3 ಏಪ್ರಿಲ್ 2023, ಬ್ರಹ್ಮಾವರ: ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ-ಬೈಕಾಡಿ ಪ್ರಸ್ತುತ ಪಡಿಸುವ ‘ರಂಗೋತ್ಸವ-2023’ ಕಾರ್ಯಕ್ರಮವು ಶನಿವಾರ 01-04-2023ರಂದು ಎಸ್.ಎಮ್.ಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಸದಾಶಯದ ರಂಗಗೀತೆಗಳಿಂದ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಅವರು ಮಾತನಾಡಿ “ರಂಗಭೂಮಿ ಭಾವನೆಗಳ ಸಮುದ್ರ, ಮಾನವನ ಅಂತಃಕರಣ ಕಲಕಿ ಅಂತರಂಗ ಅವಿಭಾವಗೊಳಿಸಿ ವೈಶಾಲ್ಯತೆ ಮೂಡಿಸಲು ಸಶಕ್ತವಾದ ಮಾಧ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು” ಅಂತಾ ಹೇಳುತ್ತಾ “ನಮ್ಮ ಜಿಲ್ಲೆಯ ಈ ಮಂದಾರ ಸಂಘಟನೆ ಕಲಾ ಚಟುವಟಿಕೆಯಲ್ಲಿ ಇನ್ನಷ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳಲಿ” ಅಂತಾ ಹಾರೈಸಿದರು. ಈ ವೇಳೆ ರಂಗಭೂಮಿ ಕಲಾವಿದರಾದ ಆಲ್ವಿನ್ ಅಂದ್ರಾದೆ, ಉದ್ಯಮಿಗಳಾದ ಎಸ್. ನಾರಾಯಣ್, ಎಸ್.ಎಮ್.ಎಸ್.ಪ.ಪೂ. ಕಾಲೇಜು ಪ್ರಾಂಶುಪಾಲರಾದ ಐವನ್ ಡೊನಾತ್ ಸುವಾರಿಸ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನಂತರ ಅಗಲಿದ ಸಹಕಲಾವಿದ ಕನಸು ಕಾರ್ತಿಕ್ ಗೆ ರಂಗಗೀತೆಗಳ ಮೂಲಕ ರಂಗನಮನ ಸಲ್ಲಿಸಲಾಯಿತು. ಇದೇ ಸಂಧರ್ಭದಲ್ಲಿ ಮನು ಹಂದಾಡಿಯವರು ನುಡಿನಮನ ಸಲ್ಲಿಸಿದರು. ತದನಂತರ ಸುರಭಿ (ರಿ.) ಬೈಂದೂರು ತಂಡದ ಬಾಲಕಲಾವಿದರಿಂದ ಗಣೇಶ್ ಮಂದಾರ್ತಿ ನಿರ್ದೇಶನದ ‘ಮಕ್ಕಳ ರಾಮಾಯಣ’ ನಾಟಕ ಪ್ರದರ್ಶನ ಕಂಡಿತು.