ಮಂಗಳೂರು : ನೃತ್ಯಾಂಗಣ ಪ್ರಸ್ತುತ ಪಡಿಸುವ ‘ಮಂಥನ 9ನೇ ಆವೃತ್ತಿ -2023’ ಭರತನಾಟ್ಯ ಕಾರ್ಯಕ್ರಮವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಡಾನ್ ಬೋಸ್ಕೋ ಸಭಾಂಗಣದಲ್ಲಿ ದಿನಾಂಕ 03-11-2023ರಂದು ಮಂಗಳ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಿದ್ದಾರೆ. ಸಾಯಿಬೃಂದಾ ರಾಮಚಂದ್ರನ್ ಹೊಸೂರ್, ಪ್ರಿಯಾಂಜಲಿ ರಾವ್ ಮುಂಬೈ ಮತ್ತು ಧನ್ಯಶ್ರೀ ಪ್ರಭು ಉಡುಪಿ ಇವರುಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
‘ಮಂಥನ 2023’ ಭರತನಾಟ್ಯದ ಕಾರ್ಯಾಗಾರವನ್ನು ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ದಿನಾಂಕ 04-11-2023 ಮತ್ತು 05-11-2023ರಂದು ನಡೆಸಿಕೊಡಲಿದ್ದಾರೆ.
ಶ್ರೀಮತಿ ವಿದ್ಯಾ ಸುಬ್ರಮಣ್ಯನ್ ಇವರು ಜೀವನವನ್ನು ನೃತ್ಯ ಸೇವೆಗೆಂದೇ ಮುಡಿಪಾಗಿಟ್ಟವರು. ಇವರು ಖ್ಯಾತ ಗುರುಗಳಾದ ಎಸ್.ಕೆ. ರಾಜರತ್ನಂ ಹಾಗೂ ಅಭಿನಯದಲ್ಲಿ ಮೇರು ಸಾಧನೆಗೈದ ಶ್ರೀಮತಿ ಕಲಾನಿಧಿ ನಾರಾಯಣನ್ ಇವರಲ್ಲಿ ಭರತನಾಟ್ಯದ ವಳವೂರ್ ಶೈಲಿಯಲ್ಲಿ ನೃತ್ಯಾಭ್ಯಾಸವನ್ನು ಮಾಡಿದರು. ಇವರು ನರ್ತಿಸಿದ ರಾಧಾ ಮತ್ತು ಕೃಷ್ಣನ ನೃತ್ಯ ಹಾಗೂ ಅವರ ಅಂಗ ಶುದ್ಧಿ ಅಡವುಗಳನ್ನು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗಳು ಹಾಡಿ ಹೊಗಳಿವೆ.
ಶಿಸ್ತು, ಜ್ಞಾನ, ಸಮಯ, ನೃತ್ಯ ಮತ್ತು ವಿಷಯದ ಬಗ್ಗೆ ಪರಿಪೂರ್ಣ ಜ್ಞಾನ ಇವರ ನೃತ್ಯ ಸಂಯೋಜನೆಯಲ್ಲಿ ಕಾಣ ಸಿಗುತ್ತದೆ. ನೃತ್ಯ ಶಿಕ್ಷಕಿ ಮತ್ತು ನಿರ್ದೇಶಕಿಯಾಗಿ ಅವರು ತಮ್ಮನ್ನು ಪೂರ್ಣ ತೊಡಗಿಸಿಕೊಂಡಿರುವುದೇ ಶಿಷ್ಯಂದಿರ ಪರಿಪೂರ್ಣ ಬೆಳವಣಿಗೆಗೆ ಕಾರಣವಾಗಿದೆ. ನೃತ್ಯವಲ್ಲದೆ ರಂಗಭೂಮಿ ಕಲೆಯಲ್ಲಿ ವಿದ್ಯಾ ಇವರು ಸ್ನಾತಕೋತ್ತರ ಪದವಿಯನ್ನು ಪಡೆದು ನಾಟಕ ರಂಗ ಹಾಗೂ ಸಿನೇಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಜಾವಳಿ, ಪದಂ, ತಿಲ್ಲಾನಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಲ್ಲದೆ, ಏಕವ್ಯಕ್ತಿ ಪ್ರದರ್ಶನವನ್ನು ಜಗತ್ತಿನ ಎಲ್ಲೆಡೆ ನೀಡಿದ್ದಾರೆ.