ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ಶ್ರೀ ಸಂಸ್ಥಾನ ಒಡಿಯೂರು ತುಳು ಅಧ್ಯಯನ ಕೇಂದ್ರ, ವಂಡಾರು ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಇವುಗಳ ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನಾಂಕ 01-06-2023ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ತುಳು ವೆಬಿನಾರ್ಗಳ ಸಂಗ್ರಹ ‘ಗೇನದ ಗೆಜ್ಜೆ – ನೂದನೆ ಪಜ್ಜೆ’, ಶ್ರೀ ಮಂಜುನಾಥೇಶ್ವರ ತುಳು ಪೀಠದ ಮೂವತ್ತನೇ ವರ್ಷದ ನೆನಪಿನ ಸಂಚಿಕೆ ‘ತ್ರಿಂಶತಿ ತಿರುಳು’ ಮತ್ತು ಶುಭಾಶಯ ಜೈನ್ ಬರೆದ ಕೃತಿ ‘ಅಪ್ಪೆ ಅಂಜನೆ’ ಈ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡುತ್ತಾ “ತುಳು ಸುಲಲಿತ ಭಾಷೆ, ಅದಕ್ಕೆ ಮತ ಮತ್ತು ಧರ್ಮದ ಹಂಗಿಲ್ಲ, ಯಾರೂ ಕೂಡ ಮಾತನಾಡಬಹದು. ಬೇರೆ ಭಾಷೆಗಳಿಗಿಂತ ಸುಲಲಿತ ಅನ್ನುವ ಕಾರಣಕ್ಕೆ ತುಳುವನ್ನು ಸುಲಭವಾಗಿ ಕಲಿತು ಮಾತನಾಡುತ್ತಾರೆ. ಇಂತಹ ತುಳು ಭಾಷೆಗೆ ರಾಜ್ಯ ಭಾಷೆಯ ಸ್ಥಾನ ಸಿಗಬೇಕು. ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎನ್ನುವುದು ನಮ್ಮೆಲ್ಲರ ಅಪೇಕ್ಷೆ” ಎಂದು ಹೇಳಿದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ಲಕ್ಷ್ಮೀದೇವಿ ಆರ್. ಅಧ್ಯಕ್ಷತೆ ವಹಿಸಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಎಂ.ಎ. ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ., ನೂಪುರ ಯಕ್ಷೋತ್ಥಾನ ಟ್ರಸ್ಟಿನ ಸ್ಥಾಪಕಾಧ್ಯಕ್ಷ ಗೋವಿಂದ ವಂಡಾರು, ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿಯ ಸುರೇಂದ್ರ ಮಲ್ಲಿ, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಮೋಹನ್ ಪಡಿವಾಳ್, ರಾಜಶ್ರೀ ಎಸ್. ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ತುಳು ಸ್ನಾತಕೋತ್ತರ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮಿ ಆರ್. ಶೆಟ್ಟಿ ಸ್ವಾಗತಿಸಿ, ಗೀತಾ ಜೈನ್ ವಂದಿಸಿದರು. ದ್ವಿತೀಯ ವರ್ಷದ ತುಳು ಎಂ.ಎ. ವಿದ್ಯಾರ್ಥಿನಿ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯ ಸದಸ್ಯರಿಂದ ‘ಅಪ್ಪೆ ಅಂಜನೆ’ ಯಕ್ಷಗಾನ ಪ್ರಸಂಗದ ಚೊಚ್ಚಲ ಪ್ರದರ್ಶನ ನಡೆಯಿತು. ಜೊತೆಗೆ ಜೈ ಗುರುದೇವ ಕಲಾ ಕೇಂದ್ರದ ಮಕ್ಕಳಿಂದ ‘ಜನಪದ ಕುಣಿತ’ ಕಾರ್ಯಕ್ರಮ ಜನಮನ ಸೆಳೆಯಿತು.