11 ಏಪ್ರಿಲ್ 2023, ಬೆಂಗಳೂರು: ಮಣಿ ಕೃಷ್ಣಸ್ವಾಮಿ ಅಕಾಡೆಮಿಯಿಂದ 7-04-2023 ರಂದು ಹಿರಿಯ ಗುರುಗಳಾದ ಸಂಗೀತ ಕಲಾಚಾರ್ಯ ನೀಲಾ ರಾಮ್ ಗೋಪಾಲ್ ಸಂಸ್ಮರಣಾ. ಕಾರ್ಯಕ್ರಮ, ಮಲ್ಲೇಶ್ವರ ಸೇವಾಸದನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ “ಮಂಜುನಾದ ‘ ಸಂಗೀತ ಕಛೇರಿ ಆಯೋಜಿಸಲಾಗಿತ್ತು. . ಹೆಸರಿಗೆ ತಕ್ಕಂತೆ ಮಂಜುನಾದ ನಾದಮಯವಾಗಿತ್ತು. ಶ್ರೀ ಧರ್ಮಸ್ಥಳ ಕ್ಷೇತ್ರದ ಕುರಿತು ರಚನೆಗಳನ್ನು ಶ್ರೀ ಶತಾವಧಾನಿ ಆರ್.ಗಣೇಶ್, ಶ್ರೀ ನಿತ್ಯಾನಂದ ರಾವ್, ಶ್ರೀ. ಎಂ.ನಾರಾಯಣ, ಶ್ರೀ ಕಡತೋಕ ಮಂಜುನಾಥ ಭಾಗವತರು ಹಾಗೂ ಶ್ರೀ ಮುರಳೀಧರ ಭಟ್ ಕಟೀಲು ರಚಿಸಿರುತ್ತಾರೆ.
ಛಂದೋಬದ್ಧವಾಗಿರುವ ಸಾಹಿತ್ಯಕ್ಕೆ ಅಳವಡಿಸಿರುವ ರಾಗ ತಾಳಗಳು ಬಹಳ ಸೂಕ್ತವಾಗಿದ್ದು, ಡಾ ರಾಜಕುಮಾರ ಭಾರತಿ ಅವರ ಅದ್ಭುತ ಸಂಗೀತ ಸಂಯೋಜನೆಯಿಂದ ಕೂಡಿತ್ತು. ಕಲಾವಿದರ ಮನೋಧರ್ಮ, ರಚನೆಗಳಿಗೆ ಹೊಂದಿಸಿರುವ ಚಿಟ್ಟೆ ಸ್ವರಗಳು ಸಹ ಸಾಹಿತ್ಯ ಮತ್ತು ರಾಗ ಭಾವಕ್ಕೆ ಮೇಳೈಸಿ ಮತ್ತಷ್ಟು ಮೆರಗು ತಂದು ಸುಂದರವಾಗಿ ಮೂಡಿ ಬಂತು. ಉತ್ತಮ ಹೊಂದಾಣಿಕೆಯೊಂದಿಗೆ ಪ್ರದರ್ಶನ ನೀಡಿದ ಯುವ ಪ್ರತಿಭೆಗಳಾದ ಶ್ರೇಯ ಕೊಳತ್ತಾಯ, ಅದಿತಿ ಪ್ರಹ್ಲಾದ, ಉಷಾ ರಾಮಕೃಷ್ಣ, ನಮ್ರತ ಸತ್ಯನಾರಾಯಣ, ಅಶ್ವಿಜ ಉಡುಪ, ಶರಣ್ಯ ಕೆ ಎನ್, ದಿವ್ಯಶ್ರೀ ಹಾಡುಗಾರಿಕೆಯಲ್ಲಿ, ಆರ್.ಕಾರ್ತಿಕೇಯ ವಯಲಿನ್ ನಲ್ಲಿ ಹಾಗೂ ಕೌಶಕ್ ಶ್ರೀದರ್ ಮೃದಂಗದಲ್ಲಿ ಉತ್ತಮ ಸಹಕಾರ ನೀಡಿದರು.
ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿದುಷಿ ನೀಲ ರಾಮಗೋಪಾಲರವರ ಶಿಷ್ಯೆಯಾದ ವಿದುಷಿ ವೃಂದ ಆಚಾರ್ಯ ವ್ಯಕ್ತಪಡಿಸಿದರು.
ದೀಕ್ಷಿತರು ಮುಂತಾದ ವಾಗ್ಗೇಯಕಾರರು ಅನೇಕ ಕ್ಷೇತ್ರಗಳನ್ನು ಕುರಿತು ಕೃತಿಗಳನ್ನು ರಚಿಸಿರುತ್ತಾರೆ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ರಚನೆಗಳು ಅಷ್ಟಾಗಿ ಕಂಡು ಬರುವುದಿಲ್ಲ ಎಂದು ಪ್ರಸ್ತಾವನ ಭಾಷಣದಲ್ಲಿ ತಿಳಿಸಿದ ಶ್ರೀ ಪಿ ನಿತ್ಯಾನಂದ ರಾವ್ , ಇದು ಮಂಜುನಾದದ 11ನೇ ಕಛೇರಿ ಎಂದೂ, ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಈ ಕೃತಿಗಳು ಪ್ರಚಾರಗೊಳ್ಳುತ್ತಿವೆ ಎಂದು ತಿಳಿಸಿದರು.
ಸಂಗೀತ ಕಚೇರಿಯ ಬಳಿಕ ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಕೊಡ ಮಾಡುವ ‘ಲಲಿತ ಕಲಾ ಪೋಷಕ ಮಣಿ-2022’ ಪ್ರಶಸ್ತಿಯನ್ನು ಶ್ರೀ ಜಿ ವಿ ಕೃಷ್ಣ ಪ್ರಸಾದ್ ಅವರಿಗೆ ನೀಡಿ ಗೌರವಿಸಲಾಯಿತು. ಶ್ರೀ.ಜಿ.ವಿ.ಕೃಷ್ಣ ಪ್ರಸಾದ್ ಅವರು ಹಿರಿಯ ಮೃದಂಗವಾದರೂ ಹಾಗೂ ಬೆಂಗಳೂರಿನ ಸುಪ್ರಸಿದ್ಧ ಸಭಾ ಶ್ರೀರಾಮ ಲಲಿತ ಕಲಾ ಮಂದಿರದ ಗೌರವ ಕಾರ್ಯದರ್ಶಿಯವರು. ಇವರ ತಂದೆ ಶ್ರೀ ವೇದಾಂತ
ಐಯಂಗಾರ್ 1955 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿರುವರು. ಸಂಗೀತ ಸೇವೆಗೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಶ್ರೀ ಜಿ ವಿ ಕೃಷ್ಣ ಪ್ರಸಾದ್ ಅವರು ಕಳೆದ 65 ವರ್ಷಗಳಿಂದ ಅನೇಕ ಸಂಗೀತ ಕಛೇರಿಗಳು, ಕಾರ್ಯಾಗಾರಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಸರ್ಕಾರದ ಸಹಕಾರವನ್ನು ನಿರೀಕ್ಷಿಸದೆ ಅತ್ಯುತ್ತಮ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರಿಗೆ ನೀಡಿರುವ ಪ್ರಶಸ್ತಿ ಸಂಗೀತಕ್ಕೆ ನೀಡುವ ಗೌರವ ಎನ್ನಬಹುದು.
ಗೌರವ ಸಮರ್ಪಣೆಯಲ್ಲಿ ಭಾಗವಹಿಸಿ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಗೀತದ ಮೇರು ಕಲಾವಿದರುಗಳಾದ ಗಾನಕಲಾಶ್ರೀ ಹೆಚ್ ಎಸ್ ಸುಧೀಂದ್ರ, ಗಾನಕಲಾಶ್ರೀ ಆನೂರು ಅನಂತಕೃಷ್ಣ ಶರ್ಮ ಹಾಗೂ ಸಭಾ ಅದ್ಯಕ್ಷರಾದ ಗಾನಕಲಾಭೂಷಣ ಶ್ರೀ ಆರ್ ಕೆ ಪದ್ಮನಾಭ ಅವರುಗಳು. ಶ್ರೀ ಜಿ.ವಿ.ಕೆ ಯ ಕೊಡುಗೆಗೆ ತಮ್ಮ ಮಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ್ರೀ ಆರ್ ಕೆ ಪದ್ಮನಾಭ ಅವರು ತಮ್ಮ ಅದ್ಯಕ್ಷ ಭಾಷಣದಲ್ಲಿ, ‘ಮಂಜುನಾದ’ ಹೆಸರನ್ನು ಶ್ಲಾಘಿಸಿ, ಹೆಚ್ಚಿನ ಬಳಕೆಯಲ್ಲಿರುವ ರಚನೆಗಳು ದೀರ್ಘ ಕಾಲ ಉಳಿಯುವುದು, ಈ ರೀತಿಯ ನೂತನ ರಚನೆಗಳನ್ನು ಕಛೇರಿಗಳಲ್ಲಿ ಬಳಸಿಕೊಂಡಾಗ. ಇಂತಹ ಪ್ರಯತ್ನಗಳು ನಿರಂತರ ಮುಂದುವರೆಯಲಿ ಎಂದು ಶುಭ ಹಾರೈಸಿದರು . ಮಂಗಳೂರಿನಲ್ಲಿ ಅತ್ಯಂತ ಸಕ್ರಿಯವಾಗಿರುವ ಸಂಸ್ಥೆಯೊಂದು ಬೆಂಗಳೂರಿಗೆ ಬಂದು ಇಂತಹ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿರುವುದು ಸಂಘಟಕರ ದಕ್ಷತೆಯನ್ನು ತೋರಿಸುತ್ತದೆ. ಇದರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿರುವ ಶ್ರೀ ಪಿ ನಿತ್ಯಾನಂದ ರಾವ್ ಅವರಿಗೆ ಅಭಿನಂದನೆಗಳು.
- ವೈ.ಜಿ.ಪರಿಮಳ