ಕಾಸರಗೋಡು: ತುಳುವ ಮಹಾಸಭೆ ಕಾಸರಗೋಡು ನೇತೃತ್ವದಲ್ಲಿ, ತುಳು ವರ್ಲ್ಡ್ ಕಟೀಲು ಸಂಯೋಜಿಸಿದ ತುಳು ವಾಲ್ಮೀಕಿ ಮಂದಾರ ಕೇಶವ ಭಟ್ಟರ ‘ಮಂದಾರ ರಾಮಾಯಣ’ ಸುಗಿವು- ದುನಿವು ಕಾರ್ಯಕ್ರಮವು ಕಾಸರಗೋಡು ಉಳ್ಳೂಡಿಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ 01 ಆಗಸ್ಟ್ 2025ರ ಶನಿವಾರ ನಡೆಯಿತು.
ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಪೂರ್ಣ ಮಂದಾರ ರಾಮಾಯಣದ ವ್ಯಾಖ್ಯಾನವವನ್ನು ನಡೆಸಿಕೊಟ್ಟರು. ಭಾಗವತ ಪ್ರಶಾಂತ್ ರೈ ಪುತ್ತೂರು ಮತ್ತು ರಚನಾ ಚಿತ್ಕಲ್ ಆಯ್ದ ಪದ್ಯಗಳನ್ನು ವಾಚಿಸಿದರು. ಹಿಮ್ಮೇಳದಲ್ಲಿ ಲವ ಕುಮಾರ್ ಐಲ ಮದ್ದಳ ನುಡಿಸಿದರು. ದೊಡ್ಡ ಸಂಖ್ಯೆಯಲ್ಲಿ ನೆರೆದ ಪ್ರೇಕ್ಷಕರು ಭಕ್ತಿ ಭಾವದೊಂದಿಗೆ ಕಥಾ ಶ್ರವಣ ಮಾಡಿ ಸಂತುಷ್ಪರಾದರು. ಪ್ರವಚನಕಾರ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ತುಳುವರಿಗೆ ಸಂಕಷ್ಟ ಕಾಲವಾದ ಆಟಿ ತಿಂಗಳಲ್ಲಿ ರಾಮಾಯಣ ಪಾರಾಯಣ, ವಾಚನ-ಪ್ರವಚನಗಳ ಮೂಲಕ ಪರಿಹಾರ ಕಂಡುಕೊಳ್ಳ ಬಹುದೆಂಬ ನಂಬಿಕೆಯಿದೆ. ಮಂದಾರ ಕೇಶವ ಭಟ್ಟರ ತುಳು ರಾಮಾಯಣದಲ್ಲಿ ಪುರಾಣದ ಪುಣ್ಯ ಕಥೆಯೊಂದಿಗೆ ತುಳು ಬದುಕಿನ ನೈಜ ಚಿತ್ರಣವೂ ಇರುವುದರಿಂದ ಅದು ಜನರಿಗೆ ಹತ್ತಿರವಾಗಿದೆ” ಎಂದರು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಂದಾರ ಪ್ರತಿಷ್ಠಾನದ ಅಧ್ಯಕ್ಷರಾದ ಪತ್ರಕರ್ತ ಮಂದಾರ ರಾಜೇಶ್ ಭಟ್ ಕಾರ್ಯಕ್ರಮವನ್ನು ಆಯೋಜಿಸಿದ ಎಲ್ಲರನ್ನೂ ಮಂದಾರ ಪ್ರತಿಷ್ಠಾನದ ಪರವಾಗಿ ಹಾಗೂ ಮಂದಾರರ ಕುಟುಂಬದ ಪರವಾಗಿ ಮುಂದೆಯೂ ತಮ್ಮ ಸಹಕಾರದ ಭರವಸೆ ನೀಡಿದರು.
ತುಳುವ ಮಹಾಸಭೆಯ ಕಾರ್ಯಾಧ್ಯಕ್ಷರಾದ ಡಾ. ರಾಜೇಶ್ ಕೃಷ್ಣ ಆಳ್ವ ಮಾತನಾಡಿ “ಮಂದಾರ ರಾಮಾಯಣ ಪ್ರಸರಣ ಕಾರ್ಯಕ್ರಮವನ್ನು ತುಳು ನಾಡಿನಾದ್ಯಂತ ಏರ್ಪಡಿಸುವ ಉದ್ದೇಶ ಹೊಂದಿದ್ದು, ಜೊತೆಗೆ ತುಳು ಭಾಷೆಯ ಬೆಳವಣಿಗೆ ಮತ್ತು ತುಳುವರ ಪ್ರಾಚೀನ ಜೀವನ ಶೈಲಿಯನ್ನು ನಾಡಿಗೆ ಪರಿಚಯಿಸುವ ಉದ್ದೇಶವೂ ಇದೆ, ಅಲ್ಲದೆ ತುಳುವರ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ. ತುಳು ನಾಡಿನಾದ್ಯಂತ ತುಳುವ ಮಹಾಸಭೆ ಕಾರ್ಯ ವ್ಯಾಪ್ತಿ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ನೋಂದಾವಣೆಯಾಗುವುದರ ಮೂಲಕ ಸಹಕರಿಸಬೇಕು” ಎಂದು ಅವರು ತುಳುವ ಮಹಾಸಭೆ ಪರವಾಗಿ ವಿನಂತಿಸಿದರು.
ಶ್ರೀ ಕ್ಷೇತ್ರ ಕಾರ್ಮಾರು ಆಡಳಿತ ಮುಖ್ಯಸ್ಥ ರಾಧಾಕೃಷ್ಣ ರೈ ಮಾತನಾಡಿ “ತುಳುವ ಮಹಾಸಭೆ ಹಾಗೂ ಮಂದಾರ ರಾಮಾಯಣ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ” ಎಂದರು.
ಬಲಿವಾಡು ಕೂಟ:
ಆಟಿ ತಿಂಗಳ ವಿಶೇಷ ಕಾರ್ಯಕ್ರಮ ಹಾಗೂ ಬಲಿವಾಡು ಕೂಟದ ಪ್ರಯುಕ್ತ ಬೆಳಿಗ್ಗೆ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ, ಗಣ ಹೋಮ, ನಂತರದಲ್ಲಿ ಮಂದಾರ ರಾಮಾಯಣ ಕಾರ್ಯಕ್ರಮ, ಮಹಾಪೂಜೆ, ಅನ್ನಪ್ರಸಾದ ವಿತರಣೆ ಹಾಗೂ ಸಂಜೆ ದುರ್ಗಾಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.