ವರ್ತಮಾನದ ಸಾಮಾಜಿಕ ತಲ್ಲಣಗಳನ್ನು ಒಳಹೊಕ್ಕು ನೋಡುವ ಮೂಲಕ ಅಲ್ಲಿ ಅವಿತಿರಬಹುದಾದ ನೆಲಮೂಲದ ಸಾಂಸ್ಕೃತಿಕ ಬೇರುಗಳನ್ನು ಶೋಧಿಸುವ ಹಾದಿಯಲ್ಲಿ ರಂಗಭೂಮಿ ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಅನುಸರಿಸುತ್ತಾ ಬಂದಿದೆ. ಮಾನವ ಚರಿತ್ರೆಯ ಆದಿಮ ಕಾಲದಿಂದ ಇವತ್ತಿನ ಡಿಜಿಟಲ್ ಯುಗದವರೆಗೂ ವಿಸ್ತರಿಸುವ ಮನುಜ ಸಮಾಜದ ಹೆಜ್ಜೆಗಳು ಪ್ರತಿಯೊಂದು ಕಾಲಘಟ್ಟದಲ್ಲೂ ತನ್ನದೇ ಆದ ವಿಶಿಷ್ಟ ಗುರುತುಗಳನ್ನು ಮೂಡಿಸುವುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು. ಪುರಾಣ, ಐತಿಹ್ಯ, ದಾಖಲಿತ ಚರಿತ್ರೆ, ಮೌಖಿಕ-ಜನಪದ ಪರಂಪರೆ ಈ ಹಲವು ಆಯಾಮಗಳಲ್ಲಿ ಆಧುನಿಕ ಜಗತ್ತಿಗೆ ಮುಖಾಮುಖಿಯಾಗುವ ಪ್ರಾಚೀನ ಅಥವಾ ಮಧ್ಯಕಾಲೀನ ಸಮಾಜ ನಮ್ಮ ನಡುವೆ ಜಿಜ್ಞಾಸೆಗಳನ್ನು ಸೃಷ್ಟಿಸುವಂತೆಯೇ ಹಲವು ಜಟಿಲ ಸವಾಲುಗಳನ್ನೂ ತಂದಿರಿಸುತ್ತದೆ. ಮಾನವ ಸಮಾಜ ಮುನ್ನಡೆಯ ಹಾದಿಯಲ್ಲಿ ಹಿಂತಿರುಗಿ ನೋಡುವಾಗಲೆಲ್ಲಾ ಈ ಸವಾಲುಗಳೊಡನೆ ಅನುಸಂಧಾನ ಮಾಡುತ್ತಾ ತನ್ನ ಮೂಲ ಸಾಂಸ್ಕೃತಿಕ ಬೇರುಗಳನ್ನು ಮರುಶೋಧ ಮಾಡುತ್ತಾ ಸಾಗುತ್ತದೆ.
ಈ ಮರುಶೋಧದ ಪ್ರಕ್ರಿಯೆಗೆ ಒಂದು ವಿಶಿಷ್ಟ, ವಿಭಿನ್ನ ಆಯಾಮವನ್ನು ನೀಡುವ ಕ್ಷಮತೆ ಹಾಗೂ ಬೌದ್ಧಿಕ ಸ್ವಾಯತ್ತತೆ ರಂಗಭೂಮಿಗೆ ಇರುವುದರಿಂದಲೇ ಈ ಸಾಂಸ್ಕೃತಿಕ ಪ್ರಕಾರವು ಅತ್ಯಾಧುನಿಕ ತಂತ್ರಜ್ಞಾನಗಳ ಅವಿಷ್ಕಾರದ ನಡುವೆಯೂ ತನ್ನ ಅಂತಃಸತ್ವವನ್ನು ಉಳಿಸಿಕೊಂಡುಬಂದಿದೆ. ನಾಟಕಕಾರರು ಪುರಾಣ ಮತ್ತು ಐತಿಹ್ಯಗಳನ್ನು ಆಧುನಿಕ ನೆಲೆಯಲ್ಲಿ ನಿಂತು ಅರ್ಥೈಸಿಕೊಳ್ಳುತ್ತಾ, ಪೌರಾಣಿಕ ಕಥನ ಹಾಗೂ ಐತಿಹ್ಯಗಳನ್ನು ಮರುಕಟ್ಟುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಜನಪದೀಯ ನೆಲೆಯಲ್ಲಿ ಅಪಾರ ಜನಸ್ತೋಮದ ಶ್ರದ್ಧಾನಂಬಿಕೆಗಳಿಗೆ ಪಾತ್ರವಾಗುವ ಅನೇಕ ಪರಂಪರೆಗಳು ಮೌಖಿಕವಾಗಿಯೇ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಾ ಸ್ಥಾಪಿತ ಶಿಷ್ಟ ಪರಂಪರೆಗೆ ಮುಖಾಮುಖಿಯಾಗುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡುಬಂದಿವೆ. ಅಂತಹ ಒಂದು ಜನಪದೀಯ ಪರಂಪರೆ ಕರ್ನಾಟಕದ ಉತ್ತರದಿಂದ ದಕ್ಷಿಣದವರೆಗೂ ವಿಸ್ತರಿಸಿರುವ ಮಂಟೇಸ್ವಾಮಿ ಕಾವ್ಯಗಳಲ್ಲಿ ಕಾಣಬಹುದು.
