ಮಂಜೇಶ್ವರ : ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರ ಜನ್ಮದಿನಾಚರಣೆಯು ಗೋವಿಂದ ಪೈ ನಿವಾಸ ಗಿಳಿವಿಂಡು ಇಲ್ಲಿ ದಿನಾಂಕ 23-03-2024ರಂದು ನಡೆಯಿತು.
ಅಧ್ಯಕ್ಷತೆ ವಹಿಸಿದ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ ಸಾಲಿಯಾನ್ ತಿಂಗಳಿಗೊಂದು ಯಕ್ಷಗಾನ ಪ್ರದರ್ಶನವನ್ನೂ ಯಕ್ಷಗಾನ ಶಿಬಿರಗಳ ಆಯೋಜನೆಯನ್ನೂ ಸಾಧ್ಯವಾಗಿಸಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸಿ ತಿಂಗಳಿಗೊಂದು ತುಳು ಕಾರ್ಯಕ್ರಮ ನಡೆಸುವಂತೆ ಆಸಕ್ತರನ್ನು ಕೇಳಿಕೊಳ್ಳುವುದಾಗಿ ಹೇಳಿದರು. ವಿಶಾಲ ಸಭಾಭವನ ಇದೆ, ವಿದ್ಯುತ್ ವ್ಯವಸ್ಥೆಗೆ 57 ಲಕ್ಷ ಪಾಸಾಗಿದೆ. ಆ ಅನುದಾನ ಸಿಕ್ಕರೆ ವ್ಯವಸ್ಥೆ ಸಸೂತ್ರವಾಗಲಿದೆ ಎಂದು ಹೇಳಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿಷ್ಠಿತ ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ಸ್ವೀಕರಿಸಿದ್ದ ಡಾ. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಗೋವಿಂದ ಪೈಗಳ ಬದುಕು ಬರಹಗಳ ಕುರಿತು ಮಾತನಾಡಿ, ಡಾ. ರಮಾನಂದ ಬನಾರಿ ಅವರ ಅನುಪಸ್ಥಿತಿಯಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಇಲ್ಲಿ ಎಲ್ಲರೂ ಕಾರ್ಯಕ್ರಮ ನಡೆಸುವ ಅವಕಾಶವನ್ನು ತಮ್ಮದಾಗಿಸಬೇಕೆಂದು ಸಲಹೆ ಕೊಟ್ಟರು. ರವೀಂದ್ರನ್ ಪಾಡಿ ಅವರು ಪೈಗಳ ಗಿಳಿವಿಂಡು ಕವನದ ಸಾಲುಗಳನ್ನು ಮಲೆಯಾಳಕ್ಕೆ ಅನುವಾದಿಸಿ ಓದಿ ಹೇಳಿದರು. ಉಮೇಶ ಶಿರಿಯ ಮತ್ತು ಕುಶಾಲಾಕ್ಷಿ ಸುಂದರವಾದ ತುಳು ಕವಿತೆಗಳನ್ನು ಪ್ರಸ್ತುತಪಡಿಸಿದರು. ನಿರ್ಮಲಾ ಶೇಷಪ್ಪ ಖಂಡಿಗೆ, ನಿಧಿ ಶೆಟ್ಟಿ, ಪ್ರಮೀಳಾ ಚಿಳ್ಳಿಕ್ಕಾನ, ಶ್ಯಾಮಲಾ ರವಿರಾಜ್, ಶಶಿಕಲ ಟೀಚರ್ ಮತ್ತು ಮೇಘಶ್ರೀ ಸ್ವರಚಿತ ಕವನಗಳ ವಾಚನ ಮಾಡಿದರು.
ಕ.ಸಾ.ಪ. ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣರು ಈ ಸಂಕೀರ್ಣ ಮೈತುಂಬಿಕೊಂಡಿದ್ದು ಕನ್ನಡಪ್ರೇಮಿಗಳ, ಸಾಹಿತ್ಯಾಸಕ್ತರ ಆಕರ್ಷಣೆಯ ಕೇಂದ್ರವಾಗಬೇಕೆಂದು ಕರೆ ಕೊಟ್ಟರೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪರು ಮಾತನಾಡಿ 270 ಮಂದಿ ಯಕ್ಷಗಾನ ಕಲಾವಿದರಿಗೆ ಕೇವಲ ರೂ.2,000/-ದಂತೆ ಮಾಸಾಶನ ಸಿಗುತ್ತಿದ್ದು, ಇನ್ನೂ ಅನೇಕ ಮಂದಿಯ ಹೆಸರು ಸೇರ್ಪಡೆಯಾಗಬೇಕಿದೆ ಮಾತ್ರವಲ್ಲ, ಮಾಸಾಶನ ಮೊತ್ತವೂ ಹೆಚ್ಚಾಗಬೇಕಿದೆ ಎಂದೂ ಆಶಯ ವ್ಯಕ್ತಪಡಿಸಿದರು. ಡಾ. ರಮಾನಂದ ಬನಾರಿ ಇತ್ತೀಚೆಗೆ ದಾನ ಮಾಡಿದ ಮೊತ್ತದಲ್ಲಿ ಸಭಾಗೃಹದ ಛಾವಣಿಯನ್ನು ಸುಂದರವಾಗಿ ನಿರ್ಮಿಸಲು ಸಾಧ್ಯವಾದ ಬಗ್ಗೆ ಸಂತಸ ವ್ಯಕ್ತಪಡಿಸಲಾಯಿತು. ವನಿತಾ ಶೆಟ್ಟಿ, ಕೆ. ಕಮಲಾಕ್ಷ, ಜಯಂತ ಮಾಸ್ಟರ್, ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಬಾಲಕೃಷ್ಣ ಶೆಟ್ಟಿಗಾರ್ ಬಿ. ಮುಂತಾದವರ ಸಮ್ಮಿಲನದಲ್ಲಿ ದಿನಾಚರಣೆ ಸುಗಮವೆನಿಸಿತು.
ಗಿಳಿವಿಂಡು ಇದೀಗ ಅಗತ್ಯದ ಎಲ್ಲ ಸೌಕರ್ಯಗಳನ್ನು ಹೊಂದಿ ಭೌತಿಕವಾಗಿ ಅಮೋಘವೆನಿಸಿದೆ. ವಲಸೆ ಹೋಗುತ್ತಿರುವ ಕುಟುಂಬಗಳು, ಮಂಗಳೂರಲ್ಲಿ ಅಥವಾ ಇತರ ಹೊರ ರಾಜ್ಯಗಳಲ್ಲಿ ಬದುಕಿನ ದಾರಿ ಅರಸಿ ಹೋದವರು ರಾತ್ರಿ ಮಾತ್ರ ಮರಳುವರು. ಇನ್ನು ಸಾಹಿತ್ಯ ಪ್ರಿಯರ ಸಂಖ್ಯೆ ವಾಡಿಕೆಯಂತೆ ಕಡಿಮೆ ಆಗುತ್ತಿದ್ದು ಕಾರ್ಯಕ್ರಮಗಳನ್ನು ನಡೆಸುವ ಉತ್ಸಾಹ ಇತರರಲ್ಲಿ ಕಡಿಮೆ ಇದೆ.
ಬಹುಶಃ ಭಾಷೆ, ಸಂಸ್ಕೃತಿಗಳ ಕುರಿತು ಗೌರವ ಭಾವವುಳ್ಳವರು ಸಾಲಿಯಾನರು ಹೇಳಿದಂತೆ ಕೆಲವು ಸಲವಾದರೂ ಇಲ್ಲೇ ಸೇರುವಂತಾದರೆ ಪರಿಸ್ಥಿತಿ ಸುಧಾರಿಸೀತು. ಉನ್ನತ ವಿದ್ಯಾಕಾಂಕ್ಷಿಗಳು ಸದ್ಯ ಕರ್ನಾಟಕವನ್ನು ನಂಬಿ ಅತ್ತ ಹೋಗಿ ಅಲ್ಲೇ ಸಂಪಾದನೆಯ ಮಾರ್ಗ ಹಿಡಿಯುತ್ತಾರೆ.
ಕನ್ನಡ ಮಾಧ್ಯಮ ಶಾಲಾ ಮಕ್ಕಳು ವರ್ಷಕ್ಕೆ ಒಂದು ಸಲವಾದರೂ ಭೇಟಿ ಕೊಟ್ಟು, ಪೈಗಳು ತುಳಿದ ಈ ಮಣ್ಣಿನಲ್ಲಿ ಅಂದರೆ ಅವರ ನಿವಾಸದಲ್ಲಿ ಒಗ್ಗೂಡಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಿದರೂ ಈ ಸಂಕೀರ್ಣದ ಸದುಪಯೋಗವಾದೀತು. ಚಿಕ್ಕ ಸಾಹಿತ್ಯ ತರಬೇತಿ ಶಿಬಿರಗಳನ್ನು ನಡೆಸುವುದಕ್ಕೂ ಗೋವಿಂದ ಪೈಗಳ ಸಂಕೀರ್ಣ ಹೇಳಿ ಮಾಡಿಸಿದಂತಿದೆ.
ಪ್ರೊ. ಪಿ.ಎನ್. ಮೂಡಿತ್ತಾಯ