ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ ಯಕ್ಷಾಯಣದ ಸರಣಿಯ 7ನೇ ಕಾರ್ಯಕ್ರಮ ದಿನಾಂಕ 06 ನವಂಬರ್ 2024ರಂದು ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಇವರ ಕಾಸರಗೋಡಿನ ಕೋಟೂರಿನ ಅಡ್ಕ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ 92 ವರ್ಷದ ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ ಮಾತನಾಡಿ “ತಾಳಮದ್ದಲೆ ವಾಕ್ ಪ್ರಧಾನವಾದರೆ ಬಯಲಾಟ ದೃಶ್ಯ ಪ್ರಧಾನ ಕಲೆ. ವಾಕ್ಪಟುಗಳು ಬಂದ ಮೇಲೆ ತಾಳಮದ್ದಳೆ ಮತ್ತು ಆಟ ಒಂದೇ ಎಂಬಂತಾಯಿತು. ಇದು ಸರಿಯಲ್ಲ. ಆಟ ದೃಶ್ಯವೈಭವದ ಕಲೆ. ಮಾತು ಮಿತಿಯನ್ನು ಮೀರಿದರೆ ಅದು ಕಲೆಗೆ ಭಾರವಾಗುತ್ತದೆ. ಹಿಂದೆ ಯಕ್ಷಗಾನಕ್ಕೆ ಇಷ್ಟು ವೈಭವವಿರಲಿಲ್ಲ. ಗುಡ್ಡದ ಮುಳಿಹುಲ್ಲು ಸವರಿ ತೆಗೆದು ಗುಡ್ಡದಲ್ಲಿ ನಾಲ್ಕು ಕಂಬ ನೆಟ್ಟು ರಂಗಸ್ಥಳ ನಿರ್ಮಿಸುತ್ತಿದ್ದರು. ದೀವಟಿಗೆ ಹಿಡಿದವರು ವೇಷಗಳ ಹಿಂದೆ ಮುಂದೆ ಸಾಗಬೇಕಿತ್ತು. ‘ಹೆಂಡತಿಯಲ್ಲಿ ಕೋಪವಿದ್ದರೆ ದೀವಟಿಗೆಯವನಿಗೆ ಪೆಟ್ಟು’ ಎಂಬ ಗಾದೆ ಮಾತು ಹೀಗೆ ಹುಟ್ಟಿಕೊಂಡದ್ದು. ಕರ್ನಾಟಕ ಮೇಳದ ಕೊರಗ ಶೆಟ್ರು ಯಕ್ಷಗಾನದ ರಂಗಕ್ಕೆ ವೈಭವವನ್ನು ತಂದವರು. ಅವರು ತಿರುಗುವ ರಂಗಸ್ಥಳದ ಪ್ರಯೋಗವನ್ನೂ ಮಾಡಿದ್ದರು. ಕೊಳಂಬೆ, ಕಂಡೆತ್ತೋಡಿ, ಕೀರಿಕ್ಕಾಡು, ಶೇಣಿ, ಸಾಮಗರಂತಹ ದಿಗ್ಗಜರೊಂದಿಗೆ ಕಲಿತು ಕಲಾವಿದನಾಗಿ ಬೆಳೆದೆ. ಸೌಮ್ಯ, ಕರುಣ ನನಗೆ ಇಷ್ಟವಾದರೂ ರಂಗದಲ್ಲಿ ದೊರಕಿದ್ದು ಎದುರು ವೇಷವೇ. ಅಶ್ವಮೇಧದ ವೀರವರ್ಮ, ದೇವಿಮಹಾತ್ಮೆಯ ಮಹಿಷಾಸುರ ಮೊದಲಾದ ಪಾತ್ರಗಳು ನನಗೆ ಪ್ರಸಿದ್ಧಿತಂದು ತಂದುಕೊಟ್ಟಿತು. ಯಕ್ಷಗಾನವನ್ನು ಮಲಯಾಳದಲ್ಲಿ ಪ್ರದರ್ಶಿಸಿ ಕೇರಳದಲ್ಲಿ ಜನಪ್ರೀತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು. ಶಬರಿಮಲೆ ಅಯ್ಯಪ್ಪ, ದೇವಿ ಮಹಾತ್ಮೆ, ಕಂಸವಧೆ ಮೊದಲಾದ ಪ್ರಸಂಗಗಳು ಮಲಯಾಳ ನಾಡಿನಲ್ಲಿ ಪ್ರಸಿದ್ಧವಾಯಿತು. ಕಲಾವಿದ ದುಡ್ಡಿನ ಹಿಂದೆ ಬೀಳಬಾರದು. ಉತ್ತಮ ಕಲಾವಿದನಿಗೆ ಗೌರವ ಮತ್ತು ದುಡ್ಡು ಎರಡೂ ಸಹಜವಾಗಿಯೇ ಒದಗುತ್ತದೆ.” ಎಂದರು.
ಸಮಾರಂಭದಲ್ಲಿ ಅಡ್ಕಾಭಿನಂದನೆ ಮಾಡಿದ ಯಕ್ಷಗಾನ ಅರ್ಥದಾರಿ ಗಣರಾಜ ಕುಂಬ್ಳೆ ಮಾತನಾಡಿ “ಕಲಾವಿದನಿಗೆ ಆತನ ಶರೀರ ಸೌಂದರ್ಯ ಮತ್ತು ಕಂಠ ಶಕ್ತಿ ಮುಖ್ಯವಾದುದು. ಅಡ್ಕದವರಲ್ಲಿವೆ ಅದೆರಡೂ ಶ್ರೀಮಂತವಾಗಿತ್ತು.” ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ “ಅಡ್ಕದವರಿಗೆ ಪ್ರೇಕ್ಷಕರಿಗೆ ಸ್ಪಂದಿಸುವ ಗುಣವಿತ್ತು ಹಾಗೂ ಅವರೊಬ್ಬ ಉತ್ತಮ ಪ್ರಸಂಗಕರ್ತರು.” ಎಂದರು. ಕೇಂದ್ರದ ವತಿಯಿಂದ ಇದೇ ಸಂದರ್ಭದಲ್ಲಿ ಅಡ್ಕ ಗೋಪಾಲಕೃಷ್ಣ ಭಟ್ಟರನ್ನು ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಸನ್ಮಾನಿಸಿದರು.
ಸಭೆಯಲ್ಲಿ ಕಲಾವಿದ ನಾ. ಕಾರಂತ ಪೆರಾಜೆ, ರಾಜೇಂದ್ರ ಕಲ್ಲೂರಾಯ, ಭಾಗವತ ತಲ್ಪಣಾಜೆ ವೆಂಕಟರಮಣ ಭಟ್, ಮುರಳೀಧರ ಕಲ್ಲೂರಾಯ, ವಿ. ವಿ. ಕನ್ನಡ ವಿಭಾಗದ ಚಂದ್ರಶೇಖರ ಎಂ. ಬಿ., ರತ್ನಾಕರವರ್ಣಿ ಪೀಠದ ಪ್ರಸಾದ್, ಯಕ್ಷಗಾನ ಕೇಂದ್ರದ ಸ್ವಾತಿರಾವ್, ಅಡ್ಕ ಮನೆಯ ಬಂಧುಗಳು ಭಾಗವಹಿಸಿದ್ದರು. ಬಳಿಕ ‘ಸುಭದ್ರಾ ಕಲ್ಯಾಣ’ ತಾಳಮದ್ದಲೆ ನಡೆಯಿತು.