14 ಏಪ್ರಿಲ್ 2023, ಬೆಂಗಳೂರು: ಬೆಂಗಳೂರು ಹೊಸ ಕೋಟೆಯ “ಜನಪದರು” ರಂಗ ಮಂದಿರದಲ್ಲಿ ಇದೇ ಏಪ್ರಿಲ್ 8ರಂದು ಪ್ರತಿ ತಿಂಗಳ ಎರಡನೇ ಶನಿವಾರದ ನಾಟಕ ಸರಣಿಯ ರಂಗ ಮಾಲೆ – 69ರಲ್ಲಿ ಬೆಂಗಳೂರು “ದೃಶ್ಯಕಾವ್ಯ” ರಂಗ ತಂಡದ ಡಾ. ಕೆ.ವೈ. ನಾರಾಯಣ ಸ್ವಾಮಿ ರಚನೆಯ “ಮಾಯಾ ಬೇಟೆ” ನಾಟಕವನ್ನು ನಂಜುಂಡೇಗೌಡರ ನಿರ್ದೇಶನದಲ್ಲಿ ಪ್ರದರ್ಶನ ನೀಡಿತು. ನಾಟಕ ನೆರೆದ ಪ್ರೇಕ್ಷಕರನ್ನು ಮ೦ತ್ರ ಮುಗ್ಧರನ್ನಾಗಿಸಿತು. ಭಾರತದ ರಂಗಭೂಮಿಯಲ್ಲಿ ಸದಾ ಕ್ರಿಯಾಶೀಲವಾದ ಕನ್ನಡ ರಂಗಭೂಮಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಂದಿನ ನಾಟಕಕಾರರಲ್ಲಿ ಮುಖ್ಯರಾದವರಲ್ಲಿ ಡಾ. ಕೆ.ವೈ. ನಾರಾಯಣಸ್ವಾಮಿ, ಪಂಪ ಭಾರತ ಮತ್ತು ರಸ ಋಷಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು – ರಂಗಕೃತಿ ಮಾಡಿದ ಕೀರ್ತಿ ಇವರದು. ಹಲವಾರು ಹೊಸ ನಾಟಕಗಳ ಮೂಲಕ ಗಮನ ಸೆಳೆದವರು. 21ನೇ ಶತಮಾನ ಲಿಂಗ ಸಮಾನತೆ, ಮಹಿಳಾ ಶೋಷಣೆ ಹಾಗೂ ಸ್ತ್ರೀವಾದಿ ಹೋರಾಟದ ಕಾಲ. ಎಷ್ಟಾದರೂ ಭಾರತೀಯ ಕರ್ಮಠ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ಬಂದರೂ ಹೆಣ್ಣು ಯಾವಗಲೂ second gender. ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡಿದರೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸದಾ ಬಲಿಪಶು. ಪ್ರಸ್ತುತ “ಮಾಯಾ ಬೇಟೆ” ನಾಟಕ ಹೆಸರೇ ಸೂಚಿಸುವಂತೆ ಅರೇ ಚಾರಿತ್ರಿಕ – ಪೌರಾಣಿಕ – ಸಾಮಾಜಿಕ ದೃಶ್ಯಗಳನ್ನು ಪೋಣಿಸಿ, ಜಾಣ್ಮೆಯಿಂದ ಸಮೀಕರಣ ಮಾಡಿ ಕಥೆ ಹೆಣೆದ ನಾಟಕಕಾರರು ‘ಆ ಕಾಲ – ದಿಂದ ಈ – ಕಾಲದವರೆಗಿನ ಗಂಡು ಹೆಣ್ಣುಗಳ ನಡುವೆ ನಡೆದ ಪ್ರೀತಿ – ಪ್ರೇಮ – ಕಟ್ಟಿಕೊಡುತ್ತ ಸ್ತ್ರೀ ಕುಲ ಗಂಡಿನ ಅವಾಸ್ತವ ನಿಯಮ – ಅಟ್ಟಹಾಸ- ವಿಶ್ವಾಸಘಾತುಕತೆ. ಒಳಗಾಗಿ ಆದರ್ಶದ ಮುಖವಾಡ ಕಳಚಿಸುವಲ್ಲಿ ಸಾಮಾಜಿಕ ಕೌಟುಂಬಿಕ ಶೋಷಣೆಯ ಮಜಲುಗಳನ್ನು ಎಳೆ-ಎಳೆಯಾಗಿ ಬಿಚ್ಚಿ ‘ಭೂತ-ವರ್ತಮಾನ-ಭವಿಷ್ಯತ್ ಕಾಲಗಳ ಸತ್ಯ ದರ್ಶನ. ಮಾನವಿಯತೆಯ ಅಂತಃಕರಣ ಕಲುಕಿ ಹೃದಯ ಹಿಂಡುತ್ತದೆ. ಅದ್ಭುತ ದೃಶ್ಯ ಪರಿಜೋಡಣೆ – ಸುಂದರ ಭಾಷೆ ಮುದ ನೀಡುತ್ತದೆ.
ಒಂದು ಸುಂದರ ಸಂಕೀರಣ ಕಥಾವಸ್ತುವನ್ನು ಪ್ರೇಮ ಕಾಮದ ತೆಳು ರೇಖೆಯ ಹದ್ದು ಮೀರದ ಹಾಗೆ, ಸಮರ್ಪಕ ರಂಗ ಮಂಚದ ಬಳಿಕೆ – ಮತ್ತು ಪಾತ್ರಗಳ ಕಲಾವಿದರ ಆಯ್ಕೆ ಹಿತಮಿತ ಸೆಟ್ಸ್ – ಪರಿಕರ ಬಿಗಿಯಾದ ನಿರೂಪಣೆಯಿಂದ ಯುವ ನಿರ್ದೆಶಕ ನಂಜುಂಡೇಗೌಡ ನಾಟಕವನ್ನು ಹದವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಸನ್ನಕುಮಾರ್ ರ ಸಂಗೀತ – ಮೇಳದವರ ಸಾಂಗತ್ಯ ಹಾಡು – ಆಲಾಪ್ ಗಳು ಮೂಡ್ ಸೃಷ್ಟಿ ಮಾಡಿದವು. ಜಯರಾಜ್ ರವರ ಪ್ರಸಾದನ ಹಾಗೂ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ಜೀವ ತುಂಬಿದರು. ಮುಖ್ಯವಾಗಿ ಪಾರಿಜಾತ (ಸ್ನೇಹ) ಮಾರ (ತೇಜಸ್) ವೀರನ ತಾಯಿ (ಗೀತಾ) ಮುದುಕಿ (ಭವಾನಿ ಪುರೋಹಿತ) ರತ್ನ ವ್ಯಾಪಾರಿ (ಶಶಿನ್) ಗಮನ ಸೆಳೆದರು. ಹಲವು ದಿನಗಳ ನಂತರ ಶ್ರೇಷ್ಠ ಅನುಭೂತಿ ನೀಡಿದ ನಾಟಕ.
ಹಿರಿಯ ಶಿಕ್ಷಕ, ಸಾಹಿತಿ, ವಿಮರ್ಶಕ
ಜಗದೀಶ್ ಕೆಂಗನಾಳ್