ಮಂಗಳೂರು : ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಜುಲೈ ಕೊನೆಯ ವಾರ ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಉಳ್ಳಾಲ ತಾಲೂಕು ಮಟ್ಟದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ‘ಮಕ್ಕಳ ಅಬ್ಬಕ್ಕ’ ಕಾರ್ಯಕ್ರಮದ ಬಗ್ಗೆ ನಡೆಸುವ ಬಗ್ಗೆ ಚಿಂತನಾ ಸಭೆಯೊಂದು ತೊಕ್ಕೊಟ್ಟು ರತ್ನಂ ಸಭಾಂಗಣದಲ್ಲಿ ದಿನಾಂಕ 06-07-2024ರಂದು ಜರಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಇವರು ಮಾತನಾಡಿ “ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಸಾಂಸ್ಕೃತಿಕ ಪ್ರಜ್ಞೆ ಮತ್ತು ಸ್ಥಳೀಯ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ‘ಮಕ್ಕಳ ಅಬ್ಬಕ್ಕ’ ಎಂಬ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ನಡೆಸಲಾಗುವುದು. ಇದರಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಪಠ್ಯಪುಸ್ತಕದಲ್ಲಿ ಅಬ್ಬಕ್ಕ’ ಎಂಬ ಪ್ರಬಂಧ ಸ್ಪರ್ಧೆ ಮತ್ತು ‘ನನ್ನ ಕಲ್ಪನೆಯಲ್ಲಿ ಅಬ್ಬಕ್ಕನ ಚಿತ್ರ’ ಎಂಬ ಚಿತ್ರಕಲಾ ಸ್ಪರ್ಧೆಯನ್ನು ಪೂರ್ವಭಾವಿಯಾಗಿ ಏರ್ಪಡಿಸಲಾಗಿದೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಉಲ್ಲಾಳ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದೆ” ಎಂದು ತಿಳಿಸಿದರು.
ಸಂಚಾಲಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಶಾಧಿಕಾರಿ ಪಿ.ಡಿ. ಶೆಟ್ಟಿ, ಉಪಾಧ್ಯಕ್ಷೆ ನಮಿತಾ ಶ್ಯಾಮ್, ಹಿರಿಯ ಮಹಿಳಾ ಪ್ರತಿನಿಧಿ ಸುವಾಸನಿ ಬಬ್ಬುಕಟ್ಟೆ ವೇದಿಕೆಯಲ್ಲಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ವಂದಿಸಿದರು. ಸಮಿತಿ ಪದಾಧಿಕಾರಿಗಳಾದ ಲೋಕನಾಥ ರೈ, ಆನಂದ ಶೆಟ್ಟಿ, ಬಾದಶಾ ಸಾಂಬಾರ್ ತೋಟ, ಸುಮಾ ಪ್ರಸಾದ್, ಗೀತಾ ಜ್ಯುಡಿತ್ ಸಲ್ದಾನ, ಪ್ರತಿಮಾ ಹೆಬ್ಬಾರ್ ಸಲಹೆ ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಶುಕ್ರವಾರ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರಿಗೆ ಸಂತಾಪ ಸೂಚಿಸಲಾಯಿತು. ಅಲ್ಲದೆ ಈಚೆಗೆ ನಮ್ಮನ್ನಗಲಿದ್ದ ಜಾನಪದ ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ನಾಡೋಜ ಡಾ. ಕಮಲಾ ಹಂಪನಾ, ಲೇಖಕ ರಮಾನಾಥ ಕೋಟೆಕಾರ್, ಹಿರಿಯ ನ್ಯಾಯವಾದಿ ಕೆ.ಬಿ. ಬಿಂದುಸಾರ ಶೆಟ್ಟಿ ಅವರಿಗೂ ಶ್ರದ್ಧಾಂಜಲಿ ಸಮರ್ಪಿಸಲಾಯಿತು.