ಕಿನ್ನಿಗೋಳಿ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ಆಶ್ರಯದಲ್ಲಿ ದಿನಾಂಕ 14-11-2023 ಮಂಗಳವಾರದಂದು ಕಿನ್ನಿಗೋಳಿಯ ನೇಕಾರ ಸೌಧ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 19ನೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ‘ಮಂಜುನಾದ’ ಹಾಗೂ ಸಂಗೀತ ತರಗತಿಯ ಉದ್ಘಾಟನೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ಇವತ್ತಿನ ವೇಗದ ದಿನಮಾನದಲ್ಲಿ ಸಂಸ್ಕೃತಿ ಸಂಸ್ಕಾರಗಳನ್ನು ನೃತ್ಯ ಸಂಗೀತದಂತಹ ಕಲೆಗಳ ಮೂಲಕ ಮಕ್ಕಳಿಗೆ ತಿಳಿಯಪಡಿಸುವ ಅಗತ್ಯವಿದೆ. ಇಲ್ಲದಿದ್ದರೆ ಯುವ ಸಮಾಜ ಅಪಾಯಕಾರಿ ಸ್ಥಿತಿಯತ್ತ ಸಾಗುವುದನ್ನು ತಡೆಯಲಾಗದು” ಎಂದು ಹೇಳಿದರು.
ಸ್ವರಾಂಜಲಿ ಸಹೋದರಿಯರಾದ ಕಿನ್ನಿಗೋಳಿಯ ಶೋಭಿತಾ ಭಟ್ ಮತ್ತು ಆಶ್ವೀಜಾ ಉಡುಪ ಇವರ ಹಾಡುಗಾರಿಕೆಯ ಸಂಗೀತ ಕಛೇರಿ ಪ್ರೇಕ್ಷಕರನ್ನು ರಂಜಿಸಿತು. ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಪುತ್ತೂರು, ಮೃದಂಗದಲ್ಲಿ ಪ್ರಣವ್ ಸುಬ್ರಹ್ಮಣ್ಯ ಬೆಂಗಳೂರು ಮತ್ತು ತಂಬೂರದಲ್ಲಿ ಸುಜಾತ ಎಸ್. ಭಟ್ ಸುರತ್ಕಲ್ ಸಹಕರಿಸಿದರು.
ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಪ್ರಸ್ತಾವನೆ ಗೈದು ‘ಸಂಗೀತ ಕಲಿತವರು ಕೇಳುಗರಾಗಿಯೂ ಉಳಿದಿಲ್ಲ ಎಂದು ಅನಿಸುತ್ತದೆ. ನಲವತ್ತು ವರ್ಷಗಳಿಂದ ಸಂಗೀತ ಕ್ಷೇತ್ರದ ಸಂಘಟಕನಾಗಿ ತೊಡಗಿಸಿಕೊಂಡಿದ್ದು, ಎಲ್ಲೆಡೆ ಸಂಗೀತ ತರಗತಿಗಳ ಮೂಲಕ ಮಕ್ಕಳಲ್ಲಿ ಕಲಾಸಕ್ತಿ ಮೂಡಿಸುವ ಪ್ರಯತ್ನ ನಿರಂತರವಾಗಿ ನಡೆಯಲಿದೆ. ಭಾರತೀಯತೆಯನ್ನು ಉಳಿಸುವ ಅಗತ್ಯ ನಮ್ಮ ಮುಂದಿದೆ” ಎಂದು ಹೇಳಿದರು.
ಬಳಿಕ ಸಂಗೀತ ತರಗತಿಯ ಉದ್ಘಾಟನಾ ಸಮಾರಂಭವು ತಾಳಿಪಾಡಿ ನೇಕಾರರ ಸಹಕಾರಿ ಸಂಘದ ಆಡಳಿತ ನಿರ್ದೇಶಕರಾದ ಶ್ರೀ ಮಾಧವ ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ. ರತೀಶ್ ಉಡುಪ ದೀಪ ಬೆಳಗಿಸಿದರು. ಅಕಾಡೆಮಿಯ ಗೌರವಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ, ಹಿರಿಯ ಯಕ್ಷಗಾನ ಕಲಾವಿದ ಪೇಜಾವರ ಸತ್ಯಾನಂದ ರಾವ್, ಹಿರಿಯ ನೃತ್ಯ ಗುರು ಚಂದ್ರಶೇಖರ ನಾವಡ, ಹಿರಿಯ ನಾದಸ್ವರ ವಾದಕರಾದ ನಾಗೇಶ್ ಎ. ಬಪ್ಪನಾಡು ಇವರು ಅತಿಥಿಗಳಾಗಿ ಭಾಗವಹಿಸಿದರು. ಡಾ ಸುಧಾರಾಣಿ ಕಲಾವಿದರನ್ನು ಪರಿಚಯಿಸಿದರು. ಅರುಣಾ ರತೀಶ್ ಉಡುಪ ಕಾರ್ಯಕ್ರಮ ನಿರ್ವಹಿಸಿದರು.