ಶಿವಮೊಗ್ಗ : ಮಾಣಿಕ್ಯ ಪ್ರಕಾಶನ (ರಿ.) ಹಾಸನ ಇದರ ವತಿಯಿಂದ ‘ರಾಜ್ಯ ಮಟ್ಟದ ಎಂಟನೇ ಕವಿಕಾವ್ಯ ಸಂಭ್ರಮ 2024’ವನ್ನು ದಿನಾಂಕ 28 ಸೆಪ್ಟೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾಣಿಕ್ಯ ಪ್ರಶಸ್ತಿ ಹಾಗೂ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಠಿ ನಡೆಯಲಿವೆ.
ಸಾಹಿತಿ ಡಾ. ಎಚ್.ಕೆ. ಹಸೀನಾ ಇವರ ಅಧ್ಯಕ್ಷತೆಯಲ್ಲಿ ಪ್ರಸಿದ್ಧ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರಾದ ಟಿ. ಸತೀಶ್ ಜವರೇಗೌಡ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಉಡುಪಿಯ ಸಾಹಿತಿ ಪ್ರಭಾವತಿ ಶೆಡ್ತಿ ಕಾವಡಿ ಇವರು ಕಾರ್ಕಳದ ಸಾವಿತ್ರಿ ಮನೋಹರ್ ಇವರ “ನಮ್ಮ ಸಂಸಾರ ಆನ್ ಲೈನ್ ಅವಾಂತರ” ಕೃತಿಗೆ “ಪ್ರಭಾವತಿ ಶೆಡ್ತಿ ದತ್ತಿ – ನಾಟಕ ಮಾಣಿಕ್ಯ ಪ್ರಶಸ್ತಿ”, ಮೋಹನ ಎಂ.ಕೆ. ತುರುವೇಕೆರೆ ಇವರು ಕುಂದಾಪುರ ತಾಲೂಕಿನ ವೀಣಾ ರಾವ್ ಇವರ “ಮಧುರ ಮುರುಳಿ” ಕೃತಿಗೆ “ದಿ. ಮಹಾದೇವಮ್ಮ ಈ. ಕೃಷ್ಣಯ್ಯ ಸ್ಮಾರಕ ದತ್ತಿ – ಕಾದಂಬರಿ ಮಾಣಿಕ್ಯ ಪ್ರಶಸ್ತಿ”, ಶಿವಮೊಗ್ಗದ ಸೈಯದ್ ಮುಹಿಬುಲ್ಲಾ ಖಾದ್ರಿ ಇವರು ಬೆಳಗಾವಿ ಜಿಲ್ಲೆಯ ಈಶ್ವರ ಮಮದಾಪೂರ ಇವರ “ಕಣ್ಣೊಳಗಿನ ಕಣ್ಣು” ಕೃತಿಗೆ “ದಿ. ಫಾತಿಮಾಭಿ ಜನಾಬ್ ಸೈಯದ್ ಅಬ್ದುಲ್ ಘನೀ ಸಾಬ್ ಸ್ಮಾರಕ ದತ್ತಿ – ಗಜಲ್ ಮಾಣಿಕ್ಯ ಪ್ರಶಸ್ತಿ”, ರಾಯಚೂರಿನ ಹಿರಿಯ ಸಾಹಿತಿ ರೇಷ್ಮಾ ಕಂದಕೂರ ಇವರು ಬಾಗಲಕೋಟ ಜಿಲ್ಲೆಯ ಮುರ್ತುಜಾಬೇಗಂ ಕೊಡಗಲಿಯವರ “ಗಿಲಿಗಿಂಚಿ” ಕೃತಿಗೆ “ಕೆ.ವೈ. ಕಂದಕೂರ ದತ್ತಿ – ಚುಟುಕು ಮಾಣಿಕ್ಯ ಪ್ರಶಸ್ತಿ” ಪ್ರದಾನ ಮಾಡಲಿರುವರು.
ಶಿಕಾರಿಪುರದ ಕೊ.ಮ. ಮುತ್ತಣ್ಣ, ಕಡೂರು ಎಚ್. ಸುಂದರಮ್ಮ, ದಕ್ಷಿಣ ಕನ್ನಡದ ಮನ್ಸೂರು ಮುಲ್ಕಿ, ಶಿವಮೊಗ್ಗದ ಶಿ.ಜು. ಪಾಠ ಮತ್ತು ಖಾಕಿ ಕವಿ ಮಂಜುನಾಥ ಇವರಿಗೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೈಯದ್ ಸನಾವುಲ್ಲಾ ಇವರು ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಪರಾಹ್ನ 2-00 ಗಂಟೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ.