ಬ್ರಹ್ಮಾವರ : ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಬ್ರಹ್ಮಾವರ ಇವರ ನಾಲ್ಕನೇ ವರ್ಷದ ರಂಗೋತ್ಸವವು ದಿನಾಂಕ 04 ಏಪ್ರಿಲ್ 2025 ಶುಕ್ರವಾರದಂದು ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆ ಹೋಲಿ ಫ್ಯಾಮಿಲಿ ಚರ್ಚ್ ವಠಾರದಲ್ಲಿ ಶುಭಾರಂಭಗೊಂಡಿತು.
ತುಳುನಾಡಿನ ಮೂಲ ಜಾನಪದ ಕಲಾಪ್ರಕಾರವಾದ ‘ಆಟಿ ಕಳೆಂಜ’ದ ಮೂಲಕ ಮಂದಾರ ರಂಗೋತ್ಸವವು ಉದ್ಘಾಟನೆಗೊಂಡಿತು. ಈ ವೇಳೆ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಅವರು “ರಂಗಭೂಮಿ, ರಂಗಕಲೆ ಅನ್ನುವುದು ಒಂದು ಅಭಿಜಾತ ಕಲೆ, ಅದಕ್ಕೊಂದು ಸಾಮಾಜಿಕ ಬದ್ಧತೆಯಿದೆ, ಶಿಕ್ಷಣದ ಜೊತೆಜೊತೆಗೆ ಈ ರಂಗಭೂಮಿ ಕಲೆಗಳಲ್ಲಿ ಮಕ್ಕಳು ತಮ್ಮನ್ನ ತಾವು ತೊಡಗಿಸಿಕೊಂಡರೆ ಅವರು ವಿಚಾರವಂತರಾಗುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಹಾಗೇ ನಿರ್ಮಲ ಹೋಲಿ ಫ್ಯಾಮಿಲಿ ಚರ್ಚ್ ಫಾದರ್ ಜಾನ್ ಫೆರ್ನಾಂಡೀಸ್ ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇನ್ನು ಇದೇ ವೇಳೆ ರಂಗನಿರ್ದೇಶಕ ಬಾಸುಮ ಕೊಡಗು ಅವರು ಮಾತನಾಡಿ “ರಂಗಭೂಮಿ ಎಲ್ಲಾ ವೃತ್ತಿಯವರನ್ನ ಮಾನವರನ್ನಾಗಿಸುವ ಪ್ರಕ್ರಿಯೆಯನ್ನು ಶತಮಾನಗಳಿಂದ ಮಾಡುತ್ತಿದೆ” ಎಂದು ಹೇಳಿದರು. ಜೊತೆಗೆ ಮತ್ತೋರ್ವ ಅತಿಥಿ ಉದ್ಯಾವರ ನಾಗೇಶ್ ಕುಮಾರ್ ರಂಗೋತ್ಸವಕ್ಕೆ ಶುಭಹಾರೈಸಿದರು. ಮಂದಾರದ ಅಧ್ಯಕ್ಷರಾದ ರೋಹಿತ್ ಎಸ್. ಬೈಕಾಡಿ ಉಪಸ್ಥಿತತರಿದ್ದು ಅಸ್ತಿತ್ವ (ರಿ.) ಮಂಗಳೂರು ತಂಡದ ಅರುಣ್ ಲಾಲ್ ಕೇರಳ ನಿರ್ದೇಶನದ ಆಪ್ತ ರಂಗಭೂಮಿಯ ವಿಶಿಷ್ಟ ವಿನ್ಯಾಸದ ನಾಟಕ ‘ಮತ್ತಾಯ (22:39)’ ಪ್ರದರ್ಶನಗೊಂಡಿತು. ಈ ಸಮಾರಂಭದಲ್ಲಿ ಅನೇಕ ರಂಗಕರ್ಮಿಗಳು, ಕಲಾಭಿಮಾನಿಗಳು ಭಾಗವಹಿಸಿದರು.