದವೀಧರರಾದರೂ ಮಾತೃಭಾಷೆ ತಮಿಳು ಆದರೂ ಕನ್ನಡ ಭಾಷಾ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಇದ್ದುದ್ದರಿಂದ ಕನ್ನಡದಲ್ಲಿ ಅಪಾರ ಸಾಹಿತ್ಯ ಕೃಷಿಗಳನ್ನು ಮಾಡಿರುತ್ತಾರೆ. ಡಾಕ್ಟರ್ ಸಿದ್ದಲಿಂಗಯ್ಯ ಹಾಗೂ ಶೂದ್ರ ಶ್ರೀನಿವಾಸ್ ರವರಿಗೆ ಅತ್ಯಂತ ಆಪ್ತರಾಗಿದ್ದು ಅವರುಗಳ ಮಾರ್ಗದರ್ಶನದಲ್ಲಿ ಒಬ್ಬ ಲೇಖಕರಾಗಿ ರೂಪಗೊಂಡಿರುತ್ತಾರೆ. ಅನೇಕ ಕಾದಂಬರಿಗಳನ್ನು ಬರೆದಿದ್ದರೂ ಕವನಗಳಲ್ಲಿ ಅತ್ಯಂತ ಆಸಕ್ತಿ ಇರುವುದರಿಂದ ಸುಮಾರು ನಾಲ್ಕು ಕಾದಂಬರಿಗಳನ್ನೂ ಹತ್ತರಷ್ಟು ಕವನಸಂಕಲನಗಳನ್ನೂ ಬರೆದು ಪ್ರಕಟಿಸಿದ್ದಾರೆ. ತಮ್ಮ ಬರವಣಿಗೆಯ ಮೂಲಕ ಸುಮಾರು ಎಂಟರಷ್ಟು ಪ್ರಮುಖ ಪ್ರಶಸ್ತಿಗಳನ್ನೂ ಹಾಗೂ ಅಗಣಿತ ಇತರ ಪ್ರಶಸ್ತಿಗಳನ್ನು ಪಡೆದು ಇಂದು ನಮ್ಮ ಸಂಸ್ಥೆಯಿಂದಲೂ ಕಾವ್ಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ನಮಗೂ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಸಾಹಿತ್ಯ ಲೋಕದ ಇಂತಹ ಅಮೂಲ್ಯ ರತ್ನಗಳನ್ನು ಗುರುತಿಸಿ ಇದೇ ರೀತಿಯಲ್ಲಿ ಪ್ರತಿವರ್ಷವೂ ಪುರಸ್ಕರಿಸುತ್ತಿರುವುದು ನಮ್ಮ ಸಂಸ್ಥೆಗಳ ಹೆಗ್ಗಳಿಕೆಯಾಗಿದೆ.

