ಮಡಿಕೇರಿ : ಮಡಿಕೇರಿ ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಕೆ.ಜಯಲಕ್ಷ್ಮೀ ಇವರ ‘ಮತ್ತೆ ವಸಂತ’ ಕಥಾ ಸಂಕಲನದ ಲೋಕಾರ್ಪಣಾ ಸಮಾರಂಭವು ದಿನಾಂಕ 26 ಜನವರಿ 2025 ರಂದು ಮಡಿಕೇರಿಯ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಮಡಿಕೇರಿ ಆಕಾಶವಾಣಿ ಕೇಂದ್ರದ ಹಿರಿಯ ಉದ್ಘೋಷಕ ಹಾಗೂ ಸಾಹಿತಿಗಳಾದ ಸುಬ್ರಾಯ ಸಂವಾಜೆ ಮಾತನಾಡಿ “ಇವತ್ತು ಬರೆದು ನಾಳೆ ಅಳಿದು ಹೋಗುವ ಕೃತಿಗಳನ್ನು ಬರೆಯದಿರಿ. ಅಧ್ಯಯನ ಉಸಿರಾಗಿ ಆಳವಾದ ಮತ್ತು ವಿಸ್ತ್ರತವಾದ ಓದನ್ನು ಮೈಗೂಡಿಸಿಕೊಂಡು ಹೆಚ್ಚಿನ ಕಾಲ ಮನದಲ್ಲಿ ಉಳಿಯುವ ಕೃತಿ ರಚನೆಯತ್ತ ಲೇಖಕರು ಗಮನ ಹರಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡದಲ್ಲಿ, ಕೃತಿರಚನೆಯ ಕೆಲನ ವ್ಯಾಪಕವಾಗಿ ನಡೆಯುತ್ತಿರುವ ಉತ್ತಮ ಬೆಳವಣಿಗೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿದರೂ ಅವರಲ್ಲಿ ಕೊಡಗಿನವರು ಯಾರೂ ಇಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ. ಪಿ. ರಮೇಶ್ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಹಲವು ಬರಹಗಾರರು ಕೊಡಗಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೊಸಹೊಸ ಯೋಜನೆಗಳೊಂದಿಗೆ ಕೃತಿಕಾರರಿಗೆ ಒತ್ತಾಸೆಯಾಗಿ ನಿಂತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪರಿಣತರಾದ ಸಂಪನ್ಮೂಲ ವ್ಯಕ್ತಿಗಳಿಂದ ಉದಯೋನ್ಮಖ ಬರಹಗಾರರಿಗೆ ಪರಿಷತ್ತು ತರಬೇತಿ ನೀಡಲಿದೆ” ಎಂದರು.
ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಮಾತನಾಡಿ “ಕೃತಿಕಾರರು ತಮ್ಮ ಕೃತಿಗಳ ಮೌಲ್ಯದ ಕಡೆಗೆ ಹೆಚ್ಚು ಗಮನ ನೀಡಬೇಕು. ಪ್ರಕಾಶನ ಪ್ರಪಂಚದ ಜಾಲದೊಳಗೆ ಸಿಕ್ಕಿಹಾಕಿಕೊಳ್ಳಬಾರದು” ಎಂದು ಕಿವಿಮಾತು ಹೇಳಿದರು.
