16-03-2023,ಉಡುಪಿ: ಮಂದಾರ (ರಿ) ಪ್ರಸ್ತುತ ಪಡಿಸುವ “ರಂಗೋತ್ಸವ” ಸಾಂಸ್ಕೃತಿಕ ಉತ್ಸವವು ಇದೇ ಬರುವ ದಿನಾಂಕ 01-04-2023ರಿಂದ 04-04-2023 ಪ್ರತಿದಿನ ಸಂಜೆ 7 ಗಂಟೆಗೆ ಬ್ರಹ್ಮಾವರ, ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು, ಮಕ್ಕಳ ಮಂಟಪದಲ್ಲಿ ಜರಗಲಿದೆ.
ಟೀಂ ಮಂದಾರ: ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ರೂಪದ, ತನ್ನ ವ್ಯಾಪ್ತಿಯೊಳಗಿನ ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಸದುದ್ದೇಶದೊಂದಿಗೆ “ಮಂದಾರ” ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಒಂದಿಷ್ಟು ಸಹೃದಯರ ಒಗ್ಗೂಡುವಿಕೆಯೊಂದಿಗೆ ರೂಪುಗೊಂಡಿದೆ. ನಮ್ಮ ಮುಂದಿನ ಯುವ ಪೀಳಿಗೆಗೆ ಒಂದು ಸುಂದರ ಸಾಂಸ್ಕೃತಿಕ ವಾತಾವರಣ ಕಲ್ಪಿಸುವ ಹಾಗೂ ಆ ಮೂಲಕ ಅವರ ಉತ್ತಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ ಆಗುವ ಯೋಚನೆಯೊಂದಿಗೆ ಉತ್ತಮ ಕಾರ್ಯಕ್ರಮಗಳ ಆಯೋಜನೆಯ ಕನಸು ಹೊತ್ತು ಸಾಗುತ್ತಿದ್ದೇವೆ.
ಪ್ರತಿ ವರ್ಷ ನಮ್ಮ ಮಿತಿಯಲ್ಲಿ ಸಾಧ್ಯವಾಗುವ ಹಲವಾರು ಕಾರ್ಯಕ್ರಮಗಳನ್ನು ಸ್ಥಳೀಯವಾಗಿ ನಡೆಸುತ್ತಾ ಬಂದಿದ್ದೇವೆ. ನಾಟಕ ತಯಾರಿ, ಮಕ್ಕಳಿಗಾಗಿ ರಂಗ ತರಗತಿಗಳು, ಸಂಗೀತ ಕಾರ್ಯಕ್ರಮ, ಜಾನಪದ ನೃತ್ಯ ತರಬೇತಿ ಕಾರ್ಯಗಾರ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಸೇವಾರೂಪದ ಕೆಲಸಗಳಲ್ಲೂ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ವಿಶೇಷವಾಗಿ ಕೊರೊನಾ ಕಾಲಘಟ್ಟದಲ್ಲಿಯೂ ಸಹ ರಂಗವನ್ನೇ ಮನೆಯಂಗಳಕ್ಕೆ ಕೊಂಡೊಯ್ಯುವ “ಸಂಕಥನ” ಎಂಬ ವಿಶಿಷ್ಟ ಪ್ರಯೋಗದ ಮೂಲಕ ನಾವು ನಿರಂತರ ಚಲನೆಯನ್ನು ಕಾಯ್ದುಕೊಂಡಿದ್ದೇವೆ. ನಮ್ಮ ಮೊದಲ ನಾಟಕ “ಕೊಳ್ಳಿ” ಉಡುಪಿ ಜಿಲ್ಲೆಯ ಬಹುತೇಕ ನಾಟಕೋತ್ಸವಗಳಲ್ಲಿ ಹಾಗೂ ರಾಜ್ಯದ ಹಲವು ಕಡೆ ಪ್ರದರ್ಶನಗೊಂಡು, ಜನರ ಪ್ರಶಂಸೆಯೊಂದಿಗೆ ನಮ್ಮ ಪರಿಶ್ರಮಕ್ಕೆ ಸಾರ್ಥಕ್ಯೆ ನೀಡಿದೆ. ಈ ನಾಟಕಕ್ಕೆ 2022ನೇ ಸಾಲಿನ ರಂಗಭೂಮಿ (ರಿ) ಉಡುಪಿ ಆಯೋಜನೆಯ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ತೃತೀಯ ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮದು. ದೂತ ಘಟೋತ್ಕಜ, ಕೈಯೂರಿನ ವೀರರು ನಮ್ಮ ತಂಡದ ಇತರ ರಂಗಪ್ರಯೋಗಗಳು.
ದಿನ -1: ಏಪ್ರಿಲ್ 1 ರ ಶನಿವಾರ
ಸುರಭಿ ಬಾಲ ಕಲಾವಿದರಿಂದ ನಾಟಕ “ಮಕ್ಕಳ ರಾಮಾಯಣ”.
ಮೂಲ ಕೃತಿ: ಡಿ ಆರ್ ವೆಂಕಟರಮಣ ಐತಾಳ್
ಕುಂದಾಪ್ರ ಕನ್ನಡಕ್ಕೆ/ವಿನ್ಯಾಸ, ನಿರ್ದೇಶನ :ಶ್ರೀ ಗಣೇಶ್ ಮಂದಾರ್ತಿ
ಪ್ರಸ್ತುತಿ: ಸುರಭಿ ರಿ. ಬೈಂದೂರು
ದಿನ -2 ಏಪ್ರಿಲ್ 2ರ ರವಿವಾರ:
ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ ಬಿಜಾಪುರ ಪ್ರಸ್ತುತ ಪಡಿಸುವ ‘ಅನಾಮಿಕನ ಸಾವು’
ನಾಟಕದ ಆಶಯ: ಒಂದು ಕಾಗದ, ಒಂದು ಗುರುತಿನ ಚೀಟಿ, ನಮ್ಮ ಇರುವಿಕೆಯನ್ನೇ ನಿರ್ಧರಿಸುವಂತಾದರೆ?ನಮ್ಮಅಸ್ತಿತ್ವವನ್ನೇ ಅಲುಗಾಡಿಸುವಂತಾದರೆ? ಹಾಗಾಗಿದ್ದಲ್ಲಿ, ನಾವು ಹುಟ್ಟಿದ್ದು-ಬೆಳೆದದ್ದು-ಬದುಕಿದ್ದು ಸುಳ್ಳೆ? ನಮ್ಮನರಗಳಲ್ಲಿ ಹರಿಯುವ ರಕ್ತ ಸುಳ್ಳೆ? ನಮ್ಮ ಸಾಕಿಸಲುಹಿದ ಈ ನೆಲ ಸುಳ್ಳೆ? ಹೀಗೆಯೇ, ಹುಟ್ಟಿದ ನೆಲದಿಂದಲೇ ನೆಲೆ ಕಳೆದುಕೊಳ್ಳಬೇಕಾಗಿ ಬಂದಾಗ, ತನ್ನ ಅಸ್ತಿತ್ವಕ್ಕಾಗಿ ಒದ್ದಾಡುವವನ ಕಥೆ ಇದು. ತಮ್ಮ ಹೆಸರು ಮತ್ತು ಬದುಕೆಂಬ ಎರಡು ದಂಡೆಯ ನಡುವಿರುವ ಅಸ್ತಿತ್ವವೆಂಬ ತೂಗುಯ್ಯಾಲೆಯಲ್ಲಿ ತಮ್ಮನ್ನು ತಾವು ಹುಡುಕುತ್ತಿರುವವರ, ನೆಲೆ ಕಾಣಬಯಸುವವರ ಕಥೆ
ಸ್ಪಿನ್ನಿಂಗ್ ಟ್ರೀ ಥಿಯೇಟರ್: ‘ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿಯು ಶಕೀಲ್ ಅಹ್ಮದ್ ಅವರು ಸ್ಥಾಪಿಸಿದ ಪ್ರಾಯೋಗಿಕ ರಂಗತಂಡ. ಈ ಸಂಸ್ಥೆಯು ಬಹಳಷ್ಟು ಕಾಲ ರಂಗಪ್ರಕಾರಗಳಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ ರೂಪುಗೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಯುವ ಕಲಾವಿದರು ತಂಡದೊಂದಿಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈ ತಂಡದಲ್ಲಿ ಫಲಿತಾಂಶಕ್ಕಿಂತ, ತರಬೇತಿ ಹಾಗೂ ಪ್ರಕ್ರಿಯೆಗೆ ಆದ್ಯತೆ ನೀಡಲಾಗುತ್ತಿದೆ. ಈ ಕ್ರಿಯಾಶೀಲ ಪ್ರಯೋಗಾಲಯವನ್ನು ರಂಗಭೂಮಿಯ ವಿಭಿನ್ನ ರಂಗಪ್ರಕಾರಗಳನ್ನೊಳಗೊಂಡು ಹೆಣೆಯಲಾಗಿದೆ. ಕ್ರಿಯೆಯ ಹುಟ್ಟಿನೆಡೆಗೆ, ಸ್ಥಬ್ದ ನಿಲುವಿನೆಡೆಗೆ ಈ ತಂಡದ ಹುಡುಕಾಟ, ನಮ್ಮ ಸಂಘಟಿತ ಸ್ಮೃತಿಗಳ ಆಳದಲ್ಲಿ ಇರುವ ಸಂಸ್ಕೃತಿಗಳ ಘಮಲಿನ ನಡುವೆ ಸುಳಿದಾಡುವ ದೇಹ ಭಾಷ್ಯೆಗಳ ಹುಡುಕಾಟ. ಈ ಪ್ರಕಾರವಾಗಿ, ಸ್ಪಿನಿಂಗ್ ಟ್ರೀ ಥಿಯೇಟರ್ ಕಂಪನಿಯು ಹಲವಾರು ಕಾರ್ಯಗಾರಗಳು ಹಾಗೂ ಪ್ರಯೋಗಗಳನ್ನು ಹಮ್ಮಿಕೊಂಡಿದೆ.
ಉಳಿದ ಸಾಕ್ಷಿಗಳು, ದ ಅವರ ವಿ ನ್ಯು ನಥಿಂಗ ಅಬೌಟ್ ಈಚ್ ಅದರ್, ಗಿಲಿ ಗಿಲಿ ಪುವ್ವಾ, …..ಫಾರ ಎ ಬೈಟ್ ಆಫ್ ಫೂಡ್ ಹಾಗೂ ಅನಾಮಿಕನ ಸಾವು ಈ ತಂಡದ ಪ್ರಯೋಗಗಳು.
ದಿನ -3 ಏಪ್ರಿಲ್ 3ರ ಸೋಮವಾರ:
ಮಂದಾರ (ರಿ) ಬೈಕಾಡಿ ಪ್ರಸ್ತುತ ಪಡಿಸುವ ಭಾಸ ಮಹಾಕಾವಿ ವಿರಚಿತ “ದೂತ ಘಟೋದ್ಘಜ “
ಯುದ್ಧವೆನ್ನುವುದು ಅಮಾಯಕ ಜೀವಗಳನ್ನು ಬಲಿ ಪಡೆವ ಅತ್ಯಂತ ಹೇಯ ಕೃತ್ಯ. ಅಧಿಕಾರದ ಲಾಲಸೆಯಿಂದ ಮನುಷ್ಯ ರಾಕ್ಷಸನಂತಾಗುತ್ತಾನೆ. ಯುದ್ಧದಂತಹ ಪಾಪವೀ ಕೃತ್ಯಗಳಲ್ಲಿ ತೊಡಗಿ ಕೊಳ್ಳುತ್ತಾನೆ. ನಮ್ಮ ಪುರಾಣಗಳೆಲ್ಲವೂ ಹೆಚ್ಚಾಗಿ ಇಂತಹ ಯುದ್ಧದ ಕಥೆಗಳೇ. ಇನ್ನೊಂದು ಕಡೆಯಲ್ಲಿ ಒಂದಿಷ್ಟು ತಳವರ್ಗದ, ಶ್ರಮಿಕ, ರೈತಾಪಿ ಜನ ಇದೆಲ್ಲವುಗಳ ನಡುವೆ ಶತಮಾನಗಳಿಂದ ಶ್ರಮಿಸುತ್ತಾ, ದುಡಿಯುತ್ತ, ತಮ್ಮ ಮೇಲಿನ ಶೋಷಣೆ ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುತ್ತಾ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಾ ಬದುಕುತ್ತಾ ಬಂದಿದ್ದಾರೆ. ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ಇವರ ಮೇಲಿನ ದಾಳಿಗಳು ನಿರಂತರ ನಡೆಯುತ್ತಲೇ ಇವೆ. ಈ ಹಿನ್ನಲೆಯಲ್ಲಿ ಈ ಹಿನ್ನಲೆಯಲ್ಲಿ ಭಾಸ ಮಹಾಕಾವಿಯ ಈ ನಾಟಕ ಯುದ್ಧುನ್ಮಾದದ ಕುಲೀನ ಮನುಷ್ಯರಿಗೆ ಕುಲಹೀನ ಎನಿಸಿಕೊಳ್ಳುವ ರಾಕ್ಷಸನೊಬ್ಬ ‘ಮನುಷ್ಯತ್ವ’ವನ್ನು ಸಾರುವ ವಿಶಿಷ್ಟ ನಾಟಕ..
ದಿನ -4 ಏಪ್ರಿಲ್ 4ರ ಮಂಗಳವಾರ:
ಸುಮನಸ ಕೊಡವೂರು (ರಿ) ಪ್ರಸ್ತುತ ಪಡಿಸುವ ‘ಅರುಂಧತಿ ಆಲಾಪ’
ಅರುಂಧತಿ ಆಲಾಪ ಹೆಣ್ಣೂಬ್ಬಳ ಒಳಗನ್ನು ಕಥಿಸುವ ನಾಟಕ, ಗಂಡ ಮತ್ತು ಮಗನ ನಡುವೆ ಇಬ್ಬರಿಗೂ ಸಲ್ಲದವಳಾಗಿ ತನ್ನತನದ ಹುಡುಕಾಟದಲ್ಲಿರುವ ಸ್ತ್ರೀಯೊಬ್ಬಳ ತೊಳಲಾಟಗಳೇ ಈ ಆಲಾಪ, ಗಂಡನಿಂದ ಅಗೌರವಕ್ಕೊಳಗಾದ ಹೆಣ್ಣಿಗೆ ಮಗನಿಂದಲೂ ಗೌರವ ಸಲ್ಲದಾಗ ಮಾತೃತ್ವ ಮತ್ತು ಪತ್ನಿತ್ವಗಳಾಚೆಗೆ ಯೋಚಿಸುವ ಆಕೆ ಹೆಣ್ಣಾಗುವ ಮೊದಲ ಹಂತದಲ್ಲಿ ನಿಂತು ತನ್ನನ್ನು ಕಂಡುಕೊಳ್ಳುವ ಅಲೋಚನೆಯಲ್ಲಿದ್ದಾಳೆ. ತಾನು ಕಳಕೊಂಡ ಹರೆಯದ ಕ್ಷಣಗಳನ್ನು ಮತ್ತೊಮ್ಮೆ ಕಟ್ಟಿಕೊಳ್ಳುವ ಸನ್ನಾಹದಲ್ಲಿದ್ದಾಳೆ. ಪ್ರೀತಿಯಿಂದ ವಂಚಿತಳಾದ ಆಕೆಗೆ ಹರೆಯದ ಹೆಣ್ಣುಗಳೊಳಗೆ ಉದ್ಭವಿಸುವ ಆ ಚಂಚಲತೆ, ಆಕರ್ಷಣೆ ಪ್ರೀತಿಯ ಬಗೆಗೆ ತೀವ್ರ ಕೌತುಕವಿದೆ. ಕುಣಿಯುವ ವಯಸ್ಸಲ್ಲಿ ಹಾಡಬೇಕಾದ ಸಂದರ್ಭಗಳಲ್ಲಿ ಅವಕಾಶ ಹೀನಲಾಗಿ ಅನಿವಾರ್ಯತೆಗೆ ಒಗ್ಗಿಕೊಂಡು ಬದುಕಿದ ಆಕೆ. ತಾನು ಕಳಕೊಂಡವುಗಳ ಹುಡುಕಾಟದಲ್ಲಿ ತನ್ನಿರವು ಮರೆಯುವ ಮೂಲಕ ಸ್ಥಾತಂತ್ರ್ಯ ಹೀನರಾಗಿ ತಮ್ಮತನ ಮರೆತ, ಪ್ರೀತಿಯಿಂದ ವಂಚಿತರಾದ ಹೆಣ್ಣುಮಕ್ಕಳ ಪ್ರತಿನಿಧಿಯಂತೆ ಭಾಸವಾಗುತ್ತಾಳೆ.