ಮಂಟೇಸ್ವಾಮಿ ಪರಂಪರೆಯ ಹಾದಿ :
ಕರ್ನಾಟಕದ ಮಹತ್ವದ ಮೌಖಿಕ ಮಹಾಕಾವ್ಯಗಳಲ್ಲೊಂದಾದ ಮಂಟೇಸ್ವಾಮಿ ಕಾವ್ಯವನ್ನು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಹಾಗೂ ಬೆಂಗಳೂರು ಪ್ರದೇಶಗಳಲ್ಲಿ ಜೀವಂತವಾಗಿರಿಸಿರುವುದು ವೃತ್ತಿಪರ ಗಾಯಕರಾದ ನೀಲಗಾರ ಸಮುದಾಯ. 15ನೇ ಶತಮಾನದಲ್ಲಿ ಇದ್ದನೆಂದು ಹೇಳಲಾಗುವ ಮಂಟೆಸ್ವಾಮಿಯ ಸುತ್ತ ಹೆಣೆಯಲಾಗಿರುವ ಅನೇಕ ದಂತಕಥೆಗಳು ಹಲವು ಆಯಾಮಗಳಲ್ಲಿ, ವಿಭಿನ್ನ ಸ್ವರೂಪಗಳಲ್ಲಿ ಜನಮಾನಸದಲ್ಲಿ ಬೇರೂರಿದ್ದು , ಈ ಭಾಗದ ಜನರಲ್ಲಿ ಸಾಂಸ್ಕೃತಿಕವಾಗಿ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ. 12ನೆಯ ಶತಮಾನದ ಅಲ್ಲಮನಿಗೆ ಸಮಾನವಾಗಿ ಕಾಣಲ್ಪಡುವ ಮಂಟೇಸ್ವಾಮಿಯ ಪರಂಪರೆ ತಳಸಮುದಾಯದ ನಡುವೆ ತನ್ನದೇ ಆದ ಭಾವುಕ , ಆಧ್ಯಾತ್ಮಿಕ, ಸಾಂಸ್ಕೃತಿಕ, ಆಚರಣಾತ್ಮಕ ನೆಲೆಗಳಲ್ಲಿ ತಳವೂರಿದೆ. ಹಾಗಾಗಿ ಈ ಪರಂಪರೆಯನ್ನು ಜನಸಾಮಾನ್ಯರ ಮುಂದೆ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ತನ್ನದೇ ಆದ ಸ್ವಾಯತ್ತ ಅಭಿವ್ಯಕ್ತಿಯನ್ನು ಬಳಸಿಕೊಳ್ಳುತ್ತದೆ. ಇಲ್ಲಿ ಕಂಡುಬರುವ ಸೃಜನಶೀಲ ಪ್ರಯತ್ನಗಳೂ ಸಹ ಮೂಲ ಕಥಾವಸ್ತುವಿನ ಚೌಕಟ್ಟಿನೊಳಗೇ ಕೆಲವು ಇತಿಮಿತಿಗಳೊಡನೆ ಹೊರಹೊಮ್ಮುತ್ತವೆ.
ಇಂತಹುದೇ ಒಂದು ಸಾಹಿತ್ಯಕ ಅಭಿವ್ಯಕ್ತಿಯನ್ನು ಎಚ್. ಎಸ್. ಶಿವಪ್ರಕಾಶ್ ಅವರ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ ಸಂಕಲನದಲ್ಲಿ ಕಾಣಬಹುದು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಂಸ್ಕೃತಿಕ ವಲಯದಲ್ಲಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಈ ಕೃತಿಯನ್ನು ಕನ್ನಡ ರಂಗಭೂಮಿಯ ಒಂದು ಮೈಲಿಗಲ್ಲು ಎಂದೇ ಭಾವಿಸಲಾಗುತ್ತದೆ. ಆಧುನಿಕ ಜಗತ್ತಿನೊಡನೆ ನಿರಂತರ ಸಂಘರ್ಷದಲ್ಲಿರುವ ಕೆಳಸ್ತರದ ಜನಸಾಮಾನ್ಯರು 21ನೆಯ ಶತಮಾನದ ಡಿಜಿಟಲ್ ಯುಗದೊಡನೆ ಮುಖಾಮುಖಿಯಾಗುತ್ತಿರುವಾಗ, ಈ ಜನಪದೀಯ ಪರಂಪರೆಯ ಕಥನಗಳು ಒಂದು ನೆಲೆಯಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ನವ ಉದಾರವಾದಿ ಬಂಡವಾಳಶಾಹಿಯು ತನ್ನ ಆಧುನೀಕರಣ ಪ್ರಕ್ರಿಯೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಕೃತಿಗಳನ್ನು ಆಪೋಷನ ತೆಗೆದುಕೊಳ್ಳುವುದೇ ಅಲ್ಲದೆ ಸಾಂಪ್ರದಾಯಿಕವಾಗಿ ಭಾರತದ ಪ್ರಾಚೀನ ವೈದಿಕಶಾಹಿ ಹಾಗೂ ಪುರೋಹಿತಶಾಹಿ ಸಂಹಿತೆಗಳನ್ನು ಮರುಸ್ಥಾಪಿಸಲು ಯತ್ನಿಸುತ್ತಿರುವ ಈ ಹೊತ್ತಿನಲ್ಲಿ, ನೆಲಸಂಸ್ಕೃತಿಗೆ ಇಂಬು ಕೊಡುವ ಇಂತಹ ಕಾವ್ಯಪರಂಪರೆಗಳು ಮಹತ್ವ ಪಡೆಯುತ್ತವೆ.
