ಉಡುಪಿ : ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ, ರೋಟರಿ ಉಡುಪಿ, ಸ್ವರ ಸರಸ್ವತಿ ಪ್ರತಿಷ್ಠಾನ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಎಂ.ಜಿ.ಎಂ. ಕಾಲೇಜಿನ ಕನ್ನಡ ವಿಭಾಗದ ಸಹಕಾರದಲ್ಲಿ ಡಾ.ಮಂಜಮ್ಮ ಜೋಗತಿ ಜೀವನಾಧಾರಿತ ಏಕವ್ಯಕ್ತಿ ನಾಟಕ ‘ಮಾತಾ’ ಪ್ರದರ್ಶನವು ದಿನಾಂಕ 03-09-2023ರಂದು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕ ಹಾಗೂ ರಂಗಭೂಮಿ ಉಡುಪಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡುತ್ತಾ “ತೃತೀಯ ಲಿಂಗಿಯಾಗಿ ನಿರಂತರ ಸಂಘರ್ಷ ಜೀವನ ನಡೆಸಿ, ತನ್ನಂತಹ ಶೋಷಿತರ ಧ್ವನಿಯಾದ ಪದ್ಮಶ್ರೀ ಪುರಸ್ಕೃತೆ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಅವರಂತಹ ತೊಳಲಾಟದ ಮಂದಿಗೆ ಜೀವನ ಪಾಠವಾಗಿದೆ. ಸಮಾಜದಲ್ಲಿ ತೃತೀಯ ಲಿಂಗಿಗಳಿಗೆ ಸಮಾನತೆ, ಗೌರವಯುತವಾಗಿ ಜೀವನ ನಡೆಸಲು ಉದ್ಯೋಗಾವಕಾಶಗಳು ಸಿಗಬೇಕು. ಅವರದಲ್ಲದ ತಪ್ಪಿಗೆ ಅವರ ಬದುಕು ಹೊರೆಯಂತೆ ಅನಿಸಬಾರದು. ಈ ನಿಟ್ಟಿನಲ್ಲಿ ಡಾ.ಮಂಜಮ್ಮ ಜೋಗತಿ ಅವರ ಬದುಕೇ ಒಂದು ಆದರ್ಶಪ್ರಾಯ. ತನ್ನಂತಹ ತೃತೀಯ ಲಿಂಗಿಗಳಿಗೆ ಗಟ್ಟಿ ಧ್ವನಿಯಾಗಿ ಅವರ ಕಣ್ಣೊರೆಸುವ ಮಾತೆಯಾಗಿ ಡಾ.ಮಂಜಮ್ಮ ಜೋಗತಿ ಆದರ್ಶಪ್ರಾಯರಾಗಿದ್ದಾರೆ. ಸಮಾಜದ ಒಳಿತಿಗಾಗಿ ಇಂತಹ ಆದರ್ಶಪ್ರಾಯರ ಜೀವನಾಧಾರಿತ ಕಥೆಯನ್ನು ರಂಗಭೂಮಿಗೆ ತಂದಿರುವ ಪ್ರಯತ್ನ ಶ್ಲಾಘನೀಯ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಮಂಜಮ್ಮ ಜೋಗತಿ ಅವರಿಗೆ ಗೌರವಾರ್ಪಣೆ ನಡೆಯಿತು. ಅವರು ಮಾತನಾಡುತ್ತಾ “ತನ್ನ 40 ವರ್ಷದ ಬದುಕನ್ನು 80 ನಿಮಿಷಕ್ಕಿಳಿಸಿ ನಾಟಕ ರೂಪದಲ್ಲಿ ಪ್ರಸ್ತುತ ಪಡಿಸಿರುವುದು ಅತ್ಯಂತ ಸಂತೋಷ ತಂದಿದೆ. ತೃತೀಯ ಲಿಂಗಿಗಳು ತಮ್ಮಿಷ್ಟದ ಬದುಕನ್ನು ಬಾಳುವ ಅವಕಾಶ ಸಮಾಜ ಕಲ್ಪಿಸಬೇಕು. ತೃತೀಯ ಲಿಂಗಿಗಳಿಗೆ ಗೌರವ ಕೊಡಿ. ತಿರಸ್ಕಾರ ಮಾಡಬೇಡಿ. ಶಿಕ್ಷಣ, ಉದ್ಯೋಗ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಸಮಾಜದಿಂದ ನಡೆಯಬೇಕು. ಇಂದು ಮೂರು ಮಂದಿ ತೃತೀಯ ಲಿಂಗಿಗಳು ಶಿಕ್ಷಕರಾಗಿದ್ದಾರೆ. ಪೊಲೀಸರಾಗಿದ್ದಾರೆ. ಆಟೋ ಓಡಿಸುತ್ತಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ಸಮಾಜ ನಮ್ಮನ್ನು ಒಪ್ಪಿಕೊಳ್ಳಬೇಕು. ಪ್ರಮುಖವಾಗಿ ತೃತೀಯ ಲಿಂಗಿಗಳಾಗಿ ಬದಲಾದ ತಮ್ಮ ಮಗ ಅಥವಾ ಮಗಳನ್ನು ತಂದೆ ತಾಯಿ ಎಲ್ಲಾ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಂಡರೆ ಅವರು ಬೀದಿ ಪಾಲಾಗುವ ಪ್ರಶ್ನೆಯೇ ಬರುವುದಿಲ್ಲ. ಕವಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ದಂತೆ ನಮ್ಮ ಸಮಾಜದಲ್ಲಿ ‘ಸಮಾನತೆಯ ಸೀಮಂತ’ ನಡೆಯಬೇಕು. ತನಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ನನ್ನಂತಹ ತೃತೀಯ ಲಿಂಗಿ ಸಮುದಾಯಕ್ಕೆ ಸಂದ ಗೌರವ, ಜಾನಪದ ಕಲಾವಿದರಿಗೆ ಸಂದ ಗೌರವ” ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾರವರು ಉದ್ಘಾಟಿಸಿ, ಶುಭ ಹಾರೈಸಿದರು. ರೋಟರಿ ಜಿಲ್ಲೆ 3182 ಜಿಲ್ಲಾ ಮಾಜಿ ಗವರ್ನರ್ ಡಾ.ಎಚ್.ಜೆ.ಗೌರಿ, ರೋಟರಿ ಉಡುಪಿ ಅಧ್ಯಕ್ಷೆ ದೀಪಾ ಭಂಡಾರಿ ಸಂದರ್ಭೋಚಿತವಾಗಿ ಮಾತನಾಡಿದರು. ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು.
ನಾಟಕದ ರಚನೆಕಾರ ಬೇಲೂರು ರಘುನಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವರ ಸರಸ್ವತಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಸ್ವಾಗತಿಸಿ, ಕಾರ್ಯಕ್ರಮದ ಸಂಯೋಜಕಿ ಕೆ.ಸ್ವರಾಜ್ಯ ಲಕ್ಷ್ಮೀ ಅಲೆವೂರು ವಂದಿಸಿ, ಜಯಭಾರತಿ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಲಾವಿದ ಅರುಣ್ ಕುಮಾರ್ ಅವರ ಏಕವ್ಯಕ್ತಿ ಅಭಿನಯದಲ್ಲಿ ‘ಮಾತಾ’ ನಾಟಕ ಪ್ರದರ್ಶನಗೊಂಡಿತು.