ಕಾಸರಗೋಡು : ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಶುಭಾಶೀರ್ವಾದದೊಂದಿಗೆ ಶ್ರೀ ಶ್ರೀಗಳವರ ತೃತೀಯ ಚಾತುರ್ಮಾಸ್ಯ ವ್ರತಾಚಾರಣೆಯ ಪ್ರಯುಕ್ತ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 20-08-2023 ಭಾನುವಾರ ಸಂಜೆ ಕಾಸರಗೋಡಿನ ಶ್ರೀ ಎಡನೀರು ಮಠದಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 14 ಕಛೇರಿಗಳು ನಡೆದಿದ್ದು, ಇದು 15ನೆಯ ಸಂಗೀತ ಕಛೇರಿಯಾಗಿರುತ್ತದೆ.
‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಆಶ್ವೀಜಾ ಉಡುಪ ಕಿನ್ನಿಗೋಳಿ ಮತ್ತು ಶರಣ್ಯಾ ಕೆ.ಎನ್. ಸುರತ್ಕಲ್, ವಯಲಿನ್ ನಲ್ಲಿ ಸುಪ್ರೀತ ಪಿ.ಎಸ್. ಮುಳ್ಳೇರಿಯ, ಮೃದಂಗದಲ್ಲಿ ಸುನಾದ ಕೃಷ್ಣ ಅಮಯಿ ಹಾಗೂ ತಂಬೂರದಲ್ಲಿ ವೈ.ಸುಜಾತ ಭಟ್ ಸುರತ್ಕಲ್ ಸಹಕರಿಸಲಿರುವರು.