ಮೈಸೂರು : ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ (ರಿ). ಮೈಸೂರು. ಆಯೋಜಿಸುವ ಜಾನಪದ ಸಂಭ್ರಮ ಮತ್ತು ನಾಟಕೋತ್ಸವದಲ್ಲಿ ಜಿ. ಪಿ. ಐ. ಇ. ಆರ್ ರಂಗ ತಂಡ ಮೈಸೂರು ಅಭಿನಯಿಸುವ ಜಾನಪದ ನಾಟಕ ‘ಮಂಟೇಸ್ವಾಮಿ ಕಥಾಪ್ರಸಂಗ’ ಪ್ರದರ್ಶನವು ದಿನಾಂಕ 09 ಮಾರ್ಚ್ 2025 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ನಡೆಯಲಿದೆ.
ಡಾ .ಹೆಚ್. ಎಸ್. ಶಿವಪ್ರಕಾಶ್ ರಚಿಸಿರುವ ಈ ನಾಟಕವನ್ನು ಮೈಮ್ ರಮೇಶ್ ರಂಗಾಯಣ ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶಿಸಿದ್ದು, ದೇವಾನಂದ, ವರಪ್ರಸಾದ್ ಹಾಗೂ ಅರುಣ್ ಎಂ. ಸಿ.ಸಂಗೀತದಲ್ಲಿ ಸಹಕರಿಸಲಿದ್ದಾರೆ. ವಸ್ತ್ರವಿನ್ಯಾಸ ಹಾಗೂ ಪ್ರಸಾದನದಲ್ಲಿ ದಿವ್ಯಾ ಮಹೇಶ್ ಕಲ್ಲತ್ತಿ ಸಹಕರಿಸಲಿದ್ದು, ರಂಗ ಸಜ್ಜಿಕೆಯಲ್ಲಿ ಶರತ್ ಕುಮಾರ್ ಕೆ. ವಿ ಹಾಗೂ ಬೆಳಕಿನ ಸಂಯೋಜನೆಯಲ್ಲಿ ಅಚ್ಚಪ್ಪ ಸಹಕರಿಸಲಿದ್ದಾರೆ.
‘ಮಂಟೇಸ್ವಾಮಿ ಕಥಾಪ್ರಸಂಗ’ :
ಕರ್ನಾಟಕದ ಮಹತ್ವದ ಮೌಖಿಕ ಮಹಾಕಾವ್ಯಗಳಲ್ಲೊಂದಾದ ಮಂಟೇಸ್ವಾಮಿ ಕಾವ್ಯವನ್ನು ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ರಾಮನಗರ, ಚಾಮರಾಜನಗರ ಹಾಗೂ ಬೆಂಗಳೂರು ಪ್ರದೇಶಗಳಲ್ಲಿ ಜೀವಂತವಾಗಿರಿಸಿರುವುದು ವೃತ್ತಿಪರ ಗಾಯಕರಾದ ನೀಲಗಾರ ಸಮುದಾಯ. 15ನೇ ಶತಮಾನದಲ್ಲಿ ಇದ್ದನೆಂದು ಹೇಳಲಾಗುವ ಮಂಟೆಸ್ವಾಮಿಯ ಸುತ್ತ ಹೆಣೆಯಲಾಗಿರುವ ಅನೇಕ ದಂತಕಥೆಗಳು ಹಲವು ಆಯಾಮಗಳಲ್ಲಿ, ವಿಭಿನ್ನ ಸ್ವರೂಪಗಳಲ್ಲಿ ಜನಮಾನಸದಲ್ಲಿ ಬೇರೂರಿದ್ದು, ಈ ಭಾಗದ ಜನರಲ್ಲಿ ಸಾಂಸ್ಕೃತಿಕವಾಗಿ ತನ್ನದೇ ಆದ ಅಸ್ತಿತ್ವವನ್ನು ಉಳಿಸಿಕೊಂಡಿದೆ. 