‘ಮತ್ತೆ ವಸಂತ’ ಕೃತಿಯನ್ನು ಪತ್ರಕರ್ತ ಹಾಗೂ ಮಡಿಕೇರಿ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಅನಿಲ್ ಹೆಚ್. ಟಿ. ಪರಿಚಯಿಸಿ “164 ಪುಟಗಳ ‘ಮತ್ತೆ ವಸಂತ’ 31 ವಿಭಿನ್ನ ಕಥೆಗಳ ಗುಚ್ಛವಾಗಿ ಓದುಗರ ಮನಸನು ಹಿಡಿದಿರುತ್ತದೆ. ಸರಳ ಮತು ಶುದ್ಧ ಭಾಷೆಯಿಂದ ರಚಿತವಾದ ಈ ಕೃತಿ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥ ಕಥೆಗಳನ್ನು ಹೊಂದಿದೆ. ಮತ್ತೆ ವಸಂತ ಕಥಾಸಂಕಲನದಲ್ಲಿ ಪ್ರೀತಿಸಿ ಕೈ ಕೊಟ್ಟ ವಂಚಕ ಮನಸ್ಸಿವನಿದ್ದಾನೆ ಹಾಗೂ ಅಂತೆಯೇ ಪ್ರೀತಿ ನಂಬಿ ದಾರಿ ತಪ್ಪಿದವಳಿಗೆ ಬದುಕು ಕೊಟ್ಟ ಹೃದಯವಂತನಿದ್ದಾನೆ. ಮಮತೆ ತೋರದ ತಾಯಿ ಇದ್ದಾಳೆ ಹಾಗೂ ಹೆತ್ತ ತಾಯಿ ಅಲ್ಲದಿದ್ದರೂ, ಎತ್ತಿ ಮುದ್ದು ಮಾಡಿ ಪೊರೆದ ಮಾತೆ ಇದ್ದಾಳೆ. ಆಸ್ತಿಗಾಗಿ ತಮ್ಮನನ್ನು ನಿರ್ಲಕ್ಷ ಮಾಡಿದ ಅಣ್ಣನಿದ್ದಾನೆ ಹಾಗೂ ಅಣ್ಣ ಪಿತೃ ಸಮಾನ ಎಂದೇ ಕೊನೆವರೆಗೂ ನಂಬಿ ನಡೆದ ತಮ್ಮನಿದ್ದಾನೆ. ಶಿಕ್ಷಣ ಪಡೆದು ಬಾಂಧವ್ಯ ಮರೆತ ವಿದ್ಯಾವಂತನಿದ್ದಾನೆ ಹಾಗೂ ಶಿಕ್ಷಣವಿಲ್ಲದಿದ್ದರೂ ಬಾಂಧವ್ಯದ ಬೇರು….ವಿಧೇಯತೆ ಎಂದು ನಂಬಿದ ಅವಿದ್ಯಾವಂತನಿದ್ದಾನೆ. ಹೀಗೆ ನಮಾಜದ ನಾನಾ ಸ್ತರಗಳ ನಾನಾ ಮುಖಗಳ ನಾನಾ ಮನಸ್ಥಿತಿಗಳ ಚಿತ್ರಣವನ್ನು ನಮರ್ಥವಾಗಿ ‘ಮತ್ತೆ ವನಂತ’ ಕೃತಿ ಕಟ್ಟಿಕೊಟ್ಟಿದೆ” ಎಂದು ಶ್ಲಾಘಿಸಿದರು. ಬೆಳ್ತಂಗಡಿಯ ಜಯಶಂಕರ ಶರ್ಮ ಮಾತನಾಡಿ ಈ ಪರಿಸರ ಮತ್ತು ಇಲ್ಲಿಯ ಸಮೃದ್ಧ ಅನುಭವ ಸಾಹಿತ್ಯ ಕೃತಿಗಳಲ್ಲಿ ಅಭಿವ್ಯಕ್ತಿ ಪಡೆಯಬೇಕು ಎಂದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕೇಶವ ಕಾಮತ್ ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮದ ಬಳಿಕ ಮಕ್ಕಳಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ಬಾಳಲೆಯ ಯುವ ಗಾಯಕ ಅನ್ವಿತ್ ಕುಮಾರ್ ಸುಗಮ ಸಂಗೀತದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಲೇಖಕಿ ಕೆ. ಜಯಲಕ್ಷ್ಮಿ ಸ್ವಾಗತಿಸಿ, ಬರಹಗಾರ್ತಿ ಪ್ರತಿಮಾ ಹರೀಶ್ ಹಾಗೂ ಗಾಯತ್ರಿ ಕಾರ್ಯಕ್ರಮ ನಿರೂಪಿಸಿ, ಚಿತ್ರ ಆರ್ಯನ್ ವಂದಿಸಿದರು.
ಲೋಕಾರ್ಪಣೆಗೊಂಡ ‘ಮತ್ತೆ ವಸಂತ’ ಕೃತಿಯ ಬೆಲೆ ರೂಪಾಯಿ 200/- ಆಗಿದ್ದು, ಕೃತಿಗಾಗಿ ಲೇಖಕಿ ಕೆ.ಜಯಲಕ್ಷ್ಮೀ – 9663119670 ಇವರನ್ನು ಸಂಪರ್ಕಿಸಬಹುದು.