ಬೆಂಗಳೂರು: ಮನಸ್ಸಿನ ಓಟದ ಪಯಣಕ್ಕೆ ವರ್ಣಸಾಂಗತ್ಯ. ಬದುಕು ಒಂದು ಹರಿಯುವ ನದಿ ಇದ್ದ ಹಾಗೆ. ಅಂಕುಡೊಂಕಾಗಿ ಅಡೆ ತಡೆಗಳು ಇರುವಂತಹುದು. ಹಾಗಾಗಿ ಬದುಕು ಪೂರ್ತಿ ಸ್ವಾರಸ್ಯವೇ ಇರಬೇಕು ಅಂತ ಇಲ್ಲ. ಕಷ್ಟ ಸುಖ ಸದಾ ಇದ್ದೆ ಇರುತ್ತೆ. ಬದುಕನ್ನು ಮತ್ತು ಪ್ರಕೃತಿಯನ್ನು ಅನುಭವಿಸಬೇಕು. ಅದರ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಕಲೆ ಸಮಾಜವನ್ನು ಸಂಸ್ಕಾರಗೊಳಿಸಿ ಬೇಕಾದ ಹಾಗೆ ಹೊರಳಿಸುವುದಕ್ಕೆ ಸಮರ್ಥ ಮತ್ತು ಪ್ರಚಂಡ ಶಕ್ತಿಯಾಗಿದೆ. ಇದಕ್ಕೆ ಉದಾಹರಣೆಯೆನ್ನುವಂತೆ Art Streamನ ಆರು ಕಲಾವಿದರು Meanderings journeys of the mind ಹೆಸರಿನಲ್ಲಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಪ್ರದರ್ಶನ ಹಮ್ಮಿಕೊಂಡಿತ್ತು.
ಇದರಲ್ಲಿ ಅಲ್ಕ ಚಡ್ದ ಹರ್ಪಲಾನಿಯವರು ಹಳದಿ ಮಿಶ್ರಿತ ಕಪ್ಪು ಬಿಳುಪು ಬಣ್ಣದೊಂದಿಗೆ ವಿವಿಧ ಸ್ತರಗಳನ್ನು ರಚಿಸಿ ಪರಸ್ಪರ ಸಂಬಂಧಗಳು ಸ್ಪಂದಿಸಿದಂತೆ, ನೆನಪುಗಳನ್ನು ಬಿಚ್ಚಿಟ್ಟಂತೆ, ಕವಿತೆಗಳ ಗುಚ್ಛವನ್ನು ತೆರೆದಿಟ್ಟಿರುವ ಚಿತ್ರಗಳು, ಬದುಕಿನ ವಿಸ್ತಾರ ಹಾಗೂ ಸೂಕ್ಷ್ಮತೆಯನ್ನು ತೋರಿಸುವಲ್ಲಿ ಸಫಲವಾಗಿದೆ.
ಮಿಲ್ನ ಸಾಜಿಯವರು ಮೌನ ಮತ್ತು ಶಾಂತತೆಯಿಂದ ಮನಸ್ಸಿನಲ್ಲಿ ಉಂಟಾಗುವ ಭಾವನೆಗಳನ್ನೇ ಚಿತ್ರದಲ್ಲಿ ಕಾಣುತ್ತಾ ಮತ್ತು ಬದುಕಿನ ಜಂಜಾಟದ ಮನಸ್ಸು ದೂರದೃಷ್ಟಿಯ ಗೋಚರಗಳು, ಶಕ್ತಿ ಮತ್ತು ಭಾವನೆಗಳ ಸಂಗಮದಂತೆ ತೋರುವ ಚಿತ್ರಗಳನ್ನು ಕಾಣಬಹುದು.
ಶ್ರೀನಾಥ್ ಬಿದರೆ ಅವರ ಚಿತ್ರಗಳು ಒಂದು ಒಳ್ಳೆಯ ಸಂಗೀತ ಕೇಳಿದಂತೆ. ಸ್ವರ, ತಾಳ, ಲಯದ ಸಂಯೋಜನೆಯಂತೆ ಎನೋ ರಹಸ್ಯಗಳನ್ನು ಹುಡುಕುವಂತೆ ಪ್ರೇರೇಪಿಸುತ್ತ ಸೌಮ್ಯ ಬಣ್ಣಗಳು ಚೌಕಟ್ಟಿನಲ್ಲಿ ನಮ್ಮನ್ನು ಹಿಡಿದಿಡುತ್ತವೆ.
ಬಸವರಾಜ್ ಅಚಾರ್ ಅವರ ಚಿತ್ರಗಳು ಮಾನವೀ ದೌರ್ಬಲ್ಯದ ಈ ಪ್ರಾಪಂಚಿಕ ವಸ್ತುಗಳು, ಹಳೆಯ ನೆನಪುಗಳೊಂದಿಗೆ ಕಪ್ಪು ಬಿಳುಪಿನ ರೇಖಾಚಿತ್ರಗಳು ಗಮನ ಸೆಳೆಯುತ್ತವೆ. ನಾಲ್ಕು ದಿನಗಳಲ್ಲಿ ನಶಿಸಿ ಹೋಗುವ ಎಲೆಯಂತೆ ಮನುಷ್ಯನ ಬದುಕು ಸಾಧನೆಯತ್ತ ಸಾಗಲಿ ಎಂಬ ಸಂದೇಶ ತೆರೆದಿಟ್ಟಂತಿದೆ.
ಶಂಕರ್ ಲೋಹರ್ ಅವರ ಕೃತಿಗಳು ನಮ್ಮ ಸಂಸ್ಕೃತಿಯ ಪ್ರತೀಕವಾದ ಸೂರ್ಯ ಮತ್ತು ವೃಕ್ಷವನ್ನು ಅಲಂಕಾರಿಕವಾಗಿ ನೆಲೆಗೊಳಿಸಿ ಹೊಸ ಸಂವತ್ಸರವನ್ನು ಎದುರುಗೊಂಡಂತೆ ಹಾರೈಸಿದಂತಿದೆ.
ಮೈನುರವರ lithography ಮತ್ತು Woodcut ಚಿತ್ರಗಳಲ್ಲಿ ಜ್ಯಾಮತಿಕ ಆಕೃತಿಗಳಿಂದ ಕೂಡಿದ ಚೌಕ, ವೃತ್ತ, ತ್ರಿಕೋಣಾಕೃತಿಗಳಿಂದ ವಿಕಸನೀಯ ವಿಜ್ಞಾನದ ಅವಷ್ಕಾರದಿಂದ ಪ್ರಕೃತಿ ಮೇಲಿನ ಪರಿಣಾಮ, ಹೊಸ ಜಗತ್ತು ಪ್ರಚೋದನೆಗೆ ಒಳಗಾಗುವ ಬಗ್ಗೆ ಕಾಳಜಿ ತೋರಿದ್ದಾರೆ.
ಆರು ಕಲಾವಿದರ ಸಮಕಾಲೀನ ಅಮೂರ್ತ ಕಲಾಕೃತಿಗಳು ಈ ನೆಲದ ಬಗ್ಗೆ ಪ್ರೀತಿ, ಕಾಳಜಿ, ಶ್ರದ್ಧೆ ಬರುವಲ್ಲಿ ಪ್ರಯತ್ನ ಸಾರ್ಥಕವಾಗಿದೆ.
ಚಿತ್ರ ಬರಹ : ಗಣಪತಿ ಎಸ್. ಹೆಗಡೆ