ಮಂಗಳೂರು: ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಗರದ ರಾಮಕೃಷ್ಣ ಕಾಲೇಜಿನಲ್ಲಿ ದಿನಾಂಕ : 03-07-2023ರಂದು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಪದಾಧಿಕಾರಿಗಳ ಘೋಷಣೆ ನಡೆಯಿತು. ‘ಸಾಹಿತ್ಯ ಮತ್ತು ವಿದ್ಯಾರ್ಥಿಗಳು’ ವಿಷಯದ ಬಗ್ಗೆ ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಕತೆಗಾರ ಜೋಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ “ಸಾಹಿತ್ಯದಲ್ಲಿ ನಿಜವಾದ ಸಂತೋಷ ಅಡಗಿದೆ. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಸಾಹಿತ್ಯದಲ್ಲೂ ಬದಲಾವಣೆ ಆಗುತ್ತಿದೆ. ಯುವಜನತೆ ಓದಿನ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯದ ಸಂತಸವನ್ನು ಅನುಭವಿಸಬೇಕು. ಸಾಹಿತ್ಯ ಓದೋದನ್ನು ಕೇಳೋದನ್ನು ಕಲಿಯಬೇಕು. ಒಮ್ಮೆ ಅದರ ರುಚಿ ಸಿಕ್ಕರೆ ಸಾಹಿತ್ಯದ ದಾಸರಾಗುತ್ತೀರಿ. ವಿದ್ಯಾರ್ಥಿಗಳು ಪಾಠವನ್ನು ಕತೆಯಂತೆಯೇ ಆಸಕ್ತಿಯಿಂದ ಓದಬೇಕು” ಎಂದರು.
ರಾಮಕೃಷ್ಣ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಾಧವ ಉಪಸ್ಥಿತರಿದ್ದರು.
ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶೈಲೇಶ್ ಕುಲಾಲ್ ದ.ಕ. ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಹೆಸರು ಘೋಷಿಸಿದರು. ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸ್ವಾಗತಿಸಿ, ರಾಮಕೃಷ್ಣ ಕಾಲೇಜಿನ ಕನ್ನಡ ಪ್ರಾಧ್ಯಾಪಕ ನಟೇಶ್ ಆಳ್ವ ವಂದಿಸಿ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು.