ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ವತಿಯಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ದಿನಾಂಕ 05-03-2024ರ ಮಂಗಳವಾರ ಸಂಜೆ ಗಂಟೆ 6:15ಕ್ಕೆ ಡಾ. ಗೀತಾ ಪಿ. ಸಿದ್ಧಿ ಅವರ ಕಥೆ ಆಧಾರಿತ ಶಿವಮೊಗ್ಗ ರಂಗಾಯಣ ಪ್ರಸ್ತುತಪಡಿಸುವ ‘ಮಾರ್ನಮಿ’ ನಾಟಕ ಪ್ರದರ್ಶನ ನಡೆಯಲಿದೆ.
ಈ ನಾಟಕದ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನ ಶ್ರೀಕಾಂತ್ ಕುಮಟಾ ಇವರು ಮಾಡಿದ್ದು, ಶ್ರೀಪಾದ್ ತೀರ್ಥಹಳ್ಳಿ ಇವರ ಸಂಗೀತ ಇರುತ್ತದೆ. ನೃತ್ಯ ಸಂಯೋಜನೆ ಮತ್ತು ಸಿದ್ಧಿ ಹಾಡುಗಳು ಗಿರೀಶ್ ಪಿ. ಸಿದ್ಧಿ ಮಂಚಿಕೇರಿಯವರು ಸಂಯೋಜನೆ ಮಾಡಿರುತ್ತಾರೆ. ರಂಗಸಜ್ಜಿಕೆ ಮತ್ತು ಪರಿಕರ ಮಧುಸೂದನ್, ವಸ್ತ್ರವಿನ್ಯಾಸ ರಾಜಣ್ಣ ಗಡಿಕಟ್ಟೆ ಮತ್ತು ಬೆಳಕು ಚಂದನ್ ಎನ್. ಇವರು ನಿರ್ವಹಿಸಿರುತ್ತಾರೆ.
ಕನ್ನಡ ಮತ್ತು ಕೊಂಕಣಿ ಮಿಶ್ರಿತ ‘ಮಾರ್ನಮಿ’ ಎಂಬ ನಾಟಕ ಶ್ರೀಕಾಂತ್ ಕುಮಟಾ ಇವರ ನಿರ್ದೇಶನದಲ್ಲಿ ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಯಶಸ್ವಿಯಾಗಿ 4 ಪ್ರದರ್ಶನಗಳನ್ನು ಕಂಡು ಪ್ರೇಕ್ಷಕರ ಮನಗೆದ್ದ ನಾಟಕವಾಗಿದೆ. ಈ ನಾಟಕವನ್ನು ಶ್ರೀಕಾಂತ್ ಕುಮಟಾ ಇವರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಿಗಳ ಬುದುಕಿನ ಕತೆ, ವ್ಯಥೆಯನ್ನು ಡಾ. ಗೀತಾ ಪಿ. ಸಿದ್ಧಿ ಇವರಿಂದ ಕೇಳಿದ ಕತೆಯಿಂದ ನಾಟಕ ರಚನೆ ಮಾಡಿ ಮಾಡಿರುತ್ತಾರೆ. ಈ ನಾಟಕ ಪೋರ್ಚುಗೀಸ್‌ರು 1510ರಲ್ಲಿ ಆಫ್ರಿಕಾದ ಕರಿಯ ಜನರನ್ನು ಗುಲಾಮರನ್ನಾಗಿ ಗೋವಾದಲ್ಲಿ ಮಾರುವುದರಿಂದ ಪ್ರಾರಂಭವಾಗಿ ಆ ಗುಲಾಮರಲ್ಲಿ ಕೆಲವರು ಗೋವಾದ ದೊರೆಗಳಿಂದ ತಪ್ಪಿಸಿಕೊಂಡು ಕಾಡು ಸೇರಿ ಸಿದ್ಧಿಗಳಾಗಿ ಬದುಕು ಕಟ್ಟಿಕೊಂಡ ಸಿದ್ಧಿಗಳ ಜೀವನದ ಬವಣೆಯನ್ನು ಮತ್ತು ಸ್ವಾತಂತ್ರ್ಯ ನಂತರದಲ್ಲಿ ನಮ್ಮ ಮಣ್ಣಿನ ಜನರಿಂದ ಸಿದ್ಧಿಗಳು ಅನುಭವಿಸಿದ ದೌರ್ಜನ್ಯವನ್ನು ಶ್ರೀಕಾಂತ್ ಕುಮಟಾ ಇವರು ತಮ್ಮ ನಾಟಕದಲ್ಲಿ ಮನ ಕಲಕುವಂತೆ, ಮನ ಕರಗುವಂತೆ, ಸಿದ್ಧಿ ಜನಾಂಗದ ಹಾಡು, ನೃತ್ಯ, ಅವರ ಆಚರಣೆ ಹಾಗೂ ನಂಬಿಕೆಗಳನ್ನು ಇಟ್ಟುಕೊಂಡು ನಾಟಕವನ್ನು ಕಟ್ಟಿರುತ್ತಾರೆ. ಸಿದ್ಧಿ ಜನಾಂಗದಲ್ಲಿ ಒಂದು ವಿಶೇಷ ಅಂದರೆ ಸಿದ್ಧಿಗಳಲ್ಲಿ ಹಿಂದೂ ಸಿದ್ದಿಗಳು, ಮುಸ್ಲೀಂ ಸಿದ್ಧಿಗಳು, ಕ್ರಿಶ್ಚಿಯನ್ ಸಿದ್ಧಿಗಳು ಇದ್ದಾರೆ ಎನುವುದೇ ವಿಶೇಷ. ಈ ಮೂರು ಧರ್ಮದಲ್ಲಿ ಸಿದ್ಧಿಗಳು ಇದ್ದಾರೆ ಅಂದರೆ ಇದರ ಹಿಂದಿನ ಮರ್ಮವೇನು ಎಂದು ತಿಳಿಯಬೇಕಾದರೆ ನಾಟಕ ಪ್ರದರ್ಶನ ನೋಡಿ ತಿಳಿದುಕೊಳ್ಳಿ.