ಈ ಸಂದಿಗ್ಧತೆಯ ನಡುವೆಯೇ ಮೈಸೂರಿನ ಜಿ. ಪಿ. ಐ. ಇ. ಆರ್. ರಂಗತಂಡವು ಡಾ. ಎಚ್. ಎಸ್. ಶಿವಪ್ರಕಾಶ್ ಅವರ “ ಮಂಟೇಸ್ವಾಮಿ ಕಥಾಪ್ರಸಂಗ” ಕೃತಿಯನ್ನು ರಂಗರೂಪಕ್ಕೆ ಅಳವಡಿಸಿದೆ. ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶನದ ಹೊಣೆ ಹೊತ್ತಿರುವ ಖ್ಯಾತ ರಂಗಕರ್ಮಿ ಮೈಮ್ ರಮೇಶ್ ಈ ಕಥಾಪ್ರಸಂಗವನ್ನು ರಂಗರೂಪಕ್ಕೆ ಅಳವಡಿಸುವುದರಲ್ಲಿ ಅಪಾರ ಶ್ರಮ ವಹಿಸಿರುವುದೇ ಅಲ್ಲದೆ, ಮೂಲ ಕಥಾವಸ್ತುವಿಗೆ ಚ್ಯುತಿ ಬಾರದಂತೆ, ಮಂಟೇಸ್ವಾಮಿಯ ಪಯಣವನ್ನು ಪ್ರೇಕ್ಷಕರ ಮುಂದಿರಿಸಲು ಪ್ರಯತ್ನಿಸಿದ್ದಾರೆ. ವೈದಿಕಶಾಹಿಯನ್ನೂ ಒಳಗೊಂಡಂತೆ ಸ್ಥಾಪಿತ ವ್ಯವಸ್ಥೆಗೆ ಸಾಂಪ್ರದಾಯಿಕ ನೆಲೆಗಳಿಗೆ ಪ್ರತಿರೋಧವನ್ನು ಒಡ್ಡುತ್ತಲೇ ನಡೆಯುವ ಮಂಟೇಸ್ವಾಮಿಯ ಕಥನದಲ್ಲಿ ಪವಾಡಗಳು, ಪುನರ್ಜನ್ಮದ ಕಲ್ಪನೆಗಳು, ಕರ್ಮ ಸಿದ್ದಾಂತದ ಎಳೆಗಳು ಮತ್ತು ಅತೀತಗಳ ಪರಿಕಲ್ಪನೆಗಳೂ ಢಾಳಾಗಿ ಕಾಣಸಿಗುತ್ತವೆ.
ಕಥಾಹಂದರದ ವಿಸ್ತಾರ
ಆದರೆ ಈ ಕಾಲ್ಪನಿಕತೆಯೊಂದಿಗೇ ತಳಸಮಾಜದ ಕಾಯಕ ಜೀವಿಗಳ ಬದುಕಿಗೆ ಹತ್ತಿರವಾಗುವಂತಹ ಚಿಂತನೆಗಳು, ಸಾಮಾಜಿಕ ಕಳಕಳಿ ಹಾಗೂ ವಾಸ್ತವ ಬದುಕಿನ ಅವಶ್ಯಕತೆಗಳನ್ನೂ ಬಿಂಬಿಸುವುದನ್ನು ಕಾಣಬಹುದು. ಬೂಟಾಟಿಕೆಯ ಭಕ್ತಿಯನ್ನು ಅಣಕಿಸುವ ಮೂಲಕ ಶಿಷ್ಟ ಸಂಪ್ರದಾಯದ , ವೈದಿಕಶಾಹಿಯ ಸಾಂಸ್ಕೃತಿಕ ನೆಲೆಗಳನ್ನು ಧಿಕ್ಕರಿಸುವ ಮಂಟೇಸ್ವಾಮಿಯ ಕಥನದ ಹಾದಿಯಲ್ಲಿ ಅದೇ ವೈದಿಕಶಾಹಿಯು ಬಲವಾಗಿ ಪ್ರತಿಪಾದಿಸುವ ಕಾಲಜ್ಞಾನ, ಮರುಜನ್ಮ ಹಾಗೂ ಮಹಾತ್ಮನ ಅವತಾರಗಳಂತಹ ಜಟಿಲ ವಿಚಾರಗಳೂ ಕಾಣಸಿಗುತ್ತವೆ. ಕಲ್ಯಾಣವನ್ನು ತೊರೆಯುವ ಮುನ್ನ ಸಮಾಜದಲ್ಲಿ ಅಂತರ್ಗತವಾಗಿರುವ ಡಾಂಬಿಕತೆಯನ್ನು ತಿರಸ್ಕರಿಸಿ ಭಕ್ತಿಯ ಮತ್ತೊಂದು ಆಯಾಮವನ್ನು ನೈಜ ಲಿಂಗವನ್ನು ಪಡೆಯುವ ಮೂಲಕ ಐಕ್ಯವಾಗುವ ಮಂಟೇಸ್ವಾಮಿ ಕಲ್ಯಾಣದ ಭವಿಷ್ಯವನ್ನು ನುಡಿಯುತ್ತಲೇ ಬಸವಣ್ಣ ಹಾಗೂ ನೀಲಾಂಬಿಕೆಯರ ಗೌರವಾದರಗಳಿಗೆ ಪಾತ್ರನಾಗಿ ತನ್ನ ಪಯಣವನ್ನು ಆರಂಭಿಸುತ್ತಾನೆ. ದಕ್ಷಿಣದ ಕಡೆಗೆ ಸಾಗುವ ಮಂಟೇಸ್ವಾಮಿ ಕಾಡುಗಣ್ಣ ರಾಚಪ್ಪ ಮತ್ತು ಮಹಾತಾಯಿಯೊಂದಿಗೆ ಸಾಗುತ್ತಾನೆ. ಪಯಣದ ಹಾದಿಯಲ್ಲಿ ಮಂಟೇಸ್ವಾಮಿಯ ಮಡಿಲಿಗೆ ದಕ್ಕುವ ಪ್ರತಿಯೊಂದು ಜೀವವೂ ಒಂದೊಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಹೋಗುತ್ತದೆ. ರಾಚಪ್ಪಾಜಿ, ತೋಪಿನ ದೊಡ್ಡಮ್ಮ, ಚೆನ್ನಾಜಮ್ಮ ಮತ್ತು ಸಿದ್ಧಪ್ಪಾಜಿ ಮಂಟೇಸ್ವಾಮಿಯ ಅನುಯಾಯಿಗಳಾಗಿ. ಬಸವಯ್ಯ ಎಂಬಾತ ಮರುಜನ್ಮ ಪಡೆದು ಕೆಂಪಣ್ಣನಾಗಿ ಕೊನೆಗೆ ಸಿದ್ಧಪ್ಪಾಜಿಯಾಗಿ ಕಾಣಿಸಿಕೊಳ್ಳುತ್ತಾನೆ.
