ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಾರದಾ ಸಂಸ್ಥೆಗಳ ಆಶ್ರಯದಲ್ಲಿ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವು ದಿನಾಂಕ 16-06-2023ರಂದು ಮಂಗಳೂರಿನ ಶಾರದಾ ವಿದ್ಯಾನಿಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ “ಮೊಬೈಲ್ ಹಾಗೂ ಟಿ.ವಿ.ಗಳ ಬಳಕೆಯಿಂದ ಇಂದು ಪುಸ್ತಕ ಓದುವವರು ಕಡಿಮೆಯಾಗಿದ್ದಾರೆ. ಪತ್ರ ಬರೆಯುವುದು ನಿಂತು ಹೋಗಿರುವ ಈ ಸಂದರ್ಭದಲ್ಲಿ ಮಕ್ಕಳಲ್ಲಿ ಪುಸ್ತಕ ಓದುವ ಆಸಕ್ತಿಯೊಂದಿಗೆ ಅಭ್ಯಾಸವನ್ನೂ ಬೆಳೆಸಿಕೊಳ್ಳುವಂತೆ ಮಾಡಬೇಕು. ಒಬ್ಬ ಶಿಕ್ಷಕನಾಗಿ, ಭಾರತೀಯನಾಗಿ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ನನಗೆ ಕಾಳಜಿ ಇದೆ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ದಯಾನಂದ ರಾಮಚಂದ್ರ ನಾಯಕ್ ಮಾತನಾಡುತ್ತಾ ವಿದ್ಯಾರ್ಥಿಗಳ ಜ್ಞಾನವರ್ಧನೆಯ ಕಾರ್ಯದಲ್ಲಿ ಶ್ರೀ ಬಿ.ಆರ್. ನರಸಿಂಹ ರಾವ್ ರಂಥ ದಾನಿಗಳು ಮುಂದೆ ಬಂದು ಪುಸ್ತಕಗಳನ್ನು ನೀಡಿರುವುದು ಶ್ಲಾಘನೀಯ ಎಂದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಹೆಚ್.ಎಲ್. ಈಶ್ವರ ಮಾತನಾಡುತ್ತಾ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಜೀವನದಲ್ಲಿ ಉನ್ನತ ಸಾಧನೆ ಮಾಡಿದವರೂ ಇದ್ದಾರೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೆಲ್ಲ ಕನ್ನಡ ಮಾಧ್ಯಮದಲ್ಲಿಯೇ ಕಲಿತವರು. ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಕೊಡಿಸಬೇಕು. ನಾನು ನನ್ನ ಇಬ್ಬರೂ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡ ಮಾಧ್ಯಮದಲ್ಲಿಯೇ ಅದೂ ಸರ್ಕಾರಿ ಶಾಲೆಯಲ್ಲಿಯೇ ಕೊಡಿಸಿದ್ದಾಗಿ ಅಭಿಮಾನದಿಂದ ಹೇಳಿದರು.
ಪುಸ್ತಕ ದಾನಿಗಳಾದ ಉಡುಪಿಯ ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀ ಬಿ.ಆರ್. ನರಸಿಂಹ ರಾವ್ ಮಾತನಾಡಿ “ಜ್ಞಾನ ಎಂದರೆ ತಿಳುವಳಿಕೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿ, ಈ ದೇಶದ ಉತ್ತಮ ಪ್ರಜೆಗಳಾಗಲಿ ಎಂಬುವುದೇ ನನ್ನ ಆಶಯ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಮಾತನಾಡಿ ಪುಸ್ತಕ ದಾನಿ ಶ್ರೀ ಬಿ.ಆರ್. ನರಸಿಂಹ ರಾವ್ ಪುತ್ತೂರು ಇವರು ಬೆಳ್ತಂಗಡಿ, ಕಡಬ ಹಾಗೂ ಉಡುಪಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಈ ಮೊದಲೇ ಪುಸ್ತಕಗಳನ್ನು ನೀಡಿದ್ದು, ತನ್ನ ಆದಾಯದ ಶೇಕಡಾ 75ರಷ್ಟನ್ನು ಸಮಾಜಕ್ಕೆ ನೀಡಬೇಕು. ಅದು ವಿದ್ಯಾರ್ಥಿಗಳಿಗೆ ಪುಸ್ತಕದ ರೂಪದಲ್ಲಿಯೇ ನೀಡಬೇಕೆಂದು ಹೇಳಿದ ದಾನಿಗಳ ಮಾತನ್ನು ನೆನಪಿಸಿಕೊಂಡರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿ ಸ್ವೀಕರಿಸಿದ ಡಾ. ಎಂ.ಬಿ. ಪುರಾಣಿಕ್ ಇವರನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವಿಸಲಾಯಿತು. ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಸದಾನಂದ ಪೂಂಜ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ರೇವಣಕರ್ ಉಪಸ್ಥಿತರಿದ್ದರು. ದ.ಕ.ಜಿ.ಕ.ಸಾ.ಪ. ಇದರ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ರಾಜೇಶ್ವರಿ ಎಂ. ಸ್ವಾಗತಿಸಿ, ವಿನಯ್ ಆಚಾರ್ಯ ಹೆಚ್. ಧನ್ಯವಾದ ಸಮರ್ಪಿಸಿದರು. ಶಾರದಾ ವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಶ್ರೀಮತಿ ಯಶೋದಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಾಹಿತ್ಯ ಪ್ರತಿನಿಧಿ ಶ್ರೀಮತಿ ಅರುಣಾ ನಾಗರಾಜ್ ಸಹಕರಿಸಿದರು.