12ನೆಯ ಶತಮಾನದ ಅಲ್ಲಮನಿಗೆ ಸಮಾನವಾಗಿ ಕಾಣಲ್ಪಡುವ ಮಂಟೇಸ್ವಾಮಿಯ ಪರಂಪರೆ ತಳಸಮುದಾಯದ ನಡುವೆ ತನ್ನದೇ ಆದ ಭಾವುಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಆಚರಣಾತ್ಮಕ ನೆಲೆಗಳಲ್ಲಿ ತಳವೂರಿದೆ. ಹಾಗಾಗಿ ಈ ಪರಂಪರೆಯನ್ನು ಜನಸಾಮಾನ್ಯರ ಮುಂದೆ ಪ್ರಸ್ತುತಪಡಿಸುವ ಸಂದರ್ಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ತನ್ನದೇ ಆದ ಸ್ವಾಯತ್ತ ಅಭಿವ್ಯಕ್ತಿಯನ್ನು ಬಳಸಿಕೊಳ್ಳುತ್ತದೆ. ಇಲ್ಲಿ ಕಂಡುಬರುವ ಸೃಜನಶೀಲ ಪ್ರಯತ್ನಗಳೂ ಸಹ ಮೂಲ ಕಥಾವಸ್ತುವಿನ ಚೌಕಟ್ಟಿನೊಳಗೇ ಕೆಲವು ಇತಿಮಿತಿಗಳೊಡನೆ ಹೊರಹೊಮ್ಮುತ್ತವೆ.
ಇಂತಹುದೇ ಒಂದು ಸಾಹಿತ್ಯಕ ಅಭಿವ್ಯಕ್ತಿಯನ್ನು ಎಚ್. ಎಸ್. ಶಿವಪ್ರಕಾಶ್ ಅವರ ‘ಮಂಟೇಸ್ವಾಮಿ ಕಥಾಪ್ರಸಂಗ’ ನಾಟಕ ಸಂಕಲನದಲ್ಲಿ ಕಾಣಬಹುದು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಂಸ್ಕೃತಿಕ ವಲಯದಲ್ಲಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿರುವ ಈ ಕೃತಿಯನ್ನು ಕನ್ನಡ ರಂಗಭೂಮಿಯ ಒಂದು ಮೈಲಿಗಲ್ಲು ಎಂದೇ ಭಾವಿಸಲಾಗುತ್ತದೆ. ಆಧುನಿಕ ಜಗತ್ತಿನೊಡನೆ ನಿರಂತರ ಸಂಘರ್ಷದಲ್ಲಿರುವ ಕೆಳಸ್ತರದ ಜನಸಾಮಾನ್ಯರು 21ನೆಯ ಶತಮಾನದ ಡಿಜಿಟಲ್ ಯುಗದೊಡನೆ ಮುಖಾಮುಖಿಯಾಗುತ್ತಿರುವಾಗ, ಈ ಜನಪದೀಯ ಪರಂಪರೆಯ ಕಥನಗಳು ಒಂದು ನೆಲೆಯಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ನವ ಉದಾರವಾದಿ ಬಂಡವಾಳಶಾಹಿಯು ತನ್ನ ಆಧುನೀಕರಣ ಪ್ರಕ್ರಿಯೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಕೃತಿಗಳನ್ನು ಆಪೋಷನ ತೆಗೆದುಕೊಳ್ಳುವುದೇ ಅಲ್ಲದೆ ಸಾಂಪ್ರದಾಯಿಕವಾಗಿ ಭಾರತದ ಪ್ರಾಚೀನ ವೈದಿಕಶಾಹಿ ಹಾಗೂ ಪುರೋಹಿತಶಾಹಿ ಸಂಹಿತೆಗಳನ್ನು ಮರುಸ್ಥಾಪಿಸಲು ಯತ್ನಿಸುತ್ತಿರುವ ಈ ಹೊತ್ತಿನಲ್ಲಿ, ನೆಲಸಂಸ್ಕೃತಿಗೆ ಇಂಬು ಕೊಡುವ ಇಂತಹ ಕಾವ್ಯಪರಂಪರೆಗಳು ಮಹತ್ವ ಪಡೆಯುತ್ತವೆ.