ಪಾಂಚಾಲ ರಾಜರ ದುರಾಡಳಿತ, ಹಣದಾಸೆಯ ವಿರುದ್ಧ ಸೆಣಸಾಡುವ ಸಿದ್ಧಪ್ಪಾಜಿಯ ಕಥೆಯಲ್ಲಿ ಸಾಂಪ್ರದಾಯಿಕ ಸಮಾಜ ನಾಗರಿಕತೆಯತ್ತ ಹೊರಳುತ್ತಿರುವುದನ್ನು ಕಬ್ಬಿಣದ ದಾನ ಕೇಳುವ ಮೂಲಕ ಸಾಂಕೇತಿಕವಾಗಿ ಪ್ರತಿನಿಧಿಸಲಾಗಿದೆ. ಉತ್ಪಾದನಾ ಸಂಬಂಧಗಳು ಹೊಸ ದಿಕ್ಕಿಗೆ ತೆರೆದುಕೊಳ್ಳಲು ನೆರವಾಗುವ ಕಬ್ಬಿಣದ ಬಳಕೆ ಮತ್ತು ತದನಂತರದಲ್ಲಿ ರೂಪುಗೊಳ್ಳುವ ಸಮಾಜದಲ್ಲಿ ಇದ್ದಿರಬಹುದಾದ ಸಾಮಾಜಿಕ ಕ್ಷೋಭೆ, ಪರಸ್ಪರ ಕದನದಲ್ಲಿ ತೊಡಗಿ ಮೇಲುಗೈ ಸಾಧಿಸಲೆತ್ನಿಸುವ ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಗಳಾಗಿ ಪಾಂಚಾಲ ರಾಜರ ಪಾತ್ರ ಕಾಣಿಸಿಕೊಳ್ಳುತ್ತದೆ. ಇವರ ಗರ್ವಭಂಗದ ಸನ್ನಿವೇಶಗಳು ನಾಟಕಕ್ಕೆ ಹೊಸ ಹೊಳಹು ನೀಡುತ್ತದೆ. ಮನುಷ್ಯ ತನ್ನ ಅಭ್ಯುದಯದ ಹಾದಿಯಲ್ಲಿ ತಾನೇ ಸೃಷ್ಟಿಸಿಕೊಂಡ ವೇದ, ಶಾಸ್ತ್ರ ಹಾಗೂ ಪುರಾಣಗಳ ಅಂಧಾಚರಣೆ ಭವಿಷ್ಯದ ಪೀಳಿಗೆಗೆ ಮಾರಕವಾಗುವ ಸಂಭವವನ್ನೂ ಮಂಟೇಸ್ವಾಮಿಯ ಕಥನದ ಮೂಲಕ ಬಿಂಬಿಸಲಾಗುತ್ತದೆ. ಈ ಮೌಢ್ಯಗಳನ್ನು ತೊಡೆದುಹಾಕಿ ಸಾಮಾಜಿಕ ಚಿಂತನೆಗಳ ಮೂಲಕ ಪ್ರಕೃತಿಯೊಡನೆ ಕೂಡಿ ಬಾಳಬೇಕಾದ ಅವಶ್ಯಕತೆಯನ್ನು ಈ ಕಥಾ ಹಂದರ ಸೂಚ್ಯವಾಗಿ ಹೇಳಲಿಚ್ಚಿಸುತ್ತದೆ.