ಮಗನೊಂದಿಗೆ ಓಡಿ ಹೋದ ಕನಕ, ಅರುಂಧತಿಯೊಳಗಿನ ಹರೆಯದ ಉತ್ಸಾಹವಾಗಿ ಕಂಡರೆ, ಕ್ಷಣದ ಆಕರ್ಷಣೆಗೆ ಬಲಿಯಾಗಿ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಗಳ ನಡುವಿನ ಗೆರೆ ಮರೆತ ಹೆಣ್ಣಾಗಿ ಕಾಣಿಸಿಕೊಳ್ಳುವ ಕನಕ ಆಧುನಿಕ ಕಾಲಘಟ್ಟದ ಹೆಣ್ಣು ಮಕ್ಕಳೊಳಗೂ ಇರುವ ಅಸಹಾಯಕತೆಗೆ ಹಿಡಿದ ಕನ್ನಡಿ.
ಹೆತ್ತವರ ಅತಿ ಸಲಿಗೆ, ಅತಿ ಮೋಹ, ತಾಯಿಯ ಅಸಹಾಯಕತೆ, ಸುಖದ ಹುಡುಕಾಟ, ದುಶ್ಚಟಗಳು ಮನುಷ್ಯನನ್ನು ಎಷ್ಟು ಅಧೋಪತನಕ್ಕೆಳೆಯುತ್ತದೆ ಎಂಬುದು ಇಲ್ಲ ಸೊಗಸಾಗಿ ವ್ಯಕ್ತವಾಗಿದ್ದು, ಗಂಡಿನ ಸುಖ-ಲೋಲುಪತೆ, ಅಸಮರ್ಥತೆ ಹೆಣ್ಣನ್ನು ಎಷ್ಟರ ಮಟ್ಟಿಗೆ ಬಳಲಿಸುತ್ತದೆ ಎಂಬುದರ ಚಿತ್ರಣವಿದೆ.
ಪ್ರಕೃತಿ ಸಹಖವಾದ ಸ್ತ್ರೀ ಸಂವೇದನೆಯ ಪದರಗಳನ್ನು ಎಳೆ ಎಳೆಯಾಗಿ ಸಮಾಜಕ್ಕೆ ದಾಟಿಸುವ ಪ್ರಯತ್ನ ಈ ನಾಟಕದಲ್ಲಿದ್ದು ವಯಸ್ಸಿನ ಹಂಗಿರದ ಹೆಣ್ಣನ, ಸಣ್ಣ–ಸಣ್ಣ ಆಸೆಗಳು ಗಂಡು ಹೃದಯಕ್ಕೆ ಅರ್ಥವಾಗಬೇಕೆಂಬ ಆಶಯವಿದೆ.
ಎಲ್ಲಾ ಸಂಬಂಧ, ಜವಾಬ್ದಾರಿಗಳ ಅಚೆಗೂ ಇರುವ ಸ್ತ್ರೀ ಹೃದಯದ ಸಹಜ ಕನಸುಗಳೇ ಈ ಅರುಂಧತಿ