ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಯುವಸಿಂಚನ ಸಂಪಾದಕ ಮಂಡಳಿಯ ಆಶ್ರಯದಲ್ಲಿ ದಿನಾಂಕ 30-07-2023ರಂದು ಮಂಗಳೂರು ಉರ್ವ ಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಸಾಹಿತ್ಯ ಸಂಗಮ ಬರಹಗಾರರ ಸಮಾಗಮ ಕಾರ್ಯಕ್ರಮವು ಉದ್ಘಾಟನೆ ಗೊಂಡಿತು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀ ರಾಜೇಶ್ ಬಿ. ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಿ.ಎಂ.ರೋಹಿಣಿಯವರು ಮಂಗಳ ದೀಪವನ್ನು ಬೆಳಗಿ ಉದ್ಘಾಟಿಸಿ ಮಾತನಾಡುತ್ತಾ “ಸಾಹಿತ್ಯವನ್ನು ಪ್ರೀತಿಸಲು ಕಲಿಯಿರಿ, ಬರವಣಿಗೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಸಾಹಿತ್ಯದ ರೂಪದಲ್ಲಿ ನಾವು ಕಂಡುಕೊಳ್ಳಬಹುದು. ಮಹಿಳೆಯರು ಸಾಹಿತ್ಯ ಕ್ಷೇತ್ರವನ್ನು ಬಹು ಬೇಗ ರೂಢಿಸಿಕೊಳ್ಳುತ್ತಾರೆ.” ಎಂದರು
ಕಾರ್ಯಕ್ರಮದಲ್ಲಿ ದಾವಣಗೆರೆಯ ಉಪನ್ಯಾಸಕ ಫ್ರಾನ್ಸಿಸ್ ಗ್ಸೇವಿಯರ್ ಅವರು ‘ಕೃತಿ ಸಾಮ್ಯತೆ ಹಾಗೂ ಪ್ರಕಾಶನದ ಬಗ್ಗೆ’, ಮೂಡಬಿದಿರೆಯ ಆಳ್ವಾಸ್‌ನ ಉಪನ್ಯಾಸಕರಾದ ಡಾ. ಯೋಗೀಶ್ ಕೈರೋಡಿಯವರು ‘ಬರವಣಿಗೆಯಲ್ಲಿ ಅಧ್ಯಯನಶೀಲತೆ’ಎಂಬ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಶ್ರೀ ಅನೀಶ್ ಪೂಜಾರಿ ವೇಣೂರು ಇವರು ನಮ್ಮ ಮನಸ್ಸಿನ ಗಟ್ಟಿತನ ಹಾಗೂ ಕಲಾತ್ಮಕತೆಯ ಬಗ್ಗೆ ವಿಶೇಷ ಆಟದ ಮೂಲಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 60 ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಲಾಯಿತು. ಸಾಹಿತ್ಯ ಸಂಗಮ ಬರಹಗಾರರ ಸಮಾಗಮ ಕಾರ್ಯಕ್ರಮದ ಪ್ರಯುಕ್ತ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಕೂಳೂರು ಘಟಕ ಹಾಗೂ ದ್ವಿತೀಯ ಕಾರ್ಕಳ ಘಟಕದ ಅಧ್ಯಕ್ಷರುಗಳಿಗೆ ಪಾರಿತೋಷಕವನ್ನು ಕಾರ್ಯಕ್ರಮದ ಅಧ್ಯಕ್ಷರು ಪ್ರದಾನಿಸಿದರು. ಚೇತನ್ ವರ್ಕಾಡಿ, ಜಯರಾಂ ಕಾರಂದೂರು, ಸಾಧು ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದ್ದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಶ್ರೀ ಹರೀಶ್ ಕೆ, ಪ್ರಧಾನ ಕಾರ್ಯದರ್ಶಿ ಶ್ರೀ ಕುಸುಮಾಕರ ಕುಂಪಲ, ನಿಕಟಪೂರ್ವ ಅಧ್ಯಕ್ಷ ಶ್ರೀ ಉದಯ ಅಮೀನ್ ಮಟ್ಟು, ಸಲಹೆಗಾರರಾದ ಶ್ರೀ ಟಿ.ಎನ್. ಪೂಜಾರಿ, ಯುವ ಸಿಂಚನದ ಸಂಪಾದಕ ಶ್ರೀ ದಿನಕರ್ ಡಿ. ಬಂಗೇರ, ಸಂಪಾದಕ ಬಳಗದ ಶ್ರೀ ಸ್ಮಿತೇಶ್ ಬಾರ್ಯ, ಶ್ರೀ ವಿಶು ಕುಮಾರ್, ದತ್ತಿ ನಿಧಿ ಕಾರ್ಯದರ್ಶಿ ಶ್ರೀ ರಾಜೇಶ್ ಬಲ್ಯ ಉಪಸ್ಥಿತರಿದ್ದರು. ಯುವ ಸಿಂಚನದ ಕಾರ್ಯನಿರ್ವಾಹಕ ಸಂಪಾದಕ ಶ್ರೀ ಜಗದೀಶ್‌ಚಂದ್ರ ಡಿ.ಕೆ. ಸ್ವಾಗತಿಸಿ, ಕಾರ್ಯದರ್ಶಿ ಶ್ರೀ ರೋಹಿತ್ ವಂದಿಸಿ, ರಶ್ಮಿತಾ ಸನಿಲ್ ಮತ್ತು ಅರ್ಚನಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.