ತನ್ನ ಸುದೀರ್ಘ ಪಯಣದ ಹಾದಿಯಲ್ಲಿ ಜ್ಯೋತಿ ಸ್ವರೂಪವಾಗಿ, ಹಂತಹಂತವಾಗಿ ಪರಂಜ್ಯೋತಿಯಾಗಿ ರೂಪುಗೊಂಡು ಅಂತಿಮವಾಗಿ ಪರಂಜ್ಯೋತಿ ಲಿಂಗಯ್ಯನಾಗಿ ಅಸಂಖ್ಯಾತ ಶಿಷ್ಯಕೋಟಿಯನ್ನು ಪಡೆಯುವ ಮಂಟೇಸ್ವಾಮಿ ಹಲವು ಪವಾಡಗಳ ಮೂಲಕ ಸಮಾಜದ ಓರೆಕೋರೆಗಳನ್ನು ಪ್ರತಿರೋಧಿಸುತ್ತಾ ಶಿಷ್ಟ ಪರಂಪರೆಯ ಸಾಂಸ್ಕೃತಿಕ ನೆಲೆಗಳನ್ನು ಪ್ರಶ್ನಿಸುತ್ತಾ ತಳಸಮಾಜದ ಸಾಂಸ್ಕೃತಿಕ ಸೂಕ್ಷ್ಮತೆಗಳನ್ನು ಬಿಂಬಿಸುವ ಒಂದು ಸಾಂಸ್ಕೃತಿಕ ಶಕ್ತಿಯಾಗಿ ಪರ್ಯವಸಾನ ಹೊಂದುವುದು ಇಡೀ ಕಥಾವಸ್ತುವಿನ ಒಳಾರ್ಥ. ಕೆಳಸ್ತರದ ವರ್ಗವೊಂದರ ಪ್ರತಿನಿಧಿಯಾಗಿ ಮಂಟೇಸ್ವಾಮಿಯ ಸುತ್ತ ಹಬ್ಬಿಕೊಂಡಿರುವ ದಂತಕಥೆಗಳು, ಪವಾಡಗಳ ಕಥನಗಳು, ಪುನರ್ಜನ್ಮದ ಕಥನಗಳು ಇಂದಿಗೂ ನಮ್ಮ ನಡುವೆ ಇರುವ ಇದೇ ಪಂಥದ ಗುಡ್ಡರ ಸಂಪ್ರದಾಯಗಳಲ್ಲಿ ಕಾಣಸಿಗುತ್ತವೆ. ಸ್ಥಾಪಿತ ಪಟ್ಟಭದ್ರ ಸಂಸ್ಕೃತಿಗೆ ಪ್ರತಿರೋಧದ ನೆಲೆಯಲ್ಲಿ ಕೆಳವರ್ಗಗಳನ್ನು ಪ್ರತಿನಿಧಿಸುವ ಸಾಂಸ್ಕೃತಿಕ ಅಸ್ಮಿತೆಯಾಗಿ ಮಂಟೇಸ್ವಾಮಿ ಇಂದಿಗೂ ಸಹ ಈ ಪ್ರದೇಶದ ಜನಗಳಲ್ಲಿ ಗೌರವಾದರಗಳಿಗೆ ಪಾತ್ರನಾಗಿರುವುದು ವಿಶೇಷ. ಮಂಟೇಸ್ವಾಮಿ ಭಕ್ತರಾದ ನೀಲಗಾರರು ತಮ್ಮ ಗಾಯನದ ಮೂಲಕ ಈ ಪರಂಪರೆಯನ್ನು ಜನಮಾನಸದ ನಡುವೆ ಜೀವಂತವಾಗಿರಿಸಿದ್ದಾರೆ.
ರಂಗಪ್ರಯೋಗದ ಸವಾಲುಗಳ ನಡುವೆ
ಇಂತಹ ಜನಪದೀಯ ನೆಲೆಯ ಸಾಂಸ್ಕೃತಿಕ ದಂತಕಥೆಗಳನ್ನು ರಂಗರೂಪಕ್ಕೆ ಅಳವಡಿಸುವಾಗ ಎರಡು ಅಂಶಗಳು ಪ್ರಧಾನವಾಗುತ್ತವೆ. ರಂಗಭೂಮಿಯ ಪ್ರೇಕ್ಷಕ ವರ್ಗದ ದೃಷ್ಟಿಯಿಂದ ನೋಡಿದಾಗ ಇಂತಹ ಕಥಾವಸ್ತುಗಳಿಗೆ ಎರಡು ವರ್ಗಗಳ ಪ್ರೇಕ್ಷಕರು ಇರಲು ಸಾಧ್ಯ. ಸಾಂಸ್ಕೃತಿಕ ಪರಂಪರೆ ಹಾಗೂ ಶ್ರದ್ಧಾನಂಬಿಕೆಗಳಿಗೆ ಬದ್ಧವಾಗಿರುವ ಒಂದು ವರ್ಗ ಇಂದಿಗೂ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರದ ಸುತ್ತಲಿನಲ್ಲಿ ಕಾಣುತ್ತದೆ. ಮತ್ತೊಂದು ವರ್ಗವು ಈ ಸಾಂಸ್ಕೃತಿಕ ನೆಲೆಗಳನ್ನು ಚಾರಿತ್ರಿಕ ಭೌತವಾದಿ ದೃಷ್ಟಿಯಲ್ಲಿ ನೋಡುವ ಸಾಧ್ಯತೆ ಇರುತ್ತದೆ. ವೈಚಾರಿಕತೆಯ ನೆಲೆಯಲ್ಲಿ ನಿಂತು ನೋಡಿದಾಗ ‘ಮಂಟೇಸ್ವಾಮಿ ಕಥಾಪ್ರಸಂಗ’ದಲ್ಲಿ ಪ್ರಧಾನವಾಗಿ ಬರುವ ಪುನರ್ಜನ್ಮ ಕಲ್ಪನೆ, ಪವಾಡಗಳು, ಆಚರಣಾತ್ಮಕ ವಿಧಿವಿಧಾನಗಳು ಅವುಗಳ ಸುತ್ತ ಸೃಷ್ಟಿಯಾಗುವ ಅಂಧಶ್ರದ್ಧೆ ಮತ್ತು ನಂಬಿಕೆಗಳು ಇವೆಲ್ಲವೂ ಪ್ರಶ್ನಾರ್ಥಕವಾಗಿ ಕಾಣುವುದು ಸಹಜ. ಆಧುನಿಕ ಡಿಜಿಟಲ್ ಯುಗದಲ್ಲಿ ನಿಂತು ಇಂತಹ ಪ್ರಾಚೀನ ನಂಬಿಕೆಗಳನ್ನು ಪುನಃ ಜನರ ಮುಂದಿರಿಸುವ ಔಚಿತ್ಯವೂ ಪ್ರಶ್ನೆಗೊಳಗಾಗುತ್ತದೆ.
