ಮಂಗಳೂರು : ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಸಾಹಿತ್ಯೋತ್ಸವದ 7ನೇ ಆವೃತ್ತಿ ನಗರದ ಡಾ. ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ದಿನಾಂಕ 11 ಜನವರಿ 2025 ಮತ್ತು 12 ಜನವರಿ 2025ರಂದು ಆಯೋಜನೆಗೊಂಡಿದೆ. ಮುಖ್ಯ ಅತಿಥಿ ಶತಾವಧಾನಿ ಡಾ. ಆರ್. ಗಣೇಶ್ ಮತ್ತು ನಾಡಿನ ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಇವರಿಂದ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟನೆಗೊಳ್ಳಲಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನೀಲ್ ಕುಲಕರ್ಣಿ ತಿಳಿಸಿರುತ್ತಾರೆ.
ಈ ಬಾರಿಯ ಸಾಹಿತ್ಯೋತ್ಸವದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ವಿಕ್ರಮ್ ಸೂದ್, ಭಾರತದ ಮಾಜಿ ರಾಜತಾಂತ್ರಿಕ ಮತ್ತು ಲೇಖಕ ದಿಲೀಪ್ ಸಿನ್ಹಾ, ಮಾಜಿ ಪೊಲೀಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಶತಾವಧಾನಿ ಡಾ. ಆರ್. ಗಣೇಶ್, ಇತಿಹಾಸಕಾರ ಮತ್ತು ಲೇಖಕ ಡಾ. ವಿಕ್ರಮ್ ಸಂಪತ್, ಜೆ.ಎನ್.ಯು. ಉಪ ಕುಲಪತಿ ಡಾ. ಶಾಂತಿಶ್ರೀ ದುಲಿಪುಡಿ ಪಂಡಿತ್, ಸ್ವಾಮಿ ಮಹಾಮೇಧಾನಂದ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್, ಹಿಮಾಲಯ ಭೌಗೋಳಿಕ ರಾಜಕೀಯ ತಜ್ಞ ಡಾ. ಕ್ಲಾಡ್ ಅರ್ಪಿ, ರಾಜಕೀಯ ತಜ್ಞ, ಮಾಜಿ ಸಂಸದ ಡಾ. ವಿನಯ್ ಸಹಸ್ರಬುದ್ಧೆ, ಸಂಸ್ಕೃತ ಕಂಟೆಂಟ್ ಕ್ರಿಯೇಟರ್ ಸಮಷ್ಠಿ ಗುಬ್ಬಿ, ಸಂಸ್ಕೃತ ವಿದ್ವಾಂಸ ಮತ್ತು ಲೇಖಕ ಡಾ. ಎಚ್.ಆರ್ ವಿಶ್ವಾಸ್, ಸೃಜನಶೀಲ ಶಿಕ್ಷಕಿ ವಂದನಾ ರೈ ಸೇರಿದಂತೆ 60ಕ್ಕೂ ಅಧಿಕ ಭಾಷಾ ತಜ್ಞರು, ಹಿರಿಯ ಸಾಹಿತಿಗಳು, ಉದಯೋನ್ಮುಖ ಬರಹಗಾರರು, ಲೇಖಕರು, ಯುವ ಕವಿಗಳು, ವಾಗ್ಮಿಗಳು ಪಾಲ್ಗೊಳ್ಳಲಿದ್ದಾರೆ.
ದಿನಾಂಕ 11 ಜನವರಿ 2025ರಂದು ಬೆಳಗ್ಗೆ 9-30 ಗಂಟೆಗೆ ಶ್ರೀಜಿತ್ ಸರಳಾಯ ಇವರಿಂದ ಹಾಡುಗಾರಿಕೆ ‘ಉದಯ ರಾಗ’, 10-45 ಗಂಟೆಗೆ ಎನರ್ಜಿ ಫಾರ್ ಸರ್ವೆವೈಲ್, ಸೆಕ್ಯುರಿಟಿ ಆ್ಯಂಡ್ ಕ್ಲೈಮೇಟ್ ಡಿಬೇಟ್ ವಿಷಯದ ಅವಧಿಯಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಭಾಗವಹಿಸುವರು. 11-45ಕ್ಕೆ ವಿಕ್ರಮ್ ಸೂದ್ ಅವರ ಅವಧಿ ಏರ್ಪಡಿಸಲಾಗಿದೆ. 11-45ಕ್ಕೆ ಪತ್ರಿಕೋದ್ಯಮ ಮತ್ತು ಸಾಹಿತ್ಯ : ಒಂದು ಹರಟೆ ಗೋಷ್ಠಿಯಲ್ಲಿ ಜೋಗಿ, ರವಿ ಹೆಗಡೆ ಪಾಲ್ಗೊಳ್ಳುವರು. ಮಧ್ಯಾಹ್ನ 2-00 ಗಂಟೆಗೆ ಸಂಸ್ಕೃತದ ಬಗ್ಗೆ ಸಂಸ್ಕೃತ ಭಾಷೆಯಲ್ಲೇ ಗೋಷ್ಠಿ ನಡೆಯಲಿದೆ. ಸಂಜೆ 5-00ಕ್ಕೆ ಡೆಮಾಕ್ರೆಸಿ ಆ್ಯಂಡ್ ಡೆಮಾಕ್ರೆಟಿಕ್ ಗವರ್ನೆನ್ಸ್ ಬಗ್ಗೆ ಕೆ. ಅಣ್ಣಾಮಲೈ ಮಾತನಾಡುವರು. ಸಂಜೆ 4-15ಕ್ಕೆ ಅಂಧರಿಗೆ ವಿಶೇಷ ಅವಧಿಯೊಂದನ್ನು ಆಯೋಜಿಸಲಾಗಿದೆ. ಜಾನಪದ : ಗೊಂದಲಿಗರ ಪದಗಳು-ಹಾಡು ಮತ್ತು ಕಥೆ ಗೋಷ್ಠಿ ಬೆಳಗಾವಿ ಪ್ರದೇಶದ ಗೊಂದಲಿಗೆ ಸಮುದಾಯದ ಬಗ್ಗೆ ಆಯೋಜನೆಗೊಂಡಿದೆ. ತುಳು ಸಾಹಿತ್ಯ: ಆಳ-ಅಗಲ- ಆವಿಷ್ಠಾರಗಳು ವಿಷಯದ ಬಗ್ಗೆ ಮಧ್ಯಾಹ್ನ 2-00 ಗಂಟೆಗೆ ಡಾ. ತುಕಾರಾಂ ಪೂಜಾರಿ ಮಾತನಾಡುವರು. ಜತೆಗೆ ತುಳು ಲಿಪಿ ಅಭ್ಯಾಸ ಕಾರ್ಯಾಗಾರ, ಮಣ್ಣಿನ ಮಡಿಕೆ ತಯಾರಿ ಪ್ರಾತ್ಯಕ್ಷಿಕೆ, ಮಕ್ಕಳಿಗಾಗಿ ಹಾಡು ಹಾಗೂ ನೃತ್ಯ ಕಾರ್ಯಕ್ರಮ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕ್ವಿಝ್ ನ ಅಂತಿಮ ಸುತ್ತು ನಡೆಯಲಿದೆ.
ದಿನಾಂಕ 12 ಜನವರಿ 2025ರಂದು ಬೆಳಗ್ಗೆ 9-30 ಗಂಟೆಗೆ ಮೇಧಾ ಉಡುಪ ಇವರಿಂದ ಹಾಡುಗಾರಿಕೆ ‘ಉದಯ ರಾಗ’, 10-15 ಗಂಟೆಗೆ ಹಿಮಾಲಯನ್ ಜಿಯೋಪೊಲಿಟಿಕ್ಸ್ ಬಗ್ಗೆ ಡಾ. ಕ್ಲಾಡ್ ಅರ್ಪಿ, ದಿಲೀಪ್ ಸಿನ್ಹಾ, ಜಂಗ್ ಚುಪ್ ಚೋಡೆನ್ ಮಾತನಾಡುವರು. 11-00ಕ್ಕೆ ಡಾ. ಎಸ್.ಎಲ್. ಭೈರಪ್ಪ ಅವರ ಜತೆ ಸಂವಾದ ನಡೆಯಲಿದೆ. ಮಧ್ಯಾಹ್ನ 12-15ಕ್ಕೆ ಐಕಾನ್ಸ್ ಫಾರ್ ಟುಡೆ ಡೊಸ್ ಆ್ಯಂಡ್ ಡೋಂಟ್ಸ್ ಗೋಷ್ಠಿಯಲ್ಲಿ ಡಾ. ವಿಕ್ರಮ್ ಸಂಪತ್, ಪ್ರಕಾಶ್ ಬೆಳವಾಡಿ ಭಾಗವಹಿಸುವರು. ಮಧ್ಯಾಹ್ನ 2-00 ಗಂಟೆಗೆ ಅಂಬೇಡ್ಕರ್ ಮತ್ತು ಸಂವಿಧಾನ: ಸತ್ಯ-ಮಿಥ್ಯ ಗೋಷ್ಠಿಯಲ್ಲಿ ವಿಕಾಸ್ ಕುಮಾರ್ ಪಿ. ಹಾಗೂ ಎನ್. ಮಹೇಶ್ ಮಾತನಾಡುವರು. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆಯಲ್ಲಿ ಒಟ್ಟು 29 ಅವಧಿಗಳನ್ನು ಉತ್ಸವವು ಹೊಂದಿದೆ.
ಲಿಟ್ ಫೆಸ್ಟ್ ನಲ್ಲಿ ಒಟ್ಟು 14 ಪುಸ್ತಕಗಳು ಬಿಡುಗಡೆಗೊಳ್ಳಲಿವೆ. ಈ ಪೈಕಿ ಆರು ಇಂಗ್ಲೀಷ್ ಮತ್ತು ಎಂಟು ಕನ್ನಡ ಪುಸ್ತಕ, ಆಯಾ ಪುಸ್ತಕದ ಲೇಖಕರು ಭಾಗವಹಿಸಿ ಚರ್ಚೆ ನಡೆಸಲಿದ್ದಾರೆ. ಈ ಬಾರಿಯ ಲಿಟ್‌ಫೆಸ್ಟ್ ಗೌರವಕ್ಕೆ ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಡಾ. ಬಾಲಸುಬ್ರಮಣ್ಯಂ ಇವರನ್ನು ಆಯ್ಕೆ ಮಾಡಲಾಗಿದ್ದು, ಜನವರಿ 12ರಂದು ಬೆಳಗ್ಗೆ 10-00 ಗಂಟೆಗೆ ಗೌರವ ಪ್ರದಾನ ನಡೆಯಲಿದೆ. ಡಾ. ಬಾಲಸುಬ್ರಮಣ್ಯಂ ಇವರು ಚಾಮರಾಜನಗರ, ಮೈಸೂರು ಪ್ರದೇಶಗಳಲ್ಲಿ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.