ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ‘ಮಳಲಿ ವಸಂತಕುಮಾರ್ ಸಾಹಿತ್ಯ ದತ್ತಿನಿಧಿ’ ಪುರಸ್ಕಾರಕ್ಕೆ ಮಂಡ್ಯ ಜಿಲ್ಲೆಯ ಹಿರಿಯ ಬರಹಗಾರ ‘ರಾಗೌ’ ಕಾವ್ಯನಾಮದ ಡಾ. ರಾಮೇಗೌಡ ಇವರು ಆಯ್ಕೆಯಾಗಿದ್ದಾರೆ. ‘ಮನುಕುಲದ ಮಾತುಗಾರ’ ಎಂದೇ ಹೆಸರಾಗಿದ್ದ ಡಾ. ಮಳಲಿ ವಸಂತ ಕುಮಾರ್ ಇವರು ಶ್ರೇಷ್ಠ ವಾಗ್ಮಿಗಳು ಮತ್ತು ಬರಹಗಾರರೂ ಆಗಿದ್ದರು. ಕನ್ನಡಪರ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಇವರು ಬರಹಗಾರರನ್ನು ಪ್ರೋತ್ಸಾಹಿಸುವಲ್ಲಿ ಸಿದ್ದ ಹಸ್ತರು. ಇವರ ಹೆಸರಿನಲ್ಲಿ ಕುಟುಂಬ ವರ್ಗದವರು ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ವಿಶ್ವಾಸವಿಟ್ಟು ದತ್ತಿ ನಿಧಿಯನ್ನು ಸ್ಥಾಪನೆ ಮಾಡಿದ್ದು ಬರಹಗಾರರಿಗೆ, ಕನ್ನಡಪರ ಹೋರಾಟಗಾರರಿಗೆ ಈ ಪುರಸ್ಕಾರವನ್ನು ನೀಡಲು ವಿನಂತಿಸಿದ್ದಾರೆ.
2024ನೇ ಸಾಲಿನ ‘ಮಳಲಿ ವಸಂತ ಕುಮಾರ್ ಸಾಹಿತ್ಯ ಪ್ರಶಸ್ತಿ’ಯನ್ನು ಪಡೆದಿರುವ ಡಾ. ರಾಮೇಗೌಡ (ರಾಗೌ) ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಈರೇಗೌಡನ ದೊಡ್ಡಿ ಮೂಲದವರು. 37 ವರ್ಷಗಳ ಕಾಲ ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕವಿತೆ, ಮಕ್ಕಳ ಸಾಹಿತ್ಯ, ನಾಟಕ, ವಿಮರ್ಶೆ, ಜಾನಪದ, ಗ್ರಂಥ ಸಂಪಾದನೆ ಮೊದಲಾದ ಕ್ಷೇತ್ರಗಳಲ್ಲಿ ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2005ರಲ್ಲಿ ಅವರಿಗೆ ‘ಅಭಿಜಾತ’ ಗೌರವ ಗ್ರಂಥ ಸಮರ್ಪಿತವಾಗಿದ್ದು ಹಲವಾರು ಪುರಸ್ಕಾರಗಳು ಲಭಿಸಿವೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ, ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಮತ್ತು ದತ್ತಿ ದಾನಿಗಳ ಪರವಾಗಿ ಶ್ರೀಮತಿ ಶಾಂತ ವಸಂತ ಕುಮಾರ್ ಭಾಗವಹಿಸಿದ್ದರು. ಪ್ರಶಸ್ತಿ ಪುರಸ್ಕೃತರಾದ ಡಾ. ರಾಮೇಗೌಡ (ರಾಗೌ)ರನ್ನು ವಿಶೇಷವಾಗಿ ಅಭಿನಂದಿಸಿರುವ ನಾಡೋಜ ಡಾ. ಮಹೇಶ ಜೋಶಿಯವರು ಪುರಸ್ಕೃತರ ಸಾಧನೆಯ ಹಾದಿ ಇನ್ನಷ್ಟು ಉಜ್ವಲವಾಗಲಿ ಎಂದು ಆಶಿಸಿದ್ದಾರೆ.