ಆದರೆ ರಂಗಭೂಮಿ ಒಂದು ಸ್ವಾಯತ್ತವಾದ ಸಾಂಸ್ಕೃತಿಕ ಲೋಕ. ಇಲ್ಲಿ ನಾಟಕಕಾರ ಮತ್ತು ನಿರ್ದೇಶಕ ಇಬ್ಬರೂ ತಮ್ಮದೇ ಆದ ವ್ಯಕ್ತಿಗತ ಸ್ವಾಯತ್ತತೆ ಮತ್ತು ಅಭಿವ್ಯಕ್ತಿ ಮಾದರಿಯ ಸ್ವಾತಂತ್ರ‍್ಯವನ್ನು ಹೊಂದಿರಲು ಸಾಧ್ಯ. ಮೈಮ್ ರಮೇಶ್ ಅವರ ನಿರ್ದೇಶನದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕವು ಈ ಸಾಂಸ್ಕೃತಿಕ ಲೋಕವನ್ನು ಪ್ರತಿನಿಧಿಸುವ ತಳಸ್ತರದ ಜನತೆಗಷ್ಟೇ ಅಲ್ಲದೆ ನಗರೀಕರಣಕ್ಕೊಳಗಾದ ಮೇಲ್ ಸ್ತರದ ಜನತೆಗೂ ನಿಲುಕುವಂತಿದೆ. ಅವರ ಶ್ರದ್ಧಾನಂಬಿಕೆಗಳಿಗೆ ಭಂಗ ತರದೆ ಮೂಲ ನಾಟಕದ ಕಥಾವಸ್ತುವನ್ನು ಅತ್ಯದ್ಭುತವಾಗಿ ರಂಗರೂಪಕ್ಕೆ ಅಳವಡಿಸುವ ಮೂಲಕ ಮೈಮ್ ರಮೇಶ್ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವುದು ಒಪ್ಪಲೇಬೇಕಾದ ಸತ್ಯ. ನಾಟಕದ ಕೊನೆಯ ಭಾಗದಲ್ಲಿ ಇಡೀ ಸಭಾಂಗಣವನ್ನೇ ಮಂತ್ರಮುಗ್ಧವನ್ನಾಗಿ ಮಾಡುವ ರೀತಿಯಲ್ಲಿ ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಹಾಗೂ ಪಾತ್ರ ನಿರ್ವಹಣೆಯನ್ನು ನಿಭಾಯಿಸಲಾಗಿದೆ.
ಮತ್ತೊಂದೆಡೆ ವೈಚಾರಿಕ ನೆಲೆಯಲ್ಲಿ ನಿಂತು ನೋಡುವ ಪ್ರೇಕ್ಷಕ ವರ್ಗಕ್ಕೆ ಈ ಕಾಲ್ಪನಿಕ ಕಥಾವಸ್ತು ಕೊಂಚ ಭಿನ್ನ ನೆಲೆಯಲ್ಲೇ ಕಾಣುತ್ತದೆ. ಪೂಜೆ, ಆರಾಧನೆ, ಪವಾಡ, ಬಲಿ, ಅವತಾರ, ಮರುಜನ್ಮ ಹಾಗೂ ಜನ್ಮಾಂತರದ ಪರಿಕಲ್ಪನೆಗಳು ವೈಜ್ಞಾನಿಕ ನೆಲೆಯಲ್ಲಿ ಸದಾ ಪ್ರಶ್ನಾರ್ಹವೇ ಆಗುವುದರಿಂದ, ರಂಗಭೂಮಿ ಇಂತಹ ಕಥಾವಸ್ತುಗಳನ್ನೂ ರೂಪಾಂತರಗೊಳಿಸಿ ಪ್ರಸ್ತುತಪಡಿಸಬಹುದಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಮಂಟೇಸ್ವಾಮಿ ಪರಂಪರೆಯನ್ನು ತಾತ್ವಿಕ ನೆಲೆಯಲ್ಲಿ ನಿರಾಕರಿಸದಿದ್ದರೂ, ಈ ಕಥನಗಳಲ್ಲಿ ಅಡಗಿರುವ ಅವೈಜ್ಞಾನಿಕತೆಯ ಅಂಶಗಳನ್ನು ಸಮಕಾಲೀನ ವೈಚಾರಿಕ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಿ ಮರುವ್ಯಾಖ್ಯಾನ ಮಾಡುವ ಸಾಧ್ಯತೆಗಳ ಬಗ್ಗೆಯೂ ಯೋಚನೆ ಮೂಡುತ್ತದೆ. ಇದು ರಂಗನಿರ್ದೇಶಕರ ಸಾಂದರ್ಭಿಕ ಸ್ವಾತಂತ್ರ‍್ಯಕ್ಕೆ ಸಂಬಂಧಿಸಿದ ಪ್ರಶ್ನೆಯೂ ಆಗುತ್ತದೆ. ಮಂಟೇಸ್ವಾಮಿ ಪರಂಪರೆಯನ್ನು ಆರಾಧಿಸುವ ಒಂದು ಜನಸ್ತೋಮದ ನಡುವೆ ಈ ನಾಟಕವು ಸಹಜವಾಗಿಯೇ ಭಕ್ತಿ ಭಾವಗಳನ್ನು ಉದ್ದೀಪನಗೊಳಿಸುವುದರಿಂದ ನಿರ್ದೇಶಕರ ಪ್ರಯತ್ನದ ಸಾರ್ಥಕತೆಯನ್ನು ಅನುಮಾನಿಸಲಾಗುವುದಿಲ್ಲ. ಆದರೆ ಈ ವರ್ಗದಿಂದಾಚೆಗಿನ ವೈಚಾರಿಕ ಪ್ರಪಂಚದಲ್ಲಿ ಮೂಡುವ ಪ್ರಶ್ನೆಗಳಿಗೆ ನಿರ್ದೇಶಕರು ಉತ್ತರಿಸಬೇಕಾಗುವುದು ಸಹಜ. ಮೆಟ್ರೋಪಾಲಿಟನ್ ಅಥವಾ ಕಾಸ್ಮೊಪಾಲಿಟನ್ ನಗರದ ಜನತೆಯ ಮುಂದೆ ಇದೇ ಕಥಾವಸ್ತುವನ್ನು ರಂಗಪ್ರಯೋಗಕ್ಕೆ ಅಳವಡಿಸುವಾಗ ನಿರ್ದೇಶಕರು ಭಿನ್ನವಾಗಿ ಯೋಚಿಸುವುದು ಅಗತ್ಯ.
ಆದರೆ ಈ ವೈಚಾರಿಕ ಬೇಕು-ಬೇಡಗಳ binary ಸಂಕಥನದ ನಡುವೆ, ಮೈಮ್ ರಮೇಶ್ ಮತ್ತು ಅವರ ಜಿ. ಪಿ. ಐ. ಇ. ಅರ್. ತಂಡದ ಅದ್ಭುತ ಕಲಾ ಕೌಶಲವನ್ನು ನೇಪಥ್ಯಕ್ಕೆ ಸರಿಸಲಾಗುವುದಿಲ್ಲ. ಮೈಸೂರಿನ ಕಿರುರಂಗಮಂದಿರದಲ್ಲಿ ಫೆಬ್ರವರಿ 25ರಂದು ಪ್ರದರ್ಶನಗೊಂಡ ‘ಮಂಟೇಸ್ವಾಮಿ ಕಥಾಪ್ರಸಂಗ’ ಎಲ್ಲ ಕಲಾವಿದರ ಹೃದಯಸ್ಪರ್ಶಿ ಅಭಿನಯದಿಂದ ಮನಸೆಳೆಯುತ್ತದೆ. ಮಂಟೇಸ್ವಾಮಿಯಾಗಿ ಸುಮನ್ ರಾಜ್, ಸಿದ್ಧಪ್ಪಾಜಿಯಾಗಿ ಎಂ. ಪಿ. ಹರಿದತ್ತ, ನೀಲಗಾರರಾಗಿ ಧನುಷ್ ಮತ್ತು ಅವರ ತಂಡ ಹೀಗೆ ಎಲ್ಲ ಕಲಾವಿದರೂ ತಮ್ಮ ತನುಮನಗಳನ್ನು ಅರ್ಪಿಸಿ ಪಾತ್ರಗಳಲ್ಲಿ ಲೀನವಾಗಿರುವುದು ನಾಟಕದ ವೈಶಿಷ್ಟ್ಯ. ಮೈಮ್ ರಮೇಶ್ ಸ್ವತಃ ನಿರ್ವಹಿಸಿರುವ ನೃತ್ಯ ಸಂಯೋಜನೆ ಮತ್ತು ವಿನ್ಯಾಸ ನಾಟಕದ ಗಾಂಭೀರ್ಯತೆಗೆ ಚ್ಯುತಿ ಬಾರದಂತೆ ಮೂಡಿಬಂದಿದೆ. ಕೆಲವೆಡೆ ಸಂಗೀತದ ಅಬ್ಬರ ಹೆಚ್ಚೆನಿಸಿದರೂ, ಒಟ್ಟಾರೆಯಾಗಿ ಕೆಲವು ನಿರ್ಣಾಯಕ ದೃಶ್ಯಗಳಲ್ಲಿ ದೇವಾನಂದ ವರಪ್ರಸಾದ್ ಮತ್ತು ಅರುಣ್ ಅವರ ಸಂಗೀತವೂ ಪರಿಣಾಮಕಾರಿಯಾಗಿ ಮೂಡಿಬಂದಿದೆ. ವಸ್ತ್ರವಿನ್ಯಾಸ ಮತ್ತು ಬೆಳಕು ಅಪ್ಯಾಯಮಾನವಾಗಿವೆ.
ಪ್ರಾಯೋಗಿಕತೆಯ ಪ್ರಶ್ನೆ
ಪಾರಂಪರಿಕ ನಂಬಿಕೆ, ಅಂಧಶ್ರದ್ಧೆ, ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಇವುಗಳ ನಡುವೆ ಹೊಯ್ದಾಡುವ ಬೌದ್ಧಿಕ ಸಂಕಥನಗಳಲ್ಲಿ ಇಂತಹ ಕಥಾವಸ್ತುಗಳು ರಂಗಭೂಮಿಯ ಮೇಲೆ ಬಂದಾಗ ವಿಭಿನ್ನ ಆಯಾಮಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಮೂಲ ಕಥಾವಸ್ತುವನ್ನು ಬಿಂಬಿಸುತ್ತಲೇ ಆಧುನಿಕ, ವೈಚಾರಿಕ, ವೈಜ್ಞಾನಿಕ ನೆಲೆಯಲ್ಲಿ ಅಲ್ಲಿರಬಹುದಾದ ಪ್ರಾಚೀನ ನಂಬಿಕೆಗಳನ್ನು ನಿಷ್ಕರ್ಷೆಗೊಳಪಡಿಸಿ, ಮರುವ್ಯಾಖ್ಯಾನ ಮಾಡುವ ಸ್ವಾತಂತ್ರ‍್ಯವನ್ನು ರಂಗನಿರ್ದೇಶಕರು ಹೊಂದಿರುತ್ತಾರೆ. ಭಾರತೀಯ ಸಮಾಜದ ಪ್ರಧಾನ ಚಿಂತನಾ ವಾಹಿನಿಗಳನ್ನು ಪ್ರಾಚೀನತೆಯೆಡೆಗೆ ಕೊಂಡೊಯ್ಯುತ್ತಿರುವ ಸಾಂಸ್ಕೃತಿಕ ರಾಜಕಾರಣದ ನಡುವೆ ಈ ಪ್ರಶ್ನೆಯೂ ಮುಖ್ಯವಾಗುತ್ತದೆ. ಪ್ರತಿರೋಧದ ಪರಂಪರೆ ಮತ್ತು ಸಂಸ್ಕೃತಿಯ ಒಂದು ಧಾರೆಯಾಗಿ ಮಂಟೇಸ್ವಾಮಿಯ ಕಥನವನ್ನು ವಿಭಿನ್ನ ನೆಲೆಯಲ್ಲಿ, ವೈಚಾರಿಕ ನೆಲೆಯಲ್ಲಿ ನಿರ್ವಚಿಸಿ, ರಂಗರೂಪಕ್ಕೆ ಅಳವಡಿಸುವ ಬಗ್ಗೆಯೂ ಮೈಮ್ ರಮೇಶ್ ಮತ್ತವರ ತಂಡ ಯೋಚಿಸಬಹುದು. ಇದು ಕಾಲದ ಅಗತ್ಯತೆ ಎನ್ನಬಹುದು.
