ನಮ್ಮ ಮನಸ್ಸಿಗೊಂದು ಭಾಷೆಯಿದೆ. ನಾವು ಯೋಚಿಸುವುದು, ಕನಸು ಕಾಣುವುದು ಈ ಭಾಷೆಯಲ್ಲೇ. ಅದು ನಮ್ಮ ಮಾತೃಭಾಷೆ. ಕನ್ನಡದಲ್ಲಿ ಮಾತನಾಡುವವರು ಕನ್ನಡ ಪುಸ್ತಕ ಓದುವವರು ಕಡಿಮೆಯಾಗುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಈ ಕಾಲದಲ್ಲಿ ಕನ್ನಡದಲ್ಲಿ ಪುಸ್ತಕ ಪ್ರಕಟಿಸುತ್ತಿರುವ ಪ್ರಕಾಶಕರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಹಾಗಾದರೆ ಓದುವವರೂ ಇರಲೇ ಬೇಕಲ್ಲಾ. 100 ವರ್ಷಗಳ ಹಿಂದೆ ಖ್ಯಾತ ಸಾಹಿತಿ ಎ.ಆರ್. ಕೃಷ್ಣ ಶಾಸ್ತ್ರಿಗಳು ಕನ್ನಡಿಗರು ಕನ್ನಡವನ್ನು ನಿರ್ಲಕ್ಷಿಸುತ್ತಿರುವುದನ್ನು ಕಂಡು ದುಃಖದಿಂದ “ನಿಮಗೆ ಕನ್ನಡ ಬೇಡವೆಂದಾದರೆ ಈಚೆ ಅರಬೀ ಸಮುದ್ರವಿದೆ. ಆಚೆ ಬಂಗಾಳಕೊಲ್ಲಿ ಇದೆ. ಗುಡಿಸಿ ಹಾಕಿ” ಎಂದು ಹೇಳಿದ್ದರು. ಕನ್ನಡ ಇನ್ನಷ್ಟು ಸಮೃದ್ಧವಾಗಿ ಬೆಳೆಯಿತೇ ವಿನಃ ಯಾರೂ ಅದನ್ನು ಗುಡಿಸಿ ಹಾಕುವ ಕೆಲಸ ಮಾಡಿಲ್ಲ. ಅದು ಕನ್ನಡದ ಶಕ್ತಿ. ಇಂದು ಅಂತರ್ಜಾಲ ಮುಂತಾದ ಹೊಸ ಹೊಸ ತಂತ್ರಜ್ಞಾನ ಸ್ಪರ್ಧೆಯಲ್ಲಿಯೂ ಕನ್ನಡ ಹಿಂದುಳಿದಿಲ್ಲ. ಹೊಸ ಪೀಳಿಗೆಯ ಯುವ ಸಮುದಾಯವು ಹೊಸ ಹುಮ್ಮಸ್ಸಿನಿಂದ ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವುದನ್ನು ಕಂಡಾಗ ಖುಷಿಯಾಗುತ್ತಿದೆ. ಹಾಗೆಯೇ ತಮ್ಮ ಮಾತೃಭಾಷೆಯಲ್ಲಿ ಕವನ, ಕತೆ, ಕಾದಂಬರಿಗಳನ್ನು ಬರೆದು ಪ್ರಕಟಿಸುತ್ತಿರುವ ಯುವಕ ಯುವತಿಯರನ್ನು ಕಂಡಾಗ ಕನ್ನಡ ಭವಿಷ್ಯದ ಬಗ್ಗೆ ನಾನು ಆಶಾವಾದಿಯಾಗಿದ್ದೇನೆ. ಕನ್ನಡದಲ್ಲಿ ಬರೆಯಬಲ್ಲವನು ತುಂಬಾ ಓದಬಲ್ಲನು. ಪ್ರಕಟಿಸುವವನು ಬರೆಯುವವನಿಗೆ ಪ್ರೋತ್ಸಾಹ ನೀಡಬಲ್ಲನು. ಈ ಮಾತುಗಳನ್ನು ಯಾಕೆ ಹೇಳುತ್ತೇನೆಂದರೆ ಗಣೇಶ್ ನಾಯಕ್ ಪುತ್ತೂರು ಇವರು ಬರೆದ ಪುಟ್ಟ ಪುಟ್ಟ ಲೇಖನ ಸಂಕಲನ ‘ಮನವು ಮಾತಾಡಿತು’ ಎಂಬ ಕೃತಿಯು ನಮಗೆ ಹೊಸ ಬರೆಹಗಾರರ ಬಗ್ಗೆ ಭರವಸೆಯನ್ನು ಮೂಡಿಸುತ್ತದೆ.
ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕಾಣಿಕೆಯನ್ನು ನೀಡಿದವರಲ್ಲಿ ಹೆಚ್ಚಿನವರು ಶಿಕ್ಷಕರು ಎಂಬುದು ಗಮನಾರ್ಹ. ಶಿಕ್ಷಕರಿಗೆ ಮುಂದಿನ ಪೀಳಿಗೆಯಲ್ಲಿ ಕನ್ನಡದ ಪ್ರೀತಿಯನ್ನು ಹುಟ್ಟಿಸುವ ಜವಾಬ್ದಾರಿಯೂ ಇದೆಯಲ್ಲವೇ ? ಆದುದರಿಂದಲೇ ಗಣೇಶ್ ನಾಯಕ್ ಅವರು ಈ ಸಂಕಲನವನ್ನು ಕನ್ನಡಿಗರ ಮುಂದೆ ಪ್ರಕಟಿಸಿದ್ದಾರೆ. ಇದು ಅವರ ಚೊಚ್ಚಲ ಕೃತಿಯಾದುದರಿಂದ ಕೆಲವು ಅರೆಕೊರೆಗಳು ಇರುವುದು ಸಹಜ. ದೀರ್ಘವಾದ ಲೇಖನಗಳನ್ನು ಓದುವ ತಾಳ್ಮೆ ಇಲ್ಲದವರಿಗೆ ಈ ಸಂಕಲನವು ಒಂದು ವರವಾಗಬಹುದು. ಸುಮಾರು 37 ಲೇಖನಗಳ ಈ ಗುಚ್ಛವು ನಮ್ಮ ಸುತ್ತು ಮುತ್ತಲು ನಡೆವ ಘಟನೆಗಳ ಬಗ್ಗೆ, ಮನುಷ್ಯನ ಮಾನಸಿಕ ತಲ್ಲಣಗಳ ಬಗ್ಗೆ, ಸಂಘರ್ಷಗಳ ಬಗ್ಗೆ ಮಾತನಾಡುತ್ತದೆ. ಹಾಗೆ ಮಾತನಾಡುವ ಮೊದಲು ಮನದಲ್ಲಿ ಆ ವಿಷಯದ ಕುರಿತು ಮಂಥನ ಮಾಡಲೇ ಬೇಕಲ್ಲವೇ ? ಲೇಖಕರು ಅವರದೇ ವಿಶಿಷ್ಟ ರೀತಿಯಲ್ಲಿ ಅವುಗಳನ್ನು ದಾಖಲಿಸಿದ್ದಾರೆ. ಕೆಲವು ಲೇಖನಗಳು ಪುಟ್ಟ ಕತೆಗಳಾಗಿ ಇನ್ನು ಕೆಲವು ಒಂದು ದೊಡ್ಡ ಕಾದಂಬರಿಯ ವಸ್ತುವಾಗಬಲ್ಲ ವಸ್ತುವನ್ನೊಳಗೊಂಡಿದೆ. ಉದಾ : ಹುಸಿಯಾದ ನಂಬಿಕೆ, ಕೆಲವು ಲೇಖನಗಳು ಅವಸರಕ್ಕೆ ಹೆಣೆದವುಗಳಾಗಿ ಕಾಣುತ್ತದೆ. ಇನ್ನು ಕೆಲವು ಲೇಖನಗಳು ಶೀರ್ಷಿಕೆಯ ವಿಷಯವನ್ನು ಮುಟ್ಟಲಾರದೆ ಸೊರಗಿದಂತೆ ಕಾಣುತ್ತದೆ. ಸ್ಮಶಾನ ಮೌನ, ಮತ್ತೆ ಸಿಕ್ಕಿದ ಅಮ್ಮ, ಆ ಹುಡುಗ, ಸೇತುವೆ, ಆಯ್ಕೆ, ಪೋಸ್ಟರ್ ಮುಂತಾದವುಗಳು ಸಣ್ಣ ಕತೆಗಳಾಗಿ ಗಮನ ಸೆಳೆಯುತ್ತವೆ. ಲೇಖಕರಲ್ಲಿ ಬರೆಯುವ ಹುಮ್ಮಸ್ಸು ಇದೆ. ಅವರೇ ಹೇಳಿದಂತೆ ಇದು ಕಲಿಕೆಯ ಹಾದಿಯ ಮುಗುವಿನ ಸಣ್ಣ ಪ್ರಯತ್ನವಾಗಿದೆ. ಈ ಪ್ರಯತ್ನಕ್ಕೆ ಸಹೃದಯರ ಅಭಿನಂದನೆಗಳು ಸಲ್ಲುತ್ತದೆ. ಯಾವ ದೊಡ್ಡ ಲೇಖಕನೂ ಪ್ರಾರಂಭದಲ್ಲೇ ಮಹತ್ತಾದುದನ್ನು ನೀಡಿಲ್ಲ. ಮನಸ್ಸು ಮಾಗುತ್ತಾ, ಜೀವನಾನುಭಾವಗಳು ಹೆಚ್ಚುತ್ತಾ, ಸಂವೇದನೆಗಳಿಗೆ ಸ್ಪಂದಿಸುವ ಶಕ್ತಿ ತುಂಬುತ್ತಾ ಹೋದಂತೆಲ್ಲಾ ಉತ್ತಮವಾದುದನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಇವರ ಈ ಮನದ ಮಾತು ಜೀವನದ ದಾರಿಯುದ್ದಕ್ಕೂ ಅವರಿಗೂ ಓದುಗರಿಗೂ ಭಾವ ಸ್ಪಂದನೆ ಮಾಡುವ ಶಕ್ತಿಯುಳ್ಳದ್ದಾಗಿದೆ. ಲೇಖಕನ ಹೃದಯದ ಭಾವಗಳನ್ನು ಓದುಗರ ಹೃದಯಕ್ಕೆ ಮುಟ್ಟಿಸುವ ಮತ್ತು ಸ್ಪಂದಿಸುವ ಕೆಲಸವನ್ನು ಮಾಡುವಲ್ಲಿ ಈ ಸಂಕಲನವು ಯಶಸ್ವಿಯಾಗಿದೆ. ಪ್ರಾರಂಭದ ಪರಿವಿಡಿಯಲ್ಲಿದ್ದ ಕೆಲವು ಲೇಖನಗಳು ಉದಾಹರಣೆಗೆ ಅದೃಷ್ಟ, ತೊಟ್ಟಿ ಮುಂತಾದ ಐದು ಲೇಖನಗಳು ಪ್ರಕಟವಾಗಿಲ್ಲ. ಆದರೆ ಪರಿವಿಡಿಯಲ್ಲಿಲ್ಲದ ಲೇಖನಗಳು ಮೌಲ್ಯ, ಪ್ರಶ್ನೆ ಮುಂತಾದ ಒಂಬತ್ತು ಲೇಖನಗಳು ಪ್ರಕಟವಾಗಿವೆ. ಕಣ್ತಪ್ಪಿನಿಂದಾಯಿತೆ ? ಒಂದು ಪುಸ್ತಕ ಪ್ರಕಟಣೆಯ ಕೆಲಸವು ಅವಸರದ ಕಾರ್ಯವಾಗಬಾರದು. ಈ ಅಚ್ಚುಕಟ್ಟುತನವೂ ಪುಸ್ತಕದ ಧನಾತ್ಮಕ ಅಂಶವಾಗಿ ಪರಿಗಣಿತವಾಗುತ್ತದೆ. ಗಣೇಶ್ ನಾಯಕ್ ಅವರು ತಮ್ಮ ಮುಂದಿನ ಕೃತಿಗಳಲ್ಲಿ ಈ ಅಂಶಗಳನ್ನು ಗಮನಿಸುತ್ತಾರೆ ಎಂದು ನಂಬಿದ್ದೇನೆ. ಆಳವಾದ ಅಧ್ಯಯನ ಮತ್ತು ವೈಚಾರಿಕ ಪ್ರಜ್ಞೆ, ವಿಮರ್ಶೆಯ ಗುಣ, ಸಾಮಾಜಿಕ ಕಾಳಜಿ, ನೋವಿಗೆ ಸ್ಪಂದಿಸುವ ಗುಣ, ಜೀವನ ಪ್ರೀತಿ ಮತ್ತು ಉತ್ಸಾಹ ಇವಿಷ್ಟು ಮನುಷ್ಯನನ್ನು ಲೇಖಕನನ್ನಾಗಿ ರೂಪಿಸುತ್ತವೆ. ಗಣೇಶ್ ನಾಯಕ್ ಅವರಲ್ಲಿ ಈ ಗುಣಗಳಿವೆ ಎಂಬುದು ಅವರ ಈ ಕೃತಿಯಿಂದ ವ್ಯಕ್ತವಾಗುತ್ತದೆ. ಅವರಿಂದ ಇನ್ನಷ್ಟು ಕೃತಿಗಳು ಬರಲಿ. ಕನ್ನಡ ಸಾಹಿತ್ಯದ ಹಿರಿಯ ಲೇಖಕ, ಲೇಖಕಿಯರ ಶ್ರೇಷ್ಠ ಕೃತಿಗಳನ್ನು ಅವರು ಓದುತ್ತಾ ಹೋದಂತೆಲ್ಲಾ ತಾನು ಲೇಖಕನಾಗಿ ಹೇಗೆ ಬೆಳೆಯಬಹುದು ಎಂಬ ಪ್ರೇರಣೆ ಅವರಿಗೆ ಲಭಿಸುತ್ತದೆ. ಆದುದರಿಂದ ಅವರ ಮುಂದಿನ ಕೃತಿಗಳು ಇನ್ನಷ್ಟು ಪರಿಪಕ್ವವಾಗಿ ಮೂಡಿ ಬರುವಂತಾಗಲಿ ಎಂದು ನಾನು ಶುಭ ಹಾರೈಸುತ್ತೇನೆ.
- ಬಿ.ಎಂ. ರೋಹಿಣಿ, ಕುಡುಪು
ಬಿ.ಎಂ. ರೋಹಿಣಿಯವರು 1944ರಲ್ಲಿ ಬಂಗ್ರಮಂಜೇಶ್ವರದಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ಬರಹ ಸಂಶೋಧನೆ ಹಾಗೂ ಅಧ್ಯಯನ ಇವರ ಪ್ರವೃತ್ತಿಗಳಾಗಿವೆ. ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಪ್ರಕಟಿಸಿರುತ್ತಾರೆ. ‘ಸ್ತ್ರೀ ಸಂವೇದನೆ’, ‘ಸ್ತ್ರೀ-ಶಿಕ್ಷಣ-ಸಂಸ್ಕೃತಿ’, ‘ಸ್ತ್ರೀ ಭಿನ್ನ ಮುಖಗಳು’, ‘ಸಾಮಾಜಿಕ ತಲ್ಲಣಗಳು’ ಮತ್ತು ‘ಆರಾಧನಾ ರಂಗದಲ್ಲಿ ಸ್ತ್ರೀ’ ಇವು ಇವರ ಲೇಖನ ಸಂಕಲನಗಳು. ‘ಕರ್ತವ್ಯ’, ‘ಹಿರಿಯರ ಜೀವನ ಕಥನಗಳು’, ‘ಗರಿಕೆಯ ಕುಡಿಗಳು’ ಇವು ಇವರ ಕಥಾ ಸಂಕಲನಗಳು.
‘ಅಧ್ಯಾಪಿಕೆಯ ಅಧ್ವಾನಗಳು’ ಇದು ಇವರ ಅನುಭವಕಥನ. ‘ಶ್ರೀಮತಿ ಲಲಿತಾ ರೈ’, ‘ವರ್ಣಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ’ ಮತ್ತು ‘ಸಂಗೀತ ವಿದ್ವಾನ್ ಕೇಶವ ಭಟ್’ ಇವು ಇವರ ವ್ಯಕ್ತಿ ಚಿತ್ರಣಗಳು ‘ಅವಿವಾಹಿತ ಮಹಿಳೆಯರ ಸಮಾಜಿಕ ಸಾಂಸ್ಕೃತಿಕ ಅಧ್ಯಯನ’, ‘ತುಳು ನಾಡಿನ ಮಾಸ್ತಿ ಕಲ್ಲುಗಳು ವೀರಗಲ್ಲುಗಳು’ ಹಾಗೂ ‘ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ’ ಇವು ಇವರ ಸಂಶೋಧನಾ ಕೃತಿಗಳು. ನಾಗಂದಿಗೆ ಒಳಗಿಂದ ಇವರ ಆತ್ಮಕಥನ. ಈ ಎಲ್ಲಾ ಕೃತಿಗಳಿಗೂ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.