11 ಏಪ್ರಿಲ್ 2023, ಬೆಂಗಳೂರು: ಬಾದಲ್ ಸರ್ಕಾರ್ ಅವರ ನಾಟಕವೆಂದರೆ ಹಾಗೆಯೇ…..ಮಾತಿನ ಬುಡಬುಡಿಕೆ…..ಮಾತು, ಮಾತು, ಮಾತು….ವಾಸನೆಯ ಬಾಯಿಯ ಮಾತುಗಳು.. ತಲೆ ಚಿಟ್ಟು ಹಿಡಿಸುವ ಮಾತು… ರಂಗಕ್ರಿಯೆಯೇ ನಡೆಯುವುದಿಲ್ಲವೇನೋ ಅನ್ನುವಷ್ಟು ಮಾತು.. ನಡೆದರೂ ಬಹಳ ನಿಧಾನಗತಿಯ, ನಿಂತಲ್ಲೇ ಕಾಲ ನಿಲ್ಲುವಷ್ಟು ನಿಧಾನದ ಕ್ರಿಯೆಗಳು…
ಇಲ್ಲಿ, ಈ ರೂಪಾಂತರದ ನಾಟಕದಲ್ಲಿಯೂ ಹಾಗೆಯೇ….. ಮಾತಿನ ಧಾರಾಕಾರದ ಮಳೆಯನ್ನೇ ಸುರಿಸಿದ್ದಾರೆ ಲಕ್ಷ್ಮೀಪತಿ ಕೋಲಾರ ಅವರು. ಆದರೆ ಇಲ್ಲಿ ಮಾತು ಮತ್ತು ರಂಗಕ್ರಿಯೆ ಬಹಳ ವೇಗ ಪಡೆದುಕೊಂಡು ನಡೆಯುತ್ತದೆ…ಪ್ರೇಕ್ಷಕ ಒಂದು ಕ್ಷಣ ಮೈಮರೆತರ, ಒಂದು ಯುಗದಷ್ಟು ಮಾತುಗಳ ಅರ್ಥವನ್ನು ಕಳೆದುಕೊಂಡಿರುತ್ತಾನೆ.. ಯಾಕೆ ಇಷ್ಟು ವೇಗ? ಲಕ್ಷ್ಮೀಪತಿ ಅವರ ಆ ವೇಗದ ಮಾತುಗಾರಿಕೆಗೆ ಕಾರಣವಿದೆ…. ಮನುಷ್ಯ ಕುಲ ಆರಂಭದ – ಅಂದರೆ ಸುಮಾರು ಐದು ಸಾವಿರ ವರುಷಕ್ಕೂ ಹಿಂದಿನ ಇತಿಹಾಸದ, ಮತ, ಧರ್ಮ, ಸಂಸ್ಕೃತಿಯ ಇತಿಹಾಸವನ್ನು ನಿಗದಿತ ಅವಧಿಯಲ್ಲಿ ಹೇಳಬೇಕಾದ ಅವಸರವಿದೆ…. ಯಾವುದೂ ತಪ್ಪಬಾರದು, ಎಲ್ಲದರ ಕಾರಣ ಮತ್ತು ಅರ್ಥವನ್ನು ಎಲ್ಲರಿಗೂ ತಲುಪಿಸುವದಷ್ಟೇ ಅಲ್ಲ, ಅದರ ಅರ್ಥವನ್ನೂ ಮಾಡಿಸಬೇಕು ಎನ್ನುವ ಕಾತುರ ಇದೆ… ಮನುಜ ಕುಲ ಪ್ರಾರಂಭದ ಆರಂಬಿಕ ದಿನಗಳು, ಆಫ್ರಿಕಾದಿಂದ ಉಗಮವಾದ ಸಮಾಜ ಸಂಸ್ಕೃತಿಯ ಪರಿಚಯ, ಮೂಲ ದೇವರ ಹುಟ್ಟು ಮತ್ತು ಆಗಮ, ಕೃಷಿಕರ ಹಾಗು ನಾಡಿನ ಜನಗಳ ಸಂಘರ್ಷ, ಕಾಡು, ಗುಡ್ಡಗಾಡು ಜನರ ಆಚಾರಗಳು, ಅವರ ಪ್ರಕೃತಿಯ ಮೇಲಿನ ನೈಸರ್ಗಿಕ ಪ್ರೀತಿ ಮತ್ತು ಕಾಪಾಡಿಕೊಳ್ಳುವ ಜವಾಬ್ದಾರಿ, ನಾಡ ಜನಗಳ ದಾಳಿ, ಸ್ವಾರ್ಥದ ದುರಾಸೆ, ಸೋಗಲಾಡೀತನ, ಮರೀಚಿಕೆಯ ನಡವಳಿಕೆ, ಇವೆಲ್ಲವನ್ನೂ ಆದಿ-ಅನಾದಿ ಕಾಲದಿಂದ ಪ್ರಾರಂಬಿಸಿ, ಪರಿಚಯಿಸಿ, ಅದನ್ನು ಇಂದಿನ ಸಮಕಾಲೀನ ವರ್ತನೆಗಳ ಜೊತೆ ತಾಳೆ ಹಾಕಿ ನೋಡುವ ಹಲವಾರು ನಿದರ್ಶನಗಳ ಮುಖಾಂತರ ಕಟ್ಟಿಕೊಟ್ಟಿದ್ದಾರೆ. ಎಲ್ಲ ಧರ್ಮಗಳ ಸಾರ , ಅಹಿಂಸೆಯಾಗಿದ್ದರೂ, ಯಾಕೆ ಕೆಲವು ಅಹಿಂಸೆಯ ಮಾತನಾಡುತ್ತಾ ತಮ್ಮ ಧರ್ಮವನ್ನು ರಕ್ಷಿಸಿಕೊಳ್ಳಲು ಹಿಂಸೆಯ ದಾರಿ ಹಿಡಿದಿದ್ದಾರೆ? ಎನ್ನುವ ಅಸಹಾಯಕತೆಯ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿಸುತ್ತಾರೆ. ಭೂಮಿತಾಯಿಯ ಸಹೋದರಿಯರು ಮಿನುಗುವ, ಸದಾಕಾಲವೂ ಕಣ್ಣುಮಿಟುಕಿಸುವ ಏಳು ಚುಕ್ಕಿ ನಕ್ಷತ್ರಗಳಾಗುವ ಕಥೆ ಮನದುಂಬುವ ಹಾಗೆ ಕಟ್ಟಿಕೊಟ್ಟಿದ್ದಾರೆ. ಕಾಡು ಜನಾಂಗದ ಹೆಣ್ಣು ಮಕ್ಕಳ ಸಂದರ್ಯವನ್ನು ದೈಹಿಕವಾಗಿ ಬಸಿಯುವ ನಾಡುಜನಗಳ ಕಾಮ ಪಿಪಾಸೆತನವನ್ನು, ಪ್ರಸ್ತುತ ಸಮಯದ ಘಟನಾವಳಿಗಳ ಜೊತೆ ಹೇಳಿರುವುದು, ನಮ್ಮ ದೇಶದ ಪೂರ್ವಾಂಚಲ ರಾಜ್ಯಗಳಲ್ಲಿನ ಕಾಡುಗಳಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ನೆನಪಿಸುತ್ತದೆ. ತನ್ನ ರಾಜಮಾತೆ ತಾಯಿಯ ಗಂಭೀರ ಖಾಹಿಲೆಗೆ ಮದ್ದನ್ನು ಅರಸಿಕೊಂಡು ಬರುವ ಉದ್ದೇಶದಿಂದ ಕಾಡಿಗೆ ಪ್ರವೇಶ ಮಾಡುವ ಯುವ ರಾಜಕುಮಾರನಿಗೆ, ಅದು ತನ್ನನ್ನು ಕೊಲ್ಲಲು ಸ್ವತಃ ತನ್ನ ತಂದೆಯೇ ಮಾಡಿರುವ ಹೂಟ ಎನ್ನುವದನ್ನು ತಿಳಿಯಲಾರದ ದಡ್ಡ ರಾಜಕುಮಾರ, ನಾಡಜನರ ಮಾನಸಿಕ ಕುತಂತ್ರಗಳನ್ನು ಪ್ರತಿನಿಧಿಸುತ್ತಾನೆ. ಅಪ್ಪಣೆ ಇಲ್ಲದೆ ಕಾಡಿನ ಒಳಭಾಗವನ್ನು ಪ್ರವೇಶಿಸುವ ರಾಜಕುಮಾರ ಮುಗ್ದತೆಯನ್ನು ಅರ್ಥಮಾಡಿಕೊಳ್ಳುವ ಅರಣ್ಯವಾಸಿಗಳು ಅವನನ್ನು ಸಾವಿನಿಂದ ರಕ್ಷಿಸುವುದಷ್ಟೇ ಅಲ್ಲದೆ, ಅವನಿಗೆ ತಮ್ಮ ಜನಾಂಗದ ಸಂಸ್ಕೃತಿಯನ್ನು ಪರಿಚಯಿಸಿ, ಮನುಷ್ಯ ಹೃದಯಿಯಾಗಿ ಪರಿವರ್ತಿಸಿ, ಅವನು ತನ್ನ ಅರಮನೆ, ಭೋಗ, ನಾಡಿನ ಸವಲತ್ತುಗಳಿಗಿಂತ ಅರಣ್ಯವಾಸಿಗಳ ಶ್ರೀಮಂತ ಹೃದಯವಂತಿಕೆಯನ್ನು ಒಪ್ಪಿಕೊಂಡು, ಅವರೊಳಗೊಂದಾಗಿ ಬದುಕುವ ರೀತಿ, ಇಂದಿನ ಅನಾಗರೀಕ, ದುಷ್ಟ ನಾಡ ಸಂಸ್ಕೃತಿಯ ರೀತಿ ನೀತಿಗಳಿಗೆ ಕನ್ನಡಿ ಹಿಡಿದಂತಿದೆ…. ಇಂತಹ ಹಲವಾರು ಉಪಮೇಯಗಳನ್ನು ಅರ್ಥಮಾಡಿಕೊಂಡು, ನಾಗರೀಕತೆಯನ್ನೂ ಹಾಗೂ ಮಾನವೀಯತೆಯನ್ನು ನಾಡ ಜನಗಳಿಗೂ ಕಲಿಸುವ ಅವಶ್ಯಕತೆಯನ್ನು ನಾಟಕ ಒತ್ತಿಹೇಳುತ್ತದೆ…
ನಾಟಕವನ್ನು ಮೊದಲಿಗೆ ಪರಿಚಯಿಸುವ ಹಾಗೂ ಕೊನೆಯಲ್ಲಿ ನಾಟಕವನ್ನು ಸುಗಮವಾಗಿ ಮುಕ್ತಾಯಗೊಳಿಸುವ ಗುರುತರ ಜವಾಬ್ದಾರಿಯನ್ನು ಹೊತ್ತುಕೊಂಡು ನಟನೆ ಮಾಡುವ ಇಬ್ಬರು ನಟರನ್ನು ಏನೆಂದು ಕರೆಯಬೇಕು ತಿಳಿಯುತ್ತಿಲ್ಲ…. ಅವರು ಸೂತ್ರಧಾರಿಗಳೇ? ತತ್ವಜ್ಞಾನಿಗಳೇ? ನಾಗರೀಕ ನಾಡ ಸಂಸ್ಕೃತಿಯ ಜನಗಳೇ? ನಾಡ ಸಂಸ್ಕೃತಿಯ ಬೇಹುಗಾರರೇ ಮಾಯಕಾರರೇ? ಅಮಾಯಕರೇ? ಇದನ್ನು ಪ್ರತಿಯೊಬ್ಬರೂ ನಾಟಕ ನೋಡಿಯೇ ತೀರ್ಮಾನಿಸಬೇಕು.
ಸೂಕ್ತ ಹಾಗು ಪೂರಕ ಸಂಗೀತ (ಹನುಮಂತು ಮಂಡ್ಯ) ಬೆಳಕಿನ ವಿನ್ಯಾಸ ಮತ್ತು ನಿರ್ವಹಣೆ ಮಾಡಿದ ಮಹದೇವಯ್ಯ, ಪ್ರಸಾಧನ ಮಾಡಿದ ನುರಿತ ಪ್ರಸಾಧನ ಕಲಾವಿದ ಮೋಹನ್, ನಟನೆಯಲ್ಲಿ ಉತ್ತಮ ಅಭಿನಯ ನೀಡಿದ
ಇಡೀ ರಂಗ ತಂಡ, ಎಲ್ಲರಿಗೂ ನಮ್ಮ ಧನ್ಯವಾಗಳು, ಅಭಿನಂದನೆಗಳು.
ಇತ್ತೀಚಿನ ತಿಂಗಳುಗಳ ಒಂದು ಉತ್ತಮ ರಂಗಪ್ರೋಯೋಗ…. ಸಾಧ್ಯವಾದಷ್ಟು ಜನ ಒಮ್ಮೆಯಾದರೂ ನೋಡಲೇ ಬೇಕಾದ ಒಂದು ಪ್ರಯೋಗ…. ಮೇ 21ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನೋಡಿ…. ಮನುಷ್ಯರಾಗಿ ಬಾಳಿರುವ ನಾವು ನಮ್ಮ ಪೂರ್ವೋತರ ಇತಿಹಾಸ ಅರಿಯುವ ಕಾರಣಕ್ಕಾಗಿ ಈ ನಾಟಕ ನೋಡಲೇ ಬೇಕು.
- ಗುಂಡಣ್ಣ, ಚಿಕ್ಕಮಗಳೂರು
ಹಿರಿಯ ರಂಗ ಸಂಘಟಕ ಹಾಗೂ ವಿಮರ್ಶಕರಾದ ಗುಂಡಣ್ಣ ಚಿಕ್ಕಮಗಳೂರು ಇವರು ಸುಮಾರು 50 ವರ್ಷಗಳಿಂದ ತಮ್ಮ ಕಲಾ ಸೇವೆ ಗೈಯುತ್ತಾ ಬಂದಿದ್ದಾರೆ. ಹಿರಿಯರಾದ ಇವರು ಸಮುದಾಯ ರಂಗ ತಂಡದ ಮೂಲಕ ಎಲ್ಲೆಡೆ ತಮ್ಮ ಛಾಪನ್ನು ಮೂಡಿಸಿದವರು.