ಆದರೆ ಈ ಯಾವುದೇ ತರ್ಕಗಳೂ ಮೈಮ್ ರಮೇಶ್ ಮತ್ತು ಜಿ. ಪಿ. ಐ. ಇ. ಆರ್. ತಂಡದ ಕಲಾಪ್ರತಿಭೆ, ಪ್ರೌಢಿಮೆ ಮತ್ತು ಬದ್ಧತೆಯನ್ನು ಬಾಧಿಸಬೇಕಿಲ್ಲ. ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕವು ಇಡೀ ತಂಡದ ಮತ್ತು ನಿರ್ದೇಶಕರ ರಂಗಕೌಶಲಕ್ಕೆ ಕನ್ನಡಿ ಹಿಡಿದಂತಿದೆ. ತುಂಬಿದ ಸಭಾಂಗಣವನ್ನು ಮಂತ್ರಮುಗ್ಧಗೊಳಿಸಿ ಕೊನೆಯವರೆಗೂ ಹಿಡಿದಿರುವ ಈ ರಂಗಪ್ರಯೋಗ ಮಂಟೇಸ್ವಾಮಿ ಪರಂಪರೆಗೆ ನಡೆದುಕೊಳ್ಳುವ ಅಪಾರ ಜನಸ್ತೋಮವನ್ನು ಸಹಜವಾಗಿಯೇ ಆಕರ್ಷಿಸುತ್ತದೆ. ಇದನ್ನು ಹೊರತಾಗಿಯೂ ತಂಡದ ಎಲ್ಲ ಕಲಾವಿದರ ಕಲಾ-ನಿರ್ವಹಣೆ ಹೃದಯ ತಟ್ಟುವಂತಿದೆ. ಹಲವಾರು ರಂಗಪ್ರಯೋಗಗಳೊಂದಿಗೆ ಕರ್ನಾಟಕದ ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿರುವ ಜಿ. ಪಿ. ಐ. ಇ. ಆರ್. ತಂಡದ ಹಲವು ಪ್ರಯೋಗಗಳ ನಡುವೆ ಇದೂ ಸಹ ಒಂದು ಮೈಲುಗಲ್ಲಿನಂತೆ ನಿಲ್ಲುತ್ತದೆ . ಗೆಳೆಯ ಮೈಮ್ ಮತ್ತವರ ತಂಡಕ್ಕೆ ಮತ್ತೊಮ್ಮೆ ಅಭಿನಂದನೆಗಳು.
ನಾ. ದಿವಾಕರ
ಕೋಲಾರ ಜಿಲ್ಲೆಯ ಬಂಗಾರಪೇಟೆಯವರಾದ ಶ್ರೀಯುತರು ಕೆನರಾಬ್ಯಾಂಕ್ ನೌಕರಿಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಸೇವಾವಧಿಯಲ್ಲಿ ಆರಂಭವಾದ ಬರಹದ ಪಯಣ ನಿವೃತ್ತಿಯ ನಂತರ ವೇಗೋತ್ಕರ್ಷ ಪಡೆದುಕೊಂಡಿತು. 45 ಪುಸ್ತಕಗಳನ್ನು ಪ್ರಕಟಿಸಿರುವ ಇವರು 15ಕ್ಕೂ ಹೆಚ್ಚು ಅನುವಾದಗಳನ್ನು ಮಾಡಿದ್ದಾರೆ. ಸೈದ್ಧಾಂತಿಕವಾಗಿ ಮಾರ್ಕ್ಸ್‌ವಾದಿ ಚಿಂತಕ. ಇವರ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ನಿಯತಕಾಲಿಕವಾಗಿ ಸಮಾಜಮುಖಿ, ಪ್ರತಿಧ್ವನಿ, ಅವಧಿ, ವಾರ್ತಾಭಾರತಿ, ಆಂದೋಲನ, ಪ್ರಜಾವಾಣಿ, ಬೆವರಹನಿ, ಕೆಂಧೂಳಿ, ಕೆಮ್ಮುಗಿಲು ಮುಂತಾದ ಪತ್ರಿಕೆಗಳಲ್ಲಿ ಇವರ ಲೇಖನ ಪ್ರಕಟಗೊಂಡಿವೆ.